ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ದೆಹಲಿಯಲ್ಲಿ ಶಾಂತಿ ನೆಲೆಸಲು ಪಕ್ಷಭೇದ ಮರೆತು ಕೈಜೋಡಿಸಿ

Last Updated 26 ಫೆಬ್ರುವರಿ 2020, 20:02 IST
ಅಕ್ಷರ ಗಾತ್ರ

ಈಶಾನ್ಯ ದೆಹಲಿಯಲ್ಲಿ ಹಲ್ಲೆ, ಲೂಟಿ, ಅಗ್ನಿಸ್ಪರ್ಶದಂತಹ ಹಿಂಸಾಕೃತ್ಯಗಳು ಸತತ ನಾಲ್ಕನೇ ದಿನವೂ ಮುಂದುವರಿದಿರುವುದನ್ನು ನೋಡಿದರೆ, ಗಲಭೆ ನಿಯಂತ್ರಿಸುವಲ್ಲಿ ಪೊಲೀಸ್‌ ಪಡೆ ಪೂರ್ಣ ವಿಫಲಗೊಂಡಿದೆ ಎನ್ನುವುದು ಮನದಟ್ಟಾಗುತ್ತದೆ. ಈ ಗಲಭೆಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತರಾಗಿದ್ದು, ಅವರಲ್ಲಿ ಬಹುತೇಕರು ಗುಂಡೇಟಿಗೆ ಬಲಿಯಾಗಿದ್ದಾರೆ. 200ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವುದನ್ನು ಈ ಹಿಂಸಾಕೃತ್ಯಗಳು ಸೂಚಿಸುತ್ತವೆ. ಗಲಭೆಕೋರರು ಲಾಠಿ, ತಲವಾರ್‌ ಮತ್ತು ಪಿಸ್ತೂಲ್‌ ಝಳಪಿಸುತ್ತಾ ಓಡಾಡಿರುವುದು, ರಾತ್ರಿವೇಳೆ ಕಾಲೊನಿಗಳಿಗೆ ನುಗ್ಗಿ ಹಲ್ಲೆ ನಡೆಸಿರುವುದನ್ನು ಗಮನಿಸಿದರೆ ಗಲಭೆಯು ಪೂರ್ವಯೋಜಿತ ಎನ್ನುವ ಅನುಮಾನ ಮೂಡುತ್ತದೆ.ವರದಿ ಮಾಡಲು ಹೋದ ಮಾಧ್ಯಮದವರ ಮೇಲೂ ಗುಂಪುಹಲ್ಲೆ ನಡೆದಿದೆ. ಗಲಭೆಯಲ್ಲಿ ಪೆಟ್ರೋಲ್‌ ಬಾಂಬ್‌ಗಳು ಬಳಕೆಯಾಗಿರುವುದು, ವೃತ್ತಿಪರ ಗೂಂಡಾಗಳು ಗಲಭೆಯ ನೇತೃತ್ವ ವಹಿಸಿರಬಹುದು ಎಂಬ ಅನುಮಾನಕ್ಕೆ ಕಾರಣವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಅಜಮಾಸು ಎರಡು ತಿಂಗಳಿಂದ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಧರಣಿ ನಡೆಯುತ್ತಿದ್ದರೂ ಎಲ್ಲಿಯೂ ಶಾಂತಿಗೆ ಭಂಗ ಆಗಿರಲಿಲ್ಲ. ಆದರೆ, ಬಿಜೆಪಿ ಮುಖಂಡರೊಬ್ಬರು ಸಾರ್ವಜನಿಕವಾಗಿ ಕೋಮುಪ್ರಚೋದಕ ಭಾಷಣ ಮಾಡಿದ್ದಾರೆ. ಜೊತೆಗೆ ಸರಣಿ ಟ್ವೀಟ್‌ ಮೂಲಕ ಜನರನ್ನು ಕೆರಳಿಸುವ ಪ್ರಯತ್ನ ಮಾಡಿದ್ದಾರೆ. ಅವರ ಹೇಳಿಕೆಯ ವಿಡಿಯೊ ಹಾಗೂ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ. ಗಲಭೆಗೆ ಇವುಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡಿವೆ ಎನ್ನುವ ಮಾತು ಇದೆ.

ದೆಹಲಿಯ ಪೊಲೀಸ್‌ ವ್ಯವಸ್ಥೆಯು ಕೇಂದ್ರ ಗೃಹ ಸಚಿವರ ನೇರ ಸುಪರ್ದಿಯಲ್ಲಿದೆ. ಗಲಭೆ ಶುರುವಾದ ಎರಡು ದಿನಗಳ ಬಳಿಕ, ದೆಹಲಿಯ ಪೊಲೀಸ್‌ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಜೊತೆಗೆ ಗೃಹ ಸಚಿವರು ಸಭೆ ನಡೆಸಿದ್ದಾರೆ. ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಿದ್ದರೂ ಗಲಭೆ ನಿಂತಿಲ್ಲ. ದುಷ್ಕರ್ಮಿಗಳಿಗೆ ರಾಜಕೀಯ ಮುಖಂಡರ ಒತ್ತಾಸೆ ಇಲ್ಲದೇ ಇದ್ದಿದ್ದರೆ ಸ್ಥಿತಿ ಈ ರೀತಿಯಲ್ಲಿ ವಿಕೋಪಕ್ಕೆ ಹೋಗುತ್ತಿರಲಿಲ್ಲ ಎಂಬ ಮಾತಿನಲ್ಲಿ ಸತ್ಯಾಂಶ ಇಲ್ಲದೇ ಇಲ್ಲ. ದೆಹಲಿಯ ಈಗಿನ ಪರಿಸ್ಥಿತಿಯು 1984ರ ಸಿಖ್‌ ವಿರೋಧಿ ಗಲಭೆಯನ್ನು ನೆನಪಿಸುವಂತಿದೆ. ಈಗಿನ ಗಲಭೆ ನಿಯಂತ್ರಿಸಲು ಸೇನೆಯನ್ನು ನಿಯೋಜಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಕೇಂದ್ರವನ್ನು ಒತ್ತಾಯಿಸಿದ್ದಾರೆ. ಈ ಹಿಂದೆ, ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳಿಗೆ ನುಗ್ಗಿ, ಗೂಂಡಾಗಳು ಹಲ್ಲೆ ನಡೆಸಿದ ಪ್ರಕರಣಗಳಲ್ಲೂ ದೆಹಲಿ ಪೊಲೀಸರ ವೈಫಲ್ಯ ಎದ್ದುಕಂಡಿತ್ತು. ಹಾಗಾಗಿಯೇ, ಕೇಜ್ರಿವಾಲ್‌ ಅವರು ಇಂತಹ ಸಲಹೆ ನೀಡಿರಬಹುದು.

ಕೋಮುಗಲಭೆ ಎಲ್ಲೇ ನಡೆದರೂ ಅದರಿಂದ ತೊಂದರೆಗೆ ಒಳಗಾಗುವವರಲ್ಲಿ ಅಮಾಯಕರೇ ಹೆಚ್ಚು. ಗಾಳಿಸುದ್ದಿಗಳು ಹರಡಿ, ಸಮುದಾಯಗಳ ಮಧ್ಯೆ ಪರಸ್ಪರ ಅಪನಂಬಿಕೆ ಹೆಚ್ಚಿ, ಸನ್ನಿವೇಶ ಪ್ರಕ್ಷುಬ್ಧಗೊಳ್ಳುತ್ತಾ ಹೋಗುತ್ತದೆ. ಘಟನೆಗೆ ಸಂಬಂಧವೇ ಇಲ್ಲದವರ ಸೊತ್ತು ಹಾನಿಗೆ ಒಳಗಾಗುತ್ತದೆ. ದೆಹಲಿಯು ರಾಷ್ಟ್ರದ ರಾಜಧಾನಿಯೂ ಆಗಿರುವುದರಿಂದ ಅಲ್ಲಿ ಏನೇ ಅಹಿತಕರ ಘಟನೆ ನಡೆದರೂ ಅದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಜೊತೆಗೆ ರಾಷ್ಟ್ರ ರಾಜಧಾನಿಯಲ್ಲಿಯೇ ಇಂತಹ ಅರಾಜಕ ಸ್ಥಿತಿ ಇದೆ ಎನ್ನುವುದು ದೇಶದ ಸಮಸ್ತ ನಾಗರಿಕರಲ್ಲೂ ಆತಂಕದ ಭಾವ ಮೂಡಿಸುತ್ತದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿ ನೀಡಿದ್ದ ವೇಳೆಯಲ್ಲೇ ಗಲಭೆ ಭುಗಿಲೆದ್ದದ್ದು ಇನ್ನಷ್ಟು ಕಳವಳಕಾರಿ ವಿಚಾರ. ಅತ್ಯಂತ ಪ್ರಭಾವಿ ದೇಶವೊಂದರ ಅಧ್ಯಕ್ಷರು ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ದೆಹಲಿ ಹೊತ್ತಿ ಉರಿದಿರುವುದು ಪೊಲೀಸ್‌ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ. ಗಲಭೆಯು ಪೊಲೀಸರ ಕೈಮೀರಿದಾಗಲೂ ದೆಹಲಿಯ ನಾಗರಿಕರಲ್ಲಿ ವಿಶ್ವಾಸ ಮೂಡಿಸುವಂತಹ ಕ್ರಮಗಳನ್ನು ಕೇಂದ್ರ ಸರ್ಕಾರ ತುರ್ತಾಗಿ ಏಕೆ ಕೈಗೊಳ್ಳಲಿಲ್ಲ ಎಂಬ ಪ್ರಶ್ನೆಯನ್ನು ವಿರೋಧ ಪಕ್ಷಗಳ ಮುಖಂಡರು ಕೇಳುತ್ತಿದ್ದಾರೆ. ಜನರ ಪ್ರಾಣ ಮತ್ತು ಆಸ್ತಿ ರಕ್ಷಣೆ ಸರ್ಕಾರದ ಪ್ರಾಥಮಿಕ ಕರ್ತವ್ಯ. ಆ ಕರ್ತವ್ಯವನ್ನು ನಿರ್ವಹಿಸುವುದಕ್ಕಾಗಿ ಸರ್ಕಾರವು ಗಂಭೀರವಾದ ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ. ದೆಹಲಿಯಲ್ಲಿ ಶಾಂತಿ ನೆಲೆಸುವಂತಾಗಲು ಪಕ್ಷಭೇದ ಮರೆತು ಎಲ್ಲರೂ ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT