ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ– ಪೊಲೀಸ್‌: ಗೃಹ ಸಚಿವರ ಮಾತು ಆಕ್ರೋಶವೋ ಅಸಹಾಯಕತೆಯೋ?

Last Updated 5 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ರಾಜ್ಯದ ಗೃಹ ಸಚಿವರು ತಮ್ಮ ಇಲಾಖೆಯ ಕುರಿತು ಆಡಿದ ಮಾತೊಂದು ಈಗ ಎಲ್ಲೆಡೆ ಪರ- ವಿರೋಧದ ಚರ್ಚೆಗೆ ಕಾರಣವಾಗಿದೆ. ಚಿಕ್ಕಮಗಳೂರಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಗೆ ತಮ್ಮ ಬೆಂಬಲಿಗರ ಮುಂದೆಯೇ ದೂರವಾಣಿ ಕರೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಲಂಚ ತಗೊಂಡು ನಾಯಿ ಹಂಗೆ ಬಿದ್ದಿರ್ತಾರೆ. ಪೊಲೀಸರಿಗೊಂದು ಆತ್ಮಗೌರವ ಬೇಕಲ್ರೀ. ಕೆಟ್ ಹಾಳಾಗಿ ಹೋಗಿದ್ದಾರೆ ಪೊಲೀಸರು. ಕೈತುಂಬಾ ಸಂಬಳ ಕೊಡ್ತಿದೀವಿ. ಯಾವನಿಗೂ ಸಂಬಳದಲ್ಲಿ ಬದುಕಬೇಕು ಅಂತ ಇಲ್ಲ. ಎಂಜಲು ಕಾಸು ತಿಂದು ಬದುಕ್ತಾರೆ. ಯೋಗ್ಯತೆ ಇಲ್ದಿದ್ರೆ ಯೂನಿಫಾರ್ಮ್ ಬಿಚ್ಚಿಟ್ಟು ಸಾಯಲಿ’ ಎಂದು ಹೇಳಿರುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆದಿರುವ ದನ ಕಳ್ಳಸಾಗಣೆ ದಂಧೆಯನ್ನು ತಡೆಯುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎನ್ನುವುದು ಸಚಿವರ ಮಾತಿನ ಹಿನ್ನೆಲೆ. ತಮ್ಮದೇ ಇಲಾಖೆಯ ಅಧಿಕಾರಿಗಳ ವಿರುದ್ಧ ಸಚಿವರು ಹೀಗೆ ಕಟು ಮಾತುಗಳಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದು ಏನನ್ನು ಸೂಚಿಸುತ್ತದೆ? ತಮ್ಮ ಇಲಾಖೆಯಲ್ಲಿ ಅಧಿಕಾರಿಗಳ ಲಂಚಗುಳಿತನವನ್ನು ತಡೆಯಲು ತಮಗೆ ಆಗಿಲ್ಲ ಎಂಬ ಸಚಿವರ ಅಸಹಾಯಕತೆಯೇ ಆಕ್ರೋಶದ ರೂಪದಲ್ಲಿ ಹೊರಬಂದಿದೆಯೇ? ಅಥವಾ ಗೃಹ ಇಲಾಖೆಯನ್ನು ದಕ್ಷತೆಯಿಂದ ನಿರ್ವಹಿಸಲು ಸಚಿವರಿಗೆ ಆಡಳಿತ ಕೌಶಲದ ಕೊರತೆ ಏನಾದರೂ ಕಾಡುತ್ತಿದೆಯೇ? ಒಂದು ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ಲಂಚ ತೆಗೆದುಕೊಂಡು ದನಕಳ್ಳರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಅದನ್ನು ಬಿಡಿ ಪ್ರಕರಣವಾಗಿ ನಿರ್ವಹಿಸಬೇಕಿರುವುದು ಸಚಿವರ ಜವಾಬ್ದಾರಿ. ಅಂತಹ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕೈಗೊಳ್ಳುವ ಕ್ರಮದ ಬಗ್ಗೆ ರಾಜ್ಯದ ಪೊಲೀಸ್ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟು, ಅದು ಜಾರಿಯಾಗುವಂತೆ ಸಚಿವರು ನೋಡಿಕೊಳ್ಳಬೇಕು. ಅದುಬಿಟ್ಟು ಪಕ್ಷದ ಕಾರ್ಯಕರ್ತರ ಮುಂದೆ ಪೊಲೀಸ್ ಅಧಿಕಾರಿಯೊಬ್ಬರಿಗೆ ವಾಚಾಮಗೋಚರ ಬೈದರೆ ಇಲಾಖೆಯಲ್ಲಿನ ಲಂಚಗುಳಿತನ ನಿಲ್ಲುವುದೇ? ಅಥವಾ ಗೃಹ ಇಲಾಖೆಯಲ್ಲಿ ಸಚಿವರ ಸೂಚನೆಗಳನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲವೇ?

ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ತಮ್ಮ ಈ ದೂರವಾಣಿ ಕರೆಯ ವಿಡಿಯೊ ಬಹಿರಂಗವಾದ ಬಳಿಕ ಸಚಿವರು ಸ್ಪಷ್ಟೀಕರಣವೊಂದನ್ನು ನೀಡಿದ್ದಾರೆ. ‘ನಾನು ರಾಜ್ಯದ ಎಲ್ಲ ಪೊಲೀಸರ ಬಗ್ಗೆ ಅವಹೇಳನಕಾರಿಯಾಗಿ ಮಾತ ನಾಡಿಲ್ಲ. ಒಂದು ಅಮಾನವೀಯ ಕೃತ್ಯ ತಡೆಯಲು ವಿಫಲರಾದವರ ಬಗ್ಗೆ ಕೋಪದಿಂದ ಮಾತನಾಡಿರಬಹುದು. ಕರ್ನಾಟಕದ ಪೊಲೀಸ್‌ ಪಡೆಗೆ ದೇಶದಲ್ಲೇ ಅತ್ಯುತ್ತಮ ಪಡೆ ಎಂಬ ಹೆಗ್ಗಳಿಕೆ ಇದೆ. ಅದಕ್ಕಾಗಿ ಹೆಮ್ಮೆಪಡುತ್ತೇನೆ’ ಎಂದು ಸ್ಪಷ್ಟೀಕರಣದಲ್ಲಿ ಅವರು ವಿವರಿಸಿದ್ದಾರೆ. ಸ್ಪಷ್ಟೀಕರಣ ಏನೇ ನೀಡಿದರೂ ಸಚಿವರ ಹೇಳಿಕೆಯ ಅಡ್ಡಪರಿಣಾಮ ಪೊಲೀಸ್ ಪಡೆಯ ಮೇಲೆ ಆಗಿಯೇ ಆಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಹೇಗೆ ಭ್ರಷ್ಟ ಅಧಿಕಾರಿಗಳು ಇದ್ದಾರೋ, ಅದೇ ರೀತಿ ಯಾವ ಮುಲಾಜೂ ಇಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ದಕ್ಷ ಅಧಿಕಾರಿಗಳೂ ಇದ್ದಾರೆ. ಸಚಿವ ಸ್ಥಾನದಂತಹ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಇಲಾಖೆಯ ಬಗ್ಗೆ ಮನಸ್ಸಿಗೆ ಬಂದಂತೆ ಪಕ್ಷದ ಕಾರ್ಯಕರ್ತರ ಎದುರು ಹೀಗೆ ನಾಲಗೆ ಹರಿಬಿಡುವುದು ಎಳ್ಳಷ್ಟೂ ಸರಿಯಲ್ಲ. ಸಾರ್ವಜನಿಕರ ಕಣ್ಣಿಗೆ ಇದು ಸಚಿವರ ಅಸಹಾಯಕತೆಯ ಪ್ರದರ್ಶನದಂತೆಯೇ ಕಂಡಿರುವ ಸಾಧ್ಯತೆ ಹೆಚ್ಚು. ಗೃಹ ಸಚಿವರ ಮಾತನ್ನೇ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ, ವ್ಯಾಪಕ ಲಂಚಗುಳಿತನದಲ್ಲಿ ತೊಡಗಿದ್ದಾರೆ ಎಂದು ಸಾರ್ವಜನಿಕರ ಮನಸ್ಸಿನಲ್ಲಿ ಗಟ್ಟಿಯಾಗಿ ನಾಟಿದರೆ ಆಡಳಿತ ಇನ್ನಷ್ಟು ಹದಗೆಡುತ್ತದೆ ಎನ್ನುವುದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕಿತ್ತು.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಸಚಿವರು ಮನಬಂದಂತೆ ನಾಲಗೆ ಹರಿಯಬಿಡುವುದು ಇದು ಮೊದಲೇನಲ್ಲ. ಹಲವು ಸಚಿವರು ಈ ರೀತಿ ಜವಾಬ್ದಾರಿಯಿಲ್ಲದೆ ಲಘುಧಾಟಿಯಲ್ಲಿ ಮಾತನಾಡಿರುವುದು ಇದೆ. ಗೃಹ ಸಚಿವ ಜ್ಞಾನೇಂದ್ರ ಅವರಿಗೂ ಇದು ಹೊಸತಲ್ಲ. ಈ ಹಿಂದೆ ಮೈಸೂರಿನಲ್ಲಿ ಕಾಲೇಜು ವಿದ್ಯಾರ್ಥಿ ಯೊಬ್ಬನನ್ನು ಥಳಿಸಿ ಆತನ ಜೊತೆಗಿದ್ದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲೂ ಗೃಹ ಸಚಿವರು ‘ಆ ಹೊತ್ತಿನಲ್ಲಿ ಅವರಿಬ್ಬರೂ ಅಲ್ಲಿಗೆ ಏಕೆ ಹೋಗಬೇಕಿತ್ತು?’ ಎಂದು ಹೇಳಿದ್ದರು. ಸಚಿವರ ಈ ಹೇಳಿಕೆ ಬೇಜವಾಬ್ದಾರಿತನದ್ದು ಎಂದು ವಿರೋಧ ಪಕ್ಷಗಳ ಮುಖಂಡರು ಮತ್ತು ಸಾರ್ವಜನಿಕರು ತೀವ್ರವಾಗಿ ಟೀಕಿಸಿದ್ದರು. ದೆಹಲಿಯಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಮೆ ಕೇಳುವಂತೆ ಸಚಿವರಿಗೆ ಸೂಚಿಸಿದ್ದಲ್ಲದೆ, ಪ್ರಕರಣದ ತನಿಖೆಯ ವಿವರಗಳನ್ನು ತಮಗೆ ನೇರವಾಗಿ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಮುಖ್ಯಮಂತ್ರಿ ಸೂಚನೆಯಂತೆ ತಮ್ಮ ಲಘುಮಾತಿಗೆ ಸಚಿವರು ವಿಷಾದ ವ್ಯಕ್ತಪಡಿಸಿದ ಬಳಿಕ ಆ ವಿವಾದ ತಣ್ಣಗಾಗಿತ್ತು. ಈಗ ಸಚಿವರು ಮತ್ತೆ ಬೇಜವಾಬ್ದಾರಿಯಿಂದ ತಮ್ಮದೇ ಇಲಾಖೆಯ ಬಗ್ಗೆ ಮಾತನಾಡಿರುವುದು ಪಕ್ಷ ಮತ್ತು ಸರ್ಕಾರಕ್ಕೆ ಇರಿಸುಮುರಿಸು ಉಂಟುಮಾಡುವಂತಹುದು. ಆಡಳಿತದ ಅನುಭವ ಹೊಂದಿರದ ಜ್ಞಾನೇಂದ್ರ ಅವರಿಗೆ ಗೃಹ ಖಾತೆಯಂತಹ ಮಹತ್ವದ ಜವಾಬ್ದಾರಿಯನ್ನು ಹೊರಿಸಿದಾಗಲೇ ನಾಡಿನ ಹಲವರ ಹುಬ್ಬೇರಿತ್ತು. ‌ಈಗ ಅವರ ನಡೆ–ನುಡಿಗಳಲ್ಲಿ ಆಡಳಿತದ ಅನುಭವ ಕೊರತೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ರಾಜ್ಯ ಪೊಲೀಸ್‌ ಇಲಾಖೆಯಲ್ಲಿ ಲಂಚಗುಳಿತನ ಇದೆ ಎಂಬ ಮಾತನ್ನು ಸಚಿವರೇ ಹೇಳಬೇಕಾಗಿಲ್ಲ. ಅದು, ಸಾರ್ವಜನಿಕರ ಅನುಭವಕ್ಕೆ ಬಂದು ದಶಕಗಳೇ ಆಗಿದೆ. ವ‌ರ್ಗಾವಣೆಯಲ್ಲಿ ಹಣದ ಪ್ರಭಾವ ಮತ್ತು ರಾಜಕೀಯ ಹಸ್ತಕ್ಷೇಪ ವಿಪರೀತಕ್ಕೆ ಹೋಗಿದೆ ಎಂಬುದು ಬರೀ ಟೀಕೆಯಲ್ಲ ಕಹಿಸತ್ಯ. ವರ್ಗಾವಣೆ ಎಂಬುದು ದಂಧೆಯ ಸ್ವರೂಪ ಪಡೆಯಲು ಕಾರಣ ಯಾರು? ಇದನ್ನು ಮೊದಲು ಕೊನೆಗೊಳಿಸಬೇಕು. ನೇಮಕಾತಿಯು ಹೆಚ್ಚು ಪಾರದರ್ಶಕವಾಗಿ ಇರುವಂತೆ ನೋಡಿ ಕೊಳ್ಳಬೇಕು. ಇಂತಹ ಉಪಕ್ರಮ ಮತ್ತು ಕಠಿಣ ನಿರ್ಧಾರಗಳ ಮೂಲಕಲಂಚಗುಳಿತನವನ್ನು ಮಟ್ಟ ಹಾಕಿ ಇಲಾಖೆಯು ಹೆಚ್ಚು ದಕ್ಷವಾಗಿ ಮತ್ತು ಜನಸ್ನೇಹಿಯಾಗಿ ಕೆಲಸ ಮಾಡುವಂತೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT