ಗುರುವಾರ , ಅಕ್ಟೋಬರ್ 17, 2019
24 °C

ತ್ವರಿತಗತಿ ಕೋರ್ಟ್‌: ಸ್ವಾಗತಾರ್ಹ ರಾಚನಿಕ ಬದಲಾವಣೆ ಅಗತ್ಯ

Published:
Updated:
Prajavani

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ತ್ವರಿತ ವಿಚಾರಣೆಗೆ ಒಟ್ಟು 1,023 ತ್ವರಿತಗತಿ ನ್ಯಾಯಾಲಯಗಳನ್ನು ದೇಶದಾದ್ಯಂತ ಸ್ಥಾಪಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಸಮಾಜದಲ್ಲಿ ದೌರ್ಜನ್ಯಕ್ಕೆ ಹೆಚ್ಚು ತುತ್ತಾಗುವ ವರ್ಗಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿರುವ ಕಾರಣ, ಈ ಪ್ರಸ್ತಾವ ಸ್ವಾಗತಾರ್ಹ.

ತ್ವರಿತಗತಿ ನ್ಯಾಯಾಲಯಗಳನ್ನು ಆರಂಭಿಸುವ ಕೆಲಸ ಅಕ್ಟೋಬರ್ 2ರಿಂದ ಆರಂಭವಾಗುವ ನಿರೀಕ್ಷೆ ಇದೆ. 1,023 ನ್ಯಾಯಾಲಯಗಳ ಪೈಕಿ 777 ನ್ಯಾಯಾಲಯಗಳನ್ನು ದೇಶದ ಒಂಬತ್ತು ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಆರಂಭಿಸಿ, ಇನ್ನುಳಿದ ನ್ಯಾಯಾಲಯಗಳನ್ನು ನಂತರದ ಹಂತಗಳಲ್ಲಿ ಆರಂಭಿಸಲಾಗುತ್ತದೆ. ಈಗಿನ ಹಂತದಲ್ಲಿ ದೇಶದಲ್ಲಿ, ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಅಡಿ ದಾಖಲಾದ ಪ್ರಕರಣಗಳೂ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಒಟ್ಟು 1.66 ಲಕ್ಷ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ ಎಂಬ ವರದಿ ಇದೆ. ತ್ವರಿತಗತಿಯ ಪ್ರತಿ ನ್ಯಾಯಾಲಯವೂ ಪ್ರತಿವರ್ಷ ಕನಿಷ್ಠ 165 ಪ್ರಕರಣಗಳನ್ನು ಇತ್ಯರ್ಥಪಡಿಸಬಹುದು ಎಂಬ ನಿರೀಕ್ಷೆ ಕೇಂದ್ರ ಕಾನೂನು ಸಚಿವಾಲಯ ಸಿದ್ಧಪಡಿಸಿದ ಪ್ರಸ್ತಾವದಲ್ಲಿ ಇದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ, ಈ ನ್ಯಾಯಾಲಯಗಳ ಪೈಕಿ 389 ನ್ಯಾಯಾಲಯಗಳು ಪೋಕ್ಸೊ ಕಾಯ್ದೆಯ ಅಡಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸಲಿವೆ. ಇನ್ನುಳಿದ ನ್ಯಾಯಾಲಯಗಳು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಅಥವಾ ಪೋಕ್ಸೊ ಕಾಯ್ದೆ ಅಡಿ ದಾಖಲಾದ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳೆರಡನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು. ವಿಚಾರಣೆಯ ಹಂತದಲ್ಲೇ ಉಳಿದುಕೊಂಡಿರುವ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸುವುದು ಹಾಗೂ ಮುಂದೆ ದಾಖಲಾಗ
ಬಹುದಾದ ಈ ಎರಡು ಬಗೆಯ ಅಪರಾಧಿಕಪ್ರಕರಣಗಳಲ್ಲಿ ತ್ವರಿತವಾಗಿ ನ್ಯಾಯ ಒದಗಿಸುವುದು ಈ ಪ್ರಸ್ತಾವದ ಹಿಂದಿನ ಉದ್ದೇಶ.

ಆದರೆ, ಈ ಎರಡು ಬಗೆಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ತ್ವರಿತಗತಿಯ ನ್ಯಾಯಾಲಯಗಳು ಮಾತ್ರವೇ ಸಾಕಾಗಲಿಕ್ಕಿಲ್ಲ ಎಂಬುದನ್ನು ಆಳುವ ವರ್ಗ ಮೊದಲು ಗುರುತಿಸಬೇಕು. ಇತರ ಎಲ್ಲ ನ್ಯಾಯಾಲಯಗಳನ್ನು ಬಾಧಿಸುವ ಸಮಸ್ಯೆಗಳೇ ಈ ಬಗೆಯ ನ್ಯಾಯಾಲಯಗಳನ್ನೂ ಕಾಡಬಹುದು. ಮೂಲಸೌಕರ್ಯಗಳ ಕೊರತೆ, ಸಂಪನ್ಮೂಲಗಳು ಸೂಕ್ತ ಪ್ರಮಾಣದಲ್ಲಿ ಲಭ್ಯವಾಗದಿರುವುದು, ಸಿಬ್ಬಂದಿ ಕೊರತೆ... ಇವು ಕೂಡ ಪ್ರಕರಣಗಳ ವಿಚಾರಣೆ ವಿಳಂಬ ಆಗುವುದಕ್ಕೆ ಕಾರಣ ಆಗಬಹುದು. ಅಷ್ಟೇ ಅಲ್ಲ, ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳಲ್ಲಿ ನ್ಯಾಯದಾನ ವಿಳಂಬ ಆಗುವುದಕ್ಕೆ ನ್ಯಾಯಾಲಯಗಳು ಮಾತ್ರ ಕಾರಣ ಎನ್ನುವುದು ತಪ್ಪಾಗುತ್ತದೆ.

ತನಿಖೆ ವಿಳಂಬ ಗತಿಯಲ್ಲಿ ನಡೆಯುವುದು, ರಾಜಕೀಯವಾಗಿ ಪ್ರಭಾವಿಗಳಾದವರು ಆರೋಪಿ ಸ್ಥಾನದಲ್ಲಿ ಇದ್ದರೆ ತನಿಖಾಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಬರುವುದು, ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿಗಳು ಬರುವುದು ತಡವಾಗುವುದು ಕೂಡ ತನಿಖೆ ಹಾಗೂ ನ್ಯಾಯದಾನ ವಿಳಂಬ ಆಗುವುದಕ್ಕೆ ಕಾರಣವಾಗಬಲ್ಲವು. ನ್ಯಾಯದಾನ ತ್ವರಿತವಾಗಿ ಆಗಬೇಕು ಎಂಬ ಉದ್ದೇಶದ ಇಂತಹ ನ್ಯಾಯಾಲಯಗಳ ಸ್ಥಾಪನೆ ಪ್ರಸ್ತಾವವನ್ನು ಸ್ವಾಗತಿಸುವ ಸಂದರ್ಭದಲ್ಲಿ, ವಿಚಾರಣೆಗಳನ್ನು ವಿಳಂಬಗೊಳಿಸುವ ಇತರ ಅಂಶಗಳನ್ನು ನಿವಾರಿಸಿಕೊಳ್ಳುವ ಬಗೆ ಹೇಗೆ ಎಂಬ ಚರ್ಚೆಯೂ ಆಗಬೇಕು. ವಿಚಾರಣೆ ಮಹತ್ವದ ಹಂತ ತಲುಪಿದ ಸಂದರ್ಭದಲ್ಲಿ ಸಾಕ್ಷಿಗಳು ಹೇಳಿಕೆ ಬದಲಿಸುವುದು ಕೂಡ ನ್ಯಾಯದಾನ ಪ್ರಕ್ರಿಯೆ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ. ಅದರಲ್ಲೂ ಮುಖ್ಯವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಬಲಾಢ್ಯರು ಆರೋಪಿ ಸ್ಥಾನದಲ್ಲಿ ಇದ್ದಾಗ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಪ್ರಯತ್ನಗಳು ನಡೆದಿರುವುದನ್ನು ಇತಿಹಾಸ ದಾಖಲಿಸಿದೆ. ‘ತ್ವರಿತವಾಗಿ ನ್ಯಾಯದಾನ’ ಎಂಬ ಚರ್ಚೆಯ ಸಂದರ್ಭದಲ್ಲಿ, ಇಂತಹ ಸೂಕ್ಷ್ಮಗಳ ಕುರಿತು ವಿಸ್ತೃತ ಪರಿಶೀಲನೆ ಆಗಬೇಕು.

ಪೊಲೀಸ್ ವ್ಯವಸ್ಥೆಯನ್ನು ಹಾಗೂ ತನಿಖಾ ಪ್ರಕ್ರಿಯೆಯನ್ನು ಸುಧಾರಿಸುವುದು ‘ತ್ವರಿತ ನ್ಯಾಯದಾನ’ದ ಆಶಯ ಸಾಕಾರಗೊಳ್ಳಲು ತೀರಾ ಅಗತ್ಯ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಪೂರ್ವಗ್ರಹ ರಹಿತವಾಗಿ ತನಿಖೆ ಆಗುತ್ತದೆ ಎಂಬ ವಿಶ್ವಾಸ ಮೂಡಬೇಕು. ಅದಕ್ಕೆ ಕಾನೂನಿನ ಬದಲಾವಣೆ ಅಥವಾ ಹೆಚ್ಚೆಚ್ಚು ಸಂಖ್ಯೆಯ ನ್ಯಾಯಾಲಯಗಳ ಸ್ಥಾಪನೆಯಷ್ಟೇ ಪರಿಹಾರ ಅಲ್ಲ. ಇಂತಹ ಪ್ರಕರಣಗಳಲ್ಲಿ, ತನಿಖೆ ನಿಷ್ಪಕ್ಷಪಾತವಾಗಿ ಹಾಗೂ ತ್ವರಿತವಾಗಿ ನಡೆಯಬೇಕು ಎಂದಾದರೆ ಪೊಲೀಸ್ ವ್ಯವಸ್ಥೆಯಲ್ಲಿ ಕೆಲವು ರಾಚನಿಕ ಬದಲಾವಣೆಗಳೂ ಬೇಕಾಗಬಹುದು.

Post Comments (+)