ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌ ಕಾಂಗ್ರೆಸ್‌ನ ಆಂತರಿಕಬಿಕ್ಕಟ್ಟು: ಪಕ್ಷದ ಶಿಥಿಲ ಸ್ಥಿತಿಗೆ ಕೈಗನ್ನಡಿ

Last Updated 30 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್‌ ಪಕ್ಷ ಸ್ವಂತ ಬಲದಿಂದ ಅಧಿಕಾರದಲ್ಲಿರುವ ಮೂರು ರಾಜ್ಯಗಳಲ್ಲಿ ಒಂದಾದ ಪಂಜಾಬ್‌ನಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳು ಶಮನವಾಗುವ ಹಂತಕ್ಕೆ ಬಂದಿವೆ ಎಂದು ಯೋಚಿಸುವುದಕ್ಕೂಮೊದಲೇ ಪಕ್ಷ ಇನ್ನೂ ತೀವ್ರವಾದ ಬಿಕ್ಕಟ್ಟಿಗೆ ತನ್ನನ್ನು ಒಡ್ಡಿಕೊಂಡಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಮತ್ತು ಇತರ ಕೆಲ ಶಾಸಕರ ಒತ್ತಡದ ಮೇರೆಗೆಪಕ್ಷದ ಹಿರಿಯ ನಾಯಕ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಲಾಗಿದೆ. ಅಮರಿಂದರ್ ಅವರ ಪ್ರಬಲ ವಿರೋಧದ ನಡುವೆಯೇ ಸಿಧು ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಜುಲೈ ತಿಂಗಳಲ್ಲಿ ನೇಮಿಸಲಾಗಿತ್ತು. ಪಂಜಾಬ್‌ ಮುಖ್ಯಮಂತ್ರಿಯಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರನ್ನು ನೇಮಿಸಲಾಗಿದೆ. ಚನ್ನಿ ಅವರು ಸಿಧು ಆಪ್ತ ಬಳಗದಲ್ಲಿ ಗುರುತಿಸಿಕೊಂಡವರು. ಆದರೆ, ತಮಗೆ ಇಷ್ಟವಿಲ್ಲದ ವ್ಯಕ್ತಿಗಳಿಗೆ ಸಚಿವ ಸ್ಥಾನ ಮತ್ತು ತಮಗೆ ಬೇಡದ ಅಧಿಕಾರಿಗಳಿಗೆ ಉನ್ನತ ಹುದ್ದೆ ನೀಡಲಾಗಿದೆ ಎಂದು ಆರೋಪಿಸಿದ ಸಿಧು ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂದಿನ ಚುನಾವಣೆಗೆ ಕೆಲವೇ ತಿಂಗಳಿರುವಾಗ ಈ ಎಲ್ಲ ವಿದ್ಯಮಾನಗಳು ನಡೆದಿವೆ. ಸಿಧು ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲು ವಿವಿಧ ಕಾರಣಗಳಿಂದ ಆಗುತ್ತಿಲ್ಲ, ಹಾಗಾಗಿ, ಚನ್ನಿ ಅವರಿಗೆ ಆ ಹುದ್ದೆ ನೀಡಲಾಗಿದೆ. ಚನ್ನಿ ಅವರು ಸಿಧು ಅವರ ಕೈಗೊಂಬೆ ರೀತಿಯಲ್ಲಿ ಅಧಿಕಾರ ನಡೆಸಲಿದ್ದಾರೆ ಎಂಬ ಮಾತುಗಳು ಚನ್ನಿ ಅವರ ಆಯ್ಕೆಯ ಸಂದರ್ಭದಲ್ಲಿ ಕೇಳಿಬಂದಿದ್ದವು. ತಾವು ಯಾರ ಕೈಗೊಂಬೆಯೂ ಅಲ್ಲ ಎಂಬ ರೀತಿಯಲ್ಲಿ ಚನ್ನಿ ಅವರು ನಂತರದ ದಿನಗಳಲ್ಲಿ ನಡೆದುಕೊಂಡಿದ್ದಾರೆ ಎಂಬುದು ಸಿಧು ವರ್ತನೆಯಿಂದ ತಿಳಿದುಬರುತ್ತದೆ. ಚುನಾಯಿತ ಮುಖ್ಯಮಂತ್ರಿಯೊಬ್ಬರು ತಮ್ಮ ಇಷ್ಟಾ
ನಿಷ್ಟಗಳಿಗೆ ತಕ್ಕಂತೆ ಕುಣಿಯಬೇಕು ಎಂದು ಪಕ್ಷದ
ಅಧ್ಯಕ್ಷ ಬಯಸುವುದು ಪ್ರಜಾಸತ್ತಾತ್ಮಕ ವರ್ತನೆಯಂತೂ ಅಲ್ಲ. ತಮ್ಮ ಒತ್ತಡಕ್ಕೆ ಮಣಿದು ಪಕ್ಷವು ಮುಖ್ಯಮಂತ್ರಿಯನ್ನು ಬದಲಿಸಿದೆ, ತಮಗೆ ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀಡಿದೆ ಎಂಬುದನ್ನೆಲ್ಲ ಸಿಧು ಅವರು ಅಷ್ಟು ಬೇಗ ಮರೆತರೆ ಹೇಗೆ? ಒಂದೆರಡು ನೇಮಕದ ವಿಚಾರದಲ್ಲಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿ, ಪಕ್ಷದ ಹೈಕಮಾಂಡ್‌ ಭಾರಿ ದುರ್ಬಲ ಎಂದು ಸಾರಿದರೆ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವೇ?

ಪಂಜಾಬ್‌ ಮತ್ತು ದೇಶದ ಇತರ ಹಲವುರಾಜ್ಯಗಳಲ್ಲಿಯೂ ಆಂತರಿಕ ಕಚ್ಚಾಟದಿಂದಾಗಿ ಕಾಂಗ್ರೆಸ್‌ ಕಂಗೆಟ್ಟಿದೆ. ಸಮಸ್ಯೆಗಳನ್ನು ಪಕ್ಷವು ಬಗೆಹರಿಸುವ ಧೋರಣೆಯೇ ಪ್ರಶ್ನಾರ್ಹವಾಗಿದೆ. ಅಮರಿಂದರ್‌ ಅವರ ಬಗ್ಗೆ ಶಾಸಕರ ದೊಡ್ಡ ವರ್ಗದಲ್ಲಿ ಭಾರಿ ಅಸಮಾಧಾನವಿದೆ ಎಂಬುದು ಪಕ್ಷದ ಹೈಕಮಾಂಡ್‌ಗೆ ಬಹಳ ಹಿಂದಿನಿಂದಲೇ ಅರಿವಿತ್ತು. ನಿರ್ಧಾರ ಕೈಗೊಳ್ಳುವಿಕೆಯನ್ನು ಮುಂದೂಡುತ್ತಲೇ ಬಂದ ಪಕ್ಷವು ಇನ್ನೇನು ಚುನಾವಣೆ ನಡೆಯಲಿದೆ ಎಂಬ ಸಂದರ್ಭದಲ್ಲಿ ನಾಯಕತ್ವ ಬದಲಿಸಿದೆ. ದೇಶದ ಎಲ್ಲೆಡೆ ಹಿನ್ನಡೆಯನ್ನೇ ಕಾಣುತ್ತಿರುವ ಕಾಂಗ್ರೆಸ್‌ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಇತ್ತು. ಪಕ್ಷದ ಅಸ್ತಿತ್ವದ ದೃಷ್ಟಿಯಿಂದ ಇದು ಅನಿವಾರ್ಯವೂ ಆಗಿತ್ತು. ಆದರೆ, ಚುನಾವಣೆಯ ಹೊಸ್ತಿಲಲ್ಲಿ ತೆಗೆದುಕೊಂಡ ನಿರ್ಧಾರವು ಪಕ್ಷವನ್ನು ವಿಭಜನೆಯ ಅಂಚಿಗೆ ತಂದು ನಿಲ್ಲಿಸಿದೆ. ಪಕ್ಷದ ಒಳಗೆ ಬಣಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಪಂಜಾಬ್‌ ಮಾತ್ರವಲ್ಲ, ನಿರ್ಧಾರ ಕೈಗೊಳ್ಳಲು ಹಿಂದೆ ಮುಂದೆ ನೋಡಿದ್ದರಿಂದಾಗಿ ಬೇರೆ ರಾಜ್ಯಗಳನ್ನೂ ಕಾಂಗ್ರೆಸ್‌ ಕಳೆದುಕೊಂಡಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಮಧ್ಯಪ್ರದೇಶ. ಇನ್ನೂ ಹಿಂದಕ್ಕೆ ಹೋದರೆ ಉದಾಹರಣೆಗಳು ಇನ್ನಷ್ಟು ಸಿಗುತ್ತವೆ. ಪಂಜಾಬ್‌ನಲ್ಲಿ ಪಕ್ಷಕ್ಕೆ ಮತ್ತೆ ಬಿಕ್ಕಟ್ಟು ಎದುರಾಗಿರುವಾಗಲೂ ರಾಹುಲ್‌ ಗಾಧಿ– ಪ್ರಿಯಾಂಕಾ ಗಾಂಧಿ ಅವರನ್ನು ಒಳಗೊಂಡ ಹೈಕಮಾಂಡ್‌ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಪಕ್ಷದ ನೇತೃತ್ವದ ಸರ್ಕಾರ ಕಳಚಿ ಬೀಳುವ ಹಂತದಲ್ಲಿದೆ ಎನ್ನುವಾಗಲೂ ರಾಹುಲ್ ಅವರು ಪಂಜಾಬ್‌ನಿಂದ ದೂರದ ಕೇರಳದಲ್ಲಿಯೂ ಪ್ರಿಯಾಂಕಾ ಅವರು ಉತ್ತರಪ್ರದೇಶದಲ್ಲಿಯೂ ಇದ್ದರು. ರಾಜಕಾರಣದಲ್ಲಿ ಇರುವವರು ಪದ್ಮಪತ್ರೆಯ ಮೇಲಿನ ಜಲಬಿಂದುವಿನಂತೆ ತಾವು ಯಾವುದಕ್ಕೂ ಅಂಟಿಕೊಂಡವರಲ್ಲ ಎಂದು ಈಗಿನ ಸಂದರ್ಭ
ದಲ್ಲಿಯಂತೂ ಇರಲು ಸಾಧ್ಯವಿಲ್ಲ. ನಾಯಕರು ಹಾಗೆ ಇರುವುದೇ ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಕಾರಣವೂ ಆಗಿರಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಬಲ ಮತ್ತು ಪರಿಣಾಮಕಾರಿ ವಿರೋಧ ಪಕ್ಷದ ಅಗತ್ಯವೇನೂ ಇಲ್ಲ ಎಂದು ಕಾಂಗ್ರೆಸ್‌ ಭಾವಿಸಿದಂತೆ ಕಾಣಿಸುತ್ತಿದೆ. ರಾಜಕೀಯ ಅಧಿಕಾರಕ್ಕೆ ಏರುವುದು ಯಾವುದೇ ಪಕ್ಷದ ಗುರಿ ಎಂಬುದರಲ್ಲಿ ಅನುಮಾನ ಇಲ್ಲ. ಆದರೆ, ಎಲ್ಲ ಪಕ್ಷಗಳೂ ಅಧಿಕಾರದಲ್ಲಿದ್ದರೆ ಅಧಿಕಾರದಲ್ಲಿ ಇದ್ದವರು ತಪ್ಪು ಮಾಡಿದಾಗ ಅವರ ಕಿವಿ ಹಿಂಡಿ ಸರಿದಾರಿಗೆ ತರುವವರು ಯಾರು? ಸುದೀರ್ಘ ಕಾಲ ಅಧಿಕಾರವನ್ನು ಅನುಭವಿಸಿದ್ದೇ ಕಾಂಗ್ರೆಸ್‌ ಪಕ್ಷ ಈಗ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಒಂದು. ಸತತವಾಗಿ ಎರಡು ಲೋಕಸಭಾ ಚುನಾವಣೆಗಳಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್‌ ಮುಂದಿನ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಲಿ ಎಂದು ಬಯಸುತ್ತಿರುವಂತೆ ಕಾಣಿಸುತ್ತಿದೆ. ಇಲ್ಲದೇ ಇದ್ದರೆ, ಪಕ್ಷದಲ್ಲಿ ಒಂದರ ಹಿಂದೆ ಒಂದರಂತೆ ಬಿಕ್ಕಟ್ಟುಗಳು ಸೃಷ್ಟಿಯಾಗಲು ನಾಯಕರು ಅವಕಾಶ ಕೊಡುತ್ತಿರಲಿಲ್ಲ. ಪಕ್ಷವು ಶಿಥಿಲವಾಗುತ್ತಲೇ ಸಾಗುವಾಗ, ಒಳಕುಸಿತವನ್ನು ತಡೆಯುವ ಸಣ್ಣ ಪ್ರಯತ್ನವನ್ನಾದರೂ ಮಾಡದೇ ಇರುತ್ತಿರಲಿಲ್ಲ. ಕೈಗೊಂಡ ನಿರ್ಧಾರಗಳು ತಿರುಗೇಟು ನೀಡಿದಾಗ ಆತ್ಮಾವಲೋಕನದಿಂದ ತಪ್ಪಿಸಿಕೊಳ್ಳುತ್ತಿರಲಿಲ್ಲ. ಸುದೀರ್ಘ ಕಾಲ ನಿರ್ಧಾರ ಕೈಗೊಳ್ಳದೇ ಇದ್ದುದು, ಸಿಧುಗೆ ಅಧ್ಯಕ್ಷ ಸ್ಥಾನ, ಅಮರಿಂದರ್‌ ವಜಾ, ಚನ್ನಿ ನೇಮಕದಂತಹ ನಿರ್ಧಾರಗಳನ್ನು ಕೈಗೊಂಡ ರಾಹುಲ್–ಪ್ರಿಯಾಂಕಾ ಜೋಡಿಗೆ ಪಂಜಾಬ್‌ನ ಈಗಿನ ಸ್ಥಿತಿ ದೊಡ್ಡ ಹೊಡೆತ. ಜತೆಗೆ, ದೇಶದಲ್ಲಿ ಪಕ್ಷದ ಒಟ್ಟು ಸ್ಥಿತಿಯು ಅವರ ನಾಯಕತ್ವ ಮತ್ತು ನಿರ್ಧಾರ ಕೈಗೊಳ್ಳುವಿಕೆ ಸಾಮರ್ಥ್ಯದ ಮುಂದೆ ಸೃಷ್ಟಿಯಾಗಿರುವ ಅತ್ಯಂತ ದೊಡ್ಡ ಪ್ರಶ್ನಾರ್ಥಕ ಚಿಹ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT