ಪರೀಕ್ಷೆಯಲ್ಲಿ ಸಾಮೂಹಿಕ ನಕಲು ರೋಗವಲ್ಲ, ರೋಗ ಲಕ್ಷಣ ಮಾತ್ರ

ಶುಕ್ರವಾರ, ಏಪ್ರಿಲ್ 26, 2019
33 °C

ಪರೀಕ್ಷೆಯಲ್ಲಿ ಸಾಮೂಹಿಕ ನಕಲು ರೋಗವಲ್ಲ, ರೋಗ ಲಕ್ಷಣ ಮಾತ್ರ

Published:
Updated:

ಹತ್ತನೇ ತರಗತಿಯ ಪರೀಕ್ಷೆಗಳಲ್ಲಿ ವ್ಯಾಪಕವಾಗಿ ಸಾಮೂಹಿಕ ನಕಲು ಮಾಡಿರುವ ಪ್ರಕರಣಗಳು ರಾಜ್ಯದ ಹಲವೆಡೆಗಳಿಂದ ವರದಿಯಾಗಿವೆ. ಪರೀಕ್ಷೆಯನ್ನು ನಡೆಸುವ ಹೊಣೆ ಹೊತ್ತಿರುವ ಅಧ್ಯಾಪಕರೇ ಸಾಮೂಹಿಕ ನಕಲಿಗೆ ಬೆಂಬಲವಾಗಿ ನಿಂತಿರುವುದರಿಂದ ತೊಡಗಿ ವಿಷಯ ಬೋಧಿಸುವ ಶಿಕ್ಷಕರೇ ಉತ್ತರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಿರುವುದರವರೆಗಿನ ವಿವಿಧ ಪ್ರಕರಣಗಳಿವೆ. ಬೋಧನೆ, ಕಲಿಕೆ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೊಂದು ರೋಗವಲ್ಲ, ಕೇವಲ ರೋಗ ಲಕ್ಷಣ ಎಂಬುದು ತಿಳಿಯುತ್ತದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಬಾಧಿಸುತ್ತಿರುವ ರೋಗವನ್ನು ಅರ್ಥ ಮಾಡಿಕೊಳ್ಳದ ಹೊರತು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೂ ಸಾಧ್ಯವಿಲ್ಲ. ಇದನ್ನು ಹೇಳುವಾಗಲೇ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಶಿಕ್ಷಣದ ಪ್ರಜಾಪ್ರಭುತ್ವೀಕರಣ ಸ್ವಲ್ಪಮಟ್ಟಿಗಾದರೂ ಸಾಧ್ಯವಾಗಿದೆ ಎಂಬ ಮುಖ್ಯ ಅಂಶವನ್ನೂ ನಾವು ಗಮನದಲ್ಲಿ ಇಟ್ಟುಕೊಳ್ಳಲೇಬೇಕು. ವರ್ಷದಿಂದ ವರ್ಷಕ್ಕೆ ಶಾಲೆಗಳು ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಇದರ ಜೊತೆ ಜೊತೆಯಲ್ಲೇ ಬೋಧನೆ ಮತ್ತು ಕಲಿಕೆಯ ಪ್ರಮಾಣ ಅಳೆಯುವ ವಿಧಾನಗಳೂ ಬದಲಾಗಬೇಕಿತ್ತು. ಆದರೆ, ಈ ವಿಷಯದಲ್ಲಿ ನಾವು ಸಂಪೂರ್ಣವಾಗಿ ಸೋತೆವು. ಸಾಮೂಹಿಕ ನಕಲು ಇಡೀ ವ್ಯವಸ್ಥೆಯ ವೈಫಲ್ಯದ ಒಂದು ಉದಾಹರಣೆ ಮಾತ್ರ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಳ್ಳಲು ಹೊರಟರೆ ಮತ್ತೊಂದು ಸಂಗತಿಯೂ ಕಾಣಿಸುತ್ತದೆ. ಕೆಪಿಎಸ್‌ಸಿಯಂಥ ಸಂಸ್ಥೆ ಸರ್ಕಾರದ ಉನ್ನತ ಹಂತದ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ನಡೆಸುವ ಪರೀಕ್ಷೆಯಲ್ಲೇ ಒಂದೇ ಕುಟುಂಬದ ಸದಸ್ಯರು ಒಂದೇ ಕೋಣೆಯಲ್ಲಿ ಉತ್ತರ ಬರೆದು ಒಂದೇ ಬಗೆಯ ಅಂಕಗಳನ್ನು ಪಡೆದ ಸ್ಥಿತಿಯೂ ನಮ್ಮ ರಾಜ್ಯದಲ್ಲಿ ಸಂಭವಿಸಿತ್ತು. ಅಂಥದ್ದರಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಸಂಭವಿಸುವುದು ಆಶ್ಚರ್ಯದ ವಿಷಯವೇ ಅಲ್ಲ. ಅಂಥದ್ದರಲ್ಲಿ ಸಾಮೂಹಿಕ ನಕಲಿನ ಹಿಂದಿನ ನೈತಿಕ ಪ್ರಶ್ನೆಗಳನ್ನು ಎತ್ತುವುದರಲ್ಲಿ ಈಗ ಯಾವ ಅರ್ಥವೂ ಉಳಿದಿಲ್ಲ. ಈಗ ಕೇಳಬೇಕಾಗಿರುವ ಪ್ರಶ್ನೆ ಒಂದೇ. ಕಲಿಕೆಯ ಪ್ರಮಾಣವನ್ನು ಅಳೆಯುವುದಕ್ಕೆ ಈಗಲೂ ನೆನಪಿನ ಶಕ್ತಿಯನ್ನು ಪರೀಕ್ಷಿಸುವ ಮಾದರಿಯನ್ನೇ ಏಕೆ ಇಟ್ಟುಕೊಂಡಿದ್ದೇವೆ?

ಕಲಿಸುವಿಕೆ ಮತ್ತು ಕಲಿಕೆಯ ಪ್ರಮಾಣವನ್ನು ಅಳೆಯುವ ಪ್ರಕ್ರಿಯೆಗಳು ವಿದ್ಯಾರ್ಥಿ ಕೇಂದ್ರಿತವಾಗಿರಬೇಕು. ಭಾರತದಲ್ಲಿ ಈ ವ್ಯವಸ್ಥೆಯನ್ನು ನಿರ್ವಹಣೆಯ ಅನುಕೂಲಕ್ಕೆ ಬೇಕಿರುವಂತೆ ರೂಪಿಸಿಕೊಳ್ಳಲಾಗಿದೆ. ಶಿಕ್ಷಕರು ಹೇಗೆ ಕಲಿಸಬೇಕು ಎಂಬುದಾಗಲೀ ವಿದ್ಯಾರ್ಥಿಗಳು ಯಾವ ವಿಷಯವನ್ನು ಹೇಗೆ ಕಲಿಯುತ್ತಾರೆ ಎಂಬ ಬಗ್ಗೆಯಾಗಲೀ ನಮ್ಮ ಶಿಕ್ಷಣ ನೀತಿಗಳನ್ನು ರೂಪಿಸುವವರು ಯಾವತ್ತೂ ಆಲೋಚಿಸಿದ್ದಿಲ್ಲ. ಈ ವಿಷಯಗಳೆಲ್ಲವೂ ನೀತಿ ನಿರೂಪಣೆಯ ಕಡತಗಳಿಗೆ ಮಾಡಿರುವ ಅಲಂಕಾರ ಮಾತ್ರ. ಪರೀಕ್ಷೆ ಮತ್ತು ಮೌಲ್ಯಮಾಪನ ನಡೆಸುವುದಕ್ಕೆ ಅನುಕೂಲವಾಗುವ ಬಗೆಯಲ್ಲಿ ಶಿಕ್ಷಣ ಕ್ರಮ ರೂಪುಗೊಂಡಿದೆ. ಅಂದರೆ ವರ್ಷವಿಡೀ ಮಾಡಿದ ಪಾಠ, ವಿದ್ಯಾರ್ಥಿಗೆ ಎಷ್ಟು ಅರ್ಥವಾಗಿದೆ ಎಂಬುದನ್ನು ಮೂರು ಗಂಟೆಗಳಲ್ಲಿ ಅಳೆಯುವ ವಿಧಾನವಿದು. ಈ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು ವಿದ್ಯಾರ್ಥಿಯಿಂದ ತೊಡಗಿ ಶಿಕ್ಷಕ ಮತ್ತು ಶಿಕ್ಷಣ ಸಂಸ್ಥೆಯ ಭವಿಷ್ಯವನ್ನು ನಿರ್ಧರಿಸುತ್ತವೆ. ನಿರ್ದಿಷ್ಟ ಪ್ರಮಾಣದ ಫಲಿತಾಂಶ ಬಾರದೇ ಇದ್ದರೆ ಕ್ರಮ ಕೈಗೊಳ್ಳಲಾಗುವುದು ಎಂಬ ಸರ್ಕಾರದ ಷರತ್ತು ಸಹಜವಾಗಿಯೇ ಫಲಿತಾಂಶ ಹೆಚ್ಚಿಸುವ ತಂತ್ರಗಳತ್ತ ಇಡೀ ವ್ಯವಸ್ಥೆಯನ್ನು ಸೆಳೆಯುತ್ತದೆ. ನೈತಿಕತೆ ಎಂಬುದು ಅತ್ಯಂತ ಕನಿಷ್ಠ ಮೌಲ್ಯವೆಂದು ‘ಸ್ಪರ್ಧಾತ್ಮಕ ಶಿಕ್ಷಣ’ ತೀರ್ಮಾನಿಸಿರುವುದರಿಂದ ಬಹಳ ಸುಲಭದಲ್ಲಿ ಸಾಮೂಹಿಕ ನಕಲು ನಡೆಯುತ್ತದೆ. ಈ ಸಮಸ್ಯೆಗೊಂದು ಕಾನೂನು ಮತ್ತು ಸುವ್ಯವಸ್ಥೆಯ ಆಯಾಮವಿದೆ. ಇದನ್ನು ಸರಿಪಡಿಸುವುದು ಸುಲಭ. ಪರೀಕ್ಷಾ ಕೇಂದ್ರಗಳ ಮೇಲೆ ಪೊಲೀಸರ ಹದ್ದಿನ ಕಣ್ಣಿದ್ದರೆ ಮುಕ್ಕಾಲು ಪಾಲು ಸಮಸ್ಯೆ ಪರಿಹಾರವಾಗುತ್ತದೆ. ಆದರೆ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ ತುಂಬುವುದಕ್ಕೆ ಮತ್ತು ಅವರ ಕಲಿಕೆ ಹಾಗೂ ಅದರ ಮೌಲ್ಯಮಾಪವನ್ನು ಅರ್ಥಪೂರ್ಣವಾಗಿಸುವುದಕ್ಕೆ ಇಡೀ ವ್ಯವಸ್ಥೆಯ ಆಮೂಲಾಗ್ರ ಸುಧಾರಣೆ ಅಗತ್ಯ. ಇದು ಅಸಾಧ್ಯವಾದುದೇನೂ ಅಲ್ಲ. ದೆಹಲಿಯಲ್ಲಿ ಕಳೆದ ಐದು ವರ್ಷಗಳಲ್ಲಿ ನಡೆದ ಸುಧಾರಣಾ ಪ್ರಕ್ರಿಯೆ ಅಭೂತಪೂರ್ವ ಫಲಿತಾಂಶ ನೀಡಿರುವುದು ನಮ್ಮ ಕಣ್ಣೆದುರೇ ಇದೆ. ಕರ್ನಾಟಕದಲ್ಲಿಯೂ ಕೆಲವು ಸರ್ಕಾರೇತರ ಸಂಸ್ಥೆಗಳು ಕಲಿಕೆಯ ಮಟ್ಟವನ್ನು ಸುಧಾರಿಸುವ ಪ್ರಯೋಗಗಳಲ್ಲಿ ಯಶಸ್ವಿಯಾಗಿವೆ. ಈ ಅರಿವನ್ನು ಬಳಸಿಕೊಂಡು ಶೈಕ್ಷಣಿಕ ನೀತಿಯನ್ನು ರೂಪಿಸಿ ಕಾರ್ಯರೂಪಕ್ಕೆ ತರಲು ಸರ್ಕಾರ ಶ್ರಮಿಸಬೇಕು. ಪೊಲೀಸರನ್ನು ಕಾವಲಿಗಿರಿಸಿಕೊಂಡು ಶಾಲಾ ಪರೀಕ್ಷೆಗಳನ್ನು ನಡೆಸುವ ವಿಧಾನ ಸುಸ್ಥಿರವಲ್ಲ. ಅದು ಕಲಿಕೆಯ ಮೌಲ್ಯಮಾಪನವೂ ಅಲ್ಲ.

Tags: 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !