ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ರಾಜಕಾರಣಿಗಳ ಸಡಿಲ ನಾಲಿಗೆ ಅಧೋಗತಿಗೆ ರಾಜ್ಯ ರಾಜಕಾರಣ

Last Updated 20 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ಸಮಕಾಲೀನ ರಾಜಕಾರಣವು ಪಕ್ಷಗಳ ತಾತ್ವಿಕ ಸಂಘರ್ಷವನ್ನು ಆಧರಿಸಿರುವುದರ ಬದಲು, ವ್ಯಕ್ತಿವಿರೋಧದ ಸ್ವರೂಪ ಪಡೆದುಕೊಂಡಿದೆ. ಇದು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಆತಂಕಕಾರಿ ಬೆಳವಣಿಗೆ

ಟಿಪ್ಪು ಸುಲ್ತಾನನನ್ನು ಮೇಲಕ್ಕೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನೂ ಮೇಲಕ್ಕೆ ಕಳಿಸಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಆಡಿರುವ ಮಾತು ಕೀಳು ಅಭಿರುಚಿಯಿಂದ ಕೂಡಿರುವಂತಹದ್ದು, ಜನಸಾಮಾನ್ಯರನ್ನು ಪ್ರಚೋದಿಸುವಂತಹದ್ದು ಹಾಗೂ ಅವರು ಪ್ರತಿನಿಧಿಸುವ ಸ್ಥಾನದ ಘನತೆಯನ್ನು ಕುಗ್ಗಿಸುವಂತಹದ್ದು. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಆಡಿರುವ ಸಚಿವರ ಮಾತುಗಳು ಉದ್ರೇಕಕಾರಿ ಆಗಿರುವುದು ಮಾತ್ರವಲ್ಲ, ಸಾರ್ವಜನಿಕ ಸಭ್ಯತೆಯಿಂದಲೂ ಕೂಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದಿಸೆಯಲ್ಲಿ ಜನಪ್ರತಿನಿಧಿಗಳು, ಅದರಲ್ಲೂ ಅಧಿಕಾರ ಸ್ಥಾನದಲ್ಲಿ ಇರುವವರು ಜನಸಾಮಾನ್ಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕು.

ಕೋಮುದ್ವೇಷದ ಮಾತುಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ, ಸಚಿವರ ಮಾತುಗಳು ದ್ವೇಷಭಾವನೆಗೆ ಉತ್ತೇಜನ ಕೊಡುವಂತಿವೆ. ಮಾಜಿ ಮುಖ್ಯಮಂತ್ರಿಯನ್ನು ಟೀಕಿಸುವ ಭರದಲ್ಲಿ, ಅವರನ್ನು ಮೇಲಕ್ಕೆ ಕಳಿಸಬೇಕು ಎಂದು ಹೇಳಿರುವುದು ಜನರ ಮೇಲೆ ಯಾವ ರೀತಿಯ ಪ್ರಭಾವ ಬೀರಬಹುದೆನ್ನುವ ವಿವೇಚನೆ ಸಚಿವರಿಗೆ ಇದ್ದಂತಿಲ್ಲ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿರುವ ಅವರು, ‘ಸಿದ್ದರಾಮಯ್ಯ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಹೇಳಿರುವುದನ್ನು ನೋಡಿದರೆ, ಆಡಿರುವ ಮಾತಿನ ಬಗ್ಗೆ ಅವರಿಗೆ ಪಶ್ಚಾತ್ತಾಪವೂ ಆದಂತಿಲ್ಲ. ಕಾರ್ಯಕರ್ತರು ಅಥವಾ ಮುಖಂಡರು ತಪ್ಪು ಮಾಡಿದಾಗ ಅವರನ್ನು ತಿದ್ದುವುದು ಹಾಗೂ ತಿಳಿಹೇಳುವುದು ಪಕ್ಷದ ಹಿರಿಯ ಮುಖಂಡರ ಜವಾಬ್ದಾರಿ.

ಆದರೆ, ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಸಚಿವರಿಗೆ ತಿಳಿ ಹೇಳುವುದಿರಲಿ, ಅವರ ಮಾತಿಗೆ ಸ್ಪಷ್ಟೀಕರಣ ನೀಡುವ ಗೋಜಿಗೂ ಮುಖ್ಯಮಂತ್ರಿಯಾಗಲೀ, ಪಕ್ಷವಾಗಲೀ ಹೋಗಿಲ್ಲ. ಈ ಮೌನವನ್ನು ಅಶ್ವತ್ಥನಾರಾಯಣ ಅವರ ಮಾತಿಗೆ ಪಕ್ಷದ ಸಮ್ಮತಿಯೆಂದು ಭಾವಿಸಬಹುದೇ? ಭಿನ್ನಮತ ವ್ಯಕ್ತಪಡಿಸಿದ ಕಾರಣಕ್ಕಾಗಿ ಇಬ್ಬರು ವಿಚಾರವಾದಿಗಳ ಹತ್ಯೆ ನಡೆದಿದ್ದನ್ನು ಕರ್ನಾಟಕ ಇನ್ನೂ ಮರೆತಿಲ್ಲ. ಅಂಥ ಕೃತ್ಯಗಳು ಪುನರಾವರ್ತನೆಗೊಳ್ಳದಂತೆ ಎಚ್ಚರ ಹಾಗೂ ವಿವೇಕ ಪ್ರದರ್ಶಿಸಬೇಕಾದ ಸರ್ಕಾರವೇ ದ್ವೇಷ ಭಾಷಣಕ್ಕೆ ಕುಮ್ಮಕ್ಕು ಕೊಡುವಂತೆ ನಡೆದುಕೊಳ್ಳುತ್ತಿರುವುದು ದುಃಖದ ಸಂಗತಿ.

ಬಿಜೆ‍ಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ‘ಟಿಪ್ಪುವನ್ನು ಪ್ರೀತಿಸುವವರು ಈ ನೆಲದಲ್ಲಿ ಉಳಿಯಬಾರದು. ಹನುಮನ ಭಜನೆ ಮಾಡುವವರು ಇಲ್ಲಿರಬೇಕು’ ಎಂದು ಹೇಳಿರುವುದು ಕೂಡ ಸಮಾಜದಲ್ಲಿ ಒಡಕು ಮೂಡಿಸುವಂತಹ ಮಾತೇ. ಈ ರಾಜ್ಯದಲ್ಲಿ ಯಾರು ಇರಬೇಕು, ಯಾರು ಇರಬಾರದು ಎನ್ನುವುದನ್ನು ನಿರ್ಧರಿಸುವುದಕ್ಕೆ ಟಿಪ್ಪು ಅಥವಾ ಹನುಮ ಮಾನದಂಡ ಆದುದು ಯಾವಾಗಿನಿಂದ? ಟಿಪ್ಪು ಮತ್ತು ಹನುಮನ ಆಧಾರದ ಮೇಲೆ ಕಾನೂನು ನಿರ್ಧಾರ ಆಗುವುದಾದರೆ, ಸಂವಿಧಾನಕ್ಕೆ ಯಾವ ಅರ್ಥವಿದೆ? ಸಮಕಾಲೀನ ರಾಜಕಾರಣವು ಪಕ್ಷಗಳ ತಾತ್ವಿಕ ಸಂಘರ್ಷವನ್ನು ಆಧರಿಸಿರುವುದರ ಬದಲು, ವ್ಯಕ್ತಿವಿರೋಧದ ಸ್ವರೂಪ ಪಡೆದುಕೊಂಡಿದೆ.

ಇದು ಪ್ರಜಾಪ್ರಭುತ್ವವನ್ನು ಶಿಥಿಲಗೊಳಿಸುವ ಆತಂಕಕಾರಿ ಬೆಳವಣಿಗೆ. ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವಂತೆ ರಾಜಕೀಯ ಪಕ್ಷಗಳ ಮುಖಂಡರು ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವ ಉದಾಹರಣೆಗಳು ಹೆಚ್ಚುತ್ತಿವೆ. ಪರಸ್ಪರ ಕೆಸರು ಎರಚಿಕೊಳ್ಳುವುದರ ಜೊತೆಗೆ, ಇತಿಹಾಸದ ವ್ಯಕ್ತಿತ್ವಗಳನ್ನೂ ಬೀದಿ ರಾಜಕೀಯಕ್ಕೆ ಎಳೆದುತರಲಾಗುತ್ತಿದೆ. ಜನಸಾಮಾನ್ಯರ ತವಕ
ತಲ್ಲಣಗಳಿಗೆ ಯಾವ ಪಕ್ಷ ಯಾವ ರೀತಿ ಸ್ಪಂದಿಸುತ್ತಿದೆ ಎನ್ನುವುದರ ಆಧಾರದ ಮೇಲೆ ಚುನಾವಣೆ ನಡೆಯಬೇಕೇ ವಿನಾ ಇತಿಹಾಸ–ಪುರಾಣದ ಆಗುಹೋಗುಗಳ ಮೇಲಲ್ಲ. ಈವರೆಗೆ ಮಾತುಗಳ ಮೂಲಕವೇ ಹಲ್ಲೆ ನಡೆಸುತ್ತಿದ್ದ ರಾಜಕಾರಣಿಗಳು, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ‘ಮುಗಿಸುವ’ ಮಾತುಗಳನ್ನಾಡುತ್ತಿದ್ದಾರೆ.

ಸಮಾಜದಲ್ಲಿ ಅಶಾಂತಿ ಉಂಟುಮಾಡುವಂತಹ ಹೇಳಿಕೆಗಳು ಬಹಿರಂಗವಾಗಿ ವ್ಯಕ್ತವಾದ ಸಂದರ್ಭದಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಬೇಕು. ಆ ಕೆಲಸವೂ ಅಶ್ವತ್ಥನಾರಾಯಣ ಅವರ ದ್ವೇಷದ ಮಾತುಗಳಿಗೆ ಸಂಬಂಧಿಸಿದಂತೆ ಆಗಿಲ್ಲ. ಪೊಲೀಸ್‌ ಇಲಾಖೆಯ ಈ ನಿಷ್ಕ್ರಿಯತೆ, ರಾಜ್ಯದಲ್ಲಿ ಕಾನೂನು ಎಲ್ಲರಿಗೂ ಏಕಪ್ರಕಾರದಲ್ಲಿ ಅನ್ವಯಿಸುವುದಿಲ್ಲ ಎನ್ನುವುದನ್ನು ಸೂಚಿಸುತ್ತಿರುವಂತಿದೆ. ದ್ವೇಷ ಭಾಷಣಗಳು ಹೆಚ್ಚುತ್ತಿದ್ದರೂ ನಿಗ್ರಹಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗಷ್ಟೇ ಅಸಮಾಧಾನ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶವನ್ನು ಜಾರಿಗೊಳಿಸಬೇಕಾದ ಸರ್ಕಾರದ ಪ್ರತಿನಿಧಿಗಳೇ ಹೊಡಿ–ಕೊಲ್ಲು ರೂಪದ ಕೆರಳಿಸುವ ಮಾತುಗಳನ್ನು ಮತ್ತೆ ಮತ್ತೆ ಆಡುತ್ತಲೇ ಇರುವುದು ದುರದೃಷ್ಟಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT