ಭಾನುವಾರ, ಸೆಪ್ಟೆಂಬರ್ 15, 2019
27 °C

ಜಮ್ಮು– ಕಾಶ್ಮೀರ: ಭಾರತದ ನಡೆಗೆ ಜಿ–7 ನಾಯಕರ ಸಹಮತ

Published:
Updated:
Prajavani

ಹವಾಮಾನ ಬದಲಾವಣೆ ಮತ್ತು ಡಿಜಿಟಲ್‌ ಪರಿವರ್ತನೆ ಕುರಿತು ಚರ್ಚಿಸಲು ಫ್ರಾನ್ಸ್‌ನಲ್ಲಿ ಇತ್ತೀಚೆಗೆ ಸೇರಿದ್ದ ಜಿ–7 ದೇಶಗಳ ಶೃಂಗಸಭೆಯಲ್ಲಿ ಜಮ್ಮು–ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿ ಭಾರತದ ನಿಲುವನ್ನು ಸ್ಪಷ್ಟಪಡಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ.

ವಿಶ್ವದ ಏಳು ಪ್ರಮುಖ ಆರ್ಥಿಕ ಶಕ್ತಿಶಾಲಿ ದೇಶಗಳ ಈ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಮೋದಿ, ಜಮ್ಮು– ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಜಿ–7 ದೇಶಗಳ ನಾಯಕರ ಸಂಶಯ ದೂರ ಮಾಡುವ ಜಾಣ್ಮೆ ತೋರಿದ್ದಾರೆ. ಮುಖ್ಯವಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ನಡೆಸಿದ ಮಾತುಕತೆಯಲ್ಲಿ, ಜಮ್ಮು–ಕಾಶ್ಮೀರದ ಬೆಳವಣಿಗೆಗಳ ಕುರಿತು ಉಂಟಾಗಿದ್ದ ಅನುಮಾನಗಳನ್ನು ನಿವಾರಿಸಲು ಅವರು ಯತ್ನಿಸಿದ್ದಾರೆ.

ಜಮ್ಮು–ಕಾಶ್ಮೀರದ ವಿವಾದದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಲು ತಾವು ಸಿದ್ಧ ಎಂದು ಟ್ರಂಪ್‌ ಈ ಹಿಂದೆ ಹೇಳಿಕೆ ನೀಡಿದ್ದರು. ಜೊತೆಗೆ ಅಮೆರಿಕದ ಪ್ರಮುಖ ರಾಜತಂತ್ರಜ್ಞರೊಬ್ಬರು ‘ಪ್ರಾದೇಶಿಕ ಉದ್ರಿಕ್ತತೆ ನಿವಾರಣೆಗೆ ಮತ್ತು ಜಮ್ಮು–ಕಾಶ್ಮೀರದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ನರೇಂದ್ರ ಮೋದಿಯವರು ಕೈಗೊಂಡಿರುವ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಅಧ್ಯಕ್ಷ ಟ್ರಂಪ್‌ ಬಯಸಿದ್ದಾರೆ’ ಎನ್ನುವ ಮಾತು ಆಡಿದ್ದರು. ‘ಜಮ್ಮು–ಕಾಶ್ಮೀರದ ವಿವಾದವನ್ನು ಬಗೆಹರಿಸಲು ನೆರವಾಗಬೇಕೆಂದು ಮೋದಿಯವರೇ ಕೋರಿದ್ದಾರೆ’ ಎಂದು ಒಸಾಕಾದಲ್ಲಿ ನಡೆದ ಜಿ–20 ಸಮ್ಮೇಳನದಲ್ಲಿ ಟ್ರಂಪ್‌ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಟ್ರಂಪ್‌ ಜೊತೆಗಿನ ಮೋದಿಯವರ ಮಾತುಕತೆ ಮಹತ್ವ ಪಡೆದುಕೊಂಡಿತ್ತು. ‘ಜಮ್ಮು– ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕ್ರಮ ನಮ್ಮ ಆಂತರಿಕ ವಿಷಯ. ಮೂರನೆಯವರು ಇದರಲ್ಲಿ ಮಧ್ಯಸ್ಥಿಕೆ ವಹಿಸುವುದಕ್ಕೆ ಅವಕಾಶವಿಲ್ಲ. ಅದೇನಿದ್ದರೂ ದ್ವಿಪಕ್ಷೀಯ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಭಾರತವು ನೀಡಿದ ಸ್ಪಷ್ಟನೆಯು ಜಿ–7 ರಾಷ್ಟ್ರಗಳಿಗೆ ಮನವರಿಕೆ ಆದಂತಿದೆ.

ಟ್ರಂಪ್‌ ಅವರೂ ಮಧ್ಯಸ್ಥಿಕೆ ಕುರಿತ ತಮ್ಮ ಈ ಹಿಂದಿನ ಹೇಳಿಕೆಯನ್ನು ಈ ಭೇಟಿಯಲ್ಲಿ ಪುನರುಚ್ಚರಿಸದೇ ಇರುವುದು ಇದನ್ನೇ ಸೂಚಿಸುತ್ತದೆ. ಆದರೆ ಉಗ್ರರಿಗೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿರುವ ಕಾರಣ, ಪಾಕ್‌ ಜೊತೆಗೆ ದ್ವಿಪಕ್ಷೀಯ ಮಾತುಕತೆಗೆ ಭಾರತವು ಸದ್ಯಕ್ಕೆ ಒಲವು ತೋರಿಸುತ್ತಿಲ್ಲ ಎನ್ನುವುದು ಸ್ಪಷ್ಟ. ಈ ಹಿನ್ನೆಲೆಯಲ್ಲಿ ಟ್ರಂಪ್‌ ಅವರು ಮತ್ತೆ ಮಧ್ಯಸ್ಥಿಕೆಯ ಮಾತನ್ನು ಆಡಲಿಕ್ಕಿಲ್ಲ ಎಂದು ಹೇಳಲಾಗದು. ಆದರೆ, ಮೋದಿ– ಟ್ರಂಪ್‌ ಭೇಟಿಯು ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರಕ್ಕೆ ಸಂಬಂಧಿಸಿದ ಮಾತುಕತೆಯಲ್ಲಿ ಉಂಟಾಗಿದ್ದ ಅಡೆತಡೆಗಳನ್ನು ಸ್ವಲ್ಪಮಟ್ಟಿಗೆ ನಿವಾರಣೆ ಮಾಡಿದಂತೆ ಕಾಣಿಸುತ್ತಿದೆ. ಸೆಪ್ಟೆಂಬರ್‌ನಲ್ಲಿ ಮೋದಿಯವರು ಅಮೆರಿಕ ಭೇಟಿಗೆ ತೆರಳುವ ಮುನ್ನ ವ್ಯಾಪಾರ ಒಪ್ಪಂದಗಳ ಕುರಿತು ಉಭಯದೇಶಗಳ ಪ್ರತಿನಿಧಿಗಳು ಭೇಟಿಯಾಗಿ ಚರ್ಚಿಸುವುದಕ್ಕೂ ಈಗ ವೇದಿಕೆ ಸಿದ್ಧವಾಗಿದೆ.

ಜಿ–7 ಶೃಂಗಸಭೆಯಲ್ಲಿ ಏಳು ದೇಶಗಳ ನಡುವಣ ಬಹುಪಕ್ಷೀಯ ವಿಷಯಗಳಿಗೆ ಸಂಬಂಧಿಸಿದ ಮಾತುಕತೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ರಷ್ಯಾವನ್ನು ಮತ್ತೆ ಜಿ–7 ಗುಂಪಿಗೆ ಸೇರಿಸಿಕೊಳ್ಳುವ ಪ್ರಸ್ತಾವಕ್ಕೆ ಬೆಂಬಲ ಸಿಕ್ಕಿಲ್ಲ. 2014ರಲ್ಲಿ ರಷ್ಯಾವನ್ನು ಈ ಗುಂಪಿನಿಂದ ಅಮಾನತುಗೊಳಿಸುವುದಕ್ಕೆ ಮುನ್ನ ಇದನ್ನು ಜಿ–8 ದೇಶಗಳ ಒಕ್ಕೂಟ ಎಂದೇ ಕರೆಯಲಾಗುತ್ತಿತ್ತು. ಹಾಗೆಯೇ ಇರಾನನ್ನು ಶೃಂಗಸಭೆಗೆ ಆಹ್ವಾನಿಸಲು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ತೋರಿಸಿದ ಉತ್ಸಾಹಕ್ಕೂ ಇತರ ಸದಸ್ಯರು ಸಮ್ಮತಿ ಸೂಚಿಸಿಲ್ಲ. ಅಣ್ವಸ್ತ್ರ ವಹಿವಾಟಿಗೆ ಸಂಬಂಧಿಸಿ ಇರಾನ್‌ನ ಧೋರಣೆಯನ್ನು ವಿರೋಧಿಸಿ ಜಿ–7 ಸದಸ್ಯರು ಈ ನಿಲುವು ಪ್ರಕಟಿಸಿದ್ದಾರೆ ಎನ್ನುವುದು ಸ್ಪಷ್ಟ.

ಒಂಬತ್ತು ವಿಶೇಷ ಆಹ್ವಾನಿತರ ಪೈಕಿ ಒಬ್ಬರಾಗಿದ್ದ ಮೋದಿಯವರು, ಹವಾಮಾನ ಬದಲಾವಣೆಗೆ ಸಂಬಂಧಿಸಿ ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ಸಭೆಗೆ ವಿವರವಾಗಿ ತಿಳಿಸಿದರು. ಆದರೆ ಪ್ಯಾರಿಸ್‌ ಒಪ್ಪಂದದಿಂದ ಅಮೆರಿಕ ಹೊರನಡೆದಿರುವ ಹಿನ್ನೆಲೆಯಲ್ಲಿ ಈ ಕುರಿತ ಚರ್ಚೆಗೆ ಅಲ್ಲಿ ಹೆಚ್ಚು ಮಹತ್ವ ಸಿಗಲಿಲ್ಲ. ಅಮೆಜಾನ್‌ ಕಾಡಿನ ಅಗ್ನಿ ಅನಾಹುತದ ಬಗ್ಗೆ ಚರ್ಚೆ ನಡೆದರೂ ಬ್ರೆಜಿಲ್‌ಗೆ ಆರ್ಥಿಕ ನೆರವು ನೀಡುವ ಪ್ರಸ್ತಾವವು ಬ್ರೆಜಿಲ್‌ ಮತ್ತು ಫ್ರಾನ್ಸ್‌ ಅಧ್ಯಕ್ಷರ ನಡುವಣ ಭಿನ್ನಮತದಿಂದಾಗಿ ಬಿದ್ದುಹೋಯಿತು. ಜಿ–7 ಗುಂಪಿನ ಇತಿಹಾಸದಲ್ಲೇ ಮೊದಲ ಬಾರಿಗೆ ಯಾವುದೇ ಜಂಟಿ ಹೇಳಿಕೆಯಿಲ್ಲದೆ ಶೃಂಗಸಭೆ ಮುಕ್ತಾಯ ಕಂಡದ್ದು, ಜಿ–7 ಗುಂಪಿನಲ್ಲಿ ಮೊದಲಿನ ಒಗ್ಗಟ್ಟು ಉಳಿದಿಲ್ಲ ಎನ್ನುವುದನ್ನು ಸೂಚಿಸಿದೆ. 

Post Comments (+)