ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಸಾವಯವ ಸಿರಿ: ಸಂದೇಹ ಮೂಡಿಸಿರುವ ತರಾತುರಿ

Last Updated 29 ಮಾರ್ಚ್ 2022, 1:00 IST
ಅಕ್ಷರ ಗಾತ್ರ

‘ಸಾವಯವ ಸಿರಿ’ ಯೋಜನೆಯ ಅಡಿ ₹ 500 ಕೋಟಿ ಅನುದಾನದ ಬಳಕೆಗಾಗಿ ಮೂರು ವರ್ಷಗಳ ಫಲಾನುಭವಿಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡಲು ಹೊರಟಿರುವ ರಾಜ್ಯ ಕೃಷಿ ಇಲಾಖೆಯ ಕ್ರಮ ಹಲವು ಸಂದೇಹಗಳಿಗೆ ಕಾರಣವಾಗಿದೆ. ಅದೂ ಆರ್ಥಿಕ ವರ್ಷದ ಕೊನೆಯ ಘಟ್ಟದಲ್ಲಿ ನಡೆಸಿರುವ ತರಾತುರಿಯನ್ನು ನೋಡಿದರೆ ಸ್ವಜನಪಕ್ಷಪಾತದ ಅನುಮಾನ ಮೂಡುತ್ತದೆ. ಯೋಜನೆಯನ್ನು ಹಾಲಿ ಆರ್ಥಿಕ ವರ್ಷದ ಆರಂಭದಲ್ಲಿಯೇ ಘೋಷಿಸಿದ್ದರೂ ಇದುವರೆಗೆ ಯಾವ ಕ್ರಮವನ್ನೂ ಕೈಗೊಳ್ಳದೆ ಕುಂಭಕರ್ಣ ನಿದ್ರೆಯಲ್ಲಿದ್ದ ಕೃಷಿ ಇಲಾಖೆಯು ಈಗ ಏಕಾಏಕಿ ಮೈಕೊಡವಿ ಎದ್ದಿರುವುದು ಏಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕಿಂತ ಹೆಚ್ಚಾಗಿ, ಆರ್ಥಿಕ ವರ್ಷ ಕೊನೆಗೊಳ್ಳಲು ಬಾಕಿ ಉಳಿದಿರುವ ಕೆಲವೇ ದಿನಗಳಲ್ಲಿ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಕಾರ್ಯಾದೇಶ ನೀಡಲು ತೋರುತ್ತಿರುವ ಆತುರ ಸಾವಯವ ಕೃಷಿಕರ ಹುಬ್ಬು ಮೇಲೇರುವಂತೆ ಮಾಡಿದೆ. ‘ಸಾವಯವ ಸಿರಿ’ ಅನುದಾನಕ್ಕಾಗಿ ಅರ್ಜಿ ಸಲ್ಲಿಸಲು ನಿಗದಿ ಮಾಡಿರುವ ‘ಅರ್ಹತೆ’ಯ ಮಾನದಂಡಗಳು ಕೂಡ ಯೋಜನೆಯ ಕುರಿತ ಸಂದೇಹಗಳು ಮತ್ತಷ್ಟು ಗಟ್ಟಿಗೊಳ್ಳುವಂತೆ ಮಾಡಿವೆ. ಅರ್ಜಿ ಸಲ್ಲಿಸುವ ಸ್ವಯಂಸೇವಾ ಸಂಸ್ಥೆ ಕನಿಷ್ಠ ಹತ್ತು ಹೆಕ್ಟೇರ್‌ ವ್ಯವಸಾಯ ಯೋಗ್ಯ ಜಮೀನನ್ನು ಹೊಂದಿರಬೇಕು ಮತ್ತು ಆ ಸಂಸ್ಥೆ ಗೋಶಾಲೆಯನ್ನೂ ನಿರ್ವಹಿಸುತ್ತಿರಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ‘ಆಡಳಿತ ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಪರಿವಾರಕ್ಕೆ ಸೇರಿದವರು ನಡೆಸುವಂತಹ ಸ್ವಯಂಸೇವಾ ಸಂಸ್ಥೆಗಳಿಗೆ ಅನುವು ಮಾಡಿಕೊಡಲೆಂದೇ ಈ ಷರತ್ತನ್ನು ಹಾಕಲಾಗಿದೆ’ ಎಂಬ ಆರೋಪ ಇದೆ. ಯೋಜನೆಯ ಅನುಷ್ಠಾನದ ಹಂತದಲ್ಲಿ ಆಗುತ್ತಿರುವ ಲೋಪಗಳನ್ನು ಕಂಡಾಗ, ವಿಧಿಸಿರುವ ಷರತ್ತನ್ನು ಅವಲೋಕಿಸಿದಾಗ ಆ ಆರೋಪದಲ್ಲಿ ಹುರುಳಿಲ್ಲದಿಲ್ಲ ಎಂಬುದು ವೇದ್ಯ. ಸಾವಯವ ಕೃಷಿಯಲ್ಲಿ ದಶಕಗಳ ಕಾಲ ದುಡಿದು ಯೋಜನೆಯ ಪ್ರಯೋಜನ ಪಡೆಯಲು ಅರ್ಹವಾಗಿದ್ದರೂ ‘ಅರ್ಹತೆ’ಯ ಮಾನದಂಡದ ಕಾರಣ ಎಷ್ಟೋ ಸ್ವಯಂಸೇವಾ ಸಂಸ್ಥೆಗಳಿಗೆ ಅರ್ಜಿಯನ್ನೇ ಸಲ್ಲಿಸಲು ಸಾಧ್ಯವಾಗಿಲ್ಲ.

ರೈತರಿಗೆ ಸಾವಯವ ಕೃಷಿಯ ತರಬೇತಿ ನೀಡುವುದರ ಜತೆಗೆ, ಅವರಿಗೆ ಹಸಿರೆಲೆ ಗೊಬ್ಬರ ಮತ್ತು ಬೀಜ ವಿತರಣೆ ಮಾಡಲು, ಸಾವಯವ ಗೊಬ್ಬರದ ಉತ್ಪಾದನೆ ಹಾಗೂ ಪೋಷಕಾಂಶ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸ್ವಯಂಸೇವಾ ಸಂಸ್ಥೆಗಳಿಗೆ ನೆರವು ನೀಡುವುದಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಆದರೆ, ಯೋಜನೆಯ ಮೂಲ ಉದ್ದೇಶವನ್ನೇ ಮರೆತಿರುವಂತೆ ಕೃಷಿ ಇಲಾಖೆಯು ವರ್ತಿಸುತ್ತಿದೆ. ಬಜೆಟ್‌ನಲ್ಲಿ ಎತ್ತಿಟ್ಟ ಹಣ ಆರ್ಥಿಕ ವರ್ಷದ ಕೊನೆಯಲ್ಲಿ ಹೇಗಾದರೂ ಖರ್ಚಾದರೆ ಸಾಕು ಎಂಬ ಪ್ರವೃತ್ತಿ ಅಕ್ಷಮ್ಯ. ಅದು ಸಾರ್ವಜನಿಕರು ತೆರಿಗೆ ರೂಪದಲ್ಲಿ ನೀಡಿದ ಹಣ. ಪೈಸೆ, ಪೈಸೆಯೂ ಸದ್ಬಳಕೆ ಆಗಬೇಕು. ಹಾಗೆ ನೋಡಿದರೆ ನಮ್ಮ ಸಾವಯವ ಕೃಷಿ ನೀತಿಯೇ ಗೊಂದಲದಿಂದ ಕೂಡಿದೆ. ಸರ್ಕಾರದ ನೇತೃತ್ವ ವಹಿಸಿದವರು ಬದಲಾದಂತೆ ಯೋಜನೆಗಳ ಸ್ವರೂಪದಲ್ಲೂ ಬದಲಾವಣೆ ಆಗುತ್ತಿರುವುದೇ ಇದಕ್ಕೆ ಸಾಕ್ಷಿ. ಜಿಲ್ಲಾಮಟ್ಟ, ತಾಲ್ಲೂಕುಮಟ್ಟ ಹಾಗೂ ಹೋಬಳಿಮಟ್ಟ– ಹೀಗೆ ಮೂರು ಹಂತಗಳಲ್ಲಿ ಸಾವಯವ ಕೃಷಿಯ ಪ್ರಮಾಣವನ್ನು ಹೆಚ್ಚಿಸಲು ಯೋಜನೆಗಳನ್ನು ರೂಪಿಸುತ್ತಾ ಬರಲಾಗಿತ್ತು. ಇದರಿಂದಾಗಿ ಸಾವಯವ ಕೃಷಿ ಕುರಿತು ರೈತರಲ್ಲಿ ಒಂದಿಷ್ಟು ಆಸಕ್ತಿ ಮೂಡಿದ್ದು ನಿಜ. ಆದರೆ, ಇದನ್ನು ಸುಸ್ಥಿರಗೊಳಿಸುವಂತಹ ಯಾವ ಪ್ರಯತ್ನಗಳೂ ನಡೆಯಲಿಲ್ಲ. 15 ‘ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟ’ಗಳೇನೋ
ಅಸ್ತಿತ್ವಕ್ಕೆ ಬಂದಿವೆ. ಆದರೆ, ಅವುಗಳಿಗೆ ಬಲ ತುಂಬುವ ಕೆಲಸ ನಡೆಯಲಿಲ್ಲ. ಸಾವಯವ ಕೃಷಿ ಉತ್ಪನ್ನದ ಪ್ರಮಾಣಪತ್ರ ಕೊಡಿಸುವ ಕೆಲಸ ಕೂಡ ಸರಿಯಾಗಿ ಆಗಲಿಲ್ಲ. ಸಿರಿಧಾನ್ಯಗಳ ಸಂಸ್ಕರಣೆಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಸಲಕರಣೆಗಳನ್ನು ಕೊಡಿಸಲಾಯಿತಾದರೂ ಅವುಗಳ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಮಾಡಲಿಲ್ಲ. ಮಾರುಕಟ್ಟೆ ಸಮಸ್ಯೆಯನ್ನೂ ಬಗೆಹರಿಸಲಿಲ್ಲ.

ಕಳೆದ ಒಂದೂವರೆ ದಶಕದಲ್ಲಿ ಒಂದೇ ಯೋಜನೆಗೆ ‘ಸಾವಯವ ಗ್ರಾಮ’, ‘ಸಾವಯವ ಭಾಗ್ಯ’, ‘ಸಾವಯವ ಸಿರಿ’ ಎಂದು ಹೆಸರು ಬದಲಾಗುತ್ತಾ ಹೋಯಿತೇ ವಿನಾ ಸಾವಯವ ಕೃಷಿಕರ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಲಿಲ್ಲ. ಇದೀಗ ‘ಸಾವಯವ ಸಿರಿ’ ಹೆಸರಿನಲ್ಲಿ ಸಾವಯವ ಕೃಷಿಯ ನೆರವಿಗಾಗಿ ಎತ್ತಿಟ್ಟ ಹಣವನ್ನು ಬೇಕಾಬಿಟ್ಟಿ ಬಳಸುವ ಆತುರ. ಇಂತಹ ತರಾತುರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆಯೊಡ್ಡಬೇಕು. ಸ್ವಜನಪಕ್ಷಪಾತದ ಕೆಸರು ಈ ಯೋಜನೆಗೆ ಮೆತ್ತಿಕೊಳ್ಳದಂತೆ ಎಚ್ಚರ ವಹಿಸಬೇಕು. ಸರ್ಕಾರದ ಮಾತನ್ನು ನಂಬಿ, ಸಾವಯವ ಕೃಷಿಗೆ ಬದಲಾಗಿರುವ ಕೃಷಿಕರಿಗೆ ಯೋಜನೆಯ ಸಂಪೂರ್ಣ ಲಾಭ ದಕ್ಕುವಂತೆಯೂ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT