ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮೇಲ್ಮನೆ: ಕಾಂಗ್ರೆಸ್‌ಗೆ ಚೈತನ್ಯ, ಬಿಜೆಪಿಗೆ ಪಾಠ, ಜೆಡಿಎಸ್‌ಗೆ ಆಘಾತ

Last Updated 16 ಜೂನ್ 2022, 20:05 IST
ಅಕ್ಷರ ಗಾತ್ರ

ವಿಧಾನಪರಿಷತ್ತಿನ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆದ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಒಟ್ಟು ನಾಲ್ಕು ಕ್ಷೇತ್ರಗಳ ಪೈಕಿ ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್‌ ತಲಾ ಎರಡು ಸ್ಥಾನಗಳನ್ನು ಗೆದ್ದುಕೊಂಡಿವೆ. ಎರಡು ಕ್ಷೇತ್ರಗಳ ಪ್ರಾತಿನಿಧ್ಯ ಹೊಂದಿದ್ದ ಜೆಡಿಎಸ್‌, ಎರಡನೇ ಸ್ಥಾನಕ್ಕೆ ಪೈಪೋಟಿ ನೀಡುವಲ್ಲಿಯೂ ಸೋತಿದೆ.

ಬಿಜೆಪಿ ಎರಡು ಕ್ಷೇತ್ರಗಳಲ್ಲೇನೋ ಗೆದ್ದಿದೆ. ಆದರೆ, ಚುನಾವಣೆಗಳಲ್ಲಿ ಗೆಲುವಿನ ಪತಾಕೆ ಹಾರಿಸಿ ಮುನ್ನಡೆಯುತ್ತಾ ತನಗೆ ಎದುರಾಳಿಯೇ ಇಲ್ಲ ಎಂದು ಬೀಗುತ್ತಿದ್ದ ಆಡಳಿತಾರೂಢ ಪಕ್ಷಕ್ಕೆ ಈ ಫಲಿತಾಂಶ ಸ್ವಯಂ ಬೆನ್ನುತಟ್ಟಿಕೊಳ್ಳುವ ಸಾಧನೆಯೇನಲ್ಲ. ಇತ್ತೀಚಿನ ವರ್ಷಗಳಲ್ಲಿ ಪದವೀಧರ–ಶಿಕ್ಷಕರ ಕ್ಷೇತ್ರಗಳಲ್ಲಿ ಗೆಲುವಿನ ಸಂಭ್ರಮವನ್ನೇ ಕಾಣದಿದ್ದ ಕಾಂಗ್ರೆಸ್‌ ಎರಡು ಕಡೆ ವಿಜಯ ಸಾಧಿಸಿದೆ. ವಿಧಾನಸಭೆ ಚುನಾವಣೆಗೆ 10 ತಿಂಗಳು ಬಾಕಿ ಇರುವಾಗ ಇಂತಹದೊಂದು ಫಲಿತಾಂಶ ಆ ಪಕ್ಷದ ನಾಯಕರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸಿಗೆ ಇಂಬು ಕೊಟ್ಟಿರುವುದಂತೂ ಹೌದು.

ಒಟ್ಟು 75 ಸದಸ್ಯ ಬಲದ ವಿಧಾನಪರಿಷತ್ತಿನಲ್ಲಿ ಈ ಫಲಿತಾಂಶದ ಮೂಲಕ ಬಿಜೆಪಿ 39 ಸದಸ್ಯ ಬಲ ಹೊಂದಿ, ಬಹುಮತ ಸಾಧಿಸಿದೆ. ಐದು ವರ್ಷಗಳ ವಿಧಾನಸಭೆ ಅವಧಿಯಲ್ಲಿ ಮೇಲ್ಮನೆಯಲ್ಲಿ ಬಹುಮತ ದಕ್ಕಿಸಿಕೊಳ್ಳುವ ಅವಕಾಶ ಆಡಳಿತಾರೂಢ ಪಕ್ಷಕ್ಕೆ ಸಾಮಾನ್ಯವಾಗಿ ಸಿಗುತ್ತದೆ. ಬಿಜೆಪಿಗೆ ಅದು ಸಿಕ್ಕಿರುವುದು ಹೆಗ್ಗಳಿಕೆಯೇನಲ್ಲ. ಬಹುಮತದ ಬಲವನ್ನು ಜನಹಿತಕ್ಕೆ, ಅತ್ಯುತ್ತಮ ಸಂಸದೀಯ ಹಾಗೂ ಸಾಂವಿಧಾನಿಕ ಚರ್ಚೆಗೆ ಬಳಸಿಕೊಳ್ಳಲು ಇದು ಬಿಜೆಪಿಗೆ ಸಿಕ್ಕ ಅವಕಾಶ.

ನಾಲ್ಕು ಕ್ಷೇತ್ರಗಳ ಪೈಕಿ ಚುನಾವಣೆ ಪೂರ್ವದಲ್ಲಿ ಬಿಜೆಪಿ ಎರಡು ಹಾಗೂ ಜೆಡಿಎಸ್ ಎರಡು ಸ್ಥಾನಗಳ ಪ್ರಾತಿನಿಧ್ಯವನ್ನು ಹೊಂದಿದ್ದವು. ಜೆಡಿಎಸ್‌ನಿಂದ ಗೆದ್ದು ಸಭಾಪತಿಯಾಗಿದ್ದ ಬಸವರಾಜ ಹೊರಟ್ಟಿ, ಸಭಾಪತಿ ಸ್ಥಾನಕ್ಕೆ ಕೊನೇ ಗಳಿಗೆಯಲ್ಲಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದರು. ಈ ಲೆಕ್ಕಾಚಾರದಲ್ಲಿ ಮೂರರಲ್ಲಿ ಗೆಲುವು ಸಾಧಿಸಬೇಕಾದ ಸವಾಲು ಬಿಜೆಪಿಗೆ ಇತ್ತು. ಈ ಹಿಂದೆ ಸತತ ಏಳು ಬಾರಿ ಗೆಲುವು ಕಂಡಿದ್ದ ಹೊರಟ್ಟಿ, ಈ ಬಾರಿಯೂ ಗೆದ್ದಿರುವುದು ಪಕ್ಷದ ಚಿಹ್ನೆಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆ ಎಂಬುದು ಸರ್ವವಿಧಿತ.

ಹೊರಟ್ಟಿ ಗೆಲುವು ತಮ್ಮದೇ ಎಂದು ಬಿಜೆಪಿಯವರು ಹೇಳಿಕೊಂಡರೂ ಮತ ಲೆಕ್ಕಾಚಾರ ನೋಡಿದರೆ, ದೊಡ್ಡ ಮಟ್ಟದ ಬದಲಾವಣೆ ಆಗದಿರುವುದು ಗೋಚರವಾಗುತ್ತದೆ. ಈ ಹಿಂದೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾಗ ಹೊರಟ್ಟಿ ಅವರು ಶೇ 50.07ರಷ್ಟು ಮತ ಪಡೆದಿದ್ದರೆ, ಈ ಬಾರಿ ಮತ ಗಳಿಕೆಯ ಪ್ರಮಾಣ ಶೇ 59.47ಕ್ಕೆ ಏರಿದೆ. ಅಲ್ಲಿಗೆ ಬಿಜೆಪಿ ಹೆಚ್ಚುವರಿಯಾಗಿ ಕೊಡಿಸಿದ ಲೆಕ್ಕ ಮೇಲ್ನೋಟಕ್ಕೇ ಸಿಗುತ್ತದೆ. ವಾಯವ್ಯ ಶಿಕ್ಷಕರ ಕ್ಷೇತ್ರ ಬಿಜೆಪಿ ವಶದಲ್ಲಿತ್ತು. ಕ್ಷೇತ್ರ ಪ್ರತಿನಿಧಿಸುತ್ತಿದ್ದ ಅರುಣ ಶಹಾಪುರ ಚುನಾವಣೆಗೆ ಸುದೀರ್ಘ ಅವಧಿಯಿಂದ ತಯಾರಿ ನಡೆಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಸಂಸದರು, ಇಬ್ಬರು ಸಚಿವರು ಸೇರಿ 13 ಶಾಸಕರು ಇದ್ದರೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಾಗಲಿಲ್ಲ.

ಕೊನೇ ಕ್ಷಣದಲ್ಲಿ ಕಣಕ್ಕೆ ಇಳಿದ ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ಅವರಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಶಿಕ್ಷಕರ ಸಮಸ್ಯೆಗಳಿಗೆ ಸದಾ ಧ್ವನಿಯಾಗುತ್ತಿದ್ದ ಅಭ್ಯರ್ಥಿಯನ್ನು ಎಲ್ಲ ಬಲ ಇದ್ದರೂ ಗೆಲ್ಲಿಸಿಕೊಳ್ಳುವಲ್ಲಿ ವಿಫಲವಾಗಿದ್ದು, ಬಿಜೆಪಿಯ ಒಗ್ಗಟ್ಟಿನ ಕೊರತೆಯನ್ನು ತೋರಿಸುತ್ತದೆ. ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಹಣಮಂತ ನಿರಾಣಿ ಗೆಲುವು ಸಾಧಿಸಿದ್ದಾರಾದರೂ ಅದೇನೂ ಸಲೀಸಿನ ದಾರಿಯಾಗಿರಲಿಲ್ಲ. ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಮಧು ಮಾದೇಗೌಡ ಆಯ್ಕೆಯಾಗಿದ್ದಾರೆ.

ಭಾರಿ ಲೆಕ್ಕಾಚಾರ ಹಾಕಿದ್ದ ಬಿಜೆಪಿಯು ಮೈ.ವಿ. ರವಿಶಂಕರ್ ಅವರನ್ನು ಕಣಕ್ಕೆ ಇಳಿಸಿತ್ತು. ಇಬ್ಬರು ಸಂಸದರು, ಹಲವು ಶಾಸಕರಿದ್ದರೂ ಬಿಜೆಪಿ ಗೆಲುವಿನ ದಡ ಮುಟ್ಟಲಿಲ್ಲ. ಮೊದಲೇ ಅಭ್ಯರ್ಥಿಯನ್ನು ಗೊತ್ತುಮಾಡಿ, ಚುನಾವಣೆಗೆ ಸಜ್ಜಾಗುವುದರ ಜೊತೆಗೆ ಒಮ್ಮನಸ್ಸಿನಿಂದ ದುಡಿದರೆ ಫಲ ನಿಶ್ಚಿತ ಎಂಬುದು ಆ ಕಾಂಗ್ರೆಸ್‌ ನಾಯಕರಿಗೆ ಫಲಿತಾಂಶ ಕೊಟ್ಟ ಪಾಠ. ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ವ್ಯಾಪ್ತಿಯ ಈ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿತ್ತು. ಆದರೆ, ಅದು ಇಲ್ಲಿ ಮೂರನೇ ಸ್ಥಾನಕ್ಕೆ ಇಳಿದಿದೆ. ದ್ವಂದ್ವ ನಿಲುವು, ಆಡಳಿತ ಪಕ್ಷಕ್ಕಿಂತ ವಿರೋಧ ಪಕ್ಷದ ಟೀಕೆಗೆ ಹೆಚ್ಚು ಸಮಯ ಮೀಸಲಿಡುವ ದಳಪತಿಗಳ ನಡೆ, ಆ ಪಕ್ಷದ ಮೇಲಿನ ವಿಶ್ವಾಸ ಕುಗ್ಗಿಸುತ್ತಿರುವುದನ್ನು ಫಲಿತಾಂಶ ಬಿಂಬಿಸಿದೆ. ಸ್ಥಳೀಯ ಸಂಸ್ಥೆಗಳಿಂದ ಪರಿಷತ್ತಿಗೆ ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಮಂಡ್ಯವನ್ನು ಕಾಂಗ್ರೆಸ್‌ ಕಿತ್ತುಕೊಂಡಿತ್ತು, ಮೈಸೂರಿನ ದ್ವಿಸದಸ್ಯ ಕ್ಷೇತ್ರದಲ್ಲಿ ಒಂದರಲ್ಲಿ ಮಾತ್ರ ಜೆಡಿಎಸ್ ಗೆದ್ದಿತ್ತು.

ಮತ್ತೊಂದು ಕಾಂಗ್ರೆಸ್ ಪಾಲಾಗಿತ್ತು. ತಮ್ಮದೇ ಮತಬ್ಯಾಂಕ್ ಎಂದು ಜೆಡಿಎಸ್‌ ನಾಯಕರು ದೃಢವಾಗಿ ನಂಬಿದ್ದ ಕಡೆಗಳಲ್ಲಿ ಕಾಂಗ್ರೆಸ್‌ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುತ್ತಿರುವುದು ಜೆಡಿಎಸ್‌ಗೆ ಆಘಾತವೇ ಸರಿ. ಯಾವುದೇ ಚುನಾವಣೆ ನಡೆಯಲಿ ಆಡಳಿತ ಪಕ್ಷ ಹೆಚ್ಚಿನ ಸ್ಥಾನ ಗೆದ್ದುಕೊಳ್ಳುವುದು ರೂಢಿ. ವಿವಾದಗಳ ಹುಯಿಲೆಬ್ಬಿಸಿದರೆ ಗೆಲುವು ಶಾಶ್ವತ ಎಂದು ನಂಬಿ ಕೂತಿರುವ ಬಿಜೆಪಿ ನಾಯಕರಿಗೆ ಪ್ರಜ್ಞಾವಂತ ಮತದಾರರುಈ ಚುನಾವಣೆ ಮೂಲಕ ಬೇರೊಂದು ಸಂದೇಶ ರವಾನಿಸಿದ್ದಾರೆ. ಪದವೀಧರರು, ಶಿಕ್ಷಕರು ಸೇರಿದಂತೆ ವಿದ್ಯಾವಂತ ಮಧ್ಯಮವರ್ಗ ಬಿಜೆಪಿ ಬೆನ್ನಿಗಿದೆ ಎಂಬುದು ಆ ಪಕ್ಷದ ನಾಯಕರ ವಿಶ್ವಾಸ. ಫಲಿತಾಂಶ ನೋಡಿದರೆ ಅದು ಪೂರ್ಣಸತ್ಯವಲ್ಲ ಎಂಬುದು ಅರಿವಿಗೆ ಬರುತ್ತದೆ.

ಸರ್ಕಾರದ ವರ್ಚಸ್ಸು ಕುಗ್ಗಿರುವುದು, ಬೆಲೆ ಏರಿಕೆಯ ಹೊಡೆತ, ಜನಸಾಮಾನ್ಯರ ನಿತ್ಯ ಸಂಕಟಗಳಿಗೆ ಸರ್ಕಾರ ಆಸರೆಯಾಗದೇ ಇರುವುದು ಈ ಚುನಾವಣೆಯ ಮೇಲೆ ಪರಿಣಾಮ ಬೀರಿರಬಹುದು. ಇದು ಬಿಜೆಪಿಗೆ ಎಚ್ಚರಿಕೆಯ ಗಂಟೆ. ಪೈಪೋಟಿಯ ಉಪದ್ವ್ಯಾಪಗಳನ್ನು ಬಿಟ್ಟು ಒಗ್ಗಟ್ಟು, ಮುಂದಾಲೋಚನೆಯಿಂದ ಚುನಾವಣೆ ಎದುರಿಸಿದರೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆ ಎಂಬುದು ಕಾಂಗ್ರೆಸ್‌ ನಾಯಕರಿಗೆ ಮತದಾರ ಕೊಟ್ಟ ಸಂದೇಶವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT