ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ಗುರುತರ ಪ್ರಶ್ನೆ ಎತ್ತಿದ ಕೋರ್ಟ್‌; ತನಿಖೆ ಎದುರಿಸುವುದೇ ಸೂಕ್ತ

Published : 25 ಸೆಪ್ಟೆಂಬರ್ 2024, 19:57 IST
Last Updated : 25 ಸೆಪ್ಟೆಂಬರ್ 2024, 19:57 IST
ಫಾಲೋ ಮಾಡಿ
Comments

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ತನಿಖೆ ಹಾಗೂ ವಿಚಾರಣೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ನೀಡಿರುವ ಅನುಮತಿಯನ್ನು ರದ್ದುಗೊಳಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಇದು, ಸಿದ್ದರಾಮಯ್ಯ ಅವರಿಗೆ ರಾಜಕೀಯ ಹಿನ್ನಡೆಯಷ್ಟೇ ಅಲ್ಲ, ಮುಖ್ಯಮಂತ್ರಿ ಹುದ್ದೆಯಲ್ಲಿ ಅವರು ಮುಂದುವರಿಯುವುದು ಸಮರ್ಥನೀಯವೇ ಎಂಬ ಪ್ರಶ್ನೆಯನ್ನೂ ಎತ್ತಿದೆ.

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನಿಯಮಗಳ ಪ್ರಕಾರ ಮುಡಾದಿಂದ ಎರಡು ನಿವೇಶನ ನೀಡಬೇಕಿದ್ದರೂ, 14 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿನ ಘಟನಾವಳಿಗಳ ಹಿಂದೆ ಅಡಗಿರಬಹುದಾದ ಸತ್ಯವನ್ನು ಅರಿಯಲು ತನಿಖೆಯ ಅಗತ್ಯವಿದೆ ಎಂದು ಹೇಳಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್‌ನ ಏಕಸದಸ್ಯ ಪೀಠವು ತನಿಖೆಗೆ ಅನುವು ಮಾಡಿಕೊಟ್ಟಿತ್ತು. ಅದಕ್ಕೆ ಪೂರಕವಾಗಿ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯವು ಬುಧವಾರ ಅಧಿಕೃತವಾದ ಆದೇಶವನ್ನು ಹೊರಡಿಸಿದ್ದು, ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದೆ. ವಿಚಾರಣೆಯ ಹಂತದಲ್ಲೇ ಕೆಲವು ಅನುಮಾನಗಳಿಗೆ ಉತ್ತರ ಹುಡುಕಿರುವ ನ್ಯಾಯಮೂರ್ತಿ ನಾಗಪ್ರಸನ್ನ, ಹಲವು ಗಂಭೀರವಾದ ಪ್ರಶ್ನೆಗಳನ್ನು ಎತ್ತಿ, ತೀರ್ಮಾನಕ್ಕೆ ಬಂದಿದ್ದಾರೆ. ‘ಫಲಾನುಭವಿಯು ಉಪಮುಖ್ಯಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ವಿವಿಧ ಪ್ರಭಾವಿ ಹುದ್ದೆಗಳಲ್ಲಿದ್ದ ರಾಜಕಾರಣಿಯ ಪತ್ನಿ ಆಗಿರದಿದ್ದರೆ ಕಾಲಕಾಲಕ್ಕೆ ನಿಯಮಗಳನ್ನು ಅನುಕೂಲಕರವಾಗಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿತ್ತೇ’, ‘ತಮ್ಮ ಪತ್ನಿಗೆ ನಿವೇಶನ ಹಂಚಿಕೆ ಮಾಡಿರುವುದಕ್ಕೆ ಸಂಬಂಧಿಸಿದ ಯಾವುದೇ ಕಡತಗಳಿಗೆ ಸಿದ್ದರಾಮಯ್ಯ ಸಹಿ ಹಾಕದೇ ಇರಬಹುದು ಅಥವಾ ಈ ಸಂಬಂಧ ಯಾವುದೇ ಆದೇಶಗಳನ್ನು ಹೊರಡಿಸದೇ ಇರಬಹುದು. ಆದರೆ, ಅರ್ಹತೆಗಿಂತಲೂ ಹೆಚ್ಚಿನ ಮೌಲ್ಯದ ಲಾಭ ಪಡೆದಿರುವುದೂ ಸೇರಿದಂತೆ ತಮ್ಮ ಪತ್ನಿಯ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ತಮಗಿರಲಿಲ್ಲ ಎಂದು ಅವರು ಹೇಳಲು ಸಾಧ್ಯವಿದೆಯೇ’ ಎಂಬ ಪ್ರಶ್ನೆಗಳನ್ನು ನ್ಯಾಯಪೀಠ ಕೇಳಿದೆ. ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಅಥವಾ ಇತರ ಹುದ್ದೆಗಳಲ್ಲಿದ್ದಾಗ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವ ಚಿತ್ರಣವು ಮೇಲ್ನೋಟಕ್ಕೆ ಕಾಣುತ್ತಿದೆ’ ಎಂದೂ ನ್ಯಾಯಾಲಯ ಹೇಳಿದೆ. ದೀರ್ಘಕಾಲದ ರಾಜಕೀಯ ಜೀವನದಲ್ಲಿ ಕಳಂಕರಹಿತ, ಶುದ್ಧಹಸ್ತ ಎಂಬ ಹೆಸರು ಗಳಿಸಿರುವ ಸಿದ್ದರಾಮಯ್ಯ ಅವರ ಪಾಲಿಗೆ ಈ ಮಾತುಗಳು ಈ ಸಂದರ್ಭದಲ್ಲಿ ಬಹಳ ಗುರುತರ. ಈ ಪ್ರಶ್ನೆಗಳಿಗೆ ರಾಜ್ಯದ ಜನಸಾಮಾನ್ಯರು ಕೂಡ ಉತ್ತರ ಬಯಸುತ್ತಾರೆ.

‘ತನಿಖೆ ಮತ್ತು ವಿಚಾರಣೆಗೆ ಅನುಮತಿ ನೀಡುವಾಗ ರಾಜ್ಯಪಾಲರು ಅಸಾಂವಿಧಾನಿಕವಾಗಿ ತೀರ್ಮಾನ ಕೈಗೊಂಡಿದ್ದಾರೆ. ಬಿಜೆಪಿಯ ಏಜೆಂಟರಂತೆ ವರ್ತಿಸಿರುವ ಅವರು, ತಮ್ಮ ವಿವೇಚನೆಯನ್ನೇ ಬಳಸಿಲ್ಲ’ ಎಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು. ಈ ವಿಷಯವನ್ನು ಇತ್ಯರ್ಥಪಡಿಸಿರುವ ನ್ಯಾಯಾಲಯವು ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಸಂಪುಟದ ಸಲಹೆ ಅನುಸಾರವೇ ನಿರ್ಧಾರ ಕೈಗೊಳ್ಳಬೇಕು. ಆದರೆ, ವಿಶೇಷ ಸಂದರ್ಭಗಳಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇದ್ದು, ಅಧಿಕಾರ ದುರ್ಬಳಕೆಯ ಆರೋಪದಡಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆ ಮತ್ತು ವಿಚಾರಣೆಗೆ ಅನುಮತಿ ಕೋರಿದ್ದ ಪ್ರಕರಣ ಕೂಡ ಅಂತಹ ಒಂದು ವಿಶೇಷ ಸಂದರ್ಭ ಎಂದು ವ್ಯಾಖ್ಯಾನಿಸಿದೆ. ರಾಜ್ಯಪಾಲರು ವ್ಯಾಪಕವಾಗಿ ಪರಿಶೀಲಿಸಿ, ವಿವೇಚನೆಯನ್ನು ಬಳಸಿ ನಿರ್ಧಾರ ಕೈಗೊಂಡಿದ್ದಾರೆ ಎಂದು ತೀರ್ಪಿನಲ್ಲಿ ಹೇಳಿದೆ. ಈಗ ನೀಡಿರುವ ಅನುಮತಿ ತನಿಖೆಗೆ ಸೀಮಿತವಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸುವುದಕ್ಕಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲು ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯುವ ಪ್ರಶ್ನೆಯು ತನಿಖೆ ಮುಗಿದ ನಂತರವೇ ಉದ್ಭವವಾಗುತ್ತದೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ತನಿಖೆ ಎದುರಿಸಲು ತಾವು ಸಿದ್ಧ ಎಂದಿರುವ ಸಿದ್ದರಾಮಯ್ಯ, ತನಿಖೆಗೆ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸುವಂತೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿಯೂ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷವೂ ಇದೇ ರೀತಿಯಲ್ಲಿ ಇಬ್ಬಗೆಯ ನಿಲುವು ಪ್ರದರ್ಶಿಸುತ್ತಿದೆ. ಆರೋಪಗಳ ಕುರಿತು ತನಿಖೆಯನ್ನು ಇನ್ನೂ ವಿರೋಧಿಸುವುದು ರಾಜಕೀಯವಾಗಿ ವಿವೇಕರಹಿತ ನಡೆಯಾಗುತ್ತದೆ ಎಂಬುದನ್ನು ಅವರು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು. ಆರೋಪಕ್ಕೆ ಗುರಿಯಾದ ರಾಜಕಾರಣಿಗಳು ಸಾಮಾನ್ಯವಾಗಿ ತನಿಖೆ ಮುಗಿದು, ಆರೋಪಪಟ್ಟಿ ಸಲ್ಲಿಕೆ ಆಗುವವರೆಗೂ ರಾಜೀನಾಮೆ ನೀಡುವುದಿಲ್ಲ. ಸಿದ್ದರಾಮಯ್ಯ ಕೂಡ ಅದೇ ಮಾರ್ಗವನ್ನು ಅನುಸರಿಸಲು ಮುಂದಾಗಿರಬಹುದು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ತೀರ್ಪಿನಲ್ಲಿ ನ್ಯಾಯಮೂರ್ತಿಯವರು ಉಲ್ಲೇಖಿಸಿರುವ ಅಂಶಗಳು ರಾಜಕೀಯವಾಗಿ ಮತ್ತು ನೈತಿಕವಾಗಿ ತಮ್ಮ ವ್ಯಕ್ತಿತ್ವಕ್ಕೆ ಉಂಟುಮಾಡಿರುವ ಹಾನಿಯ ಕುರಿತು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷ  ಗಮನಿಸಬೇಕಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ತಾವು ಮುಂದುವರಿಯುವುದು ವಿವೇಕದ ನಡೆಯಾಗುತ್ತದೆಯೇ ಎಂಬುದನ್ನು ಸಿದ್ದರಾಮಯ್ಯ ಅವರು ಆಲೋಚಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT