ಪ್ರಧಾನಿ ನರೇಂದ್ರ ಮೋದಿ ಅವರು ಹವಾಮಾನ ವೈಪರೀತ್ಯ ಸಹಿಷ್ಣು, ಹೆಚ್ಚು ಇಳುವರಿ ಮತ್ತು ಅಧಿಕ ಪೋಶಕಾಂಶಯುಕ್ತ 109 ತಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಬೇಸಾಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮವನ್ನು ತಡೆಯುವ ದಿಸೆಯಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಹವಾಮಾನ ಬದಲಾವಣೆಗೆ ಬೇಸಾಯವೂ ಒಂದು ಕಾರಣವಾಗಿದ್ದರೂ ಅದೇ ಹವಾಮಾನ ಬದಲಾವಣೆಯಿಂದ ಬೇಸಾಯದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಬೇಸಾಯ ಪದ್ಧತಿಗಳೆಲ್ಲವೂ ಹವಾಮಾನಕ್ಕೆ ಅನುಗುಣವಾಗಿಯೇ ರೂಪುಗೊಂಡಿವೆ. ಆಯಾ ಪ್ರದೇಶದ ಬೆಳೆಯ ಸ್ವರೂಪ ಮತ್ತು ಇಳುವರಿ ಅಲ್ಲಿನ ಹವಾಮಾನದ ಮೇಲೆ ಅವಲಂಬಿತವಾಗಿದೆ. ಹವಾಮಾನದಲ್ಲಿ ಆಗುವ ಬದಲಾವಣೆಯು ಬೇಸಾಯ ಪ್ರದೇಶದ ವಿಸ್ತಾರವು ಕುಗ್ಗಲು ಕಾರಣವಾಗಬಹುದು. ಹಾಗೆಯೇ ಉತ್ಪಾದಕತೆ ಕಡಿಮೆ ಆಗಬಹುದು ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಕೆಲವು ಬೆಳೆಗಳನ್ನು ಬೆಳೆದು ಲಾಭ ಮಾಡಿಕೊಳ್ಳುವುದು ಸಾಧ್ಯವಾಗದೆಯೇ ಹೋಗಬಹುದು. ಹವಾಮಾನ ವೈಪರೀತ್ಯ ಸಹಿಷ್ಣು ಬೀಜಗಳ ಅಭಿವೃದ್ಧಿಯು ಕೃಷಿಯ ಮೇಲೆ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ತಡೆಯುವ ಮೊದಲ ಹಂತದ ಪ್ರಯತ್ನವಾಗಿದೆ. ಈಗ ಲಭ್ಯ ಇರುವ ಬಹುಪಾಲು ಬೀಜಗಳು ರೈತರೇ ತಲೆತಲಾಂತರಗಳಿಂದ ಪರೀಕ್ಷೆ ಮತ್ತು ಪ್ರಯೋಗಗಳ ಮೂಲಕ ಅಭಿವೃದ್ಧಿಪಡಿಸಿದಂತಹವು. ಆದರೆ, ಈಗ ಮತ್ತೊಂದು ಬಾರಿ ಈ ರೀತಿಯ ಪ್ರಯೋಗ ಸಾಧ್ಯವಿಲ್ಲ. ಅದಕ್ಕೆ ಬೇಕಾದ ಸಮಯ ನಮ್ಮಲ್ಲಿ ಇಲ್ಲ. ಏಕೆಂದರೆ, ಹವಾಮಾನ ಬದಲಾವಣೆಯ ಪರಿಣಾಮಗಳು ಈಗಾಗಲೇ ಆರಂಭವಾಗಿವೆ.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಒಟ್ಟಾಗಿ 61 ತಳಿಗಳನ್ನು ಅಭಿವೃದ್ಧಿಪಡಿಸಿವೆ. ಅವುಗಳಲ್ಲಿ 27 ತೋಟಗಾರಿಕಾ ತಳಿಗಳೂ ಸೇರಿವೆ. ಧಾನ್ಯಗಳು, ಕಿರುಧಾನ್ಯಗಳು, ಕಾಳುಗಳು, ಎಣ್ಣೆ ಬೀಜಗಳು, ಹಣ್ಣುಗಳು, ತರಕಾರಿಗಳು ಮತ್ತು ವಾಣಿಜ್ಯ ಬೆಳೆಗಳ ತಳಿಗಳು ಈ ಗುಂಪಿನಲ್ಲಿ ಇವೆ. ಕರಾವಳಿಯ ಉಪ್ಪು ನೀರಿನ ಪ್ರದೇಶಕ್ಕೆ ಹೊಂದುವ ಭತ್ತದ ಒಂದು ತಳಿಯನ್ನೂ ಅಭಿವೃದ್ಧಿಪಡಿಸಲಾಗಿದೆ. ಮುಂಗಾರು ಋತುವಿನಲ್ಲಿ ಭತ್ತ ಬೆಳೆಯುವ ಶೇ 25ರಷ್ಟು ಪ್ರದೇಶಕ್ಕೆ ಹವಾಮಾನ ವೈಪರೀತ್ಯ ಸಹಿಷ್ಣು ತಳಿಯನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಹವಾಮಾನ ವೈಪರೀತ್ಯ ಸಹಿಷ್ಣು ಗೋಧಿ ತಳಿಯು ಹೆಚ್ಚು ಹೆಚ್ಚು ಬಳಕೆ ಆಗುತ್ತಿದೆ. ಆದರೆ, ಭತ್ತದ ತಳಿಯ ಬಳಕೆ ಇನ್ನಷ್ಟೇ ಆರಂಭವಾಗಬೇಕಿದೆ. ಹವಾಮಾನ ವೈಪರೀತ್ಯ ಸಹಿಷ್ಣು ತಳಿಯ ಬಳಕೆಯಿಂದಾಗಿಯೇ ಗೋಧಿ ಇಳುವರಿ 2023–24ರಲ್ಲಿ ಏರಿಕೆಯಾಗಿದೆ. ಹವಾಮಾನ ಬದಲಾವಣೆಯಿಂದಾಗಿ ದೇಶದಲ್ಲಿ ಭತ್ತದ ಇಳುವರಿಯು 2030ರ ಹೊತ್ತಿಗೆ ಇಂಗಾಲದ ಹೊರಸೂಸುವಿಕೆಯು ಮಧ್ಯಮ ಪ್ರಮಾಣದಲ್ಲಿಯೇ ಇದ್ದರೆ ಶೇ 3ರಿಂದ ಶೇ 5ರಷ್ಟು ಇಳಿಕೆ ಆಗಬಹುದು; ಹೊರಸೂಸುವಿಕೆ ಪ್ರಮಾಣವು ಇನ್ನೂ ಹೆಚ್ಚಾದರೆ ಶೇ 31.3ರವರೆಗೆ ಇಳುವರಿ ಕೊರತೆ ಆಗಬಹುದು ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಬೆಳೆಯನ್ನು ವೈವಿಧ್ಯಗೊಳಿಸಬೇಕಾದ ದಿಸೆಯಲ್ಲಿಯೂ ನಾವು ಯೋಚಿಸಬೇಕಾಗಿದೆ. ಅತಿ ಹೆಚ್ಚು ನೀರು ಬೇಕಾಗಿರುವ ಭತ್ತದಂತಹ ಬೆಳೆಗಳ ಬದಲು ಕಡಿಮೆ ನೀರು ಸಾಕಾಗುವ ಮಿತವ್ಯಯಕರವಾದ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಬೇಕಾಗಿದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕನಿಷ್ಠಗೊಳಿಸಲು ಬೆಳೆ ವೈವಿಧ್ಯಗೊಳಿಸುವಿಕೆ ಒಂದು ಮಹತ್ವದ ಕ್ರಮ ಎಂದು ಪರಿಗಣಿಸಲಾಗಿದೆ. ನೀರು ಉಳಿಸುವಿಕೆ, ಅರಣ್ಯ ರಕ್ಷಣೆಯಂತಹ ಹಲವು ಕಾರ್ಯಕ್ರಮಗಳನ್ನು ಸರ್ಕಾರವು ಆರಂಭಿಸಿದೆ. ಸಾವಯವ ಕೃಷಿಗೂ ಉತ್ತೇಜನ ನೀಡಲಾಗಿದೆ. ಆದರೆ, ಹವಾಮಾನ ಬದಲಾವಣೆಗೆ ಹೊಂದಿಕೊಳ್ಳುವ ಕೃಷಿ ಪದ್ಧತಿಗೆ ಸಂಬಂಧಿಸಿದ ಸಂಶೋಧನೆ ಮತ್ತು ವಿಧಾನಗಳ ಅಭಿವೃದ್ಧಿಯಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತವು ಹಿಂದೆ ಬಿದ್ದಿದೆ. ನಮ್ಮ ದೇಶದ ಭೌಗೋಳಿಕ ವೈವಿಧ್ಯ, ಬೆಳೆಯ ವಿಧಗಳು ಮತ್ತು ಹವಾಮಾನದಲ್ಲಿನ ವ್ಯತ್ಯಾಸದ ಕಾರಣಕ್ಕಾಗಿ ಹವಾಮಾನ ಬದಲಾವಣೆ ಮತ್ತು ಬೇಸಾಯಕ್ಕೆ ಸಂಬಂಧಿಸಿ ಹೆಚ್ಚು ಹೆಚ್ಚು ಸಂಶೋಧನೆಗಳನ್ನು ನಡೆಸುವುದು ಅನಿವಾರ್ಯವೇ ಆಗಿದೆ. ಹವಾಮಾನ ಬದಲಾವಣೆಯು ಬೇಸಾಯದ ಮೇಲೆ ಉಂಟು ಮಾಡುವ ಪರಿಣಾಮವು ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಹೆಚ್ಚು. ಏಕೆಂದರೆ, ಭಾರತದ ಗಣನೀಯ ಪ್ರಮಾಣದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಜೊತೆಗೆ, ಇಲ್ಲಿನ ಭಾರಿ ಜನಸಂಖ್ಯೆಗೆ ಆಹಾರ ಒದಗಿಸುವುದು ಕೂಡ ದೊಡ್ಡ ಸವಾಲು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.