ಬುಧವಾರ, ಆಗಸ್ಟ್ 10, 2022
20 °C

ಸಂಪಾದಕೀಯ: ಸಹಾಯಧನ: ಸಾಲದ ಕಂತಿಗೆ ಹೊಂದಾಣಿಕೆ: ಮಾನವೀಯತೆ ಮರೆತ ನಡೆ ಅಕ್ಷಮ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ಎರಡನೆಯ ಅಲೆ ಅಮಾನವೀಯ ಮುಖಗಳನ್ನು ಸಾಲು ಸಾಲಾಗಿ ದರ್ಶನ ಮಾಡಿಸುತ್ತಿದೆ. ಬೀದಿ ಬದಿ ವ್ಯಾಪಾರಿಗಳ ವಿಷಯದಲ್ಲಿ ಕೆಲವು ಬ್ಯಾಂಕ್‌ಗಳು ನಡೆದುಕೊಂಡ ರೀತಿಯೂ ಅಂಥವುಗಳಲ್ಲೊಂದು. ತೀವ್ರ ಸಂಕಷ್ಟದಲ್ಲಿರುವ ಈ ಸಮುದಾಯಕ್ಕೆ ರಾಜ್ಯ ಸರ್ಕಾರವು ತಲಾ ಎರಡು ಸಾವಿರ ರೂಪಾಯಿ ಧನಸಹಾಯ ನೀಡಿದೆ. ಆದರೆ, ಆ ಹಣವನ್ನು ಕೆಲವು ಬ್ಯಾಂಕ್‌ಗಳು ಫಲಾನುಭವಿಗಳಿಗೆ ನೀಡದೆ, ಅವರು ಈ ಹಿಂದೆ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆ ಅಡಿಯಲ್ಲಿ ಪಡೆದಿದ್ದ ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡಿ ಕೊಂಡಿವೆ.

ಲಾಕ್‌ಡೌನ್‌ ಅವಧಿಯಲ್ಲಿ ಜೀವನೋಪಾಯದ ಎಲ್ಲ ಮಾರ್ಗಗಳೂ ಬಂದ್‌ ಆಗಿ, ಯಾವುದೇ ಆದಾಯವಿಲ್ಲದೆ ನಲುಗಿರುವ ಕುಟುಂಬಗಳಿಗೆ ತುರ್ತು ನೆರವಿನ ರೂಪದಲ್ಲಿ ಸರ್ಕಾರ ನೀಡಿದ ಹಣ ಅದು. ಒಂದಿನಿತೂ ವಿಳಂಬವಿಲ್ಲದೆ ಫಲಾನುಭವಿಗಳಿಗೆ ಆ ನೆರವು ದೊರೆತು, ಅವರ ಸಂಕಷ್ಟ ಸ್ವಲ್ಪಮಟ್ಟಿಗಾದರೂ ಕಡಿಮೆ ಆಗಬೇಕು ಎನ್ನುವುದು ಈ ಆರ್ಥಿಕ ಪ್ಯಾಕೇಜ್‌ ಘೋಷಣೆಯ ಹಿಂದಿರುವ ಉದ್ದೇಶ. ಆದರೆ, ಅಂತಹ ನೆರವಿನ ಮೊತ್ತವನ್ನೇ ಸಾಲದ ಕಂತುಗಳಿಗಾಗಿ ಬ್ಯಾಂಕ್‌ಗಳು ಕಡಿತ ಮಾಡಿಕೊಂಡಿರುವುದು ಕ್ರೌರ್ಯವಲ್ಲದೆ ಮತ್ತೇನೂ ಅಲ್ಲ. ಸಾಂಕ್ರಾಮಿಕದಿಂದ ಬದುಕೇ ಮುರಿದು ಬಿದ್ದಿರುವಾಗ ‘ನಿಮ್ಮ ಪಡಿಪಾಟಲು ನಿಮಗೆ, ನಮ್ಮ ಸಾಲ ಮೊದಲು ತೀರಿಸಿ’ ಎನ್ನು ವಂತಹ ಮನೋಭಾವ ತೋರಿರುವುದು ಅಕ್ಷಮ್ಯ.

ಮೊದಲು ಈ ಬಡ ವ್ಯಾಪಾರಿಗಳ ಬದುಕು ಹಳಿಯ ಮೇಲೆ ಬಂದು ನಿಲ್ಲಲಿ, ನಂತರ ಸಾಲದ ಬಾಬತ್ತನ್ನು ತುಂಬುವಂತೆ ಬ್ಯಾಂಕ್‌ಗಳು ಕೇಳಲಿ. ಆಗ ಯಾರೂ ಅದನ್ನು ಆಕ್ಷೇಪಿಸುವುದಿಲ್ಲ. ‘ಕೋಟ್ಯಂತರ ರೂಪಾಯಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡದ ಕೆಲವರ ವಿಚಾರದಲ್ಲಿ ಔದಾರ್ಯ ತೋರುವ ಬ್ಯಾಂಕ್‌ಗಳು ಬಡಪಾಯಿಗಳ ಮೇಲೆ ಮುಗಿಬೀಳುತ್ತವೆ’ ಎನ್ನುವ ಮಾತು ಜನ ಜನಿತ. ಬೀದಿ ಬದಿ ವ್ಯಾಪಾರಿಗಳ ವಿಚಾರದಲ್ಲಿ ಈಗ ಅವುಗಳು ನಡೆದುಕೊಂಡ ರೀತಿಯನ್ನು ನೋಡಿ ದರೆ ಆ ಮಾತಿನಲ್ಲಿ ಸತ್ಯಾಂಶವಿದೆ ಎಂದೇ ಹೇಳಬೇಕಾಗುತ್ತದೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡುವಾಗ, ‘ಸಹಾಯಧನವನ್ನು ಯಾವುದೇ ಸಾಲಕ್ಕೆ ಹೊಂದಾಣಿಕೆ ಮಾಡದಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ’ ಎಂದು ಹೇಳಿದ್ದರು. ಬ್ಯಾಂಕ್‌ಗಳ ವ್ಯವಹಾರದ ಬುದ್ಧಿಯನ್ನು ಮುಂಚಿತವಾಗಿಯೇ ಗ್ರಹಿಸಿದ್ದ ಬೀದಿ ಬದಿ ವ್ಯಾಪಾರಿಗಳ ಸಂಘ ಸಹ ‘ಸಹಾಯಧನದ ಹಣವನ್ನು ಸಾಲದ ಕಂತಿಗೆ ಹೊಂದಾಣಿಕೆ ಮಾಡದಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿತ್ತು. ಸರ್ಕಾರದ ಸ್ಪಷ್ಟ ಸೂಚನೆ ಹೊರತಾಗಿಯೂ ಕೆಲವು ಬ್ಯಾಂಕ್‌ಗಳು ಸಹಾಯಧನದಲ್ಲಿ ಸಾಲದ ಕಂತು ಮುರಿದು ಕೊಂಡಿರುವುದು ಖಂಡನೀಯ. ಈ ರೀತಿ ಕ್ರೌರ್ಯ ಮೆರೆದ ಬ್ಯಾಂಕ್‌ಗಳ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಸಾಲದ ಕಂತುಗಳಿಗೆ ಹೊಂದಾಣಿಕೆ ಮಾಡಿಕೊಂಡ ಕ್ರಮ ವನ್ನು ರದ್ದುಪಡಿಸಿ, ಆ ಹಣ ತಕ್ಷಣ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕ್‌ಗಳಿಗೆ ಸೂಚನೆಯನ್ನು ನೀಡಬೇಕು. ಅವುಗಳು ಹಾಗೆ ನಡೆದುಕೊಂಡಿವೆ ಎಂಬುದನ್ನೂ ಖಾತರಿ ಮಾಡಿಕೊಳ್ಳಬೇಕು.

ನಗರ ಪ್ರದೇಶದ ಬಡ ಕುಟುಂಬಗಳ ಕ್ಷೇಮಾಭಿವೃದ್ಧಿ ನೋಡಿಕೊಳ್ಳಬೇಕಿರುವ ‘ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ’ದ ಅಧಿಕಾರಿಗಳು, ಯಾವೊಬ್ಬ ಫಲಾನುಭವಿಯೂ ನೆರವಿನಿಂದ ವಂಚಿತನಾಗದಂತೆ ನಿಗಾ ವಹಿಸಬೇಕು. ಕೋವಿಡ್‌ನಿಂದ ಬದುಕೇ ಮೂರಾಬಟ್ಟೆ ಆಗಿರುವಾಗ ಸಾಲ ಮರುಪಾವತಿಸುವಂತೆ ಬಡ ವ್ಯಾಪಾರಿಗಳ ಮೇಲೆ ಒತ್ತಡ ಹಾಕುವ ಸಮಯ ಇದಲ್ಲ. ‘ಸಾಧ್ಯವಾದರೆ ನೀವೂ ನೆರವು ನೀಡಿ, ಇಲ್ಲದಿದ್ದರೆ ನಮ್ಮ ನೆರವನ್ನು ತೆಪ್ಪಗೆ ಫಲಾನುಭವಿಗಳಿಗೆ ಮುಟ್ಟಿಸಿ’ ಎಂಬ ಕಠಿಣ ಸಂದೇಶವು ಬ್ಯಾಂಕ್‌ಗಳ ಮುಖ್ಯಸ್ಥರ ಕಿವಿಗೆ ಅಪ್ಪಳಿಸುವಂತೆ ರಾಜ್ಯ ಸರ್ಕಾರದ ಕ್ರಮಗಳು ಇರಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು