ಭಾನುವಾರ, ಮೇ 22, 2022
21 °C

ಭಾರತ– ಚೀನಾ ಗಡಿಯಲ್ಲಿ ಶಾಂತಿ: ಆರ್ಥಿಕ ಪ್ರಗತಿ, ಸಾಮರಸ್ಯಕ್ಕೆ ಅನಿವಾರ್ಯ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಭಾರತ–ಚೀನಾ ನಡುವೆ ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಸೃಷ್ಟಿಯಾಗಿದ್ದ ಬಿಕ್ಕಟ್ಟು ಪರಿಹಾರದ ಸೂಚನೆಗಳು ಕಾಣಿಸಿಕೊಂಡಿವೆ. ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ ಸಂಘರ್ಷಭರಿತ ಮುಖಾಮುಖಿ ಆರಂಭವಾದ ಒಂಬತ್ತು ತಿಂಗಳ ಬಳಿಕ, ಅಲ್ಲಿ ಶಾಂತಿ ನೆಲೆಸುವ ನಿರೀಕ್ಷೆ ಈಗ ಗರಿಗೆದರಿದೆ. ಸರೋವರದ ದಕ್ಷಿಣ ಮತ್ತು ಉತ್ತರ ದಂಡೆಯ ಪ್ರದೇಶಗಳು ಬಹಳ ಹಿಂದಿನಿಂದಲೂ ವಿವಾದಾತ್ಮಕವೇ ಆಗಿದ್ದವು. ಎರಡೂ ದೇಶಗಳ ಸೈನಿಕರು ಈ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದರು ಮತ್ತು ಗಸ್ತು ನಡೆಸುವ ಸಂದರ್ಭದಲ್ಲಿ ಹಲವು ಬಾರಿ ಘರ್ಷಣೆಯೂ ನಡೆದಿದೆ. ಗಡಿರೇಖೆಗಳು ಈ ಪ್ರದೇಶದಲ್ಲಿ ನಿಖರವಲ್ಲ ಎಂಬುದು ಈ ಸಂಘರ್ಷಕ್ಕೆ ಕಾರಣ ಎನ್ನಲಾಗು ತ್ತಿತ್ತು ಮತ್ತು ಇಂತಹ ಸಂಘರ್ಷಗಳು ಕೈ ಮೀರಿ ಹೋದದ್ದೂ ಇಲ್ಲ. ಆದರೆ, ಕಳೆದ ಮೇ ತಿಂಗಳಲ್ಲಿ ಚೀನಾ ತೋರಿದ ಆಕ್ರಮಣಕಾರಿ ವರ್ತನೆಯು ಪ್ಯಾಂಗಾಂಗ್‌ ಸರೋವರ ಪ್ರದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಸೃಷ್ಟಿಸಿತು. ಎರಡೂ ದೇಶಗಳ ನಡುವೆ ಚಿಗುರಿಕೊಳ್ಳುತ್ತಿದ್ದ ಉತ್ತಮ ಸಂಬಂಧದ ಮುಂದೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇರಿಸಿತು. ಎಂದಿನಂತೆ ಭಾರತದ ಯೋಧರು ಫಿಂಗರ್‌ 8 ಪ್ರದೇಶ ದವರೆಗೆ ನಡೆಸುತ್ತಿದ್ದ ಗಸ್ತನ್ನು ಚೀನಾದ ಯೋಧರು ತಡೆದರು. ಈ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಯೋಧರು ಮತ್ತು ಶಸ್ತ್ರಾಸ್ತ್ರವನ್ನು ಚೀನಾ ಸೇನೆಯು ನಿಯೋಜಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೇನೆ ಕೂಡ ಸರಿಸಮವಾದ ರೀತಿಯಲ್ಲಿ ಯೋಧರು ಮತ್ತು ಯುದ್ಧೋಪಕರಣಗಳನ್ನು ಗಡಿ ಸಮೀಪಕ್ಕೆ ಒಯ್ದು ಸಜ್ಜಾಗಿ ನಿಂತಿತು. ಸರೋವರದ ಉತ್ತರ ದಂಡೆಯ ಫಿಂಗರ್‌ 4 ಪ್ರದೇಶದ ಚೀನಾದ ನೆಲೆಗಳ ಅತಿ ಸಮೀಪದಲ್ಲಿರುವ ಹಲವು ಪರ್ವತ ಪ್ರದೇಶ ಗಳನ್ನು ಭಾರತದ ಸೇನೆಯು ವಶಕ್ಕೆ ಪಡೆಯಿತು. ಇಲ್ಲಿಂದ ಚೀನಾ ಸೈನಿಕರ ಚಲನವಲನಗಳ ಮೇಲೆ ನೇರವಾಗಿ ಕಣ್ಣಿಡಲು ಸಾಧ್ಯವಾಯಿತು. ಹೀಗಾಗಿಯೇ ಚೀನಾ ತನ್ನ ವಿಸ್ತರಣಾವಾದಿ ಮನೋಭಾವವನ್ನು ಕೈಬಿಟ್ಟು ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಸೈನಿಕರು ಮತ್ತು ಶಸ್ತ್ರಾಸ್ತ್ರವನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಬುಧವಾರ ಬೆಳಿಗ್ಗೆಯಿಂದಲೇ ಆರಂಭವಾಗಿದೆ ಎಂದು ಮೂಲಗಳು ಹೇಳಿವೆ. ಟ್ಯಾಂಕ್‌ಗಳು ಹಿಂದಿರುಗುತ್ತಿರುವ ವಿಡಿಯೊವನ್ನು ಕೂಡ ಭಾರತೀಯ ಸೇನೆ ಬಹಿರಂಗಪಡಿಸಿದೆ. ಭಾರತ–ಚೀನಾ ನಡುವೆ ಎಲ್‌ಎಸಿಯಲ್ಲಿ ಇನ್ನೂ ಹಲವು ವಿವಾದಗಳು ಇತ್ಯರ್ಥವಾಗಬೇಕಿವೆ. ಹಾಗಿದ್ದರೂ, ಹೆಚ್ಚು ಕಳವಳಕ್ಕೆ ಕಾರಣವಾಗಿದ್ದ ಪ್ಯಾಂಗಾಂಗ್‌ ಸರೋವರ ಬಿಕ್ಕಟ್ಟು ಪರಿಹಾರವಾಗುವ ಸೂಚನೆಗಳು ಸಿಕ್ಕಿವೆ. ಆದರೆ, ಕಳೆದ ಒಂಬತ್ತು ತಿಂಗಳಲ್ಲಿನ ವಿದ್ಯಮಾನಗಳು ಎರಡೂ ದೇಶಗಳ ನಡುವೆ ಇದ್ದ ನಂಬುಗೆಯ ಸಂಬಂಧಕ್ಕೆ ಕೊಟ್ಟ ಏಟು ಸಾಮಾನ್ಯದ್ದಲ್ಲ. ಗಾಲ್ವನ್‌ ಕಣಿವೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಕಳೆದ ಜೂನ್‌ನಲ್ಲಿ ನಡೆದ ಬಡಿದಾಟದಲ್ಲಿ ಭಾರತದ 20 ಯೋಧರು ಹುತಾತ್ಮರಾದರು. ನಂತರ, 45 ವರ್ಷಗಳಲ್ಲಿಯೇ ಮೊದಲ ಬಾರಿಗೆ ಗಡಿಯಲ್ಲಿ ಗುಂಡು ಹಾರಾಟ ನಡೆಯಿತು. ಗಡಿಯಲ್ಲಿನ ತಿಕ್ಕಾಟವು ವ್ಯಾಪಾರ ಸಂಬಂಧವನ್ನೂ ಹಾಳುಗೆಡವಿತು. ಚೀನಾ ಮೂಲದ ಹಲವಾರು ಆ್ಯಪ್‌ಗಳನ್ನು ಭಾರತವು ನಿಷೇಧಿಸಿತು. ಚೀನಾದ ಬಗ್ಗೆ ಭಾರತಕ್ಕೆ ಅಪನಂಬಿಕೆ ಇದೆ. ಮಾತುಕತೆಯ ಮೇಜಿನಲ್ಲಿ ಒಪ್ಪಿಗೆ ಸೂಚಿಸಿದ ಬಳಿಕ, ಒಪ್ಪಿತ ಅಂಶಗಳನ್ನು ಗಾಳಿಗೆ ತೂರುವ ನಡವಳಿಕೆಯನ್ನು ಚೀನಾ ಹಲವು ಬಾರಿ ತೋರಿದೆ. ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಮೂರು ಬಾರಿ ಒಪ್ಪಿಗೆ ಕೊಟ್ಟು, ಚೀನಾ ಅದನ್ನು ಪಾಲಿಸಿರಲಿಲ್ಲ ಎಂಬುದು ಭಾರತದ ಮನಸ್ಸಿನಲ್ಲಿ ಇನ್ನೂ ಇದೆ. ಈ ಬಾರಿ, ಒಂದೇ ದಿನದಲ್ಲಿ 200ಕ್ಕೂ ಹೆಚ್ಚು ಟ್ಯಾಂಕ್‌ಗಳನ್ನು ಚೀನಾ ತನ್ನ ಕಾಯಂ ನೆಲೆಗೆ ಒಯ್ದಿದೆ ಎಂಬ ವರದಿಗಳಿವೆ. ಪ್ಯಾಂಗಾಂಗ್ ಸರೋವರ ಪ್ರದೇಶವನ್ನು ಸೇನಾ ಚಟುವಟಿಕೆ ಮುಕ್ತವಾಗಿಸುವಲ್ಲಿ ಚೀನಾ ತ್ವರಿತವಾಗಿ ಕ್ರಮ ಕೈಗೊಂಡಿದೆ. ಈ ತ್ವರಿತಗತಿಯ ಹಿಂದೆ ಯಾವ ಷಡ್ಯಂತ್ರವೂ ಇಲ್ಲ ಎಂಬುದನ್ನು ಭಾರತವು ಖಚಿತಪಡಿಸಿಕೊಳ್ಳಲೇಬೇಕು. ಏಷ್ಯಾದ ಎರಡು ಪ್ರಬಲ ಮತ್ತು ಮಹತ್ವಾಕಾಂಕ್ಷಿ ದೇಶಗಳ ನಡುವಣ ಗಡಿಯಲ್ಲಿ ಶಾಂತಿ, ನೆಮ್ಮದಿ ನೆಲೆಸುವುದು ಈ ದೇಶಗಳ ಮತ್ತು ಇಡೀ ಜಗತ್ತಿನ ಆರ್ಥಿಕ ಪ್ರಗತಿ ಹಾಗೂ ಸಾಮರಸ್ಯದ ದೃಷ್ಟಿಯಿಂದ ಬಹಳ ಮುಖ್ಯ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು