ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಬರಹಗಾರರಿಗೆ ಜೀವಬೆದರಿಕೆ ಪತ್ರ ಸರ್ಕಾರದ ಮೌನ– ನಿರ್ಲಕ್ಷ್ಯ ಸರಿಯಲ್ಲ

Last Updated 13 ಜುಲೈ 2022, 19:30 IST
ಅಕ್ಷರ ಗಾತ್ರ

ಬರಹಗಾರರ ಜೀವಕ್ಕೆ ಬೆದರಿಕೆಯೊಡ್ಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಪ್ರಯತ್ನಗಳು ರಾಜ್ಯದಲ್ಲಿ ಮರುಕಳಿಸಿರುವುದು ದುರದೃಷ್ಟಕರ. ಹಿಜಾಬ್‌ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಳೆದ ನಿಲುವನ್ನು ವಿರೋಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಹಿರಂಗ ಪತ್ರ ಬರೆದ 61 ಬರಹಗಾರರಲ್ಲಿ ಹಲವರಿಗೆ ಜೀವಬೆದರಿಕೆ ಎದುರಾಗಿದೆ. ಮೂರು ತಿಂಗಳ ಅವಧಿಯಲ್ಲಿ ಹತ್ತೊಂಬತ್ತು ಬೆದರಿಕೆ ಪತ್ರಗಳು ಲೇಖಕರನ್ನು ತಲುಪಿವೆ. ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ ಬರೆಯಲಾಗಿರುವ ಕೈಬರಹದ ಪತ್ರಗಳಲ್ಲಿ ಕೆಲವು, ಒಂದೇ ದಿನ ಒಂದೇ ಅಂಚೆ ಕಚೇರಿಯಿಂದ ಬಟವಾಡೆಯಾಗಿವೆ. ಕುಂ. ವೀರಭದ್ರಪ್ಪನವರಿಗೆ 6, ಬಂಜಗೆರೆ ಜಯಪ್ರಕಾಶ್‌ ಅವರಿಗೆ 5, ಬಿ.ಟಿ. ಲಲಿತಾ ನಾಯಕ್‌, ಬಿ.ಎಲ್‌. ವೇಣು, ಚಂದ್ರಶೇಖರ ತಾಳ್ಯ ಅವರಿಗೆ ತಲಾ 2, ಎಸ್‌.ಜಿ. ಸಿದ್ಧರಾಮಯ್ಯ ಹಾಗೂ ಡಾ. ವಸುಂಧರಾ ಭೂಪತಿ ಅವರಿಗೆ ಒಂದೊಂದು ಬೆದರಿಕೆ ಪತ್ರಗಳು ಬಂದಿವೆ. ಹಿಜಾಬ್‌ ವಿವಾದ ಹಾಗೂ ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾಹಿತಿಗಳು ತಳೆದಿರುವ ನಿಲುವಿನ ಕಾರಣಕ್ಕೆ ಜೀವಬೆದರಿಕೆ ಒಡ್ಡಲಾಗಿದ್ದು, ‘ಕ್ಷಮೆ ಕೇಳದೆಹೋದರೆ ಕಾಲನ ಉಪಚಾರಕ್ಕೆ ಸಿದ್ಧರಾಗಿ’ ಎಂದು ಪತ್ರಗಳಲ್ಲಿ ಎಚ್ಚರಿಸಲಾಗಿದೆ. ಜೀವಬೆದರಿಕೆಗೆ ಗುರಿಯಾದ ಕೆಲವು ಬರಹಗಾರರ ಮನೆಗಳಿಗೆ ಭೇಟಿ ನೀಡಿರುವ ಪೊಲೀಸರು, ಭದ್ರತಾ ವ್ಯವಸ್ಥೆ ಕಲ್ಪಿಸಿದ್ದಾರೆ. ಆದರೆ, ಜೀವಬೆದರಿಕೆ ಕುರಿತಂತೆ ಕೆಲವೆಡೆ ಮಾತ್ರ ಎಫ್‌ಐಆರ್‌ ದಾಖಲಾಗಿದೆ. ಕಾಂಗ್ರೆಸ್‌ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರ ಮೇಲೆ
ಗುಂಡುಹಾರಿಸಬೇಕೆಂದು ವ್ಯಕ್ತಿಯೊಬ್ಬ ಟಿ.ವಿ. ಚಾನೆಲ್‌ವೊಂದರಲ್ಲಿ ಹೇಳಿಕೆ ನೀಡಿದ್ದು, ಆ ಬಗ್ಗೆ ಕಾಂಗ್ರೆಸ್‌ ದೂರು ಸಲ್ಲಿಸಿದ್ದರೂ ಈವರೆಗೂ ಎಫ್‌ಐಆರ್ ದಾಖಲಾಗಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿರುವುದನ್ನು ನೋಡಿದರೆ, ಬರಹಗಾರರು ಹಾಗೂ ವಿರೋಧ ಪಕ್ಷಗಳ ನಾಯಕರಿಗೆ ಬಂದಿರುವ ಜೀವಬೆದರಿಕೆ ಕರೆಗಳು ಮತ್ತು ಪತ್ರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ವಿರೋಧ ಪಕ್ಷಗಳ ನಾಯಕರಿಗೆ ಎದುರಾದ ಜೀವಬೆದರಿಕೆಗಳನ್ನೇ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳದೇ ಹೋದರೆ, ಬರಹಗಾರರ ಪಾಡೇನು?

ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿಗೆ ಜೀವಬೆದರಿಕೆಯೊಡ್ಡುವ ಕೃತ್ಯಗಳ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಬರಹಗಾರರನ್ನು ಬೆದರಿಸು ವುದಕ್ಕೆ ಹಾಗೂ ಅವರ ಚಾರಿತ್ರ್ಯಹರಣಕ್ಕೆಸಾಮಾಜಿಕ ಜಾಲತಾಣಗಳನ್ನೂ ಬಳಸಿಕೊಳ್ಳಲಾಗುತ್ತಿದೆ. ಈ ಬೆದರಿಕೆಗಳನ್ನು ಹುಸಿ ಬಡಬಡಿಕೆಗಳೆಂದು ನಿರ್ಲಕ್ಷಿಸುವಂತಿಲ್ಲ. ಹೀಗೆ ನಿರ್ಲಕ್ಷಿಸುವುದರಿಂದ ಮುಸುಕಿನ ಮರೆಯ ಕಿಡಿಗೇಡಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗುತ್ತದೆ. ವಿಮರ್ಶಾತ್ಮಕವಾಗಿ ಮಾತನಾಡುವವರನ್ನು ಬಾಯಿ ಮುಚ್ಚಿಸಲು ಪ್ರಯತ್ನಿಸುವವರನ್ನು ನಿರ್ಲಕ್ಷಿಸುವುದು ಅವರಿಗೆ ಪರೋಕ್ಷ ಬೆಂಬಲ ನೀಡಿದಂತೆಯೇ. ವೈಚಾರಿಕತೆಯನ್ನು ಹಾಗೂ ಭಿನ್ನಾಭಿಪ್ರಾಯಗಳನ್ನು ಹಿಂಸೆಯ ಮೂಲಕ ಹತ್ತಿಕ್ಕಲು ಬಯಸುವುದು, ಆ ಮೂಲಕ ಸಾಮೂಹಿಕವಾಗಿ ಭಯ ಹುಟ್ಟಿಸುವ ಪ್ರಯತ್ನಗಳು ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭೂತ ಆಶಯಗಳನ್ನು ದುರ್ಬಲಗೊಳಿಸುವಂತಹವು. ಅನಾಮಿಕ ಕಿಡಿಗೇಡಿಗಳು ಒಡ್ಡುವ ಬೆದರಿಕೆಗಳು ಬರಹಗಾರರ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದರ ಜೊತೆಗೆ, ಅವರ ಕುಟುಂಬ ವರ್ಗದವರು ಆತಂಕದೊಂದಿಗೆ ಜೀವನ ನಡೆಸುವ ಪರಿಸ್ಥಿತಿ ಸೃಷ್ಟಿಸುತ್ತವೆ. ಜೀವಭಯದೊಂದಿಗೆ ಬದುಕು ಸಾಗಿಸುವಂತಹ ಸ್ಥಿತಿ ರೂಪುಗೊಳ್ಳುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಬರಹಗಾರರು ಹಾಗೂ ಅವರ ಕುಟುಂಬ ನಿರ್ಭಯದಿಂದ ಜೀವನ ಸಾಗಿಸಲು ಅಗತ್ಯವಾದ ಮುಕ್ತ ವಾತಾವರಣವನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಸಂವಾದದ ಮೂಲಕ ಬಗೆಹರಿಸಿಕೊಳ್ಳುವ ಸೌಹಾರ್ದದ ಮಾದರಿಗಳನ್ನು ಸೃಷ್ಟಿಸುವುದರಲ್ಲೂ ಆಡಳಿತ ಪಕ್ಷವೇ ಮುಂಚೂಣಿಯಲ್ಲಿರಬೇಕು.

ವ್ಯತಿರಿಕ್ತ ಅಭಿಪ್ರಾಯಗಳು ಎದುರಾದಾಗ ಅವುಗಳನ್ನು ಎದುರಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನೇಕ ದಾರಿಗಳಿವೆ. ಕಾನೂನು ಕ್ರಮದ ಮೂಲಕ ವೈಚಾರಿಕ ಸಂಘರ್ಷ ನಡೆಸಲಿಕ್ಕೆ ಅವಕಾಶವಿದೆ. ಈ ಮಾರ್ಗಗಳನ್ನು ಬಿಟ್ಟು ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಯಾರಿಗೂ ಅವಕಾಶವಿಲ್ಲ. ಅಭಿಪ್ರಾಯ ಭೇದವನ್ನು ಹಿಂಸೆಯ ಮೂಲಕ ಎದುರಿಸುವುದರ ಪರಿಣಾಮವನ್ನು ಎಂ.ಎಂ. ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆಯ ರೂಪದಲ್ಲಿ ಈಗಾಗಲೇ ಕಂಡಿದ್ದೇವೆ. ಕರ್ನಾಟಕದ ಸೌಹಾರ್ದ ಪರಂಪರೆಗೆ ಕಪ್ಪುಚುಕ್ಕೆಗಳಾದ ಆ ಸಾವುಗಳು ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಪಾಠಗಳಾಗಬೇಕು. ಅಭಿಪ್ರಾಯಭೇದಗಳು ಹಿಂಸೆಗೆ ಕಾರಣವಾಗದಂತೆ ಸಮಾಜ ಎಚ್ಚರಿಕೆ ವಹಿಸಬೇಕು. ಹಿಂಸೆಯನ್ನು ಉತ್ತೇಜಿಸುವ ಹಾಗೂ ಹಿಂಸಾಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಕೋಮುಸೌಹಾರ್ದ ಕದಡುವ ಮಾತುಗಳನ್ನಾಡುವ ನಾಲಿಗೆ ತುರಿಕೆಗೆ ರಾಜಕೀಯ ಮುಖಂಡರು ತಾವೇ ಕಡಿವಾಣ ಹಾಕಿಕೊಳ್ಳಬೇಕು; ಆ ಮೂಲಕ, ತಮ್ಮ ಹಿಂಬಾಲಕರಿಗೆ ಸಂಯಮದ ಮಾದರಿಗಳಾಗಬೇಕು. ದ್ವೇಷದ ಮಾತುಗಳನ್ನಾಡುವ ನಾಯಕರ ವಿರುದ್ಧ ಆಯಾ ಪಕ್ಷಗಳು ಕ್ರಮ ಕೈಗೊಳ್ಳುವ ಮೂಲಕ ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT