ಭಾನುವಾರ, ಫೆಬ್ರವರಿ 23, 2020
19 °C

ಸಂಪಾದಕೀಯ| ಗಗನಚುಂಬಿ ಕಟ್ಟಡಗಳ ನೆಲಸಮ; ಬಿಲ್ಡರ್‌ಗಳ ಕುಟಿಲಕೂಟಕ್ಕೆ ಪಾಠ

ಸಂಪಾದಕೀಯ Updated:

ಅಕ್ಷರ ಗಾತ್ರ : | |

Prajavani

ಕೇರಳದ ಕೊಚ್ಚಿಯಲ್ಲಿ ನಾಲ್ಕು ಗಗನಚುಂಬಿ ಲಕ್ಷುರಿ ಅಪಾರ್ಟ್‌ಮೆಂಟ್‌ಗಳನ್ನು ಸುಪ್ರೀಂ ಕೋರ್ಟ್‌ ಆದೇಶದಂತೆ ನೆಲಕ್ಕುರುಳಿಸಲಾಗಿದೆ. ಬೃಹತ್‌ ಕಟ್ಟಡ ನಿರ್ಮಾಣ ನಿಯಮ ಹಾಗೂ ಪರಿಸರ ರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದವರು ಯಾವತ್ತಿದ್ದರೂ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವೊಂದನ್ನು ಈ ಮೂಲಕ, ಸಂಬಂಧಿಸಿದ ಎಲ್ಲರಿಗೂ ಸುಪ್ರೀಂ ಕೋರ್ಟ್‌ ತಲುಪಿಸಿದೆ. 2006ರಲ್ಲೇ ಈ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಲಾಗಿತ್ತು. ಒಂದು ಕಟ್ಟಡವಂತೂ 20 ಅಂತಸ್ತುಗಳನ್ನು ಹೊಂದಿತ್ತು. ಈ ಕಟ್ಟಡಗಳ ಸಮುಚ್ಚಯದಲ್ಲಿ 340ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿದ್ದವು. ನೆಲಸಮಗೊಳಿಸಿದ ಈ ಫ್ಲ್ಯಾಟ್‌ಗಳ ಒಟ್ಟು ಮಾರುಕಟ್ಟೆ ಮೌಲ್ಯ ₹200 ಕೋಟಿ ಎನ್ನಲಾಗುತ್ತಿದೆ. ಪರಿಸರ ಸಮತೋಲನದ ಹಿನ್ನೆಲೆಯಲ್ಲಿ ಮಹತ್ವದ ಪಾತ್ರ ವಹಿಸುವ ಹಿನ್ನೀರಿನ ಪ್ರದೇಶಕ್ಕೆ ತಾಗಿಕೊಂಡೇ ಈ ಕಟ್ಟಡಗಳನ್ನು ಅಕ್ರಮವಾಗಿ ಕಟ್ಟಲಾಗಿತ್ತು. ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝಡ್‌) ನಿಯಮಗಳನ್ನೂ ಉಲ್ಲಂಘಿಸಲಾಗಿತ್ತು. ಬಿಲ್ಡರ್‌ಗಳು, ಸ್ಥಳೀಯ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕುಟಿಲಕೂಟ ಒಟ್ಟಿಗೆ ಸೇರದೇ ಇಂತಹ ನಿಯಮಬಾಹಿರ ಕಟ್ಟಡಗಳನ್ನು ನಿರ್ಮಿಸಲು ಸಾಧ್ಯವಿಲ್ಲ. ಕಾನೂನಿನ ಜಾಲದಲ್ಲಿ ಸಿಲುಕಿ ಮೊಕದ್ದಮೆಯ ತೀರ್ಪು ಬಂದದ್ದು ತಡ ಎನ್ನಿಸಿದರೂ ಈ ನ್ಯಾಯಬದ್ಧ ತೀರ್ಪಿನ ಮೂಲಕ ಆಳುವವರು ಮುಟ್ಟಿ ನೋಡಿಕೊಳ್ಳುವಂತಹ ಪಾಠವನ್ನು ಕೋರ್ಟ್‌ ಕಲಿಸಿದೆ.

ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ, ಕಟ್ಟಡಗಳಲ್ಲಿ ನೆಲೆಸಿರುವ ಜನರ ಕುರಿತು ಆಲೋಚಿಸಿ ಸಹಾನುಭೂತಿಯ ನೆಲೆಯಲ್ಲಿ ಕ್ರಮ ಕೈಗೊಳ್ಳುವುದೇ ಹೆಚ್ಚು. ಇಲ್ಲಿ ಫ್ಲ್ಯಾಟ್‌ ಗಳನ್ನು ಖರೀದಿಸಿದವರು ₹60 ಲಕ್ಷದಿಂದ ಒಂದು ಕೋಟಿಯವರೆಗೂ ಪಾವತಿಸಿದ್ದರು ಎನ್ನಲಾಗಿದೆ. ಬಿಲ್ಡರ್‌ಗಳು ಮಾಡಿರುವ ಅಕ್ರಮಕ್ಕೆ ಫ್ಲ್ಯಾಟ್‌ ನಿವಾಸಿಗಳು ಬೆಲೆ ತೆರಬೇಕಾದದ್ದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಕೆಲವರು ಎತ್ತಿದ್ದಾರೆ.  ಫ್ಲ್ಯಾಟ್‌ಗಳನ್ನು ಖರೀದಿಸುವವರೂ ಕಟ್ಟಡ ನಿರ್ಮಾಣ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳನ್ನು ಅರಿತುಕೊಳ್ಳದೆ ಖರೀದಿಸಬಾರದು ಎನ್ನುವುದನ್ನು ತೀರ್ಪು ಒತ್ತಿಹೇಳಿದೆ. ಕಟ್ಟಡದ ನೆಲಸಮ ಮತ್ತು ಪರಿಹಾರಕ್ಕೆ ಸರ್ಕಾರವು ಇಲ್ಲಿಯವರೆಗೂ ₹60 ಕೋಟಿಯಷ್ಟು ಖರ್ಚು ಮಾಡಿದೆ. ಕೆಡವಿದ ಬಳಿಕ 75 ಸಾವಿರ ಟನ್‌ಗಳಷ್ಟು ಕಬ್ಬಿಣ ಮತ್ತು ಕಾಂಕ್ರೀಟಿನ ಅವಶೇಷಗಳನ್ನು ಸುರಕ್ಷಿತವಾಗಿ ಸಾಗಿಸುವುದು ಕೂಡ ಪ್ರಯಾಸದ ಕೆಲಸ. ಫ್ಲ್ಯಾಟ್‌ ನಿವಾಸಿಗಳಿಗೆ ಸ್ವಲ್ಪಮಟ್ಟಿನ ಪರಿಹಾರವನ್ನು ಸರ್ಕಾರ ಒದಗಿಸಿದೆ. ಈ ಪರಿಹಾರ ಅವರು ಹೂಡಿದ ಮೊತ್ತಕ್ಕೆ ಸಮವಲ್ಲ ಎನ್ನುವುದು ನಿಜ. ಹಾಗೆಂದು ನಿಯಮ ಉಲ್ಲಂಘನೆಯ ವಿರುದ್ಧ ಕ್ರಮಕ್ಕೆ ಇಂತಹ ಸಹಾನುಭೂತಿ ತಡೆಯಾಗಬಾರದು.

ಸುಪ್ರೀಂ ಕೋರ್ಟ್‌ನ ಈ ನಿಷ್ಠುರ ಕ್ರಮವು ದೇಶದ ಎಲ್ಲ ಮಹಾನಗರಗಳಲ್ಲೂ ಬೇಕಾಬಿಟ್ಟಿಯಾಗಿ ಕಟ್ಟಿರುವ ಗಗನಚುಂಬಿ ಕಟ್ಟಡಗಳ ಬಿಲ್ಡರ್‌ಗಳು ಮತ್ತು ಖರೀದಿದಾರರಿಗೆ ಒಂದು ಪಾಠವಾಗಬೇಕು. ಬೆಂಗಳೂರು ಒಳಗೊಂಡಂತೆ ನಮ್ಮ ರಾಜ್ಯದ ದೊಡ್ಡ ನಗರಗಳಲ್ಲೂ ಅಕ್ರಮವಾಗಿ ನಿರ್ಮಾಣವಾದ ಗಗನಚುಂಬಿ ಕಟ್ಟಡಗಳಿವೆ. ಕೆರೆ ಅಂಗಳವನ್ನೂ ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ಇಲ್ಲಿನ ಅಧಿಕಾರಿಗಳೂ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕಿದೆ. ಕೊಚ್ಚಿಯ ಪ್ರಕರಣದಲ್ಲಿ ತಪ್ಪಿತಸ್ಥ ಬಿಲ್ಡರ್‌ಗಳು ಮತ್ತು ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿ ಮೊಕದ್ದಮೆ ಹೂಡಲಾಗಿದೆ. ಆದರೆ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿರುವ ಅಧಿಕಾರಸ್ಥ ರಾಜಕಾರಣಿಗಳ ವಿರುದ್ಧ ಮೊಕದ್ದಮೆ ಹೂಡಿದ್ದರ ಕುರಿತು ವಿವರಗಳು ಬಹಿರಂಗವಾಗಿಲ್ಲ. ಅಧಿಕಾರಸ್ಥ ರಾಜಕಾರಣಿಗಳ ಪಾತ್ರವಿಲ್ಲದೆ ಇಂತಹ ಅಕ್ರಮಗಳು ನಡೆಯುವುದು ಸಾಧ್ಯವಿಲ್ಲ. ಅವರ ವಿರುದ್ಧವೂ ಕಾನೂನಿನಡಿ ಕ್ರಮ ಕೈಗೊಳ್ಳಬೇಕು. ದೇಶದ ಬಹುತೇಕ ಮಹಾನಗರಗಳಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದ ನಿಯಮಗಳು ಮತ್ತು ಮಾರ್ಗದರ್ಶಿ ಸೂತ್ರಗಳನ್ನು ಉಲ್ಲಂಘಿಸಿದ ಕಟ್ಟಡಗಳು ಬಹಳಷ್ಟಿವೆ. ಸುಪ್ರೀಂ ಕೋರ್ಟ್‌ ಎಲ್ಲವನ್ನೂ ಗಮನಿಸಲು ಆಗುವುದಿಲ್ಲ. ಅಧಿಕಾರಸ್ಥರ ಮತ್ತು ಬಿಲ್ಡರ್‌ಗಳ ಒತ್ತಡಕ್ಕೆ ತಲೆಬಾಗದೆ ಸ್ಥಳೀಯ ಅಧಿಕಾರಿಗಳು ನಿಷ್ಠುರವಾಗಿ, ನಿಯಮಬದ್ಧವಾಗಿ ಕೆಲಸ ಮಾಡಿದರೆ ಇಂತಹ ಅಕ್ರಮ ಕಟ್ಟಡಗಳು ತಲೆ ಎತ್ತುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು