ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಜಿಡಿಪಿ ಇಳಿಕೆ: ಆರ್ಥಿಕತೆಗೆ ಇನ್ನಷ್ಟು ಬಲ ಬೇಕೆಂಬುದರ ಸೂಚನೆ

Last Updated 1 ಡಿಸೆಂಬರ್ 2022, 20:27 IST
ಅಕ್ಷರ ಗಾತ್ರ

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ (ಜಿಡಿಪಿ) ಬೆಳವಣಿಗೆ ಪ್ರಮಾಣ ಎಷ್ಟಿತ್ತು ಎಂಬುದಕ್ಕೆ ಸಂಬಂಧಿಸಿದ ಅಂಕಿ–ಅಂಶಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಜುಲೈನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ದೇಶದ ಜಿಡಿಪಿ ಶೇಕಡ 6.3ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌–ಜೂನ್‌ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ದರವು ಶೇ 13.5ರಷ್ಟು ಇತ್ತು. ಜೂನ್ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದರೆ ಜಿಡಿಪಿ ಬೆಳವಣಿಗೆ ದರವು ಅರ್ಧಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಹಿಂದಿನ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ದರವು ಶೇ 8.4ರಷ್ಟು ಇತ್ತು. ಹಿಂದಿನ ವರ್ಷದ ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿ ನೋಡಿದರೂ, ಜಿಡಿಪಿ ಬೆಳವಣಿಗೆಯು ತಗ್ಗಿರುವುದು ಸ್ಪಷ್ಟವಾಗುತ್ತದೆ. ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದ ವಲಯವಾರು ಬೆಳವಣಿಗೆ ಹಾಗೂ ಕುಸಿತವನ್ನು ಪರಿಶೀಲಿಸಿದರೆ, ತಯಾರಿಕೆ ವಲಯ ಹಾಗೂ ಗಣಿಗಾರಿಕೆ ವಲಯದಲ್ಲಿ ಕುಸಿತ ದಾಖಲಾಗಿರುವುದು ಗೊತ್ತಾಗುತ್ತದೆ. ತಯಾರಿಕಾ ವಲಯ ಶೇ –4.3ರಷ್ಟು ಹಾಗೂ ಗಣಿಗಾರಿಕೆ ಶೇ –2.8ರಷ್ಟು ಕುಸಿದಿವೆ. ಈ ಎರಡು ವಲಯಗಳಲ್ಲಿನ ಕುಸಿತವು ಒಟ್ಟು ಜಿಡಿಪಿ ಬೆಳವಣಿಗೆ ಪ್ರಮಾಣವು ತಗ್ಗಿರಲು ಒಂದು ಕಾರಣವಾಗಿದೆ. ಇತರ ಹಲವು ಪ್ರಮುಖ ವಲಯಗಳು ಬೆಳವಣಿಗೆ ಸಾಧಿಸಿವೆ. ಅದರಲ್ಲೂ ಮುಖ್ಯವಾಗಿ ಕೋವಿಡ್‌ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದ ಹೋಟೆಲ್, ಸಾರಿಗೆ ಯಂತಹ ವಲಯಗಳಲ್ಲಿ ಶೇ 14.7ರಷ್ಟು ಬೆಳವಣಿಗೆ ಸಾಧ್ಯವಾಗಿದೆ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕೋವಿಡ್‌ ಸಾಂಕ್ರಾಮಿಕವು ವಾಣಿಜ್ಯ ಚಟುವಟಿಕೆಗಳ ಮೇಲೆ ಯಾವ ರೀತಿಯಲ್ಲಿಯೂ ಪರಿಣಾಮ ಬೀರಿದಂತೆ ಮೇಲ್ನೋಟಕ್ಕೆ ಕಾಣುತ್ತಿಲ್ಲ. ಜನವರಿ–ಫೆಬ್ರುವರಿ ಹೊತ್ತಿನಲ್ಲಿ ಕಾಣಿಸಿಕೊಂಡ ಮೂರನೆಯ ಅಲೆಯ ನಂತರದಲ್ಲಿ ಕೋವಿಡ್‌ ಸಾಂಕ್ರಾಮಿಕವು ವಾಣಿಜ್ಯ ಚಟುವಟಿಕೆಗಳ ಮೇಲೆ ಕೆಟ್ಟ ಪರಿಣಾಮ ಬೀರಿದಂತಿಲ್ಲ. ದೇಶದ ಉದ್ದಗಲಕ್ಕೂ ಆಚರಿಸುವ ನವರಾತ್ರಿ ಹಬ್ಬವು ಸೆಪ್ಟೆಂಬರ್ ಕೊನೆಯ ವಾರದಲ್ಲಿ ಶುರುವಾಗಿತ್ತು. ಹಬ್ಬಗಳ ಸಂದರ್ಭದಲ್ಲಿ ಖರೀದಿ ಚಟುವಟಿಕೆ ಹೆಚ್ಚು ವುದು ಸಹಜ. ಆದರೂ ಜಿಡಿಪಿ ಬೆಳವಣಿಗೆ ಇಳಿಮುಖವಾಗಿರುವುದಕ್ಕೆ ಒಂದು ಕಾರಣ ಹಣದು ಬ್ಬರದ ಹೆಚ್ಚಳವೂ ಆಗಿರಬಹುದು. ಜುಲೈ, ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳುಗಳಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಏರಿಕೆ ಆಗುತ್ತಲೇ ಸಾಗಿದೆ. ಜುಲೈನಲ್ಲಿ ಶೇ 6.71, ಆಗಸ್ಟ್‌ನಲ್ಲಿ ಶೇ 7 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ 7.41ರಷ್ಟು ಚಿಲ್ಲರೆ ಹಣದುಬ್ಬರ ದಾಖಲಾಗಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6ಕ್ಕಿಂತ ಹೆಚ್ಚಾಗಿದೆ ಅಂದರೆ, ಅದು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿ ಮಾಡಿಕೊಂಡಿರುವ ಮಿತಿಯನ್ನು ಮೀರಿದೆ ಎಂದು ಅರ್ಥ. ಮಿತಿಯನ್ನು ಮೀರಿರುವ ಹಣದುಬ್ಬರ ಪ್ರಮಾಣವು ಜನರ ಕೊಳ್ಳುವ ಶಕ್ತಿಯನ್ನು ಸಹಜವಾಗಿಯೇ ಕುಗ್ಗಿಸುತ್ತದೆ. ಜನರ ಕೊಳ್ಳುವ ಶಕ್ತಿ ಕುಗ್ಗಿದಾಗ ಆರ್ಥಿಕ ವಹಿವಾಟುಗಳು ಮಂಕಾಗುತ್ತವೆ. ಇದು ಜಿಡಿಪಿ ಬೆಳವಣಿಗೆ ದರ ತಗ್ಗುವುದಕ್ಕೆ ಒಂದು ಕಾರಣವಾಗಿರಬಹುದು. ಹಣದುಬ್ಬರ ನಿಯಂತ್ರಿಸುವಲ್ಲಿ ತಾನು ಸೋತಿದ್ದು ಏಕೆ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ವರದಿ ನೀಡುವುದಾಗಿ ಹೇಳಿರುವ ಆರ್‌ಬಿಐ, ಆ ವರದಿಯನ್ನು ತಾನು ಬಹಿರಂಗಪಡಿಸುವುದಿಲ್ಲ ಎಂದು ಈಗಾಗಲೇ ತಿಳಿಸಿದೆ. ಆದರೆ, ಹಣದುಬ್ಬರ ಏರಿಕೆ ಹಾಗೂ ಜಿಡಿಪಿ ಕುಸಿತ ಇವು ಕಾಗದದ ಮೇಲಿನ ಅಂಕಿ–ಅಂಶ ಮಾತ್ರವೇ ಅಲ್ಲ. ಅವು ಜನರ ಅನುಭವಕ್ಕೆ ನೇರವಾಗಿ ತಟ್ಟುವಂಥವು. ಹೀಗಾಗಿ, ವೈಫಲ್ಯಕ್ಕೆ ಕಾರಣವೇನು ಎಂಬುದನ್ನು ಆರ್‌ಬಿಐ, ಸಾರ್ವಜನಿಕರಿಗೆ ತಿಳಿಸುವುದು ಉತ್ತಮ.

ಹಣದುಬ್ಬರದ ತೀವ್ರ ಹೆಚ್ಚಳದ ಕಾರಣದಿಂದಾಗಿ ಜಗತ್ತಿನ ಕೆಲವು ದೇಶಗಳು ಆರ್ಥಿಕ ಹಿಂಜರಿತದ ಭೀತಿ ಎದುರಿಸುತ್ತಿವೆ. ತಾನು ಈಗಾಗಲೇ ಆರ್ಥಿಕ ಹಿಂಜರಿತದ ಸ್ಥಿತಿಯಲ್ಲಿ ಇರುವುದಾಗಿ ಬ್ರಿಟನ್‌ ಹೇಳಿದೆ. ಅಮೆರಿಕದಲ್ಲಿ ಕೂಡ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಇದೆ. ಆದರೆ, ದೇಶಿ ಬೇಡಿಕೆ ಯನ್ನು ಆಧರಿಸಿ ಮುನ್ನಡೆಯುತ್ತಿರುವ ಭಾರತಕ್ಕೆ ಆರ್ಥಿಕ ಹಿಂಜರಿತದ ಭೀತಿ ಇಲ್ಲ ಎಂದು ಕೆಲವು ಸಂಸ್ಥೆಗಳು, ಹಲವು ಮಂದಿ ಅರ್ಥಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಈ ಸಂಸ್ಥೆಗಳು ಹಾಗೂ ತಜ್ಞರ ಮಾತುಗಳು ಭರವಸೆ ಮೂಡಿಸುವಂಥವು. ಅಲ್ಲದೆ, ಈಗಿನ ಜಿಡಿಪಿ ಬೆಳವಣಿಗೆ ದರವು ಆರ್‌ಬಿಐ ಅಂದಾಜಿಗೆ ಅನುಗುಣವಾಗಿಯೇ ಇದೆ. ಪ್ರಮುಖ ಅರ್ಥ ವ್ಯವಸ್ಥೆಗಳ ಪೈಕಿ ಅತ್ಯಂತ ವೇಗವಾಗಿ ಬೆಳ ವಣಿಗೆ ಹೊಂದುತ್ತಿರುವ ಅರ್ಥ ವ್ಯವಸ್ಥೆ ಎಂಬ ಹೆಗ್ಗಳಿಕೆ ಭಾರತದ್ದೇ ಆಗಿದೆ. ಹೀಗಿದ್ದರೂ, ಜಿಡಿಪಿ ಬೆಳವಣಿಗೆ ತಗ್ಗಿರುವುದನ್ನು ಸಹಜವೆಂಬಂತೆ ಸ್ವೀಕರಿಸಬಾರದು. ಬಂಡವಾಳ ವೆಚ್ಚ, ಉದ್ಯೋಗ ಸೃಷ್ಟಿ ಯಂತಹ ಕೆಲಸಗಳಿಗೆ ಆದ್ಯತೆ ನೀಡಬೇಕು. ತಯಾರಿಕಾ ಚಟುವಟಿಕೆಗಳಲ್ಲಿ ಖಾಸಗಿ ವಲಯವು ಹೆಚ್ಚು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT