ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | CBI ತನಿಖೆಗೆ ಮುಕ್ತ ಅನುಮತಿ ವಾಪಸ್; ವಿಶ್ವಾಸ ಕುಂದಿರುವುದರ ಪರಿಣಾಮ

Published : 29 ಸೆಪ್ಟೆಂಬರ್ 2024, 23:30 IST
Last Updated : 29 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ಸಿಬಿಐ ನಿಷ್ಪಕ್ಷಪಾತವಾಗಿ ಮತ್ತು ದಕ್ಷವಾಗಿ ಇದ್ದಿದ್ದರೆ, ಯಾವ ರಾಜ್ಯಕ್ಕೂ ಈ ಸಂಸ್ಥೆಯ ಕುರಿತು ದೂರುಗಳು ಇರುತ್ತಿರಲಿಲ್ಲ

ಸಿಬಿಐಗೆ ತನಿಖೆ ನಡೆಸಲು ಇದ್ದ ಮುಕ್ತ ಅವಕಾಶವನ್ನು ವಾಪಸ್‌ ಪಡೆದು ಕರ್ನಾಟಕ ಸರ್ಕಾರವು ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಹೀಗೆ ಮಾಡಿದ ಇತರ ಹಲವು ರಾಜ್ಯಗಳ ಪಟ್ಟಿಗೆ ಕರ್ನಾಟಕವೂ ಸೇರಿಕೊಂಡಿದೆ. ಮುಡಾ ಬದಲಿ ನಿವೇಶನ ಹಂಚಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಕೂಲವಾದ ತೀರ್ಪು ನೀಡಿರುವ ಸಂದರ್ಭದಲ್ಲಿಯೇ ಸಿಬಿಐಗೆ ಸಂಬಂಧಿಸಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಎರಡು ವಿದ್ಯಮಾನಗಳ ನಡುವೆ ಯಾವುದೇ ನಂಟು ಇಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಹಾಗಿದ್ದರೂ ಕೇಂದ್ರೀಯ ತನಿಖಾ ಸಂಸ್ಥೆಗೆ ತನಿಖೆಗೆ ನೀಡಿದ್ದ ಒಪ್ಪಿಗೆಯನ್ನು ರಾಜ್ಯಗಳು ಹಿಂದಕ್ಕೆ ಪಡೆಯಲು ಇರುವ ಕಳವಳಗಳು ಮತ್ತು ಒತ್ತಡಗಳು ಏನು ಎಂಬುದರ ಕುರಿತು ಚಿಂತನೆ ನಡೆಸಬೇಕಿದೆ. ಈ ಕಳವಳಗಳು ಮೌಲಿಕವಾಗಿವೆ ಮತ್ತು ಸದ್ಯ ಚರ್ಚೆಯಲ್ಲಿರುವ ಪ್ರಕರಣಗಳ ಆಚೆಗೂ ಯೋಚನೆ ಮಾಡಬೇಕಿದೆ. ಯಾವುದೇ ಭ್ರಷ್ಟಾಚಾರ ಪ್ರಕರಣ ಕುರಿತು ಸಮಗ್ರವಾದ ತನಿಖೆ ನಡೆಯಬೇಕಾದುದು ಅಗತ್ಯ. ಸತ್ಯ ಏನು ಎಂಬುದು ಜನರಿಗೆ ತಿಳಿಯಬೇಕು. ಆದರೆ, ಸಿಬಿಐ ಅಂತಹ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಗಂಭೀರ ಕಳವಳಗಳು ಇರುವುದು ಸುಳ್ಳಲ್ಲ.

ಕಾನೂನು ಜಾರಿ ವ್ಯವಸ್ಥೆ ಮತ್ತು ತನಿಖೆ ನಡೆಸುವ ಸಂಸ್ಥೆಯ ಮೇಲೆ ಆರೋಪಿ ಮತ್ತು ಸಮಾಜಕ್ಕೆ ವಿಶ್ವಾಸ ಇರಬೇಕು. ಆದರೆ, ಸಿಬಿಐ ವಿಶ್ವಾಸ ಕಳೆದುಕೊಂಡಿದೆ. ಬಿಜೆಪಿಯೇತರ ಪಕ್ಷಗಳ ನೇತೃತ್ವದ ಸರ್ಕಾರ ಇರುವ ಕೆಲವು ರಾಜ್ಯಗಳು ಸಿಬಿಐಗೆ ತನಿಖೆ ನಡೆಸಲು ಇದ್ದ ಮುಕ್ತ ಅವಕಾಶವನ್ನು ಇತ್ತೀಚಿನ ದಿನಗಳಲ್ಲಿ ಹಿಂದಕ್ಕೆ ಪಡೆದಿವೆ. ಪಂಜಾಬ್‌, ಕೇರಳ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ, ಜಾರ್ಖಂಡ್‌ನಂತಹ ರಾಜ್ಯಗಳು ಈ ಯಾದಿಯಲ್ಲಿವೆ. ಈ ರಾಜ್ಯಗಳಲ್ಲಿ ತನಿಖೆ ನಡೆಸಬೇಕಿದ್ದರೆ ಸಿಬಿಐ ಪ್ರತಿಯೊಂದು ಪ್ರಕರಣದಲ್ಲಿಯೂ ರಾಜ್ಯ ಸರ್ಕಾರದ ಅನುಮತಿ ಕೋರಬೇಕಿದೆ. ಸಿಬಿಐ, ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ತನಿಖಾ ಸಂಸ್ಥೆ. ಕೇಂದ್ರ ಸರ್ಕಾರವು ಸಿಬಿಐಯನ್ನು ತನಗೆ ಬೇಕಾದಂತೆ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವುದಕ್ಕಾಗಿ ಮುಕ್ತ ಅವಕಾಶವನ್ನು ಹಿಂದಕ್ಕೆ ಪಡೆಯುವ ಅವಕಾಶವನ್ನು ರಾಜ್ಯಗಳಿಗೆ ಕಲ್ಪಿಸಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಈ ಹಕ್ಕು ಇದೆ. ನಿಷ್ಪಕ್ಷಪಾತವಾಗಿ ಮತ್ತು ದಕ್ಷವಾಗಿ ಸಿಬಿಐ ಇದ್ದಿದ್ದರೆ ಯಾವ ರಾಜ್ಯಕ್ಕೂ ಈ ಸಂಸ್ಥೆಯ ಕುರಿತು ದೂರುಗಳು ಇರುತ್ತಿರಲಿಲ್ಲ. 

ಸಿಬಿಐ ತನ್ನ ರಾಜಕೀಯ ಯಜಮಾನರ ರಾಜಕೀಯ ಹಿತಾಸಕ್ತಿ ಮತ್ತು ಅವರ ಮಾರ್ಗದರ್ಶನದಂತೆ ಕೆಲಸ ಮಾಡುತ್ತಿದೆಯೇ ಹೊರತು ಪ್ರಾಮಾಣಿಕವಾಗಿ ಮತ್ತು ನ್ಯಾಯಯುತವಾಗಿ ಕೆಲಸ ಮಾಡುತ್ತಿಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗಿದೆ. ಸಿಬಿಐ ಎಂಬುದು ಪಂಜರದೊಳಗಿನ ಗಿಳಿ ಎಂದು ಸುಪ್ರೀಂ ಕೋರ್ಟ್‌ 2013ರಲ್ಲಿ ಹೇಳಿತ್ತು. ದೆಹಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್‌  ವಿರುದ್ಧದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಇದೇ ಮಾತನ್ನು ಪುನರುಚ್ಚರಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಹಿಂದೆಂದೂ ಇಲ್ಲದ ರೀತಿಯಲ್ಲಿ ಬಿಜೆಪಿಯೇತರ ಪಕ್ಷಗಳ ಮುಖ್ಯಮಂತ್ರಿಗಳು ಮತ್ತು ನಾಯಕರನ್ನು ಸಿಬಿಐ ಬೆನ್ನುಹತ್ತಿದೆ. ಆದರೆ, ಕೇಂದ್ರದ ಆಡಳಿತಾರೂಢ ಪಕ್ಷದ ನಾಯಕರು ಅಥವಾ ಆ ‍ಪಕ್ಷದ ಜೊತೆಗೆ ಕೈಜೋಡಿಸಿದವರಿಗೆ ರಕ್ಷಣೆ ಕೊಡಲಾಗಿದೆ. ಪ್ರಕರಣಗಳಲ್ಲಿ ಅವರು ದೋಷಮುಕ್ತರಾಗಿದ್ದಾರೆ. ವ್ಯವಸ್ಥೆಯು ತನ್ನ ಒಳಗೆ ತನ್ನದೇ ಆದ ರಕ್ಷಣಾ ವ್ಯವಸ್ಥೆಯೊಂದನ್ನು ಹೊಂದಿರಬೇಕು. ಮುಕ್ತ ಅವಕಾಶವನ್ನು ಹಿಂದಕ್ಕೆ ಪಡೆಯುವುದು ಅಂತಹ ಒಂದು ರಕ್ಷಣಾ ವ್ಯವಸ್ಥೆ. ತಮ್ಮನ್ನು ಮತ್ತು ತಮ್ಮ ಪಕ್ಷದವರನ್ನು ನ್ಯಾಯಯುತವಲ್ಲದ ರೀತಿಯಲ್ಲಿ ಗುರಿ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಗಳ ಮುಖ್ಯಸ್ಥರು ಭಾವಿಸಿ, ಮುಕ್ತ ಅವಕಾಶವನ್ನು ಹಿಂದಕ್ಕೆ ಪಡೆದರೆ ರಾಜ್ಯ ಸರ್ಕಾರವನ್ನು ದೂರಲು ಸಾಧ್ಯವಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT