ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಮ್ಮೆಯ ವನವಿಸ್ತರಣೆ ಹೆಚ್ಚಿದ ಹೊಣೆಗಾರಿಕೆ

Last Updated 1 ಜನವರಿ 2020, 1:47 IST
ಅಕ್ಷರ ಗಾತ್ರ

ಹೊಸವರ್ಷದ ಹೊಸ್ತಿಲಲ್ಲಿ ಕರ್ನಾಟಕ ಹೆಮ್ಮೆಪಡುವಂಥ ವಾರ್ತೆಯೊಂದು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಬಂದಿದೆ. 2017ರಿಂದ 2019ರ ನಡುವಿನ ಅವಧಿಯಲ್ಲಿ ನಮ್ಮ ರಾಜ್ಯದ ವನ ವಿಸ್ತೀರ್ಣ 1,025 ಚದರ ಕಿಲೊಮೀಟರಿನಷ್ಟು ಹೆಚ್ಚಾಗಿದ್ದು, ಈ ಹೆಚ್ಚಳವು ಭಾರತದ ಇತರೆಲ್ಲ ರಾಜ್ಯಗಳ ವನವಿಸ್ತರಣೆಗಿಂತ ಅಧಿಕ ಎಂಬುದು ‘ಭಾರತೀಯ ಅರಣ್ಯ ಸ್ಥಿತಿಗತಿ- 2019’ರ ವರದಿಯಲ್ಲಿ ವ್ಯಕ್ತವಾಗಿದೆ.

ರಾಷ್ಟ್ರದ ಒಟ್ಟು ಅರಣ್ಯ ವಿಸ್ತೀರ್ಣ 3,976 ಚ.ಕಿ.ಮೀ.ನಷ್ಟು ಹೆಚ್ಚಾಗಿದ್ದು, ಆಂಧ್ರಪ್ರದೇಶ (990 ಚ.ಕಿ.ಮೀ) ಮತ್ತು ಕೇರಳ (823 ಚ.ಕಿ.ಮೀ) ಕ್ರಮವಾಗಿ ಎರಡು ಮತ್ತು ಮೂರನೆಯ ಶ್ರೇಯಾಂಕ ಪಡೆದಿವೆ. ಕರ್ನಾಟಕಕ್ಕೆ ಹೆಮ್ಮೆ ತರಬಲ್ಲ ಇನ್ನೊಂದು ಅಂಶ ಏನೆಂದರೆ ವೃಕ್ಷವೈವಿಧ್ಯದ ದೃಷ್ಟಿಯಲ್ಲೂ ಮೊದಲ ಶ್ರೇಯಾಂಕ ನಮ್ಮದೇ ಆಗಿದ್ದು, ಇಲ್ಲಿ 325 ಪ್ರಭೇದಗಳ ಮರಗಳಿರುವುದನ್ನು ದಾಖಲಿಸಲಾಗಿದೆ.

ಪಶ್ಚಿಮಘಟ್ಟಗಳ ಅತಿ ದೊಡ್ಡ, ಅಂದರೆ ಶೇಕಡ 60ರಷ್ಟು ಭಾಗ ಕರ್ನಾಟಕದ್ದಾಗಿದ್ದು ರಾಜರ, ಬ್ರಿಟಿಷರ ಕಾಲದಿಂದಲೂ ಅರಣ್ಯ
ಮತ್ತು ಜೀವಾವಾಸ ರಕ್ಷಣೆಗೆ ಆಡಳಿತ ವ್ಯವಸ್ಥೆಯಲ್ಲಿ ಗಣನೀಯ ಆದ್ಯತೆ ನೀಡಲಾಗಿದೆ. ನಮ್ಮಲ್ಲಿರುವಷ್ಟು ಆನೆಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ.

ಹುಲಿಗಳ ಸಂಖ್ಯೆ ತುಸು ಹೆಚ್ಚಾದರೆ, ಮಧ್ಯಪ್ರದೇಶವನ್ನು (526) ಹಿಂದಿಕ್ಕಿ ಅವುಗಳ ಸಂಖ್ಯೆ ಕರ್ನಾಟಕದಲ್ಲೇ ಅತಿ ಹೆಚ್ಚು ಎಂಬಂತಾಗುತ್ತದೆ. ನಮ್ಮಲ್ಲಿರುವಷ್ಟು ಅಭಯಾರಣ್ಯಗಳು, ರಾಷ್ಟ್ರೀಯ ಉದ್ಯಾನಗಳು, ರಕ್ಷಿತ ಅರಣ್ಯಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಅಷ್ಟೇ ಅಲ್ಲ, ದೇಶದಲ್ಲೇ ವಿಶಿಷ್ಟವಾದ ಕರಡಿಗಳ ಸಂರಕ್ಷಣಾ ವಲಯ, ನೀರುನಾಯಿ ಆಶ್ರಯಧಾಮ, ಸಿಂಗಳೀಕಗಳಿಗೆ ಸಂರಕ್ಷಣಾಧಾಮಗಳನ್ನು ಸೃಷ್ಟಿಸಿದ ಹೆಗ್ಗಳಿಗೆ ಕರ್ನಾಟಕದ್ದಾಗಿದೆ.

ಜಾಗತಿಕ ಹವಾಮಾನ ಸಂಕಟ ವರ್ಷವರ್ಷವೂ ಹೆಚ್ಚುತ್ತಿರುವ ಈಗಿನ ಸಂದರ್ಭದಲ್ಲಿ ವಾತಾವರಣದಲ್ಲಿ ಹೆಚ್ಚುತ್ತಿರುವ ಇಂಗಾಲವನ್ನು ಹೀರಿಕೊಳ್ಳಲು ಅರಣ್ಯ ವಿಸ್ತೀರ್ಣ ಸತತ ಹೆಚ್ಚುತ್ತಿರಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ವಿದ್ಯಮಾನಗಳನ್ನು ಎಲ್ಲೆಲ್ಲೂ ನಾವು ಕಾಣುತ್ತಿದ್ದೇವೆ. ಉತ್ತರ ಧ್ರುವದ ಸಮೀಪದ ಸೂಚೀಪರ್ಣಿ ಅರಣ್ಯಗಳಿಂದ ಹಿಡಿದು ಆಸ್ಟ್ರೇಲಿಯಾ, ಯುರೋಪ್, ದಕ್ಷಿಣ ಅಮೆರಿಕ ಖಂಡಗಳಲ್ಲಿ ದಿನವೂ ಎಂಬಂತೆ ಅರಣ್ಯ ತಾನೇ ತಾನಾಗಿ ಹೊತ್ತಿ ಉರಿಯುತ್ತಿರುವ ವಾರ್ತೆಗಳು ಬರುತ್ತಿವೆ.

ಅಮೆಜಾನ್ ಅರಣ್ಯವೊಂದರಲ್ಲೇ 70 ಸಾವಿರಕ್ಕೂ ಹೆಚ್ಚು ತಾಣಗಳು ಕಳೆದ ಆರು ತಿಂಗಳಲ್ಲಿ ಅಗ್ನಿಗೆ ಆಹುತಿಯಾಗಿವೆ. ನಮ್ಮಲ್ಲೂ ದಕ್ಷಿಣ ಭಾರತದಲ್ಲಿ ಅರಣ್ಯ ವಿಸ್ತೀರ್ಣ ತುಸುಮಟ್ಟಿಗೆ ಹೆಚ್ಚಿರುವುದನ್ನು ಬಿಟ್ಟರೆ ಈಶಾನ್ಯ ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಅರಣ್ಯ ವಿಸ್ತೀರ್ಣ ಕುಗ್ಗಿದೆಯೆಂದು ಇದೀಗ ಬಿಡುಗಡೆಯಾದ ವರದಿಯಲ್ಲಿ ಹೇಳಲಾಗಿದೆ.

ಜಾಗತಿಕ ವರದಿಯ ಪ್ರಕಾರ, ಚೀನಾ, ಯುರೋಪ್‍ನಲ್ಲಿ ಅರಣ್ಯ ವಿಸ್ತೀರ್ಣ ತುಸು ಹೆಚ್ಚಾಗಿದೆಯಾದರೂ ಅವೆಲ್ಲವೂ ವಾಣಿಜ್ಯ ಉದ್ದೇಶಕ್ಕೆ ಬೆಳೆಸಲಾಗುತ್ತಿರುವ ಏಕಜಾತಿಯ ನೆಡುತೋಪುಗಳೇ ಆಗಿದ್ದು, ಒಟ್ಟಾರೆಯಾಗಿ ಜಾಗತಿಕ ಜೀವಿವೈವಿಧ್ಯ ಸ್ಥಿತಿಗತಿ ತೀರಾ ಶೋಚನೀಯ ಆಗಿದೆ. ಭಾರತದಲ್ಲೂ ‘ಅರಣ್ಯ ಸ್ಥಿತಿಗತಿ ವರದಿ– 2017’ರಲ್ಲಿ ರಾಷ್ಟ್ರದ ಅರಣ್ಯವಿಸ್ತೀರ್ಣ 0.2ರಷ್ಟು ಹೆಚ್ಚಾಗಿದೆ ಎಂಬ ಸಂಗತಿ ಪ್ರಕಟವಾದಾಗ, ಆ ಹೆಚ್ಚಳವೆಲ್ಲವೂ ಖಾಸಗಿ ನೆಡುತೋಪಿನ ವಿಸ್ತರಣೆಯಿಂದಲೇ ಆಗಿದ್ದೆಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

ಕರ್ನಾಟಕದಲ್ಲಿ ಕೂಡ ಅರಣ್ಯವೃದ್ಧಿಯ ಹೆಚ್ಚಿನ ಪಾಲು ತೋಟಗಾರಿಕೆ ಹಾಗೂ ನೆಡುತೋಪುಗಳ ವಿಸ್ತರಣೆಯಿಂದಾಗಿಯೇ ಆಗಿದೆಯೆಂದು ಈಗಿನ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಅದು ನಿಸರ್ಗ ಸಮೃದ್ಧಿಯ ನೈಜ ಲಕ್ಷಣವೇನಲ್ಲ. ನೆಡುತೋಪಿನ ವಿಸ್ತೀರ್ಣ ಹೆಚ್ಚಾದಲ್ಲೆಲ್ಲ ರೈತರ ಸಂಕಟವನ್ನು ಹೆಚ್ಚಿಸುವ ಉಪದ್ರವಿ ವನ್ಯಜೀವಿಗಳ ಸಂಖ್ಯೆ ಹೆಚ್ಚಾಗಿದೆ ವಿನಾ ಅಸಲೀ ಜೀವಿವೈವಿಧ್ಯ ಕಡಿಮೆಯೇ ಆಗಿದೆ. ಈಗಿರುವ ನೈಸರ್ಗಿಕ ಅರಣ್ಯಗಳೂ ಎಗ್ಗಿಲ್ಲದ ಅಭಿವೃದ್ಧಿಯ ಯೋಜನೆಗಳಿಗೆ ಸಿಕ್ಕು ಭಗ್ನಗೊಂಡಿವೆ; ಲಂಟಾನಾ, ಯುಪಟೋರಿಯಂನಂಥ ದಾಳಿ ಸಸ್ಯಗಳು ವನ್ಯಜೀವಿಗಳ ಪಾಲಿಗೆ ಕಂಟಕಕಾರಿ ಆಗುತ್ತಿವೆ.

ದಟ್ಟ ಅರಣ್ಯವನ್ನು ಸೀಳುವ ಹೆದ್ದಾರಿ ಮತ್ತು ರೈಲು ಮಾರ್ಗಗಳ ಪ್ರಸ್ತಾವಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅರಣ್ಯವಾಸಿಗಳಿಗೆ ಹಕ್ಕುಪತ್ರ ದೊರಕಿಸುವ ನೆಪದಲ್ಲಿ ಉಳ್ಳವರ ಅತಿಕ್ರಮಣವೇ ಹೆಚ್ಚುತ್ತಿರುವ ವರದಿಗಳು ಬರುತ್ತಿವೆ. ಇದ್ದುದರಲ್ಲಿ ಸಮಾಧಾನದ ಸಂಗತಿ ಏನೆಂದರೆ, ಅರಣ್ಯಸಂವರ್ಧನೆಯಲ್ಲಿ, ವನ್ಯಮೃಗಗಳ ಕ್ಷೇಮಚಿಂತನೆಯಲ್ಲಿ, ಕೆರೆಗಳ ಹೂಳೆತ್ತುವಲ್ಲಿ ಜನಸಾಮಾನ್ಯರು ಹಿಂದೆಂದಿಗಿಂತ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದಾರೆ.

ನಿದ್ರಿತ ಸ್ಥಿತಿಯಲ್ಲಿದ್ದ ಜೀವಿವೈವಿಧ್ಯ ಮಂಡಳಿಯನ್ನು ಮತ್ತೆ ಸಚೇತನಗೊಳಿಸುವತ್ತ ಸರ್ಕಾರ ಕ್ರಮ ಕೈಗೊಂಡಿದೆ. ಹಿಂದೆ ಗಮನಾರ್ಹ ಕೆಲಸ ಮಾಡಿದ್ದ ಪಶ್ಚಿಮಘಟ್ಟ ಕಾರ್ಯಪಡೆ, ಜೈವಿಕ ಇಂಧನ ಮಂಡಳಿಗಳನ್ನೂ ಮತ್ತೆ ಪುನಶ್ಚೇತನಗೊಳಿಸಬೇಕು. ಈಗ ಲಭಿಸಿದ ಹೆಗ್ಗಳಿಕೆ ಕೇವಲ ತೋರಿಕೆಯದಲ್ಲವೆಂದು ಸಾರಬೇಕು; ಕರ್ನಾಟಕ ಸದಾಕಾಲ ಮೊದಲ ಸ್ಥಾನದಲ್ಲೇ ಉಳಿದಿರಬೇಕು. ಯುವ ಉತ್ಸಾಹಿಗಳು ವನ ಸಂವರ್ಧನೆಯಲ್ಲಿ ಹೆಚ್ಚುಹೆಚ್ಚು ಪಾಲ್ಗೊಳ್ಳುವಂತೆ ಮಾಡಿದರೆ ಈ ಹೊಣೆಗಾರಿಕೆಯನ್ನು ಲೀಲಾಜಾಲವಾಗಿ ನಿಭಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT