ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮದರಸಾಗಳ ಪಠ್ಯಕ್ರಮ- ಸರ್ಕಾರದ ಹಸ್ತಕ್ಷೇಪ ಸಲ್ಲದು

Last Updated 21 ಜುಲೈ 2022, 19:30 IST
ಅಕ್ಷರ ಗಾತ್ರ

ತಮ್ಮನ್ನು ಭೇಟಿಯಾಗಿ ಪಠ್ಯ ಪರಿಷ್ಕರಣೆಗೆ ಮನವಿ ಸಲ್ಲಿಸಿದವರ ವಿವರಗಳನ್ನು ಸಚಿವರು ಬಹಿರಂಗಪಡಿಸಬೇಕು...

ಮದರಸಾಗಳಲ್ಲಿನ ಪಠ್ಯಕ್ರಮವನ್ನು ಪರಿಷ್ಕರಿಸಬೇಕೆಂದು ಮುಸ್ಲಿಂ ಸಮುದಾಯದ ಕೆಲವರು ಮನವಿ ಮಾಡಿಕೊಂಡಿದ್ದು, ಆ ಬೇಡಿಕೆಯನ್ನು ಸರ್ಕಾರ ಪರಿಗಣಿಸಲಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಹೇಳಿರುವುದು ತಪ್ಪುಗ್ರಹಿಕೆ ಹಾಗೂ ಅನಗತ್ಯ ಗೊಂದಲಗಳಿಗೆ ಅವಕಾಶ ಕಲ್ಪಿಸುವಂಥದ್ದು. ಪಠ್ಯಕ್ರಮದ ಪರಿಷ್ಕರಣೆಯ ಪ್ರಯತ್ನದ ಮೂಲಕ ಮದರಸಾಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ನಡೆಸಲು ಸರ್ಕಾರ ಉದ್ದೇಶಿಸಿದಂತಿದೆ. ಮದರಸಾಗಳಲ್ಲಿನ ಶಿಕ್ಷಣ ಕ್ರಮವನ್ನು ನಿಯಂತ್ರಿಸಲು ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ (ಟಿಇಟಿ) ಉತ್ತೀರ್ಣರಾದ ಶಿಕ್ಷಕರಿಗಷ್ಟೇ ಅಲ್ಲಿ ಬೋಧಿಸಲು ಅವಕಾಶ ಕಲ್ಪಿಸಲು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ. ಆ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸುವ ಪ್ರಸ್ತಾವ ಸರ್ಕಾರದ ಮುಂದಿಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ, ಮುಂದಿನ ದಿನಗಳಲ್ಲಿ ಮದರಸಾಗಳಲ್ಲಿನ ಪಠ್ಯಕ್ರಮವನ್ನು ಪರಿಷ್ಕರಿಸುವ ಸಾಧ್ಯತೆಯನ್ನು ಅವರು ಅಲ್ಲಗಳೆದಿಲ್ಲ. ಮುಸ್ಲಿಂ ಸಮುದಾಯದ ಕೆಲವು ಪೋಷಕರು ತಮ್ಮನ್ನು ಭೇಟಿ ಮಾಡಿ, ಉಳಿದ ಸಮುದಾಯಗಳಿಗೆ ದೊರೆಯುತ್ತಿರುವ ಶಿಕ್ಷಣವನ್ನು ತಮ್ಮ ಮಕ್ಕಳಿಗೂ ನೀಡುವಂತೆ ಮನವಿ ಸಲ್ಲಿಸಿದ್ದು, ಅಂಥ ಬೇಡಿಕೆಗಳ ಮೇರೆಗೆ ಮದರಸಾಗಳಲ್ಲಿನ ಪಠ್ಯಕ್ರಮವನ್ನು ಪರಿಷ್ಕರಿಸುವ ಸಾಧ್ಯತೆಯನ್ನು ಸರ್ಕಾರ ಪರಿಗಣಿಸಲಿದೆ ಎಂದು ಹೇಳಿದ್ದಾರೆ. ಪಠ್ಯ ಪರಿಷ್ಕರಣೆ ಕುರಿತಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಮದರಸಾಗಳಿಂದ ತಮಗೆ ಯಾವ ಬೇಡಿಕೆಯೂ ಬಂದಿಲ್ಲ ಎಂದು ಸಚಿವರು ಹೇಳಿರುವುದನ್ನು ನೋಡಿದರೆ, ಅವರ ಮಾತುಗಳಲ್ಲಿ ವಿರೋಧಾಭಾಸ ಇರುವುದು ಸ್ಪಷ್ಟವಾಗಿದೆ. ತಮ್ಮನ್ನು ಭೇಟಿಯಾಗಿ ಪಠ್ಯ ಪರಿಷ್ಕರಣೆಗೆ ಮನವಿ ಸಲ್ಲಿಸಿರುವುದು ಯಾರು ಎನ್ನುವುದನ್ನು ಸಚಿವರು ಬಹಿರಂಗಪಡಿಸದೆ ಹೋದರೆ, ಸರ್ಕಾರದ ಮಾತು ಮತ್ತು ಚಿಂತನೆ ಅನುಮಾನಾಸ್ಪದ ಎನ್ನುವಂತಾಗುತ್ತದೆ. ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಯನ್ನು ಮಾಡಲು ಹೋಗಿ ಉಂಟಾಗಿರುವ ಅಧ್ವಾನಗಳ ಬಗ್ಗೆ ಚರ್ಚೆ ನಡೆ ಯುತ್ತಿರುವ ಸಂದರ್ಭದಲ್ಲೇ, ಮದರಸಾಗಳ ಪಠ್ಯ ಪರಿಷ್ಕರಣೆಯ ಬಗ್ಗೆ ಯೋಚಿಸುವುದರ ಹಿನ್ನೆಲೆಯಲ್ಲಿ, ಶಿಕ್ಷಣ ಕ್ಷೇತ್ರವನ್ನು ರಾಜ್ಯ ಸರ್ಕಾರ ಲಘುವಾಗಿ ಪರಿಗಣಿಸಿದೆಯೇ ಎನ್ನುವ ಪ್ರಶ್ನೆ ಉಂಟಾಗದಿರದು.

ಮದರಸಾಗಳಲ್ಲಿನ ಶೈಕ್ಷಣಿಕ ಚಟುವಟಿಕೆಗಳ ಕುರಿತ ಶಿಕ್ಷಣ ಸಚಿವರ ಮಾತನ್ನು ವೈಯಕ್ತಿಕ ಅಭಿ ಪ್ರಾಯ ಎಂದಷ್ಟೇ ನೋಡಲು ಸಾಧ್ಯವಿಲ್ಲ. ಮದರಸಾಗಳ ವಿರುದ್ಧ ಸಾರ್ವಜನಿಕವಾಗಿ ತಪ್ಪು ಗ್ರಹಿಕೆಗಳನ್ನು ಮೂಡಿಸುವ ಕೆಲಸವನ್ನು ಆಡಳಿತಾರೂಢ ಬಿಜೆಪಿಯ ನಾಯಕರು ನಿರಂತರವಾಗಿ ಮಾಡಿ ಕೊಂಡೇ ಬರುತ್ತಿದ್ದು, ಆ ಅಜೆಂಡಾದ ಭಾಗವಾಗಿಯೇ ಶಿಕ್ಷಣ ಸಚಿವರ ಮಾತನ್ನು ಗಮನಿಸಬೇಕು. ‘ದೇಶದ ಪ್ರತಿಯೊಂದು ಭಾಗದಲ್ಲೂ ಮದರಸಾಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿದ್ದು, ಅವು ತಪ್ಪು ಕಲ್ಪನೆಯ ಧಾರ್ಮಿಕ ಶಿಕ್ಷಣ ನೀಡುತ್ತಿವೆ; ಮದರಸಾಗಳಿಂದ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದರು. ಮದರಸಾಗಳಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಪೂರಕವಾದ ಪಠ್ಯಗಳನ್ನು ಬೋಧಿಸಲಾಗುತ್ತಿದೆ ಎಂದು ದೂರಿದ್ದ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ, ಮದರಸಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದರು.ದೇಶವಿರೋಧಿ ಕೃತ್ಯಗಳನ್ನು ಕಲಿಸುವ ಮದರಸಾಗಳನ್ನು ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೂಡ ಇತ್ತೀಚೆಗೆ ಹೇಳಿದ್ದರು. ಹಿಜಾಬ್‌ ಮತ್ತು ಹಲಾಲ್‌ ವಿಚಾರವಾಗಿ ರಾಜ್ಯದ ಎಲ್ಲೆಡೆ ವಿವಾದ ಎಬ್ಬಿಸಲಾಗಿತ್ತು. ಈ ಎಲ್ಲವುಗಳ ಮುಂದುವರಿದ ಭಾಗವಾಗಿ ಶಿಕ್ಷಣ ಸಚಿವರ ಮಾತನ್ನು ಗಮನಿಸಬೇಕು.

ಮದರಸಾ ಶಿಕ್ಷಣದಿಂದ ತಮ್ಮ ಮಕ್ಕಳು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹಿಂದುಳಿಯುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ, ಬೇರೆ ಮಕ್ಕಳಿಗೆ ದೊರೆಯುವ ಶಿಕ್ಷಣವನ್ನು ತಮ್ಮ ಮಕ್ಕಳಿಗೂ ನೀಡಿ ಎಂದು ಕೆಲವು ಪೋಷಕರು ಮನವಿ ಸಲ್ಲಿಸಿರುವುದಾಗಿ ಶಿಕ್ಷಣ ಸಚಿವರು ಬೇರೆ ಬೇರೆ ಸಂದರ್ಭಗಳಲ್ಲಿ ಹೇಳಿದ್ದಾರೆ. ಜೀವನಕ್ಕೆ ಅಗತ್ಯವಾದ ಶಿಕ್ಷಣವು ಮದರಸಾಗಳಿಂದ ದೊರೆಯುತ್ತಿಲ್ಲ ಎಂದು ಕೆಲವರ ಹೇಳಿಕೆಗಳ ಮೂಲಕ ಭಾವಿಸಿರುವ ಸಚಿವರು, ಮದರಸಾ ಅಥವಾ ಸರ್ಕಾರಿ– ಖಾಸಗಿ ಶಾಲೆಯ ಕಲಿಕೆಯಲ್ಲಿ ಯಾವುದು ಬೇಕೆನ್ನುವುದನ್ನು ನಿರ್ಧರಿಸುವ ಆಯ್ಕೆ ಮಕ್ಕಳು ಮತ್ತು ಪೋಷಕರಿಗೆ ಇರುವುದನ್ನು ಮರೆತಿದ್ದಾರೆ ಅಥವಾ ಪ್ರಜ್ಞಾಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ. ಮದರಸಾಗಳ ಶಿಕ್ಷಣದ ಬಗ್ಗೆ ಅತೃಪ್ತಿ ಇರುವವರು ಸರ್ಕಾರಿ ಇಲ್ಲವೇ ಖಾಸಗಿ ಶಾಲೆಗಳಿಗೆ ಸೇರ್ಪಡೆ ಯಾಗಲು ರಾಜ್ಯದಲ್ಲಿ ಯಾವುದೇ ನಿರ್ಬಂಧವಿಲ್ಲ. ಮುಸ್ಲಿಂ ಸಮುದಾಯದ ಮಕ್ಕಳು ಮದರಸಾಗಳಲ್ಲಿಯೇ ಕಲಿಯಬೇಕು ಎನ್ನುವ ನಿರ್ಬಂಧವೂ ಇಲ್ಲ. ಮದರಸಾಗಳಿಗೆ ಹೋಗುವ ಬಹುತೇಕ ಮಕ್ಕಳು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲೂ ಕಲಿಯುತ್ತಿದ್ದಾರೆ. ಮದರಸಾಗಳಲ್ಲಿನ ಧರ್ಮಾಧಾರಿತ ಕಲಿಕೆ ಮತ್ತು ಸಾರ್ವಜನಿಕ ಶಿಕ್ಷಣದ ನಡುವಿನ ವ್ಯತ್ಯಾಸವನ್ನು ಮಕ್ಕಳು ಮತ್ತು ಪೋಷಕರು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ವ್ಯತ್ಯಾಸವನ್ನು ಮರೆತ ಸಚಿವರು ಮದರಸಾಗಳ ಶಿಕ್ಷಣಕ್ರಮದ ಬಗ್ಗೆ ಅನಗತ್ಯ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಶಾಲೆಗಳಲ್ಲಿ ಕಲಿಯುತ್ತಿದ್ದು, ಮದರಸಾಗಳಿಗೂ ಹಾಜರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಸರ್ಕಾರ ಗಮನಿಸಲಿದೆ ಎನ್ನುವ ಅವರ ಹೇಳಿಕೆ ಕೂಡ ಮುಸ್ಲಿಂ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ನೋಡುವ ಮನಃಸ್ಥಿತಿಯ ಭಾಗವಾಗಿದೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ಅವಮಾನಿಸುವಂಥದ್ದಾಗಿದೆ.ಮದರಸಾಗಳ ಶಿಕ್ಷಣಕ್ರಮದ ಬಗ್ಗೆ ಸರ್ಕಾರಕ್ಕೆ ನಿಜವಾಗಿಯೂ ಕಾಳಜಿಯಿದ್ದಲ್ಲಿ,ಶಿಕ್ಷಣ ಸಚಿವರು ರಾಜ್ಯದಾದ್ಯಂತ ಇರುವ ಮದರಸಾಗಳಿಗೆ ಒಮ್ಮೆ ಸೌಹಾರ್ದ ಭೇಟಿ ಕೊಟ್ಟು ಅಲ್ಲಿನ ಚಟುವಟಿಕೆಗಳನ್ನು ಗಮನಿಸಬೇಕು ಹಾಗೂ ಮದರಸಾಗಳನ್ನು ನಡೆಸುವವರ ತವಕತಲ್ಲಣಗಳನ್ನು ಆಲಿಸಬೇಕು. ಅದನ್ನು ಮಾಡದೆ, ಮದರಸಾಗಳನ್ನು ಗುಮ್ಮನಂತೆ ಬಿಂಬಿಸುವುದು ಸರ್ಕಾರದ ವರ್ಚಸ್ಸನ್ನು ಕುಗ್ಗಿಸುವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನಡವಳಿಕೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT