ದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು ಈ ಮಸೂದೆಯ ಉದ್ದೇಶ ಎಂದು ಹೇಳಲಾಗಿದ್ದರೂ ಅದರಲ್ಲಿರುವ ಅಂಶಗಳು ಅದಕ್ಕೆ ವ್ಯತಿರಿಕ್ತವಾಗಿವೆ
ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆಗೆ ಲೋಕಸಭೆ ಕಳೆದ ವಾರ ಅಂಗೀಕಾರ ನೀಡಿದೆ. ಅರಣ್ಯದ ಸಂರಕ್ಷಣೆಯೇ ಇದರ ಉದ್ದೇಶ ಎಂಬುದು ಈ ಮಸೂದೆಯ ಹೆಸರಿನಲ್ಲಿಯೇ ಇದ್ದರೂ ವಾಸ್ತವದಲ್ಲಿ ಇದು ಅರಣ್ಯಕ್ಕೆ ಹಾನಿಯನ್ನೇ ಮಾಡಲಿದೆ ಎಂಬ ಕಳವಳ ವ್ಯಕ್ತವಾಗಿದೆ. ಪರಿಕಲ್ಪನಾತ್ಮಕ ಮತ್ತು ವಾಸ್ತವಿಕ ಎರಡೂ ನೆಲೆಯಲ್ಲಿಯೂ ಇಂತಹ ಕಳವಳ ಇದೆ. ಸರ್ಕಾರದ ದಾಖಲೆಗಳಲ್ಲಿ ಅರಣ್ಯ ಎಂದು ಪರಿಗಣಿಸಲಾಗಿರುವ ಎಲ್ಲ ಪ್ರದೇಶಕ್ಕೂ ಸಂರಕ್ಷಣೆಯನ್ನು ವಿಸ್ತರಿಸುವುದಕ್ಕಾಗಿ 1980ರಲ್ಲಿ ಅರಣ್ಯ ಸಂರಕ್ಷಣೆ ಕಾಯ್ದೆಯನ್ನು (ಎಫ್‌ಸಿಎ) ತರಲಾಯಿತು.
‘ಅರಣ್ಯ ಎಂಬ ಪದಕ್ಕೆ ಶಬ್ದಕೋಶದಲ್ಲಿರುವ ವ್ಯಾಖ್ಯಾನ’ಕ್ಕೆ ಹೊಂದುವ ಎಲ್ಲ ಪ್ರದೇಶಕ್ಕೂ ಈ ಕಾಯ್ದೆಯನ್ನು ವಿಸ್ತರಿಸಿ ಸುಪ್ರೀಂ ಕೋರ್ಟ್ 1996ರಲ್ಲಿ ಆದೇಶ ನೀಡಿತು. ಸಂರಕ್ಷಿಸಬೇಕಾದ ಅರಣ್ಯ ಎಂದು ಸರ್ಕಾರಿ ದಾಖಲೆಗಳಲ್ಲಿ ಇಲ್ಲದ ಪ್ರದೇಶಗಳಲ್ಲಿರುವ ಮರಗಳನ್ನೂ ರಕ್ಷಿಸಲು ಇದು ನೆರವಾಯಿತು. ತಿದ್ದುಪಡಿಯಲ್ಲಿ ಅರಣ್ಯ ಎಂಬುದರ ಮೂಲ ವ್ಯಾಖ್ಯೆಯನ್ನೇ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಭಾರಿ ಪ್ರಮಾಣದ ಪ್ರದೇಶಕ್ಕೆ ಇದ್ದ ರಕ್ಷಣೆಯು ನಷ್ಟವಾಗುತ್ತದೆ. ಭಾರತೀಯ ಅರಣ್ಯ ಸರ್ವೇಕ್ಷಣೆಯ ಅಂದಾಜು ಪ್ರಕಾರ, ಶೇಕಡ 28ರಷ್ಟು ಅರಣ್ಯ ಪ್ರದೇಶವು ಈ ಕಾನೂನಿನ ವ್ಯಾಪ್ತಿಯಿಂದ ಹೊರಗೆ ಹೋಗುತ್ತದೆ. ನಷ್ಟವಾದ ಅರಣ್ಯ ಪ್ರದೇಶಕ್ಕೆ ಪರಿಹಾರವಾಗಿ ಅರಣ್ಯೀಕರಣದ ಪ್ರಸ್ತಾವ ಇದೆ. ಆದರೆ, ಎಲ್ಲರಿಗೂ ತಿಳಿದಿರುವಂತೆ, ವಾಸ್ತವದಲ್ಲಿ ಇದು ಜಾರಿಗೆ ಬರುವುದೇ ಇಲ್ಲ.
ಅಂತರರಾಷ್ಟ್ರೀಯ ಗಡಿ, ಗಡಿ ನಿಯಂತ್ರಣ ರೇಖೆ ಅಥವಾ ನೈಜ ನಿಯಂತ್ರಣ ರೇಖೆಯ ನೂರು ಕಿ.ಮೀ. ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ರಕ್ಷಣಾ ಉದ್ದೇಶದ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣಕ್ಕೆ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂಬ ನಿಯಮವನ್ನು ಈ ಮಸೂದೆಯು ರದ್ದುಪಡಿಸಿದೆ. ಈಶಾನ್ಯ ಭಾರತದ, ಪರಿಸರದ ದೃಷ್ಟಿಯಿಂದ ಅತ್ಯಂತ ನಾಜೂಕಾಗಿರುವ ಭಾರಿ ಪ್ರಮಾಣದ ಪ್ರದೇಶ ಈ ವರ್ಗಕ್ಕೆ ಬರುತ್ತದೆ. ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿರುವ ಪ್ರದೇಶಕ್ಕೂ ವಿನಾಯಿತಿ ಅನ್ವಯ ಆಗಲಿದೆ. ದೇಶದ ಭದ್ರತೆಯು ಬಹಳ ಮುಖ್ಯವಾದ ವಿಚಾರವೇ ಸರಿ.
ಆದರೆ, ನಿರ್ಮಾಣ ಚಟುವಟಿಕೆಗಳಿಗೆ ಯಾವುದೇ ನಿಯಂತ್ರಣ ಇಲ್ಲ ಎಂದು ಬಿಡುಬೀಸಾಗಿ ನೀಡುವ ವಿನಾಯಿತಿಯು ದುರ್ಬಳಕೆ ಆಗುವ ಅಪಾಯ ಇದೆ. ಪರಿಸರವು ಅತ್ಯಂತ ಸೂಕ್ಷ್ಮವಾಗಿರುವ ಇಂತಹ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆ ಆರಂಭಿಸುವ ಮುನ್ನ ಆ ಕುರಿತು ಸಮಗ್ರವಾದ ಸಮಾಲೋಚನೆ ಅಗತ್ಯವಾಗಿದೆ. ನಕ್ಸಲ್‌ಬಾಧಿತ ಪ್ರದೇಶಗಳು ದೇಶದಲ್ಲಿಯೇ ಅತ್ಯಂತ ಸಮೃದ್ಧವಾಗಿ ಅದಿರು ನಿಕ್ಷೇಪಗಳು ಇರುವ ಸ್ಥಳಗಳಾಗಿವೆ. ಈ ಪ್ರದೇಶಕ್ಕೆ ನೀಡುವ ವಿನಾಯಿತಿಯು ಅರಣ್ಯ ನಾಶ, ಗಣಿಗಾರಿಕೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ಬಳಕೆ ಆಗಬಹುದು.
ಇತರ ಕಳವಳಗಳೂ ಇವೆ. ಲೋಕಸಭೆಯಲ್ಲಿ ಮಾರ್ಚ್‌ನಲ್ಲಿ ಮಂಡನೆಯಾದ ಬಳಿಕ ಮಸೂದೆಯನ್ನು ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸಲಾಗಿತ್ತು. ಸಮಿತಿಯು ಯಾವುದೇ ಬದಲಾವಣೆಯನ್ನು ಸೂಚಿಸಿರಲಿಲ್ಲ. ಆದರೆ, ವಿರೋಧ ಪಕ್ಷಗಳ ಆರು ಸದಸ್ಯರು ಪರಿಸರ ಪರಿಶೋಧನೆ ಮತ್ತು ಪರಿಸರ ಸೂಕ್ಷ್ಮ ಪ‍್ರದೇಶಗಳ ಅರಣ್ಯ ಪ್ರದೇಶ ಬಳಕೆ ಕುರಿತು ರಾಜ್ಯ ಸರ್ಕಾರಗಳ ಜೊತೆಗೆ ಸಮಾಲೋಚನೆ ಅಗತ್ಯ ಎಂದು ಪ್ರತಿಪಾದಿಸಿದ್ದರು. ಪರಿಸರ ತಜ್ಞರು, ವಿಜ್ಞಾನಿಗಳು ಮತ್ತು ಪರಿಸರಪರ ಹೋರಾಟಗಾರರು ಸೇರಿದಂತೆ 400 ಮಂದಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಈ ಮಸೂದೆಯು ಕಾಯ್ದೆಯಾಗಿ ಜಾರಿಯಾದರೆ ದೇಶದ ಅರಣ್ಯ ಪ್ರಮಾಣದ ಕುಸಿಯುವಿಕೆಗೆ ವೇಗ ತುಂಬಲಿದೆ ಎಂಬ ಕಳವಳವನ್ನು ಅವರು ವ್ಯಕ್ತಪಡಿಸಿದ್ದಾರೆ. ಹವಾಮಾನ ಬದಲಾವಣೆಯ ಅಪಾಯ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಅರಣ್ಯದ ಸಂರಕ್ಷಣೆ ಬಹಳ ಮುಖ್ಯವಾದುದಾಗಿದೆ. ಸಂಸತ್ತಿನಲ್ಲಿ ಚರ್ಚೆಯೇ ಇಲ್ಲದೆ ಈ ಮಸೂದೆ ಅಂಗೀಕಾರವಾಗಿದೆ. ದೇಶದಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು ಈ ಮಸೂದೆಯ ಉದ್ದೇಶ ಎಂದು ಹೇಳಲಾಗಿದೆ. ಆದರೆ, ಮಸೂದೆಯಲ್ಲಿ ಇರುವ ಅಂಶಗಳು ಅದಕ್ಕೆ ವ್ಯತಿರಿಕ್ತವಾಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.