ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಆದಾಯ: ತಳ್ಳಿಹಾಕುವಂತಿಲ್ಲಆದರೆ, ಶಾಶ್ವತ ಪರಿಹಾರ ಅಲ್ಲ

Last Updated 27 ಮಾರ್ಚ್ 2019, 19:44 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಐದು ಕೋಟಿ ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ ತಲಾ₹72ಸಾವಿರದಷ್ಟು ಕನಿಷ್ಠ ಆದಾಯದ ಖಾತರಿ ನೀಡುವುದಾಗಿ ಆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದಾರೆ. ‘ನ್ಯೂನತಮ್‌ ಆಯ್‌ ಯೋಜನಾ’ (ನ್ಯಾಯ್‌) ಎಂದು ಹೆಸರಿಸಲಾಗಿರುವ ಈ ಕನಿಷ್ಠ ಆದಾಯ ಯೋಜನೆಯ ಒಟ್ಟು ವೆಚ್ಚವನ್ನು ₹3.6ಲಕ್ಷ ಕೋಟಿ ಎಂದು ಅಂದಾಜು ಮಾಡಲಾಗಿದೆ.

ಶೇ 20ರಷ್ಟು ಅತಿ ಬಡ ಕುಟುಂಬಗಳ ಒಟ್ಟು 25ಕೋಟಿ ಮಂದಿ ಈ ಉದ್ದೇಶಿತ ಯೋಜನೆಯ ಫಲಾನುಭವಿಗಳು.ಚುನಾವಣೆ ಕಾಲದಲ್ಲಿ ರಾಜಕೀಯ ಪಕ್ಷಗಳು ಈವರೆಗೆ ನೀಡಿರುವ ಭರವಸೆಗಳ ಪೈಕಿ ಅತಿ ದೊಡ್ಡ ಮತ್ತು ಅತ್ಯಂತ ಮಹತ್ವಾಕಾಂಕ್ಷೆಯ ಆಶ್ವಾಸನೆಯಿದು. ಬಡತನದ ಮೇಲೆ ಕಾಂಗ್ರೆಸ್ ಪಕ್ಷ ಸಾರಿರುವ ಅತಿ ದೊಡ್ಡ‘ಸರ್ಜಿಕಲ್ ಸ್ಟ್ರೈಕ್‌’ ಎಂದು ರಾಹುಲ್ ಗಾಂಧಿ ಈ ಯೋಜನೆಯನ್ನು ಬಣ್ಣಿಸಿದ್ದಾರೆ.ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಬಾಂಬ್ ಕೆಡವಿ ಪಾಠ ಕಲಿಸಿದೆವು ಎನ್ನುವ ಮೂಲಕ ಆಕ್ರಮಣಕಾರಿ ಹಿಂದೂ ರಾಷ್ಟ್ರವಾದ ಮತ್ತು ದೇಶಭಕ್ತಿಯ ಸುತ್ತ ಪ್ರಧಾನಿ ನರೇಂದ್ರ ಮೋದಿಯವರು ಬಲಿಷ್ಠ ಕಥನವನ್ನು ಕಟ್ಟಿದ್ದಾರೆ.

ನಿತ್ಯ ಬದುಕನ್ನು ಕಾಡಿರುವ ನಿಜ ಸಮಸ್ಯೆಗಳತ್ತ ವಾಪಸು ಕರೆದು ತರುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿದೆ.ಕನಿಷ್ಠ ಆದಾಯ ಯೋಜನೆ ಈ ದಿಸೆಯಲ್ಲಿ ದೊಡ್ಡ ಪ್ರಕಟಣೆ.ಸಮಾನ ಮತ್ತು ನ್ಯಾಯಯುತ ಅಭಿವೃದ್ಧಿ,ಉದ್ಯೋಗಾವಕಾಶ ಸೃಷ್ಟಿ,ಸಮಾನ ಅವಕಾಶಗಳ ವಾತಾವರಣ ನಿರ್ಮಾಣ ಹಾಗೂ ಎಲ್ಲ ಜನವರ್ಗಗಳನ್ನೂ ಒಳಗೊಳ್ಳುವ ಸಾಮಾಜಿಕ ನೀತಿ ನಿರ್ಧಾರಗಳು ಚುನಾವಣೆ ಹೋರಾಟಕ್ಕೆ ಆಧಾರ ಆಗಬೇಕೇ ವಿನಾ ಕೋಮು ಧ್ರುವೀಕರಣದ ಭಾವೋದ್ದೀಪಕ ವಿಷಯಗಳಲ್ಲ. ರಾಹುಲ್ ಪ್ರಕಟಿಸಿರುವ ಹೊಸ ಯೋಜನೆಗೆ ಈಗಾಗಲೇ ನೀಡಲಾಗುತ್ತಿರುವ ಆಹಾರ ಸಬ್ಸಿಡಿಯ ದುಪ್ಪಟ್ಟು ಮತ್ತು ರಸಗೊಬ್ಬರ ಸಬ್ಸಿಡಿಯ ಐದು ಪಟ್ಟು ಮೊತ್ತ ವೆಚ್ಚವಾಗಲಿದೆ.ತಾನು ಅಧಿಕಾರಕ್ಕೆ ಬಂದರೆ‘ನ್ಯಾಯ್’ ಜಾರಿಯ ನಂತರ ಈ ಸಬ್ಸಿಡಿಗಳನ್ನು ಮುಂದುವರಿಸಲಾಗುವುದೇ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಿಲ್ಲ. ಪುಲ್ವಾಮಾದಲ್ಲಿ ಉಗ್ರರ ದಾಳಿ ಮತ್ತು ಬಾಲಾಕೋಟ್ ವಾಯುದಾಳಿಯು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಚುನಾವಣೆ ಪ್ರಚಾರಕ್ಕೆ ಮಂಕು ಕವಿಸಿವೆ. ‘ನ್ಯಾಯ್‌’ ಭರವಸೆಯು ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಚಾರಕ್ಕೆ ಚೇತರಿಕೆ ನೀಡಬಲ್ಲದು.

ಬಡವರಿಗೆ ವಸ್ತು ಅಥವಾ ದವಸಧಾನ್ಯ ರೂಪದಲ್ಲಿ ನೀಡುವ ಈವರೆಗಿನ ಯೋಜನೆಗಳು ಸೋರಿಕೆಯ ದೊಡ್ಡ ದೋಷಕ್ಕೆ ತುತ್ತಾಗಿವೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆಯ ಪರಿಕಲ್ಪನೆ ಮುನ್ನೆಲೆಗೆ ಬಂದಿರುವುದಕ್ಕೆ ಸೋರಿಕೆಯೇ ಕಾರಣ.ಇಂತಹ ಬೃಹತ್ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಬಹುದೊಡ್ಡ ಸವಾಲು.ಈವರೆಗಿನ ಯೋಜನೆಗಳಲ್ಲಿ ಫಲಾನುಭವಿ ಆಯ್ಕೆ ಕುರಿತು ಎಡವಿರುವ ದೂರುಗಳು ಹೇರಳ. ಅನರ್ಹರು ಆಯ್ಕೆಯಾಗಿ ಅರ್ಹರು ದೊಡ್ಡ ಸಂಖ್ಯೆಯಲ್ಲಿ ಪಟ್ಟಿಯಿಂದ ಹೊರಗೆ ಉಳಿದದ್ದು ಬಹುಚರ್ಚಿತ ವಿಷಯ.

‘ನ್ಯಾಯ್‌’ ಅನ್ನು ಚುನಾವಣಾ ಕಾಲದ ಪೊಳ್ಳು ಭರವಸೆ ಎಂದು ಬಿಜೆಪಿ ತಳ್ಳಿಹಾಕಿದೆ.ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ತಲಾ₹6000 ನಗದನ್ನು ಬಡ ರೈತ ಕುಟುಂಬಗಳ ಬ್ಯಾಂಕ್ ಖಾತೆಗೆ ನೇರ ವರ್ಗಾಯಿಸುವ‘ಪ್ರಧಾನಮಂತ್ರಿ-ಕಿಸಾನ್’ಯೋಜನೆಯನ್ನು ಮೊನ್ನೆ ಮೊನ್ನೆಯಷ್ಟೇ ಜಾರಿಗೆ ತಂದಿದೆ ಎಂಬುದನ್ನು ಮರೆಯಬಾರದು.ಖುದ್ದು ಗಾಜಿನ ಮನೆಯಲ್ಲಿ ಕುಳಿತವರು ಇತರರತ್ತ ಕಲ್ಲು ತೂರುವುದು ತರವಲ್ಲ.ಈ ಹಿಂದೆ ತೆಲಂಗಾಣ ಮತ್ತು ಒಡಿಶಾ ಸರ್ಕಾರಗಳು ಜಾರಿ ಮಾಡಿರುವ ಕನಿಷ್ಠ ಆದಾಯ ಯೋಜನೆಗಳು ಸಣ್ಣ ರೈತರ ಸಂಕಟವನ್ನು ತಕ್ಕಮಟ್ಟಿಗೆ ನಿವಾರಿಸಿರುವ ವರದಿಗಳಿವೆ. ‘ಈ ಯೋಜನೆ‘ಕ್ರಾಂತಿಕಾರಿ’ಆಗಬಲ್ಲದು.ಬೇರು ಮಟ್ಟದಲ್ಲಿ ಅಭಿವೃದ್ಧಿಯನ್ನು ಚಿಗುರಿಸಬಲ್ಲದು.ಆದರೆ ದೇಶದ ಸದ್ಯದ ಆರ್ಥಿಕ ಸ್ಥಿತಿಗತಿ ಈ ಯೋಜನೆ ಜಾರಿಗೆ ಪೂರಕವಾಗಿಲ್ಲ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದಾರೆ.ದೇಶದ ಬಡತನ ನಿವಾರಣೆಗೆ ಅಭಿವೃದ್ಧಿ ಸಾಧನೆ-ಉದ್ಯೋಗ ಅವಕಾಶಗಳ ಸೃಷ್ಟಿಯೇ ನೇರ ದಾರಿ.ನೇರ ನಗದು ನೀಡಿಕೆಯೊಂದೇ ದಿವ್ಯ ಔಷಧ ಆಗಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT