ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮ, ಭ್ರಷ್ಟಾಚಾರದ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಲ್ಲಿರುವ ‘ಕರ್ನಾಟಕ ಲೋಕಸೇವಾ ಆಯೋಗ’ ಹಳೆಯ ತಪ್ಪುಗಳಿಂದ ಪಾಠ ಕಲಿಯುವಂತೆ ಕಾಣಿಸುತ್ತಿಲ್ಲ; ಕಳಂಕದ ಭಾರದಿಂದ ಹೊರಬರುವ ಪ್ರಾಮಾಣಿಕ ಪ್ರಯತ್ನಗಳನ್ನೂ ನಡೆಸುತ್ತಿಲ್ಲ. ಮೂರು ದಶಕಗಳಿಂದೀಚೆಗೆ ಆಯೋಗದ ನೇಮಕಾತಿಗಳಲ್ಲಿ ಅರ್ಹರಿಗೆ ಹುದ್ದೆ ಕೊಟ್ಟ ನಿದರ್ಶನಗಳು ಅಪರೂಪ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಂತೂ ಪ್ರತಿಬಾರಿಯೂ ವಿವಾದದಿಂದ ಹೊರತಾಗಿದ್ದೇ ಇಲ್ಲ. ಈ ಅವಧಿಯಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಮೂರೂ ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಿವೆ. ವಿರೋಧ ಪಕ್ಷದಲ್ಲಿದ್ದಾಗ ಕೆಪಿಎಸ್ಸಿಯ ಅಕ್ರಮ, ಸದಸ್ಯರ ಭ್ರಷ್ಟಾಚಾರದ ಬಗ್ಗೆ ಜೋರು ಧ್ವನಿಯಲ್ಲಿ ಅಬ್ಬರಿಸುವ ಜನಪ್ರತಿನಿಧಿಗಳು, ಅಧಿಕಾರದಲ್ಲಿದ್ದಾಗ ಆಯೋಗಕ್ಕೆ ಚಿಕಿತ್ಸೆ ನೀಡಲು ಮುಂದಾಗಿದ್ದಿಲ್ಲ. 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ 2024ರ ಫೆಬ್ರುವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಹಿಂದೆಲ್ಲ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ ಬಳಿಕ, ಆಯೋಗಕ್ಕೆ ಆರೋಪಗಳು ಸುತ್ತಿಕೊಳ್ಳುತ್ತಿದ್ದವು. ಈ ಬಾರಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳಲ್ಲಿನ ಲೋಪಗಳಿಂದ ಶುರುವಾದ ಪ್ರಮಾದಗಳ ಸರಮಾಲೆ, ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿಯವರೆಗೂ ಮುಂದುವರಿಯುತ್ತಿದೆ. ಪೂರ್ವಭಾವಿ ಪರೀಕ್ಷೆ 2024ರ ಆಗಸ್ಟ್ನಲ್ಲಿ ನಡೆಯಿತು. 1 ಮತ್ತು 2ನೇ ಪ್ರಶ್ನೆ ಪತ್ರಿಕೆಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಭಾಷಾಂತರ ಮಾಡುವಾಗ ತಪ್ಪುಗಳೇ ವಿಜೃಂಭಿಸಿದ್ದವು. ಪ್ರಶ್ನೆ ಮತ್ತು ಆಯ್ಕೆ ಉತ್ತರಗಳು ತದ್ವಿರುದ್ಧವಾಗಿದ್ದರೆ, ಕೆಲವು ಪ್ರಶ್ನೆಗಳು ಅರ್ಥವೇ ಆಗದಂತೆ ಇದ್ದವು. ಆಗ ಮಧ್ಯ ಪ್ರವೇಶಿಸಿದ ಸರ್ಕಾರ, ಮತ್ತೊಮ್ಮೆ ಪೂರ್ವಭಾವಿ ಪರೀಕ್ಷೆ ನಡೆಸುವಂತೆ ಸೂಚಿಸಿತು. ಅದೇ ಡಿಸೆಂಬರ್ನಲ್ಲಿ ಪರೀಕ್ಷೆ ನಡೆಯಿತು. 2025ರ ಮೇ ತಿಂಗಳಲ್ಲಿ ನಡೆದ ಮುಖ್ಯಪರೀಕ್ಷೆಯಲ್ಲಿ 5,700ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗಿಯಾಗಿದ್ದರು. ಅವರ ಪೈಕಿ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ (ಸಂದರ್ಶನಕ್ಕೆ) ಆಯ್ಕೆಯಾದ 1,152 ಅಭ್ಯರ್ಥಿಗಳ ಪಟ್ಟಿಯನ್ನು ಆಯೋಗವು ಮಾರ್ಚ್ 2ರಂದು ಬಿಡುಗಡೆ ಮಾಡಿತು. ಇದು ಪ್ರಕಟವಾಗುತ್ತಿದ್ದಂತೆ, ‘ಅರ್ಹತಾ ಪಟ್ಟಿ ಸಿದ್ಧಪಡಿಸುವ ವೇಳೆ ಭ್ರಷ್ಟಾಚಾರ ನಡೆದಿದ್ದು, ಒಂದು ಹುದ್ದೆಗೆ ಬಹುಕೋಟಿ ರೂಪಾಯಿ ಲಂಚ ಪಡೆಯಲಾಗಿದೆ’ ಎಂಬ ಆರೋಪ ಎದುರಾಯಿತು. ಹಾಗಿದ್ದರೂ, ವ್ಯಕ್ತಿತ್ವ ಪರೀಕ್ಷೆ ವೇಳಾಪಟ್ಟಿಯನ್ನು ಆಯೋಗ ಹೊರಡಿಸಿತು.

ಅರ್ಹತಾ ಪಟ್ಟಿ ಸಿದ್ಧಪಡಿಸುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿ ವರದಿ ನೀಡುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಆಯೋಗದ ಕಾರ್ಯದರ್ಶಿಗೆ ಸೂಚಿಸಿದರು. ‘ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ’ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ಪ್ರತಿಪಾದಿಸಿದರು. ಈ ಬೆಳವಣಿಗೆಗಳ ಮಧ್ಯೆಯೇ, ವ್ಯಕ್ತಿತ್ವ ಪರೀಕ್ಷೆಗೆ ನಿಗದಿಪಡಿಸಿದ್ದ ವೇಳಾಪಟ್ಟಿಯನ್ನು ಆಡಳಿತಾತ್ಮಕ ಕಾರಣಗಳಿಗೆ ಹಿಂಪಡೆಯಲಾಗಿದೆ ಎಂದು ಆಯೋಗ ಹೇಳಿದೆ. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವು ವಿಧಾನಸಭೆ ಕಲಾಪದಲ್ಲೂ ಪ್ರತಿಧ್ವನಿಸಿದೆ. ‘ಕೆಪಿಎಸ್ಸಿಯು ಉದ್ಯೋಗಾಕಾಂಕ್ಷಿಗಳ ಕನಸನ್ನೇ ಕೊಲ್ಲುವ ಕೇಂದ್ರ’ ಎಂದು ವಿರೋಧ ಪಕ್ಷದ ಸದಸ್ಯರು ಆತಂಕ ವ್ಯಕ್ತಪಡಿಸಿದರೆ, ‘ಆಯೋಗವನ್ನೇ ರದ್ದುಪಡಿಸಬೇಕು’ ಎಂದು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದ್ದಾರೆ. ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಕಲಾಪದಲ್ಲಿ ಚರ್ಚೆ ನಡೆಯುತ್ತಿರುವುದು ಹೊಸತೇನೂ ಅಲ್ಲ. 2025ರಲ್ಲಿ ನಡೆದ ಅಧಿವೇಶನದಲ್ಲಿ ನಡೆದ ಚರ್ಚೆಗೆ ಅದೇ ವರ್ಷದ ಮಾರ್ಚ್ 12ರಂದು ಉತ್ತರ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಆಯೋಗದಲ್ಲಿ ಪಾರದರ್ಶಕತೆ ತಂದು, ಉದ್ಯೋಗಾಕಾಂಕ್ಷಿಗಳಲ್ಲಿ ವಿಶ್ವಾಸ ತುಂಬಲು ಕಾಯ್ದೆಗಳಿಗೆ ತಿದ್ದುಪಡಿ ತಂದು, ನಿಯಮಗಳನ್ನು ಬದಲಾವಣೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಅಂತಹ ಸುಧಾರಣೆಯೇನೂ ಈ ಒಂದು ವರ್ಷದಲ್ಲಿ ಕಾಣಲಿಲ್ಲ. 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಹೊರಬಿದ್ದ ಬಳಿಕ ಆಯೋಗದ ಕಾರ್ಯದರ್ಶಿಗಳಾಗಿದ್ದ ಲತಾಕುಮಾರಿ, ರಾಕೇಶ್ಕುಮಾರ್, ರಮಣದೀಪ್ ಚೌಧರಿ, ಆರ್. ವಿಶಾಲ್, ಹೀಗೆ ನಾಲ್ವರನ್ನು ವರ್ಗಾವಣೆ ಮಾಡಲಾಗಿದೆ. ಕಾಣದ ಕೈಗಳ ಒತ್ತಡಕ್ಕೆ ಮಣಿದು ಪ್ರಮುಖ ಹುದ್ದೆಯಲ್ಲಿರುವವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಆಯೋಗದ ಆಡಳಿತ ಕಾರ್ಯದರ್ಶಿಯದಾದರೂ ಪರೀಕ್ಷೆಯ ಉಸ್ತುವಾರಿ ನಿಯಂತ್ರಕರದ್ದಾಗಿದೆ. ‘ನಾಲ್ಕು ವರ್ಷಗಳಿಂದ ಈ ಹುದ್ದೆಯಲ್ಲಿರುವ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ಈವರೆಗೂ ವರ್ಗಾವಣೆ ಮಾಡಿಲ್ಲ. ಪರೀಕ್ಷೆಗಳಲ್ಲಿನ ಲೋಪಕ್ಕೆ ಅವರೇ ಕಾರಣ’ ಎಂದು ವಿಧಾನಸಭೆಯಲ್ಲಿ ಶಾಸಕರೇ ಆಪಾದಿಸಿದ್ದಾರೆ.

ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿರುವುದರಿಂದಾಗಿ, ತಪ್ಪಿತಸ್ಥ ಸದಸ್ಯರ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಆದರೆ, ಹೊಸದಾಗಿ ಸದಸ್ಯರ ಹೆಸರನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುವಾಗ ಕಳಂಕರಹಿತರು, ಪ್ರಾಮಾಣಿಕರನ್ನು ಪರಿಗಣಿಸಲು ಸರ್ಕಾರ ಮುಂದಾಗಬೇಕು. ನಿವೃತ್ತ ನ್ಯಾಯಮೂರ್ತಿಗಳು, ಆಡಳಿತ ತಜ್ಞರ ಜತೆ ಸಮಾಲೋಚನೆ ನಡೆಸಿ ಆಯೋಗಕ್ಕೆ ಗಂಭೀರವಾದ ಚಿಕಿತ್ಸೆ ಮಾಡಲು ಸರ್ಕಾರ ಮುಂದಾಗಬೇಕಿದೆ. ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ರೂಪಿಸುವ ಮಾತುಗಳನ್ನು ಆಡುತ್ತಲೇ ಬಂದಿರುವ ಸರ್ಕಾರ, ಈಗಲಾದರೂ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.