ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ಪ್ರಯಾಣ ದರ ಇಳಿಸುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ

Last Updated 8 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು ಮಹಾನಗರ ಸಾರಿಗೆ ನಿಗಮದ (ಬಿಎಂಟಿಸಿ) ಬಸ್ ಪ್ರಯಾಣ ದರ ಇಳಿಕೆ ಮಾಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆಯನ್ನು ವ್ಯಾಪಕಗೊಳಿಸುವ ಹಾಗೂ ಜನಸಾಮಾನ್ಯರ ಪಾಲಿಗೆ ಪ್ರಯಾಣ ಹೆಚ್ಚು ಭಾರವಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಈ ನಿರ್ಧಾರ ಮುಖ್ಯವಾದುದು.

ವಿಧಾನಸಭೆ ಉಪಚುನಾವಣೆ, ಅದರಲ್ಲೂ ಬೆಂಗಳೂರು ಮಹಾನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ‌ ದರ ಇಳಿಸಲು ಹೊರಟಿರುವ ಸರ್ಕಾರದ ನಿರ್ಧಾರದ ಹಿಂದೆ ರಾಜಕಾರಣದ ಉದ್ದೇಶ ಇರಬಹುದಾದರೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮ ಅಗತ್ಯವಾದುದು. ವಾಯುಮಾಲಿನ್ಯ ಕಡಿಮೆ ಮಾಡುವ ಹಾಗೂ ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಯಾಣ ದರ ಕಡಿಮೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ದರ ಕಡಿತದಿಂದಾಗಿ ಸಂಸ್ಥೆಗಾಗುವ ನಷ್ಟವನ್ನು ಸರ್ಕಾರ ತುಂಬಿಕೊಡಲಿದೆ ಎಂದೂ ಅವರು ಹೇಳಿದ್ದಾರೆ.

ಮುಖ್ಯಮಂತ್ರಿಯವರ ಈ ಉತ್ಸಾಹ ಉಪಚುನಾವಣೆಯ ನಂತರವೂ ಮುಂದುವರಿದಲ್ಲಿ, ಬಿಎಂಟಿಸಿಗೆ ಹೊಸ ವರ್ಚಸ್ಸು ದೊರೆಯಬಹುದೆಂದು ನಿರೀಕ್ಷಿಸಬಹುದು. ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಸಂಖ್ಯೆ ರಾಜಧಾನಿಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಈ ಖಾಸಗಿ ವಾಹನಗಳು ಸಂಚಾರ ದಟ್ಟಣೆ ಸಮಸ್ಯೆಯ ಉಲ್ಬಣಕ್ಕೆ ಹಾಗೂ ವಾಯುಮಾಲಿನ್ಯದ ಹೆಚ್ಚಳಕ್ಕೆ ಕಾರಣವಾಗಿವೆ. ಖಾಸಗಿ ವಾಹನಗಳ ಬಳಕೆಗೆ ಕಡಿವಾಣ ಹಾಕಬೇಕಾದರೆ ಸಾರ್ವಜನಿಕ ಸಾರಿಗೆಯನ್ನು ಆಕರ್ಷಕಗೊಳಿಸುವುದು ಹಾಗೂ ಹೆಚ್ಚು ಪ್ರಯಾಣಿಕಸ್ನೇಹಿಯಾಗಿಸುವುದು ಅನಿವಾರ್ಯ. ಇಂಥ ಪ್ರಯತ್ನಗಳಲ್ಲಿ ಪ್ರಯಾಣ ದರ ಕಡಿತವೂ ಒಂದು.

ಹೊಸದಾಗಿ ಆರು ಸಾವಿರ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದ್ದು, ಅವುಗಳಲ್ಲಿ ಅರ್ಧದಷ್ಟು ವಿದ್ಯುತ್‌ಚಾಲಿತ ಬಸ್‌ಗಳಾಗಿರಲಿವೆ ಎನ್ನುವುದು ಗಮನಾರ್ಹ. ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಎಲೆಕ್ಟ್ರಿಕ್‌ ಬಸ್‌ಗಳ ಬಳಕೆ ಉಪಯುಕ್ತ. ಉದ್ಯಾನನಗರಿ ಎನ್ನುವ ಬೆಂಗಳೂರಿನ ವಿಶೇಷಣ ಮುಕ್ಕಾಗಿದ್ದು, ನಗರದಲ್ಲಿ ಉಸಿರಾಡುವ ಗಾಳಿಯ ಗುಣಮಟ್ಟವನ್ನು ಉತ್ತಮವಾಗಿ ಇರಿಸಿಕೊಳ್ಳಲು ಸಾರ್ವಜನಿಕ ಸಾರಿಗೆ ಬಲಗೊಳ್ಳಬೇಕಾದುದು ಅತ್ಯಗತ್ಯ. ದೇಶದ ಅತ್ಯುತ್ತಮ ನಗರಸಾರಿಗೆಗಳಲ್ಲಿ ಒಂದಾಗಿರುವ ಬಿಎಂಟಿಸಿ ಇತ್ತೀಚಿನ ವರ್ಷಗಳಲ್ಲಿ ನಷ್ಟವನ್ನೇ ಹೆಚ್ಚು ಎದುರಿಸುತ್ತಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿರುವುದು ಅಥವಾ ಪ್ರಯಾಣ ದರವು ಈ ನಷ್ಟಕ್ಕೆ ಕಾರಣವಾಗಿಲ್ಲ. ನಿಗಮದ ಆರ್ಥಿಕ ಬಿಕ್ಕಟ್ಟಿನಲ್ಲಿ ಬಿಳಿಯಾನೆಗಳಂತಹ ವೋಲ್ವೊ ಬಸ್‌ಗಳ ಪಾಲಿದೆ, ಅಧಿಕಾರಿಗಳು ಮತ್ತು ರಾಜಕಾರಣಿಗಳ ಬೇಜವಾಬ್ದಾರಿ ನಿರ್ಧಾರಗಳ ಪಾತ್ರವೂ ಇದೆ.

825 ವೋಲ್ವೊ ಬಸ್‌ಗಳನ್ನು ಬಿಎಂಟಿಸಿ ಹೊಂದಿದ್ದು, ಆ ಬಸ್‌ಗಳ ಸಂಚಾರದಿಂದ ಪ್ರತಿ ಕಿ.ಮೀ.ಗೆ ₹ 20 ನಷ್ಟವಾಗುತ್ತಿದೆ ಎಂಬ ವರದಿ ಇದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಡೆ ಸಾಮಾನ್ಯ ಬಸ್‌ ಸಂಚಾರವನ್ನು ಸ್ಥಗಿತಗೊಳಿಸುವ ಬಿಎಂಟಿಸಿ, ಮತ್ತೊಂದು ಕಡೆ ಕಡಿಮೆ ಪ್ರಯಾಣಿಕರಿದ್ದರೂ ಪ್ರತಿಷ್ಠೆಯ ಕಾರಣಕ್ಕಾಗಿ ವೋಲ್ವೊ ಬಸ್‌ಗಳನ್ನು ಓಡಿಸುತ್ತಿದೆ. ವೋಲ್ವೊ ಹೊರೆಯನ್ನು ಆದಷ್ಟು ಬೇಗ ಇಳಿಸಿಕೊಳ್ಳುವುದು ಬಿಎಂಟಿಸಿ ಹಿತದೃಷ್ಟಿಯಿಂದ ಅಗತ್ಯವಾದುದು.

ಕಟ್ಟಡ, ನಿಲ್ದಾಣ ಸೇರಿದಂತೆ ನಿಗಮದ ಸ್ಥಿರಾಸ್ತಿಗಳಿಂದ ಇನ್ನಷ್ಟು ಆದಾಯ ಸೃಷ್ಟಿಸಿಕೊಳ್ಳುವ ಕುರಿತು ಯೋಚಿಸುವುದು ಹಣಕಾಸಿನ ಆರೋಗ್ಯಕ್ಕೆ ಒಳ್ಳೆಯದು. ಸೇವೆಯ ಗುಣಮಟ್ಟವನ್ನು ಹೆಚ್ಚಿಸುವ, ಸೋರಿಕೆಯನ್ನು ನಿಲ್ಲಿಸುವ ಹಾಗೂ ಸಿಬ್ಬಂದಿಯ ದಕ್ಷತೆಯನ್ನು ಉತ್ತಮಗೊಳಿಸುವ ಸವಾಲಿಗೆ ಒಡ್ಡಿಕೊಳ್ಳುವ ಮೂಲಕ ಬಿಎಂಟಿಸಿ ಹೊಸ ಕಾಲಕ್ಕೆ ತಕ್ಕಂತೆ ತನ್ನನ್ನು ಪುನರ್‌ ರೂಪಿಸಿಕೊಳ್ಳಬೇಕಾಗಿದೆ. ಜೊತೆಗೆ ಸೇವಾ ಗುಣಮಟ್ಟದ ವಿಚಾರದಲ್ಲಿ ನೌಕರರಲ್ಲಿ ಆತ್ಮವಿಶ್ವಾಸವನ್ನು ತುಂಬುವಲ್ಲಿ ನಿಗಮ ಯಶಸ್ವಿಯಾದರೆ, ನಂತರದ ಹಂತದಲ್ಲಿ ಜನಸಾಮಾನ್ಯರ ವಿಶ್ವಾಸವನ್ನು ಗಳಿಸಿಕೊಳ್ಳುವುದು ಸುಲಭವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT