ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಹದಾಯಿ ಯೋಜನೆ– ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ

Last Updated 1 ಜನವರಿ 2023, 22:09 IST
ಅಕ್ಷರ ಗಾತ್ರ

ಹುಬ್ಬಳ್ಳಿ–ಧಾರವಾಡ, ಗದಗ, ನರಗುಂದ, ನವಲಗುಂದ ಸೇರಿದಂತೆ ಕಿತ್ತೂರು ಕರ್ನಾಟಕದ ಹದಿಮೂರು ಪಟ್ಟಣ ಪ್ರದೇಶಗಳು ಹಾಗೂ ನೂರಕ್ಕೂ ಅಧಿಕ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದ ಮಹದಾಯಿ (ಕಳಸಾ–ಬಂಡೂರಿ ನಾಲಾ) ವಿಸ್ತೃತ ಯೋಜನಾ ವರದಿಗೆ (ಡಿಪಿಆರ್‌) ಕೇಂದ್ರ ಜಲ ಆಯೋಗವು ಕೊನೆಗೂ ಅನುಮೋದನೆಯನ್ನು ನೀಡಿದೆ. ಯೋಜನೆಗೆ ಶಾಸನಬದ್ಧ ಅನುಮತಿಗಳನ್ನು ಪಡೆಯಲು ಇದೇ ರಹದಾರಿ. ಈ ಮಧ್ಯೆ, ಯೋಜನೆಯ ಅನುಷ್ಠಾನಕ್ಕಾಗಿ ಬೇಕಾದ 33 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ಅರಣ್ಯ ಇಲಾಖೆಯಿಂದಲೂ ಒಪ್ಪಿಗೆ ದೊರೆತಿದ್ದು, ಆ ಪ್ರಸ್ತಾವ ಕೂಡ ಅನುಮೋದನೆಗಾಗಿ ಕೇಂದ್ರ ಅರಣ್ಯ ಇಲಾಖೆಗೆ ಸಲ್ಲಿಕೆಯಾಗಿದೆ. ಕುಡಿಯುವ ನೀರಿನ ಯೋಜನೆ ಇದಾಗಿದ್ದರಿಂದ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯುವ ಪ್ರಮೇಯ ಬರುವುದಿಲ್ಲ. ಹೀಗಾಗಿ ಯೋಜನೆಯ ಅನುಷ್ಠಾನದ ಹಂತದಲ್ಲಿದ್ದ ಬಹುತೇಕ ಅಡೆತಡೆಗಳು ಈಗ ನಿವಾರಣೆ ಆದಂತಾಗಿವೆ. ಇನ್ನು ಯಾವುದೇ ವಿಳಂಬವಿಲ್ಲದೆ ಯೋಜನೆಯನ್ನು ಕಾರ್ಯಗತಗೊಳಿಸುವತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಪ್ರವೃತ್ತರಾಗಬೇಕು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ನಡೆದ ಪಾದಯಾತ್ರೆಯಲ್ಲಿ ಭಾಗವಹಿಸಿದ ಅನುಭವ ಇರುವ ಅವರಿಗೆ, ನರಗುಂದ ಭಾಗದಲ್ಲಿರುವ ನೀರಿನ ಬೇಡಿಕೆ ಎಂತಹದ್ದು ಎಂಬುದು ಚೆನ್ನಾಗಿ ಗೊತ್ತಿರಬೇಕು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಮಹದಾಯಿ ಹೋರಾಟವನ್ನು ರಾಜಕೀಯದ ಏಣಿಯಾಗಿ ಮಾಡಿಕೊಂಡವರು. ಯೋಜನೆಯ ಶೀಘ್ರ ಅನುಷ್ಠಾನದ ಹೊಣೆ ಅವರ ಮೇಲೂ ಇದೆ. ಕೇಂದ್ರದಿಂದ ಸಿಗಬೇಕಾದ ಇತರ ಅನುಮೋದನೆಗಳನ್ನು ಶೀಘ್ರವಾಗಿ ಕೊಡಿಸಲು ಅವರು ಪ್ರಯತ್ನಿಸಬೇಕು. ಕಿತ್ತೂರು ಕರ್ನಾಟಕದ ಜನ ಈ ಯೋಜನೆಯ ಅನುಷ್ಠಾನದಿಂದ ಸಿಗುವ ನೀರಿಗಾಗಿ ನಾಲ್ಕೂವರೆ ದಶಕಗಳಿಂದ ಕಾದಿದ್ದಾರೆ ಎನ್ನುವುದನ್ನು ಎಲ್ಲರೂ ನೆನಪಿಡಬೇಕು. ಎಲ್ಲ ಪಕ್ಷಗಳೂ ಮಹದಾಯಿ ಯೋಜನೆಯ ಹೆಸರಿನಲ್ಲಿ ರಾಜಕೀಯ ಮಾಡಿ, ಜನರ ಆಸೆಗೆ ತಣ್ಣೀರು ಎರಚುತ್ತಾ ಬಂದಿರುವುದು ಸುಳ್ಳಲ್ಲ. ಅಧಿಕಾರಸ್ಥರ ಮೈಮರೆವಿನಿಂದಾಗಿ ಆ ಭಾಗದ ಜನರ ಸಹನೆಯ ಕಟ್ಟೆ ಒಡೆದು, ಅವರು ವರ್ಷಗಟ್ಟಲೆ ಹೋರಾಟ ನಡೆಸಿದ್ದನ್ನೂ ಮರೆಯುವಂತಿಲ್ಲ.

ಮಹದಾಯಿ ಜಲ ವಿವಾದಗಳ ನ್ಯಾಯ ಮಂಡಳಿಯು ಕಳಸಾ–ಬಂಡೂರಿ ನಾಲಾ ಯೋಜನೆಗೆ 3.90 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ 2018ರ ಆಗಸ್ಟ್‌ 14ರಂದೇ ಆದೇಶ ಹೊರಡಿಸಿದೆ. ಯೋಜನೆಗೆ ಸಂಬಂಧಿಸಿದ ಕಡತವು ವರ್ಷಗಳವರೆಗೆ ಒಂದಿಂಚೂ ಕದಲಿರಲಿಲ್ಲ. ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ನಾಲ್ಕು ತಿಂಗಳಷ್ಟೇ ಬಾಕಿ ಇರುವಾಗ ಜಲ ಆಯೋಗದಿಂದ ಡಿಪಿಆರ್‌ಗೆ ದಿಢೀರ್‌ ಎಂದು ಅನುಮೋದನೆ ಸಿಕ್ಕಿದೆ. ಇದರ ಹಿಂದೆ ರಾಜಕೀಯ ಲೆಕ್ಕಾಚಾರ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹುಬ್ಬಳ್ಳಿಯಲ್ಲಿ ಸೋಮವಾರ (ಜ. 2) ಕಾಂಗ್ರೆಸ್‌ ಆಯೋಜಿಸಿರುವ ಮಹದಾಯಿ ಜನಾಂದೋಲನವೂ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವಂತಹುದೇ. ಜಲ ಆಯೋಗದ ಅನುಮೋದನೆ, ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಜನಾಂದೋಲನ– ಎರಡರ ಹಿಂದಿನ ರಾಜಕೀಯ ಏನೇ ಇರಲಿ, ಮಹದಾಯಿ ಯೋಜನೆ ಕಾಲಮಿತಿಯಲ್ಲಿ ಅನುಷ್ಠಾನಗೊಳ್ಳಬೇಕು ಎನ್ನುವುದು ಎಲ್ಲರೂ ಒಪ್ಪುವಂತಹ ವಿಚಾರ. ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗ ಶುರು ಮಾಡುವುದಾಗಿ ಮುಖ್ಯಮಂತ್ರಿಯವರೇನೋ ಪ್ರಕಟಿಸಿದ್ದಾರೆ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹೇಗೂ ₹ 500 ಕೋಟಿಯನ್ನು ಎತ್ತಿಟ್ಟಿದೆ. ಚುನಾವಣೆಯ ಕಾವು ಇನ್ನಷ್ಟು ಏರುವವರೆಗೆ ಕಾಲಹರಣ ಮಾಡದೆ ಎಷ್ಟು ಸಾಧ್ಯವೋ ಅಷ್ಟು ಬೇಗ ಕಾಮಗಾರಿಯನ್ನು ಆರಂಭಿಸಬೇಕು. ಹಾಗೆಯೇ ಕೇಂದ್ರದಲ್ಲಿ ಮತ್ತು ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳೇ ಇವೆ. ಮಹಾರಾಷ್ಟ್ರ ಸರ್ಕಾರದಲ್ಲೂ ಬಿಜೆಪಿ ಪಾಲುದಾರ ಪಕ್ಷ. ಈ ಸನ್ನಿವೇಶವನ್ನು ಬಳಸಿಕೊಂಡು ಮಹದಾಯಿ ಯೋಜನೆಗೆ ಸಂಬಂಧಿಸಿದ ಎಲ್ಲ ಕೋರ್ಟ್‌ ಪ್ರಕರಣಗಳನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಬೊಮ್ಮಾಯಿ ಹಾಗೂ ಜೋಶಿ ಅವರು ಪ್ರಯತ್ನಿಸಬೇಕು. ಮಹದಾಯಿ ಯೋಜನೆಗೆ 2002ರಲ್ಲಿಯೇ ಒಪ್ಪಿಗೆ ಸಿಕ್ಕಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಯೋಜನಾ ಪ್ರದೇಶದ ಜನರಿಗೆ ನೀರಿನ ಸೌಲಭ್ಯವೂ ಸಿಕ್ಕಿರುತ್ತಿತ್ತು. ಗೋವಾ ಸರ್ಕಾರ ತಕರಾರು ಎತ್ತಿದ್ದರಿಂದ ಬಿಜೆಪಿ ನೇತೃತ್ವದ ಆಗಿನ ಎನ್‌ಡಿಎ ಸರ್ಕಾರವು ಕೊಟ್ಟ ಅನುಮತಿಯನ್ನು ಹಿಂದಕ್ಕೆ ಪಡೆದಿತ್ತು. ನೀರು ವ್ಯರ್ಥವಾಗಿ ಹರಿದು ಸಮುದ್ರ ಪಾಲಾದರೂ ಪರವಾಗಿಲ್ಲ, ಪಕ್ಕದ ರಾಜ್ಯಕ್ಕೆ ಮಾತ್ರ ಸಿಗಬಾರದು ಎನ್ನುವ ಗೋವಾ ಸರ್ಕಾರದ ಧೋರಣೆ ಒಪ್ಪುವಂತಹದ್ದಲ್ಲ. ಅದನ್ನು ಶಾಸನಬದ್ಧವಾದ ಎಲ್ಲ ವೇದಿಕೆಗಳಲ್ಲೂ ಮನವರಿಕೆ ಮಾಡಿಕೊಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು. ಒಂದೊಂದು ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾದಾಗಲೂ ಯೋಜನಾ ವೆಚ್ಚ ಹಲವು ಪಟ್ಟು ಹೆಚ್ಚಿ ಸಾರ್ವಜನಿಕ ಹಣ ಪೋಲಾಗುತ್ತದೆ ಎಂಬುದನ್ನು ನೆನಪಿಡಬೇಕು. ಮಹದಾಯಿ ಯೋಜನೆಯೂ ಅದಕ್ಕೊಂದು ಜ್ವಲಂತ ಸಾಕ್ಷಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT