ಕೊಡಗು ಜಿಲ್ಲೆಯ ಹೋಂಸ್ಟೇನಲ್ಲಿ ಅಮೆರಿಕದ ಮಹಿಳೆಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ, ವಿಶ್ವ ಪ್ರವಾಸೋದ್ಯಮ ನಕ್ಷೆಯಲ್ಲಿ ರಾಜ್ಯದ ವರ್ಚಸ್ಸನ್ನು ಕುಗ್ಗಿಸುವ ಘಟನೆಯಾಗಿದೆ.

ಕೊಡಗು ಜಿಲ್ಲೆಯ ಕುಟ್ಟ ಸಮೀಪದ ಹೋಂಸ್ಟೇನಲ್ಲಿ ಅಮೆರಿಕದ ಪ್ರವಾಸಿಗರೊಬ್ಬರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವು ಆಘಾತ ಉಂಟುಮಾಡುವ ಘಟನೆಯಾಗಿದೆ ಹಾಗೂ ಜಿಲ್ಲೆಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರವಾಸೋದ್ಯಮ ಆರ್ಥಿಕತೆಯು ಪ್ರವಾಸಿಗರಿಗೆ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ವಿಫಲ ಆಗಿರುವುದರ ಬಗೆಗಿನ ಎಚ್ಚರಿಕೆಯಂತಿದೆ. ಇಸ್ರೇಲಿ ಮಹಿಳೆಯ ಮೇಲೆ ಹಂಪಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಭೀಕರ ಘಟನೆಯ ನಂತರ, ವಿದೇಶಿ ಮಹಿಳೆಯ ಮೇಲೆ ರಾಜ್ಯದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯದ ಮತ್ತೊಂದು ಘಟನೆ ಇದಾಗಿದೆ. ಈ ಘಟನೆಗಳನ್ನು ಬಿಡಿಯಾಗಿ ನೋಡದೆ, ಒಟ್ಟು ವ್ಯವಸ್ಥೆಯಲ್ಲಿನ ಲೋಪಗಳ ರೂಪದಲ್ಲಿ ನೋಡಬೇಕಾಗಿದೆ. ಕೊಡಗು ಘಟನೆಯು ಹೆಚ್ಚು ಆತಂಕಕಾರಿಯಾದುದು. ದೌರ್ಜನ್ಯಕ್ಕೆ ಒಳಗಾದ ಪ್ರವಾಸಿ, ಕುಟ್ಟ ಸಮೀಪದ ಹೋಂಸ್ಟೇಗೆ ಪದೇ ಪದೇ ಭೇಟಿ ಕೊಡುತ್ತಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ನ ಸಿಬ್ಬಂದಿಯೊಬ್ಬರು ಮಾದಕ ದ್ರವ್ಯ ಸೇವಿಸಿ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆಯ ಬಗ್ಗೆ ಪೊಲೀಸರಿಗೆ ತಕ್ಷಣ ವರದಿ ಮಾಡಬೇಕಾಗಿದ್ದ ಹೋಂಸ್ಟೇ ಮಾಲೀಕರು, ಸಂತ್ರಸ್ತೆಯನ್ನು ಅಕ್ರಮ ಬಂಧನದಲ್ಲಿರಿಸಿ, ವೈಫೈ ಸಂಪರ್ಕ ಕಡಿತಗೊಳಿಸಿದ್ದರು ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯು ಮೈಸೂರನ್ನು ತಲಪಿ, ಅಮೆರಿಕದ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ ನಂತರವಷ್ಟೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಪ್ರಕ್ರಿಯೆ ಚುರುಕಾಗಿ ನಡೆದಿದೆ. ಆರೋಪಿ ಮತ್ತು ಹೋಂಸ್ಟೇ ಮಾಲೀಕರನ್ನು ಬಂಧಿಸ
ಲಾಗಿದ್ದು, ಹೋಂಸ್ಟೇ ನೋಂದಣಿಯನ್ನು ಜಿಲ್ಲಾಡಳಿತ ರದ್ದುಗೊಳಿಸಿದೆ.

ಹೋಂಸ್ಟೇ ಪ್ರಕರಣವನ್ನು ಸರಳವಾಗಿ ನೋಡುವುದು ಸಾಧ್ಯವಿಲ್ಲ. ಕೊಡಗಿನಂತಹ ಪ್ರದೇಶಗಳು ಕಾರ್ಮಿಕರತೀವ್ರ ಕೊರತೆಯನ್ನು ಎದುರಿಸುತ್ತಿದ್ದು,ವಲಸೆ ಕಾರ್ಮಿಕರನ್ನು ಅವಲಂಬಿಸು
ವುದು ಅನಿವಾರ್ಯವಾಗಿದೆ. ವಲಸಿಗರ ಹಿನ್ನೆಲೆ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗಿದ್ದರೂ, ಕಾರ್ಮಿಕರ ಹಿನ್ನೆಲೆಯನ್ನು ಕಠಿಣ ಪರಿಶೀಲನೆಗೆ ಒಳಪಡಿಸುವಷ್ಟು ಅನುಕೂಲಗಳನ್ನು ಸಣ್ಣ ಹೋಂಸ್ಟೇಗಳನ್ನು ನಡೆಸುವವರು ಹೊಂದಿರುವುದಿಲ್ಲ. ಆಧಾರ್ ಕಾರ್ಡ್ಗಳನ್ನಷ್ಟೇ ಅವಲಂಬಿಸಿ ನಡೆಸುವ ಪರಿಶೀಲನೆಯು ಸದ್ಯದ ಸಂದರ್ಭದಲ್ಲಿ ಹೆಚ್ಚು ವಿಶ್ವಾಸಾರ್ಹವಾಗಿ ಉಳಿದಿಲ್ಲ.ಆದರೆ, ನಿಯಮಗಳ ವೈಫಲ್ಯಕ್ಕೆ ಕಾರಣವನ್ನಾಗಿ ತಾಂತ್ರಿಕ ಅಡೆತಡೆಗಳನ್ನು ಒಪ್ಪುವುದು ಸಾಧ್ಯವಿಲ್ಲ. ಪ್ರವಾಸಿಗರಿಗಾಗಿ ಕುಟುಂಬಗಳು ನಡೆಸುವ ಆತಿಥ್ಯ ಉದ್ಯಮದ ರೂಪದಲ್ಲಿ ವ್ಯಾಖ್ಯಾನಿಸಲಾದ ಹೋಂಸ್ಟೇಗಳನ್ನು ಕೆಲವೆಡೆ ರೆಸಾರ್ಟ್ಗಳಾಗಿ ಪರಿವರ್ತಿಸಿರುವುದೂ ಸಮಸ್ಯೆಗಳಿಗೆ ಕಾರಣವಾಗಿದೆ. ಇಂಥ ರೆಸಾರ್ಟ್ಗಳ ಸಂಪೂರ್ಣ ನಿರ್ವಹಣೆಯನ್ನು ಮಾಲೀಕರ ಗೈರುಹಾಜರಿಯಲ್ಲಿ ನೌಕರರೇ ನಿರ್ವಹಿಸುವುದರಿಂದ, ಹೋಂಸ್ಟೇಗೆ ಇರುವ ಸಾಮಾಜಿಕ ಹೊಣೆಗಾರಿಕೆ ಇಲ್ಲವಾಗುತ್ತದೆ. ನಿರ್ದಿಷ್ಟ ಮಾನದಂಡಗಳನ್ನು ಪಾಲಿಸದ ಆತಿಥ್ಯ ಉದ್ಯಮವನ್ನು ಹೋಂಸ್ಟೇ ವ್ಯಾಪ್ತಿಯಿಂದ ಹೊರತರಬೇಕಾಗಿದೆ ಹಾಗೂ ಅವುಗಳನ್ನು ವಾಣಿಜ್ಯ ಸಂಸ್ಥೆಗಳೆಂದು ಪರಿಗಣಿಸಿ ಪರವಾನಗಿ ನಿಯಮಗಳನ್ನು, ನಿರ್ವಹಣೆಯ ನಿಬಂಧನೆಗಳನ್ನು ಬಿಗಿಗೊಳಿಸಬೇಕಾಗಿದೆ.

ಹೋಂಸ್ಟೇಗಳು ಹೆಚ್ಚಳವಾಗಿರುವ ಸಮಸ್ಯೆಯನ್ನು ಪಶ್ಚಿಮ ಘಟ್ಟಗಳ ವಿವಿಧ ಭಾಗಗಳಲ್ಲಿ ಆಗಿರುವ ಅಕ್ರಮ ಆಸ್ತಿಗಳ ರೂಪದಲ್ಲೂ ನೋಡಬೇಕಾಗಿದೆ. ಅನೇಕ ಹೋಂಸ್ಟೇಗಳನ್ನು ಪರವಾನಗಿ ಇಲ್ಲದೆಯೇ ನಡೆಸಲಾಗುತ್ತಿದೆ. ದುರಂತ ಸಂಭವಿಸುವವರೆಗೂ ಅವುಗಳು ಕಾನೂನಿನ ಗಮನಕ್ಕೆ ಬರುವುದಿಲ್ಲ. ಇಷ್ಟೊಂದು ದೊಡ್ಡ ಪ್ರಮಾಣದ ಅನಧಿಕೃತ ಚಟುವಟಿಕೆಯು ಅಧಿಕಾರಿಗಳ ಸಹಕಾರವಿಲ್ಲದೆ ನಡೆಯಲು ಸಾಧ್ಯವಿಲ್ಲ. ಪ್ರವಾಸೋದ್ಯಮ ಇಲಾಖೆಯ ಸಾಂದರ್ಭಿಕ ಕ್ರಮಗಳು ವ್ಯವಸ್ಥೆಯಲ್ಲಿನ ಲೋಪವನ್ನು ತಡೆಗಟ್ಟುವ ಬದಲು, ಘಟನೆಗೆ ಪ್ರತಿಕ್ರಿಯೆಯ ರೂಪದಲ್ಲಿ ಇರುವುದೇ ಹೆಚ್ಚು. ಕೆಲವೆಡೆ ಕಾನೂನುಬಾಹಿರ ಚಟುವಟಿಕೆಗಳೂ ನಡೆಯುತ್ತವೆ ಎನ್ನುವುದು ಸ್ಥಳೀಯ ಅಧಿಕಾರಿಗಳ ‘ಸಹಕಾರ’ ಅಥವಾ ಅದಕ್ಷತೆಯನ್ನು ಸೂಚಿಸುವಂತಿದೆ. ಈ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕಾದ ಸರ್ಕಾರ, ಮೊದಲು ತನ್ನೊಳಗಿನ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮಗಳ ಬದಲು ಅಧಿಕೃತ ಪೋರ್ಟಲ್ ಮೂಲಕವಷ್ಟೇ ಹೋಂಸ್ಟೇಗೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು. ಸಂಪರ್ಕ ವ್ಯವಸ್ಥೆ ಕ್ಷೀಣವಾಗಿರುವ ಪ್ರದೇಶಗಳಿಗೆ ಪ್ರವಾಸಿಗರು ಒಂಟಿಯಾಗಿ ಹೋಗದಿರುವುದೇ ಉತ್ತಮ. ಹೋಗುವುದು ಅನಿವಾರ್ಯವಾದಲ್ಲಿ ತಮ್ಮ ಚಟುವಟಿಕೆಗಳ ಬಗ್ಗೆ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಬೇಕು; ಅಗತ್ಯವಿದ್ದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 112ನ್ನು ಬಳಸಬೇಕು. ಆದರೆ, ಮೂಲಭೂತ ಅಗತ್ಯವಾದ ಸುರಕ್ಷತೆಯ ಹೊಣೆಗಾರಿಕೆಯನ್ನು ಪ್ರವಾಸಿಗರ ಮೇಲೆ ಹೇರಬಾರದು. ಕುಟ್ಟ ಮತ್ತು ಹಂಪಿಯಲ್ಲಿ ನಡೆದಿರುವ ಘಟನೆಗಳು ವಿಶ್ವದ ಗಮನಸೆಳೆದಿದ್ದು, ಸುರಕ್ಷಿತ ಪ್ರವಾಸೋದ್ಯಮ ತಾಣ ಎನ್ನುವ ರಾಜ್ಯದ ಹಿರಿಮೆಗೆ ಧಕ್ಕೆ ತಂದಿವೆ. ರಾಜ್ಯವು ಈಗ ತಾತ್ಕಾಲಿಕ ಕ್ರಮಗಳ ಬದಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅವುಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಬೇಕು. ಅಪರಾಧಗಳಿಗೆ ಪ್ರತಿಕ್ರಿಯಿಸುವುದರ ಬದಲಾಗಿ, ಅವುಗಳನ್ನು ತಡೆಗಟ್ಟುವ ವಿಶ್ವಾಸಾರ್ಹ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.