ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ – ಪಾಕಿಸ್ತಾನದ ರಾಜಕೀಯ ಬಿಕ್ಕಟ್ಟು: ಪ್ರಜಾಸತ್ತೆಯ ಉಳಿವು ತುರ್ತು ಅಗತ್ಯ

Last Updated 4 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಬಿಕ್ಕಟ್ಟು ಭಾರತಕ್ಕೆ ಮತ್ತು ಇಡೀ ಜಗತ್ತಿಗೆ ಕಳವಳಕಾರಿ ವಿದ್ಯಮಾನ. 2018ರಲ್ಲಿ ಪ್ರಜಾಸತ್ತಾತ್ಮಕವಾಗಿ ಅಧಿಕಾರಕ್ಕೆ ಏರಿದ ಇಮ್ರಾನ್ ಖಾನ್‌ ನೇತೃತ್ವದ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ ಅವಿಶ್ವಾಸ ನಿರ್ಣಯವು ರಾಜಕೀಯ ಕ್ಷೋಭೆಗೆ ಕಾರಣವಾಗಿದೆ. ಆ ದೇಶದ ಸಂಸತ್ತು ನ್ಯಾಷನಲ್‌ ಅಸೆಂಬ್ಲಿಯಲ್ಲಿ, ಅವಿಶ್ವಾಸ ನಿರ್ಣಯದ ಮೇಲೆ ಭಾನುವಾರ ಚರ್ಚೆ ನಡೆಯಬೇಕಿತ್ತು. ಆದರೆ, ಇಮ್ರಾನ್‌ ಅವರ ನಿಷ್ಠರಾಗಿರುವ ಉಪ ಸ್ಪೀಕರ್‌ ಖಾಸಿಂ ಸೂರಿ ಅವರು ಅವಿಶ್ವಾಸ ನಿರ್ಣಯವೇ ಅಸಾಂವಿಧಾನಿಕ ಎಂದು ಅದನ್ನು ಸ್ವೀಕರಿಸುವುದಕ್ಕೇ ಒಪ್ಪಲಿಲ್ಲ. ಇಮ್ರಾನ್‌ ನೇತೃತ್ವದ ಸರ್ಕಾರಕ್ಕೆ ಸಂಸತ್ತಿನಲ್ಲಿ ಬಹುಮತ ಇಲ್ಲ ಎಂಬುದು ಅದಕ್ಕೂ ಮೊದಲೇ ನಿಚ್ಚಳವಾಗಿತ್ತು. 342 ಸದಸ್ಯ ಬಲದ ಸಂಸತ್ತಿನಲ್ಲಿ ಸರಳ ಬಹುಮತಕ್ಕೆ 172 ಸಂಸದರ ಬೆಂಬಲ ಬೇಕು. ಇಮ್ರಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ ಪಕ್ಷದ ಮಿತ್ರ ಪಕ್ಷವಾಗಿದ್ದ ಮುತ್ತಹಿದಾ ಖ್ವಾಮಿ ಮೂವ್‌ಮೆಂಟ್‌–ಪಾಕಿಸ್ತಾನ ಪಕ್ಷವು ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಿದೆ. ಅದರೊಂದಿಗೆ ಇಮ್ರಾನ್‌ ನೇತೃತ್ವದ ಸರ್ಕಾರವು ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದೆ. ವಿರೋಧ ಪಕ್ಷಗಳ ಸದಸ್ಯ ಬಲವು 177ಕ್ಕೆ ಏರಿದರೆ, ಸರ್ಕಾರದ ಬಲವು 164ಕ್ಕೆ ಕುಸಿದಿದೆ. ಹಾಗಾಗಿಯೇ ಅವಿಶ್ವಾಸ ನಿರ್ಣಯವನ್ನು ಎದುರಿಸುವ ಬದಲಿಗೆ ಒಳದಾರಿಗಳನ್ನು ಕಂಡುಕೊಳ್ಳಲು ಇಮ್ರಾನ್‌ ಯತ್ನಿಸಿದ್ದಾರೆ. ಸಂಸತ್ತನ್ನು ವಿಸರ್ಜಿಸುವಂತೆ ಇಮ್ರಾನ್‌ ಮಾಡಿದ ಶಿಫಾರಸನ್ನು ಅಧ್ಯಕ್ಷ ಆರಿಫ್‌ ಅಲ್ವಿ ಅವರು ಅನುಮೋದಿಸಿದರು. ಇವೆಲ್ಲವೂ ಪ್ರಜಾಪ್ರಭುತ್ವವನ್ನು ಹಳಿ ತಪ್ಪಿಸುವ ಚಟುವಟಿಕೆಗಳು ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತದೆ. ಸ್ವಾತಂತ್ರ್ಯಾನಂತರದ ಮೂರು ದಶಕಕ್ಕೂ ಹೆಚ್ಚು ಕಾಲ ಸೇನಾಡಳಿತದಲ್ಲಿ ಕಳೆದ ದೇಶವೊಂದರ ಪ್ರಜಾಸತ್ತಾತ್ಮಕ ಸರ್ಕಾರವು ಈ ರೀತಿಯಲ್ಲಿ ನಡೆದುಕೊಂಡಿರುವುದು ವಿಷಾದನೀಯ. ಆ ದೇಶದ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ವಿಷಯವನ್ನು ಕೈಗೆತ್ತಿಕೊಂಡು ವಿಚಾರಣೆ ನಡೆಸುತ್ತಿದೆ. ಕೋರ್ಟ್‌ನ ಮುಂದಿನ ತೀರ್ಪು ಪ್ರಜಾಸತ್ತೆಯನ್ನು ಉಳಿಸುವ ದಿಸೆಯಲ್ಲಿ ನೆರವಾಗಲಿ.

ಪಾಕಿಸ್ತಾನದಂತಹ ದೇಶದ ರಾಜಕೀಯ ಅಸ್ಥಿರತೆಯು ಭಾರತದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯ ಹೆಚ್ಚು. ಪಾಕಿಸ್ತಾನವು ನಾಲ್ಕು ಬಾರಿ ಸೇನೆಯ ನಿರಂಕುಶ ಆಳ್ವಿಕೆಗೆ ಒಳಪಟ್ಟಿತ್ತು. ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ, ಅಧಿಕಾರ ಪಡೆದುಕೊಳ್ಳಲು ಸೇನೆಯು ಹಲವು ಬಾರಿ ಯತ್ನಿಸಿತ್ತು. ಅಲ್ಲಿನ ಚುನಾಯಿತ ಸರ್ಕಾರವು ಸೇನೆಯ ಅಂಕುಶದಲ್ಲಿಯೇ ಇರುತ್ತದೆ ಎಂಬುದಕ್ಕೆ ಹಲವು ಉದಾಹರಣೆಗಳು ಇವೆ. ಸೇನೆಯ ಮುಖ್ಯಸ್ಥ ಮತ್ತು ಇಮ್ರಾನ್‌ ನಡುವಣ ಸಂಬಂಧ ಸೌಹಾರ್ದಯುತವಾಗಿಲ್ಲ ಎಂಬ ವರದಿಗಳು ನಾಲ್ಕೈದು ತಿಂಗಳ ಹಿಂದೆಯೇ ಪ್ರಕಟವಾಗಿದ್ದವು. ಪಾಕಿಸ್ತಾನದ ಪ್ರಭಾವಿ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥರ ನೇಮಕದ ವಿಚಾರದಲ್ಲಿ ಪ್ರಧಾನಿ ಮತ್ತು ಸೇನೆಯ ಮುಖ್ಯಸ್ಥರ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ತಮ್ಮ ನಿಷ್ಠಾವಂತ ಫೈಝ್‌ ಹಮೀದ್‌ ಅವರನ್ನು ಈ ಹುದ್ದೆಗೆ ನೇಮಿಸಲು ಇಮ್ರಾನ್‌ ಬಯಸಿದ್ದರು. ಆದರೆ, ಸೇನಾ ಮುಖ್ಯಸ್ಥ ಜನರಲ್‌ ಖಮರ್‌ ಜಾವೇದ್‌ ಬಾಜ್ವಾ ಅವರು ಲೆ.ಜ. ನದೀಮ್‌ ಅಂಜುಂ ಅವರನ್ನು ನೇಮಿಸಿದರು. ಇಮ್ರಾನ್‌ ವಿರುದ್ಧದ ಅವಿಶ್ವಾಸ ನಿರ್ಣಯದ ಹಿಂದೆಯೂ ಸೇನೆಯ ಕೈವಾಡ ಇದೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಬಳಿ 150ಕ್ಕೂ ಹೆಚ್ಚು ಅಣ್ವಸ್ತ್ರಗಳಿವೆ. ಲಷ್ಕರ್‌–ಎ–ತಯಬಾ, ಅಲ್‌ ಕೈದಾ, ಜೈಷ್‌ ಎ ಮೊಹಮ್ಮದ್‌ ಮುಂತಾದ ಭಾರತ ವಿರೋಧಿ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿನೆಲೆಯೂರಿವೆ. ಸ್ಥಿರ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗಲೇ ಯಾವುದೇ ಅಂಕೆ ಇಲ್ಲದೆ ಈ ಉಗ್ರಗಾಮಿ ಸಂಘಟನೆಗಳು ಭಾರತವನ್ನು ಕಾಡಿವೆ. ಸೇನೆಯ ಆಳ್ವಿಕೆ ಅಥವಾ ಅಸ್ಥಿರ ಸರ್ಕಾರ ಇದ್ದಾಗ ಈ ಸಂಘಟನೆಗಳ ಉಪಟಳ ಇನ್ನಷ್ಟು ಹೆಚ್ಚುವ ಅಪಾಯ ಇದೆ. ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸೇನೆ ಮತ್ತು ಐಎಸ್‌ಐನ ಕುಮ್ಮಕ್ಕೂ ಇರುತ್ತದೆ ಎಂಬುದು ರಹಸ್ಯವೇನಲ್ಲ. ವಿವೇಕಹೀನರ ಕೈಗೆ ಅಣ್ವಸ್ತ್ರದ ನಿಯಂತ್ರಣ ಸಿಗುವುದು, ಉಗ್ರರಿಗೆ ಮುಕ್ತ ಅವಕಾಶ ದೊರೆಯುವುದು ಇಡೀ ಜಗತ್ತಿಗೆ ಅಪಾಯಕಾರಿ. ಪಾಕಿಸ್ತಾನವು ಮತ್ತೆ ನಿರಂಕುಶ ಆಳ್ವಿಕೆಗೆ ಒಳಗಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಇಮ್ರಾನ್‌ ಖಾನ್‌, ಅವರ ಪಕ್ಷ, ವಿರೋಧ ಪಕ್ಷ, ದೇಶದ ಅಧ್ಯಕ್ಷ, ಸುಪ್ರೀಂ ಕೋರ್ಟ್‌ ಪ್ರದರ್ಶಿಸಬೇಕು. ಜನತಂತ್ರವನ್ನು ತುಳಿದಾದರೂ ಸರಿ ಅಧಿಕಾರದಲ್ಲಿ ಉಳಿಯಬೇಕು ಎಂಬ ದುರಾಸೆಯನ್ನು ಇಮ್ರಾನ್‌ ಖಾನ್‌ ಬಿಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT