ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಂತ್ರದ ಹಬ್ಬದಲ್ಲಿ ಭಾಗವಹಿಸೋಣ; ಪ್ರಜಾಪ್ರಭುತ್ವವನ್ನು ಗೆಲ್ಲಿಸೋಣ

Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂಬ ಹಿರಿಮೆಯುಳ್ಳ ಭಾರತದಲ್ಲಿ ಚುನಾವಣೆಗಿಂತಲೂ ಮಿಗಿಲಾದ ಹಬ್ಬ ಬೇರೊಂದಿಲ್ಲ. ಧರ್ಮ, ಜಾತಿ, ಲಿಂಗ, ಅಂತಸ್ತು ಎಂಬ ತರತಮಗಳಿಗೆ ಇಲ್ಲಿ ಯಾವುದೇ ಜಾಗವಿಲ್ಲ. ಸರ್ವರನ್ನೂ ಸಮನಾಗಿ ಕಾಣುವುದೇ ಈ ಹಬ್ಬದ ಜೀವಾಳ. ಸಾರ್ವತ್ರಿಕ ಚುನಾವಣೆಯ ರೂಪದಲ್ಲಿ ಆ ಹಬ್ಬ ಈಗ ಮತ್ತೆ ಬಂದಿದೆ.

ರಾಜ್ಯದಲ್ಲಿ ಮೊದಲ ಹಂತದಲ್ಲಿ ಗುರುವಾರ ಹಾಗೂ ಎರಡನೇ ಹಂತದಲ್ಲಿ ಮುಂಬರುವ ಮಂಗಳವಾರ ಚುನಾವಣೆ ನಡೆಯಲಿದೆ. ಅರ್ಹ ಮತದಾರರೆಲ್ಲ ಮತ ಚಲಾಯಿಸುವ ಮೂಲಕ ಪ್ರಜಾತಂತ್ರದ ತೇರನ್ನು ಎಳೆದರೆ ಹಬ್ಬಕ್ಕೆ ಕಳೆ. ಆದರೆ, ಅದೇಕೋ ವಿದ್ಯಾವಂತರು, ಸರ್ಕಾರಿ ಸವಲತ್ತುಗಳನ್ನು ಪಡೆಯುವವರು, ದೊಡ್ಡ ದೊಡ್ಡ ಉದ್ಯೋಗದಲ್ಲಿ ಇರುವವರು ಮತದಾನದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಹೆಚ್ಚು ಎಂಬ ಆರೋಪ ಇದೆ.

ಅಂತಹ ಆರೋಪದಲ್ಲಿ ಹುರುಳಿಲ್ಲ ಎಂಬುದು ಈ ಸಲ ಸಾಬೀತಾಗಲಿ. ಮತದಾನದ ಪ್ರಮಾಣ ಹೆಚ್ಚಾದಷ್ಟೂ ಪ್ರಜಾಪ್ರಭುತ್ವದಲ್ಲಿ ಮತದಾರನ ಧ್ವನಿ ಹೆಚ್ಚು ಗಟ್ಟಿಗೊಳ್ಳುತ್ತಾ ಹೋಗುತ್ತದೆ. ಚುನಾವಣಾ ರಜೆ ಸಿಕ್ಕಿತೆಂದು ಸಂಭ್ರಮಿಸಿ ಪ್ರವಾಸಕ್ಕೆ ಹೋಗುವವರು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು. ಮತದಾನದಿಂದ ದೂರ ಉಳಿದು ಆ ಬಳಿಕ ಚುನಾಯಿತ ಪ್ರತಿನಿಧಿಗಳ ಬಗ್ಗೆ ದೂರುವುದರಲ್ಲಿ ಅರ್ಥವಿಲ್ಲ.

ಮತದಾನವನ್ನು ಕಡ್ಡಾಯಗೊಳಿಸುವ ಮಾತುಗಳು ಆಗಾಗ ಕೇಳಿಬರುತ್ತಿವೆಯಾದರೂ ಭಾರತದಂತಹ ದೊಡ್ಡ ದೇಶದಲ್ಲಿ ಅಂತಹ ಕಾನೂನು ಮಾಡಿ, ಅನುಷ್ಠಾನಗೊಳಿಸುವುದು ಕಷ್ಟ. ಮತದ ಮಹತ್ವದ ಅರಿವನ್ನು ಪ್ರತಿಯೊಬ್ಬರಲ್ಲೂ ಮೂಡಿಸುವುದೊಂದೇ ಸದ್ಯದ ಸರಳ ಹಾದಿ. ‘ಕಣದಲ್ಲಿ ಇರುವವರು ಯಾರೂ ಯೋಗ್ಯರಲ್ಲ’, ‘ನನ್ನ ಒಂದು ಮತದಿಂದ ಫಲಿತಾಂಶದಲ್ಲಿ ಏನೂ ಬದಲಾವಣೆ ಆಗುವುದಿಲ್ಲ’ ಎಂಬಂತಹ ಸಿನಿಕತನ ಯಾರಿಗೂ ಬೇಡ. ‘ಮತ ಹಾಕುವುದು ನನ್ನ ಹೊಣೆಗಾರಿಕೆ’ ಎಂಬ ಕರ್ತವ್ಯಪ್ರಜ್ಞೆ ಇಂದಿನ ಜರೂರು. ಹೌದು, ಕಳೆದ ಎಪ್ಪತ್ತು ವರ್ಷಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆ ಅಳ್ಳಕಗೊಳ್ಳುತ್ತಲೇ ಬಂದಿದೆ. ಇತ್ತೀಚಿನ ದಿನಗಳಲ್ಲಿ ಅದರ ಮಟ್ಟ ಪಾತಾಳ ಕಂಡಿದ್ದು, ನೈತಿಕ ನೆಲೆಗಟ್ಟು ಸಹ ಶಿಥಿಲಗೊಂಡಿದೆ.

ಇದು, ಹೀಗೆಯೇ ಮುಂದುವರಿಯುವುದು ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆರೋಗ್ಯಕರವಲ್ಲ. ವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಮತದಾರನ ಪಾತ್ರವೇ ದೊಡ್ಡದು. ಯೋಗ್ಯ ಅಭ್ಯರ್ಥಿಗಳನ್ನು ಆರಿಸುವ ಮೂಲಕ ಈ ಪ್ರಕ್ರಿಯೆಗೆ ಮತದಾರ ಶಕ್ತಿ ತುಂಬಬೇಕು.

ದೇಶದ ಅಭಿವೃದ್ಧಿಯ ಪರಿಕಲ್ಪನೆಗಳ ಮೇಲೆ ನಡೆಯಬೇಕಿದ್ದ ಚುನಾವಣೆ ಚರ್ಚೆಗಳು ಹಾದಿ ತಪ್ಪಿರುವುದು ನಿಜ. ಆದರೆ, ವಿವೇಚನೆ ಬಳಸಿ ಮತ ಚಲಾಯಿಸುವ ಅಸ್ತ್ರ ಮತದಾರನ ಕೈಯಲ್ಲೇ ಇದೆ. ಕಣದಲ್ಲಿರುವ ಅಭ್ಯರ್ಥಿಗಳ ಗುಣಸ್ವಭಾವ, ಮುಂಗಾಣ್ಕೆ, ಇತಿಮಿತಿ, ಸಂಸತ್ತಿನಲ್ಲಿ ಅವರು ವಹಿಸಬಹುದಾದ ಪಾತ್ರ, ಸಂಸದೀಯ ಚರ್ಚೆಗಳಲ್ಲಿ ಪಾಲ್ಗೊಳ್ಳಬಹುದಾದ ಅವರ ಸಾಮರ್ಥ್ಯ... ಇವುಗಳನ್ನೆಲ್ಲಾ ತೂಗಿ ನೋಡಿ ‘ಇವರು ಸಮರ್ಥರು’ ಎಂದು ಖಾತರಿಪಡಿಸಿಕೊಂಡು ಯೋಗ್ಯರಿಗೆ ಮತ ಚಲಾಯಿಸಿ.

ಮುಂದಿನ ಐದು ವರ್ಷಗಳ ಆಡಳಿತ ಹೇಗಿರಬೇಕು ಎಂಬುದನ್ನು ನಿರ್ಧರಿಸಲು ಇದೊಂದು ಸದವಕಾಶ. ಹೀಗಾಗಿ ಭವಿಷ್ಯದ ಪರಿಣಾಮಗಳನ್ನು ಮನಗಂಡು ಮತದಾನ ಮಾಡಬೇಕು. ಆಮಿಷಗಳಿಗೆ ಒಳಗಾಗಿ ಮತ ಚಲಾಯಿಸುವುದು ತರವಲ್ಲ.ಅಷ್ಟೇ ಅಲ್ಲ, ಧರ್ಮ, ಜಾತಿ, ಹಣ ಹಾಗೂ ತೋಳ್ಬಲದ ಪ್ರಭಾವಗಳಿಗೂ ಮಣಿಯಬಾರದು. ಇಲ್ಲಿ ಗೆಲ್ಲಬೇಕಿರುವುದು ಪ್ರಜಾಪ್ರಭುತ್ವ. ಅದನ್ನು ಗೆಲ್ಲಿಸುವುದರಲ್ಲೇ ಜವಾಬ್ದಾರಿಯುತ ಮತದಾರನ ಗೆಲುವೂ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT