ಖಾಲಿಸ್ತಾನಿ ಪ್ರತ್ಯೇಕತಾವಾದಿ ಹೋರಾಟಗಾರ ಹರದೀಪ್ ಸಿಂಗ್ ನಿಜ್ಜರ್ ಅವರನ್ನು ಬ್ರಿಟಿಷ್ ಕೊಲಂಬಿಯಾದಲ್ಲಿನ ಗುರುದ್ವಾರದ ಹೊರಭಾಗದಲ್ಲಿ ಜೂನ್‌ನಲ್ಲಿ ಹತ್ಯೆ ಮಾಡಿರುವುದರ ಹಿಂದೆ ಭಾರತ ಏಜೆಂಟರ ಕೈವಾಡ ಇದೆ ಎಂಬುದಕ್ಕೆ ತಮ್ಮಲ್ಲಿ ವಿಶ್ವಾಸಾರ್ಹ ಸಾಕ್ಷ್ಯ ಇದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಈ ಸ್ಫೋಟಕ ಆರೋಪವು ಎರಡೂ ದೇಶಗಳ ನಡುವಣ ಸಂಬಂಧದಲ್ಲಿ ತೀವ್ರವಾದ ಬಿರುಕನ್ನು ಸೃಷ್ಟಿಸಿದೆ. ಕೆನಡಾದಲ್ಲಿ ನೆಲೆಸಿರುವ ಭಾರತ ಮೂಲದ ಸಿಖ್ ಸಮುದಾಯದ ಕೆಲವರು ಖಾಲಿಸ್ತಾನಿ ಪ್ರತ್ಯೇಕತಾವಾದಿ ಚಟುವಟಿಕೆ ನಡೆಸುತ್ತಿರುವುದು ಭಾರತದ ಭದ್ರತೆಗೆ ಗಂಭೀರವಾದ ಅಪಾಯವನ್ನು ಒಡ್ಡಿದೆ. ಇಂತಹ ಚಟುವಟಿಕೆಯನ್ನು ಆ ದೇಶವು ಸಹಿಸಿಕೊಂಡಿರುವುದು ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಕೆಲವು ದಶಕಗಳಿಂದ ಬೀರುತ್ತಲೇ ಬಂದಿದೆ. ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ 2001ರ ಸೆಪ್ಟೆಂಬರ್ 11ರಂದು (9/11) ನಡೆದ ದಾಳಿಗೆ ಮೊದಲು ಪಶ್ಚಿಮದ ದೇಶಗಳು ಸಾಕ್ಷಿಯಾದ ಅತಿದೊಡ್ಡ ಭಯೋತ್ಪಾದನಾ ದಾಳಿಯ ಮೂಲ ಕೆನಡಾ ದೇಶವೇ ಆಗಿತ್ತು. ಅದು, 1985ರಲ್ಲಿ ಏರ್ ಇಂಡಿಯಾ ವಿಮಾನವೊಂದರ ಮೇಲೆ ನಡೆದ ಬಾಂಬ್ ದಾಳಿ. ಈ ವಿಮಾನದಲ್ಲಿ 329 ಮಂದಿ ಪ್ರಯಾಣಿಕರು ಇದ್ದರು. ‘ಕನಿಷ್ಕ ಬಾಂಬ್ ದಾಳಿ’ ಎಂದೇ ಗುರುತಿಸಲಾಗುವ ಈ ದಾಳಿಯ ಹಿಂದೆ ಇದ್ದದ್ದು ಕೆನಡಾದಲ್ಲಿ ಸಕ್ರಿಯವಾಗಿರುವ ಖಾಲಿಸ್ತಾನಿ ಭಯೋತ್ಪಾದನಾ ಸಂಘಟನೆಯಾದ ಬಬ್ಬರ್ ಖಾಲ್ಸಾ ಎಂದು ಭಾವಿಸಲಾಗಿದೆ. ಈ ದಾಳಿಯ ಸಂತ್ರಸ್ತರಲ್ಲಿ ಹೆಚ್ಚಿನವರು ಕೆನಡಾ ಪ್ರಜೆಗಳು. ಈ ದುರ್ಘಟನೆಯನ್ನು ಕೆನಡಾ ಅತ್ಯಂತ ಸುಲಭವಾಗಿ ಮರೆತುಬಿಟ್ಟಿದೆ. ಈ ಪ್ರಕರಣದ ತನಿಖೆಯನ್ನು ತೀರಾ ಕಳಪೆಯಾಗಿ ನಡೆಸುವ ಮೂಲಕ ಯಾರೊಬ್ಬರಿಗೂ ಶಿಕ್ಷೆಯಾಗದಂತೆ ನೋಡಿಕೊಳ್ಳಲಾಯಿತು ಎಂಬುದನ್ನು ಒಪ್ಪಿಕೊಳ್ಳುವುದಕ್ಕೆ ಕೂಡ ಆ ದೇಶವು ಹಲವು ವರ್ಷಗಳನ್ನೇ ತೆಗೆದುಕೊಂಡಿತ್ತು.
1980ರ ದಶಕದ ಬಳಿಕ, ಖಾಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರ ಹೋರಾಟವು ಮತ್ತೆ ತಲೆ ಎತ್ತುವ ಸೂಚನೆಗಳು ಕಾಣಿಸುತ್ತಿವೆ. ಆ ಕಾಲದ ಹಿಂಸಾತ್ಮಕ ತೀವ್ರವಾದ ಮತ್ತು ಭಯೋತ್ಪಾದನೆ ಹಾಗೂ ಅದನ್ನು ತಡೆಯಲು ಸರ್ಕಾರವು ಕೈಗೊಂಡ ಕ್ರಮಗಳು ಭಾರತದ ಮನಃಪಟಲದಲ್ಲಿ ಆಳವಾದ ಗಾಯಗಳನ್ನು ಉಳಿಸಿಹೋಗಿವೆ. ಈ ಸ್ಥಿತಿಯು ಮರುಕಳಿಸಬಾರದು ಎಂಬುದು ಭಾರತದ ಆಂತರಿಕ ಮತ್ತು ಬಾಹ್ಯ ಭದ್ರತಾ ಸಂಸ್ಥೆಗಳ ಉದ್ದೇಶವಾಗಿದೆ. ಸಿಖ್ ಸಮುದಾಯದ ಜನರು ಹೆಚ್ಚಾಗಿರುವ ಕೆನಡಾ, ಅಮೆರಿಕ ಮತ್ತು ಬ್ರಿಟನ್‌ಗೆ ಭಾರತವು ಈ ಕುರಿತು ಆಗಾಗ ಎಚ್ಚರಿಕೆಗಳನ್ನು ನೀಡುತ್ತಲೇ ಬಂದಿದೆ. ಆ ದೇಶಗಳಲ್ಲಿರುವ ಖಾಲಿಸ್ತಾನಿ ಹೋರಾಟಗಾರರು ಭಾರತಕ್ಕೆ ಬೆದರಿಕೆಯಾಗಬಹುದು ಎಂಬುದನ್ನೂ ಗಮನಕ್ಕೆ ತರಲಾಗಿದೆ. ಈ ದೇಶಗಳು ನೀಡಿದ ಪ್ರತಿಕ್ರಿಯೆಯು ಅಸಡ್ಡೆಯಿಂದಲೇ ಕೂಡಿತ್ತು. ಏಕೆಂದರೆ, ಈ ದೇಶಗಳಲ್ಲಿರುವ ಭಾರತದ ರಾಯಭಾರ ಕಚೇರಿಗಳ ಮೇಲೆ ನಡೆದ ದಾಳಿಗಳು, ರಾಜತಾಂತ್ರಿಕ ಅಧಿಕಾರಿಗಳಿಗೆ ಇರುವ ಬೆದರಿಕೆಯು ಇದನ್ನು ಪುಷ್ಟೀಕರಿಸುತ್ತದೆ. ಭಾರತಕ್ಕೆ ಇರುವ ಪ್ರತ್ಯೇಕತಾವಾದಿ ಬೆದರಿಕೆಗಳನ್ನು ಪಶ್ಚಿಮದ ದೇಶಗಳ ಗುಪ್ತಚರ ಸಂಸ್ಥೆಗಳು ಅಲ್ಲಗಳೆಯುತ್ತಲೇ ಬಂದಿವೆ. ಅಲ್ಪಸಂಖ್ಯಾತರನ್ನು ‘ತಾರತಮ್ಯ’ದಿಂದ ನಡೆಸಿಕೊಳ್ಳುತ್ತಿರುವುದನ್ನು ಮರೆಮಾಚಲು ಭಾರತವು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ಪ್ರೇಕ್ಷೆ ಮಾಡುತ್ತಿದೆ ಎಂದು ಈ ಸಂಸ್ಥೆಗಳು ಹೇಳಿವೆ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಣಾಮವಾಗಿ, ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಕಚೇರಿಯಲ್ಲಿದ್ದ ಗುಪ್ತಚರ ಅಧಿಕಾರಿಯನ್ನು ಉಚ್ಚಾಟನೆ ಮಾಡಲಾಗಿದೆ. ಇಲ್ಲಿರುವ ಕೆನಡಾ ಭದ್ರತೆ ಮತ್ತು ಗುಪ್ತಚರ ಸೇವಾ ಕೇಂದ್ರದ ಮುಖ್ಯಸ್ಥನನ್ನು ಉಚ್ಚಾಟನೆ ಮಾಡುವ ಮೂಲಕ ಭಾರತವು ತಿರುಗೇಟು ನೀಡಿದೆ. ಈ ನಡೆಯು ಎರಡೂ ದೇಶಗಳ ರಾಯಭಾರ ಕಚೇರಿಗಳ ನಡುವಣ ಸಹಕಾರವನ್ನು ಇನ್ನಷ್ಟು ಕ್ಲಿಷ್ಟಕರಗೊಳಿಸಿದೆ.
ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿ ಇರುವುದಕ್ಕಿಂತ ಹೆಚ್ಚು ಸಿಖ್ಖರು ತಮ್ಮ ಸಚಿವ ಸಂಪುಟದಲ್ಲಿ ಇದ್ದಾರೆ ಎಂದು ಟ್ರುಡೊ ಅವರು ಒಮ್ಮೆ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಆದರೆ, ಟ್ರುಡೊ ಅವರು ‘ಮತಬ್ಯಾಂಕ್ ರಾಜಕಾರಣ’ ಮಾಡುತ್ತಿದ್ದಾರೆ ಎಂಬುದರ ಪುಷ್ಟೀಕರಣವಲ್ಲದೆ ಇದು ಬೇರೇನೂ ಅಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ವ್ಯಂಗ್ಯವಾಡಿದ್ದರು. ಕೆನಡಾದಲ್ಲಿ 2025ರ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಹಾಗಾಗಿಯೇ, ಪ್ರತ್ಯೇಕತಾವಾದದ ವಿಚಾರದಲ್ಲಿ ಆ ದೇಶದಿಂದ ಹೆಚ್ಚಿನ ನೆರವನ್ನು ಭಾರತ ನಿರೀಕ್ಷಿಸುವಂತಿಲ್ಲ. ಬಿರುಕು ಮೂಡುವುದಕ್ಕೆ ಮುಂಚೆ, ಎರಡೂ ದೇಶಗಳ ನಡುವಣ ವ್ಯಾಪಾರ ಸಂಬಂಧವು ಉತ್ತಮವಾಗಿತ್ತು ಹಾಗೂ ಜನರ ನಡುವಣ ಸಂಪರ್ಕವು ಚೆನ್ನಾಗಿತ್ತು. ವಿಶೇಷವಾಗಿ, ಸಾವಿರಾರು ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಪ್ರತಿವರ್ಷವೂ ಆ ದೇಶಕ್ಕೆ ಹೋಗುತ್ತಿದ್ದಾರೆ. ಹಾಗಾಗಿ, ಸಂಬಂಧವು ಚೇತರಿಸಿಕೊಳ್ಳುವುದು ಕಷ್ಟದ ವಿಚಾರ ಏನಲ್ಲ. ತನ್ನ ಏಷ್ಯಾ–ಪೆಸಿಫಿಕ್ ಲೆಕ್ಕಾಚಾರವನ್ನು ಕೈಬಿಟ್ಟಿರುವ ಕೆನಡಾವು ಈಗ ಹಿಂದೂ ಮಹಾಸಾಗರ–ಪೆಸಿಫಿಕ್ ಕಾರ್ಯತಂತ್ರದ ಜೊತೆಗೂಡಿದೆ. ಎರಡೂ ದೇಶಗಳ ನಡುವಣ ಮುನಿಸು ಶಮನಕ್ಕೆ ಇದು ಹೆಚ್ಚು ವಿಸ್ತೃತವಾದ ವೇದಿಕೆ ಒದಗಿಸಲಿದೆ. ಎರಡೂ ದೇಶಗಳು ಇನ್ನಷ್ಟು ವಿಳಂಬವಾಗುವ ಮುಂಚೆಯೇ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.