ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ದೇವನಹಳ್ಳಿ– ಕೃಷಿ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡಿ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗಾಗಿ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ 2,000 ಎಕರೆಗೂ ಹೆಚ್ಚು ಜಮೀನು ಹಲವು ವರ್ಷಗಳಿಂದ ಬಳಕೆಯೇ ಆಗಿಲ್ಲ. ರೈತರನ್ನು ಒಕ್ಕಲೆಬ್ಬಿಸಿ, ಅವರಿಂದ ಸ್ವಾಧೀನಪಡಿಸಿಕೊಂಡ ಜಮೀನು ಕೈಗಾರಿಕೆಗಳ ಅಭಿವೃದ್ಧಿಯೂ ಇಲ್ಲದೆ, ವ್ಯವಸಾಯವೂ ಇಲ್ಲದೆ ಪಾಳುಬಿದ್ದಿದೆ. ಈಗ ಮತ್ತೆ ಅದೇ ತಾಲ್ಲೂಕಿನ 13 ಹಳ್ಳಿಗಳ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 1,777 ಎಕರೆ ಕೃಷಿ ಜಮೀನು ಸ್ವಾಧೀನಕ್ಕೆ ಕೆಐಎಡಿಬಿ ಮುಂದಾಗಿದೆ. ಫಲವತ್ತಾದ ಕೃಷಿ ಜಮೀನು ಕಳೆದುಕೊಳ್ಳಲು ಒಪ್ಪದ ರೈತರು ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ 59 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಕೃಷಿ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಹಂಚಿಕೆ ಮಾಡುವ ಕೆಲಸವನ್ನು ಕೆಐಎಡಿಬಿ ನಿರಂತರವಾಗಿ ಮಾಡುತ್ತಿದೆ. ಆದರೆ, ಹಾಗೆ ಹಂಚಿಕೆಯಾದ ಜಮೀನುಗಳು ಅದೇ ಉದ್ದೇಶಕ್ಕೆ ಬಳಕೆ ಆಗಿವೆಯೇ? ಅಲ್ಲಿ ಕೈಗಾರಿಕೆಗಳು ಕಾರ್ಯಾರಂಭ ಮಾಡಿವೆಯೇ? ಎಂಬುದನ್ನು ಪರಿಶೀಲಿಸುವ ಕೆಲಸ ಮಾಡಿದ್ದು ಕಡಿಮೆ. ಸರ್ಕಾರ ಹಂಚಿಕೆ ಮಾಡಿದ ಜಮೀನಿನಲ್ಲಿ ಮೂರು ವರ್ಷಗಳೊಳಗೆ ಕೈಗಾರಿಕೆ ಆರಂಭಿಸದೇ ಇದ್ದರೆ ಅದನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಅಂಶ ಕಾಯ್ದೆಯಲ್ಲಿ ಸ್ಪಷ್ಟವಾಗಿದೆ. ಆದರೆ, ಸರ್ಕಾರ ಈ ಅಧಿಕಾರವನ್ನು ಚಲಾಯಿಸುವ ಗೋಜಿಗೆ ಹೋಗುವುದಿಲ್ಲ. ಕೈಗಾರಿಕೆಗಳನ್ನು ಸ್ಥಾಪಿಸದೇ ಇದ್ದರೂ ‘ಕಾನೂನುಬದ್ಧ’ವಾಗಿಯೇ ಶುದ್ಧಕ್ರಯಪತ್ರ ಮಾಡಿಕೊಡಲಾಗುತ್ತಿದೆ. ಆ ಬಳಿಕ ಕೈಗಾರಿಕಾ
ನಿವೇಶನಗಳನ್ನು ರಿಯಲ್‌ ಎಸ್ಟೇಟ್‌ ಚಟುವಟಿಕೆ ಮತ್ತು ಇತರ ಕೈಗಾರಿಕೇತರ ಉದ್ದೇಶಗಳಿಗೆ ವರ್ಗಾವಣೆ ಮಾಡುವುದು ನಡೆಯುತ್ತಲೇ ಇದೆ.

ದೇವನಹಳ್ಳಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೆಲವೇ ವರ್ಷಗಳ ಅವಧಿಯಲ್ಲಿ ನಾಲ್ಕನೇ ಬಾರಿ ಕೈಗಾರಿಕಾ ಉದ್ದೇಶಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಸುತ್ತಮುತ್ತ ಲಿನ ಜಮೀನುಗಳಿಗೆ ಚಿನ್ನದ ಬೆಲೆ ಬಂದಿದೆ. ಆ ಭಾಗದಲ್ಲಿ ಪದೇ ಪದೇ ಏಕೆ ಭೂಸ್ವಾಧೀನ ನಡೆ ಸಲಾಗುತ್ತಿದೆ ಎಂಬುದಕ್ಕೆ ಇದೇ ಕಾರಣ. ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ 1,777 ಎಕರೆ ಜಮೀನು ಸ್ವಾಧೀನಕ್ಕೆ ಜನವರಿಯಲ್ಲಿ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಈ ಎಲ್ಲ ಜಮೀನುಗಳನ್ನೂ ಸ್ವಾಧೀನಪಡಿಸಿಕೊಂಡಲ್ಲಿ 1,800ಕ್ಕೂ ಹೆಚ್ಚು ಹಿಡುವಳಿದಾರರು ಭೂರಹಿತರಾಗುತ್ತಾರೆ. ದೇವನಹಳ್ಳಿ ತಾಲ್ಲೂಕು ಅತ್ಯಂತ ಫಲವತ್ತಾದ ಜಮೀನು ಇರುವ ಪ್ರದೇಶ. ಬೆಂಗಳೂರಿಗೆ ತರಕಾರಿ, ಹಣ್ಣು, ಹಾಲು ಸೇರಿದಂತೆ ಕೃಷಿ ಮತ್ತು ಹೈನುಗಾರಿಕೆ ಉತ್ಪನ್ನ ಗಳನ್ನು ಪೂರೈಸುತ್ತಿದೆ. ಈಗ ಸ್ವಾಧೀನಪಡಿಸಿಕೊಳ್ಳಲು ಗುರುತಿಸಿರುವ ಜಮೀನುಗಳಲ್ಲಿ ರೇಷ್ಮೆ, ದ್ರಾಕ್ಷಿ ತೋಟಗಳು, ತರಕಾರಿ ಮತ್ತು ಇತರ ಹಣ್ಣಿನ ಬೆಳೆಗಳು ಇವೆ. ಹೈನುಗಾರಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕೃಷಿ ಮತ್ತು ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರು ಜಮೀನು ಬಿಟ್ಟುಕೊಡಲು ಸಿದ್ಧರಿಲ್ಲ. ಈ ಹಿಂದೆ ಸ್ವಾಧೀನಪಡಿಸಿಕೊಂಡಿರುವ 2,000 ಎಕರೆ ಜಮೀನಿನಲ್ಲಿ ಬಹುಪಾಲು ಪ್ರದೇಶ ಬಳಕೆಯಾಗದೇ ಉಳಿದಿರುವಾಗ ಕೈಗಾರಿಕೆಗಳ ಹೆಸರಿನಲ್ಲಿ ಮತ್ತೆ ಏಕೆ ಭೂಸ್ವಾಧೀನ ಪ್ರಕ್ರಿಯೆ
ನಡೆಸಲಾಗುತ್ತಿದೆ ಎಂಬ ರೈತರ ಪ್ರಶ್ನೆಗೆ ಉತ್ತರಿಸಬೇಕಾದ ಹೊಣೆಗಾರಿಕೆ ರಾಜ್ಯ ಸರ್ಕಾರದ ಮೇಲಿದೆ.

ಕೆಐಎಡಿಬಿ ಈವರೆಗೆ 173 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳ ವ್ಯಾಪ್ತಿಯಲ್ಲಿ ಕೈಗಾರಿಕೆಗಳಿಗೆ ಹಂಚಿಕೆ ಮಾಡಿದ್ದ ಬೃಹತ್‌ ಪ್ರಮಾಣದ ಜಮೀನು ಆ ಉದ್ದೇಶಕ್ಕೆ ಬಳಕೆಯಾಗಿಲ್ಲ ಮತ್ತು ಹಲವೆಡೆ ಕೈಗಾರಿಕಾ ಪ್ರದೇಶಗಳ ಜಮೀನನ್ನೇ ಒತ್ತುವರಿ ಮಾಡಲಾಗಿದೆ ಎಂಬ ಆರೋಪಗಳಿವೆ. ಕೆಐಎಡಿಬಿ ಮೂಲಕ ನಡೆದಿರುವ ಕೈಗಾರಿಕಾ ನಿವೇಶನಗಳ ಹಂಚಿಕೆ ಮತ್ತು ಅವುಗಳ ಬಳಕೆ ಕುರಿತು ಲೆಕ್ಕಪರಿಶೋಧನೆ ನಡೆಸಲು ಜಾಗತಿಕ ಟೆಂಡರ್‌ ಆಹ್ವಾನಿಸುವುದಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಇತ್ತೀಚೆಗೆ ಪ್ರಕಟಿಸಿದ್ದರು. ಕೈಗಾರಿಕಾ ಜಮೀನುಗಳಿಗೆ ಸಂಬಂಧಿಸಿದ ಲೆಕ್ಕಪರಿಶೋಧನೆ ಪೂರ್ಣಗೊಳ್ಳುವ ಮುನ್ನವೇ ತರಾತುರಿಯಲ್ಲಿ ದೇವನಹಳ್ಳಿ ತಾಲ್ಲೂಕಿನಲ್ಲಿ 1,777 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದು ಬೇರೆ ಬೇರೆ ಬಗೆಯ ಅನುಮಾನಗಳಿಗೆ ಕಾರಣವಾಗಿದೆ. ರಿಯಲ್‌ ಎಸ್ಟೇಟ್‌ ಮಾಫಿಯಾದ ಜತೆ ಅಧಿಕಾರಸ್ಥರು ಕೈಜೋಡಿಸಿರಬಹುದು ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೆ. ದೇವನಹಳ್ಳಿ ತಾಲ್ಲೂಕಿನಂತಹ ಫಲವತ್ತಾದ ಪ್ರದೇಶಗಳಲ್ಲಿ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದು ಆಹಾರ ಭದ್ರತೆಯ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ, ಕೃಷಿ ಆರ್ಥಿಕತೆ ಕುಸಿದುಬೀಳಲು ಕಾರಣವಾಗುತ್ತದೆ. ಪರಿಸರ ಇಲಾಖೆಯ ಅನುಮತಿ ಪಡೆಯದೆ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಕುರಿತ ಸಮೀಕ್ಷೆ ನಡೆಸದೆ, ಜಮೀನು ಕಳೆದುಕೊಳ್ಳುವವವರಿಗೆ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಲು ಸಮರ್ಪಕ ಯೋಜನೆ ರೂಪಿಸದೇ ಕೃಷಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಮನಸೋಇಚ್ಛೆ ಸ್ವಾಧೀನಪಡಿಸಿಕೊಳ್ಳುವುದನ್ನು ಒಪ್ಪಲಾಗದು. ಜಮೀನು ಕಳೆದುಕೊಳ್ಳುವ ಕುಟುಂಬಗಳ ಯುವಕ, ಯುವತಿಯರಿಗೆ ಅಲ್ಲಿ ಆರಂಭವಾಗುವ ಉದ್ದಿಮೆಗಳಲ್ಲಿ ಉದ್ಯೋಗ ನೀಡುವ ಭರವಸೆ ನೀಡಲಾಗುತ್ತದೆ. ಆದರೆ, ‘ಡಿ’ ದರ್ಜೆಗಿಂತ ಮೇಲಿನ ಹುದ್ದೆಗಳು ಜಮೀನು ಕೊಟ್ಟ ಕುಟುಂಬಗಳಿಗೆ ದೊರೆತಿರುವುದು ತೀರಾ ವಿರಳ. ತಮ್ಮದೇ ನೆಲದಲ್ಲಿ ತಾವು ‘ಸ್ವಚ್ಛತಾ ಕಾರ್ಮಿಕ’ರಾಗಿ ದುಡಿಯಲು ಸಿದ್ಧರಿಲ್ಲದ ರೈತರು, ಕೃಷಿ ಕಾಯಕವನ್ನೇ ಮುಂದುವರಿಸಲು ಅವಕಾಶ ಕೇಳಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ಎರಡನೇ ಹಂತದ ನಗರಗಳಿಗೆ ಹೂಡಿಕೆ ಆಕರ್ಷಿಸುವುದಕ್ಕೆ ‘ಬಿಯಾಂಡ್‌ ಬೆಂಗಳೂರು’ ಎಂಬ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಅದಕ್ಕೆ ವಿರುದ್ಧವಾಗಿ ದೇವನಹಳ್ಳಿ ತಾಲ್ಲೂಕಿನಲ್ಲಿ ನೂರಾರು ಎಕರೆ ಜಮೀನು ಸ್ವಾಧೀನಕ್ಕೆ ಪ್ರಕ್ರಿಯೆ ಆರಂಭಿಸುವ ಮೂಲಕ ಹೂಡಿಕೆದಾರರು ಬೆಂಗಳೂರಿನ ಸುತ್ತಲೇ ನೆಲೆಯೂರುವಂತೆ ಮಾಡಲು ಹೊರಟಿದೆ. ಇದು ಕೈಗಾರಿಕಾ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯದಲ್ಲಿ ಮತ್ತಷ್ಟು ಅಸಮತೋಲನಕ್ಕೆ ಎಡೆಮಾಡುತ್ತದೆ. ಈಗ ಆರಂಭಿಸಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು
ಸರ್ಕಾರ ತಕ್ಷಣ ಕೈಬಿಡಬೇಕು. ಈವರೆಗೆ ಕೆಐಎಡಿಬಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ
ಹಂಚಿಕೆ ಮಾಡಿರುವ ಕೈಗಾರಿಕಾ ನಿವೇಶನಗಳಲ್ಲಿ ಬಳಕೆಯಾಗದೇ ಉಳಿದ ಜಮೀನುಗಳನ್ನು ವಶಪಡಿಸಿಕೊಂಡು ಮರುಹಂಚಿಕೆ ಮಾಡಬೇಕು. ಅಲ್ಲಿಯವರೆಗೂ ಯಾವುದೇ ಹೊಸ ಭೂಸ್ವಾಧೀನ ಪ್ರಕ್ರಿಯೆಯನ್ನೂ ನಡೆಸಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT