ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಪಾಕಿಸ್ತಾನದ ಹೊಸ ಸರ್ಕಾರದ ಮುಂದೆ ಸವಾಲುಗಳು ಹಲವು

Last Updated 12 ಏಪ್ರಿಲ್ 2022, 19:45 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ಸರ್ಕಾರ ಬದಲಾಗಿದೆ. ಪ್ರಧಾನಿಯಾಗಿದ್ದ ಇಮ್ರಾನ್‌ ಖಾನ್‌ ಅವರನ್ನು ಪದಚ್ಯುತ ಗೊಳಿಸಲಾಗಿದ್ದು, ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿದ್ದ ಶಾಹಬಾಝ್‌ ಷರೀಫ್‌ ಅವರು ದೇಶದ ಚುಕ್ಕಾಣಿ ಹಿಡಿದಿದ್ದಾರೆ. ಸರ್ಕಾರ ಬದಲಾವಣೆ ಪ್ರಕ್ರಿಯೆಯು ಸುಗಮವಾಗಿಯೇನೂ ನಡೆಯ ಲಿಲ್ಲ. ಪಾಕಿಸ್ತಾನದ ಸಂಸತ್ತು ನ್ಯಾಷನಲ್‌ ಅಸೆಂಬ್ಲಿಯಲ್ಲಿ ಇಮ್ರಾನ್‌ ನೇತೃತ್ವದ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂಬುದು ನಿಚ್ಚಳವಾಗಿತ್ತು. ಆದರೆ, ಅಧಿಕಾರದಿಂದ ಕೆಳಕ್ಕೆ ಇಳಿಯಲು ಒಪ್ಪದೇ ಅವರು ನಡೆಸಿದ ರಾಜಕೀಯ ಆಟಗಳು ಪ್ರಜಾಪ್ರಭುತ್ವಕ್ಕೆ ತಕ್ಕದ್ದಾದ ನಡೆಯಲ್ಲ. ಸ್ವಾತಂತ್ರ್ಯ ಪಡೆದ ನಂತರದ 75 ವರ್ಷಗಳಲ್ಲಿ ಸುಮಾರು ಅರ್ಧದಷ್ಟು ಅವಧಿಗೆ ಆ ದೇಶವು ಸೇನೆಯ ನಿರಂಕುಶ ಆಡಳಿತ ವನ್ನು ಕಂಡಿದೆ. ಈ ಕಾರಣಕ್ಕಾಗಿಯೇ ಪಾಕಿಸ್ತಾನದ ರಾಜಕೀಯ ಸ್ಥಿತಿಯು ಅತ್ಯಂತ ನಾಜೂಕು. ಸಣ್ಣ ಅನಾಸ್ಥೆ ಕೂಡ ಈ ದೇಶವನ್ನು ಪ್ರಜಾಸತ್ತೆಯಿಂದ ನಿರಂಕುಶಾಧಿಪತ್ಯಕ್ಕೆ ತಳ್ಳಬಹುದು ಎಂಬ ಪಾಠವನ್ನು ಇತಿಹಾಸವು ಕಲಿಸಿದೆ. ಹೀಗಿರುವಾಗ, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಇಮ್ರಾನ್‌ ಅವರು, ಪ್ರಜಾಸತ್ತೆ ಯನ್ನೇ ಒತ್ತೆ ಇರಿಸಿದ್ದು, ರಾಜಕೀಯ ಅಸ್ಥಿರತೆ ಮೂಡಿಸಿದ್ದು, ಸೇನೆಯು ಆಳ್ವಿಕೆಯನ್ನು ಕೈಗೆತ್ತಿಕೊಳ್ಳ ಬಹುದಾದ ಸನ್ನಿವೇಶ ಸೃಷ್ಟಿಸಿದ್ದು ಎಳ್ಳಷ್ಟೂ ಸರಿ ಅಲ್ಲ. ವಿಶ್ವಾಸಮತ ನಿರ್ಣಯವನ್ನು ತಿರಸ್ಕರಿಸಿದ ಉಪ ಸ್ಪೀಕರ್‌ ನಡೆ, ಪ್ರಧಾನಿ ಶಿಫಾರಸಿನಂತೆ ನ್ಯಾಷನಲ್‌ ಅಸೆಂಬ್ಲಿ ವಿಸರ್ಜನೆ ಮಾಡಿದ ಅಧ್ಯಕ್ಷರ ತೀರ್ಮಾನ ಪ್ರಜಾಪ್ರಭುತ್ವ ವಿರೋಧಿ ಎಂಬುದರಲ್ಲಿ ಅನುಮಾನವೇ ಇಲ್ಲ. ಸಕಾಲದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂ ಕೋರ್ಟ್‌, ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸ ಮಾಡಿದ್ದು ಶ್ಲಾಘನೀಯ.

ಸರ್ಕಾರ ಬದಲಾವಣೆಯ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಇಮ್ರಾನ್‌ ಮಾಡಿರುವ ಆರೋಪವು ಅಧಿಕಾರಕ್ಕೆ ಅಂಟಿಕೊಳ್ಳುವ ತಂತ್ರವೇ ವಿನಾ ಬೇರೇನೂ ಅಲ್ಲ ಎಂಬುದು ಸ್ಪಷ್ಟವಾಗಿದೆ. ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಿದ ಕಾರಣಕ್ಕೆ ಅಮೆರಿಕವು ತಮ್ಮ ವಿರುದ್ಧ ಸಂಚು ನಡೆಸಿದೆ ಎಂದು ಇಮ್ರಾನ್‌ ಹೇಳಿದ್ದರು. ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿದೆ ಎಂದು ಇಮ್ರಾನ್‌ ಅವರು ಹೊಗಳಿದ್ದರ ಹಿಂದೆಯೂ ಅವರ ಕಾರ್ಯತಂತ್ರಕ್ಕೆ ಪೂರಕವಾದ ವಾತಾವರಣ ಸೃಷ್ಟಿಸುವ ಹುನ್ನಾರವಿತ್ತು. ಭಾರತದ ಬಗ್ಗೆ ಇಮ್ರಾನ್‌ ನೀಡಿದ ಹೇಳಿಕೆಯಲ್ಲಿ ಪ್ರಾಮಾಣಿಕತೆಯ ಕೊರತೆ ಎದ್ದು ಕಾಣುತ್ತಿದೆ. ಶಾಹಬಾಝ್‌ ಅವರ ಪಾಕಿಸ್ತಾನ್‌ ಮುಸ್ಲಿಂ ಲೀಗ್– ಎನ್‌ ಮತ್ತು ಬಿಲಾವಲ್‌ ಭುಟ್ಟೊ ಅವರ ಪಾಕಿಸ್ತಾನ್‌ ಪೀಪಲ್ಸ್ ಪಾರ್ಟಿಯ ನಡುವೆ ಅಪನಂಬಿಕೆಯ ಇತಿಹಾಸವೇ ಇದೆ. ಆದರೆ, ಈ ಎರಡು ಪಕ್ಷಗಳು ಈಗ ಒಟ್ಟಾಗಿ ಅಧಿಕಾರಕ್ಕೆ ಬಂದಿವೆ. ಇವಲ್ಲದೆ, ಕೆಲವು ಸಣ್ಣ ಪಕ್ಷಗಳ ಸಂಸದರು ಮತ್ತು ಪಕ್ಷೇತರ ಸಂಸದರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಇವರೆಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಮುಂದೆ ಸಾಗುವುದು ಸುಲಭದ ಕೆಲಸವೇನಲ್ಲ. ಜತೆಗೆ, ಹಣದುಬ್ಬರ, ಭ್ರಷ್ಟಾಚಾರದಂತಹ ಹಲವು ಸಮಸ್ಯೆಗಳನ್ನೂ ನಿಭಾಯಿಸಬೇಕಿದೆ. ಇಮ್ರಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಸಂಸದರು ನ್ಯಾಷನಲ್ ಅಸೆಂಬ್ಲಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ರಾಜಕೀಯ ಬಿಕ್ಕಟ್ಟು ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ಬೀದಿಗಿಳಿದು ಹೋರಾಡುವ ಸುಳಿವನ್ನೂ ಅವರು ನೀಡಿದ್ದಾರೆ. ಹಾಗಾಗಿ, ಆಡಳಿತದ ಸಮಸ್ಯೆಗಳ ಜತೆಗೆ ರಾಜಕೀಯ ತೊಡಕುಗಳನ್ನೂ ಹೊಸ ಸರ್ಕಾರವು ನಿರ್ವಹಿಸಬೇಕಿದೆ. ಇಮ್ರಾನ್‌ ಅವರು ಆಳ್ವಿಕೆಯ ಕೊನೆಯ ದಿನಗಳಲ್ಲಿ, ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಜತೆಗಿನ ಸಂಬಂಧ ಕೆಡಿಸಿ ಕೊಂಡಿದ್ದಾರೆ. ಈ ದೇಶಗಳ ವಿಶ್ವಾಸವನ್ನು ಮರಳಿ ಗಳಿಸಬೇಕಾದ ಅನಿವಾರ್ಯವೂ ಹೊಸ ಸರ್ಕಾರಕ್ಕೆ ಇದೆ.

ಪಾಕಿಸ್ತಾನದಲ್ಲಿ ಸ್ಥಿರವಾದ ಮತ್ತು ಪ್ರಜಾಸತ್ತಾತ್ಮಕವಾದ ಸರ್ಕಾರ ಇರುವುದು ಭಾರತಕ್ಕೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಭಾರತ–ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸಂಬಂಧ ಉತ್ತಮವಾಗಿಲ್ಲ. ಮಾತುಕತೆ ಸ್ಥಗಿತವಾಗಿದೆ. ಭಾರತದ ಜತೆಗೆ ಉತ್ತಮ ಸಂಬಂಧ ಬೇಕು ಎಂದು ಹೊಸ ಪ್ರಧಾನಿ ಶಾಹಬಾಝ್‌ ಅವರು ಹೇಳಿದ್ದಾರೆ. ಆದರೆ, ‘ಕಾಶ್ಮೀರ ವಿವಾದ’ ಪರಿಹಾರವಾಗದೆ ದೀರ್ಘಕಾಲದ ಶಾಂತಿ ಸಾಧ್ಯವಿಲ್ಲ ಎಂದಿದ್ದಾರೆ. ಕಾಶ್ಮೀರದಲ್ಲಿ ಏನೇ ಸಮಸ್ಯೆ ಇದ್ದರೂ ಅದು ಭಾರತದ ಆಂತರಿಕ ವಿಚಾರ ಎಂಬುದನ್ನು ಶಾಹಬಾಝ್‌ ಅರ್ಥ ಮಾಡಿಕೊಳ್ಳಬೇಕು. ಪಾಕಿಸ್ತಾನವು ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದೆ. ಇಂತಹ ಸನ್ನಿವೇಶದಲ್ಲಿ, ಭಾರತದ ಜತೆಗೆ ಸಂಘರ್ಷಕ್ಕೆ ನಿಲ್ಲುವ ಬದಲು ಸಹಕಾರ ಮನೋಭಾವದಿಂದ ಇರುವುದು ಆ ದೇಶಕ್ಕೆ ಅನುಕೂಲಕರ. ಶಾಹಬಾಝ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಈ ಪ್ರದೇಶವು ಭಯೋತ್ಪಾದನೆ ಮುಕ್ತವಾಗಿ, ಶಾಂತಿ ಮತ್ತು ಸ್ಥಿರತೆಯಿಂದ ಇರಬೇಕು ಎಂಬುದು ತಮ್ಮ ಅಪೇಕ್ಷೆ ಎಂದೂ ಮೋದಿ ಹೇಳಿದ್ದಾರೆ. ಭಾರತದ ಈ ನಿಲುವನ್ನು ‍ಪಾಕಿಸ್ತಾನ ಅರ್ಥ ಮಾಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT