ಚಿಕ್ಕಮಗಳೂರು ಜಿಲ್ಲೆಯೊಂದರಲ್ಲಿಯೇ 36,785 ಎಕರೆಯಷ್ಟು ಕಾಡಿನ ಒತ್ತುವರಿ ಆಗಿದೆ ಎಂದು ಅರಣ್ಯ ಇಲಾಖೆ ಗುರ್ತಿಸಿದೆ. ಈ ಒತ್ತುವರಿಯು ಆತಂಕ ಮೂಡಿಸುವ ವಿದ್ಯಮಾನವಾಗಿದೆ. ಒಂದೆಡೆ, ಕಾಡಿನ ನಾಶ ಅವ್ಯಾಹತವಾಗಿ ನಡೆಯುತ್ತಿದೆ. ಇನ್ನೊಂದೆಡೆ ಅರಣ್ಯ ಪ್ರದೇಶ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿರುವುದು ಬೆಳಕಿಗೆ ಬರುತ್ತಿದೆ. ಕಾಡನ್ನು ಕಬಳಿಸುತ್ತಿರುವ ಬೆಳವಣಿಗೆ ಕಾನೂನು ಉಲ್ಲಂಘನೆಯಷ್ಟೇ ಆಗಿರದೆ, ಅರಣ್ಯ ಹಾಗೂ ಅಲ್ಲಿನ ಜೀವಿಗಳ ಸುರಕ್ಷತೆಯ ಪ್ರಶ್ನೆಯೂ ಆಗಿದೆ. ನಾಡಿನ ಪರಿಸರದ ಸುರಕ್ಷತೆ, ಜೀವವೈವಿಧ್ಯ, ಸಾಮಾಜಿಕ ಸ್ವಾಸ್ಥ್ಯ ಮತ್ತು ಕಾನೂನು ಆಡಳಿತದ ಮೇಲಿನ ಸಂಘಟಿತ ದಾಳಿಯ ರೂಪದಲ್ಲಿ ಈ ಒತ್ತುವರಿಯನ್ನು ನೋಡಬೇಕಾಗಿದೆ. ತುಂಡು ಭೂಮಿಯ ನಿರೀಕ್ಷೆಯಲ್ಲಿ ಜೀವಮಾನವನ್ನೇ ಕಳೆಯುವವರು ಇರುವ ಸಮಾಜದಲ್ಲಿಯೇ ಕೆಲವರು ದೊಡ್ಡ ಪ್ರಮಾಣದ ಭೂಮಿಯನ್ನು ಅತಿಕ್ರಮಿಸುತ್ತಿದ್ದಾರೆ. ಇಂಥ ಕೃತ್ಯಗಳಿಗೆ ಕಾರಣಕರ್ತರನ್ನಾಗಿ ಭೂಮಾಫಿಯಾವನ್ನಷ್ಟೇ ಗುರ್ತಿಸಲಾಗದು. ಅಧಿಕಾರಿಗಳ ಸಹಕಾರವಿಲ್ಲದೆ ಸಾವಿರಾರು ಎಕರೆ ಭೂಮಿಯನ್ನು ಕಬಳಿಸುವುದು ಸಾಧ್ಯವಿಲ್ಲ. ಮೀಸಲು ಅರಣ್ಯ, ರಕ್ಷಿತ ಅರಣ್ಯ, ಗ್ರಾಮ ಅರಣ್ಯ, ಸೆಕ್ಷನ್–4 ಘೋಷಿತ ಅರಣ್ಯ, ವರ್ಗೀಕರಿಸಿದ ಅರಣ್ಯ ಸೇರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 2,12,942 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಜಿಲ್ಲೆಯ ಮೂರು ಅರಣ್ಯ ವಿಭಾಗಗಳಲ್ಲಿ 9,807 ಅತಿಕ್ರಮಣ ಪ್ರಕರಣಗಳನ್ನು ಅರಣ್ಯ ಇಲಾಖೆ ದಾಖಲಿಸಿದೆ. ಕೊಪ್ಪ ವಿಭಾಗದ ವ್ಯಾಪ್ತಿಯಲ್ಲಿ 28,630 ಎಕರೆ, ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲಿ 7,857 ಎಕರೆ ಹಾಗೂ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 296 ಎಕರೆ ಒತ್ತುವರಿ ಆಗಿದೆ ಎಂದು ಗುರ್ತಿಸಲಾಗಿದೆ.

ಅರಣ್ಯಪ್ರದೇಶದ ಜೊತೆಗೆ ನಗರ, ಪಟ್ಟಣ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯ ಅತಿಕ್ರಮಣ ನಡೆದಿದೆ. ನಾಗಮಂಗಲ ತಾಲ್ಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೂರಾರು ಕೋಟಿ ಮೌಲ್ಯದ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಕಬಳಿಸಿರುವ ಪ್ರಕರಣ ಇತ್ತೀಚೆಗಷ್ಟೇ ವರದಿಯಾಗಿದೆ. ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಜಿಲ್ಲೆಗಳಲ್ಲಿಯೂ ಕಾಡನ್ನು ಕಬಳಿಸುವ ಪ್ರಯತ್ನಗಳು ನಡೆದಿವೆ.ಕೋಲಾರ, ಹಾಸನ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಹಾಗೂ ಸರ್ಕಾರಿ ಭೂಮಿಯ ಕಬಳಿಕೆ ಪ್ರಕರಣಗಳು ವರದಿಯಾಗಿವೆ. ರೆಸಾರ್ಟ್, ಹೋಂ ಸ್ಟೇ, ಅಕ್ರಮ ಗಣಿಗಾರಿಕೆ, ಕೃಷಿಭೂಮಿ ವಿಸ್ತರಣೆ, ಮೊದಲಾದವುಗಳ ಹೆಸರಿನಲ್ಲಿ ಮಲೆನಾಡಿನಲ್ಲಿ ಅರಣ್ಯ ಒತ್ತುವರಿ ವ್ಯಾಪಕವಾಗಿ ನಡೆದಿದೆ. ರಾಜ್ಯದಲ್ಲಿ ₹50 ಸಾವಿರ ಕೋಟಿ ಮೌಲ್ಯದ ಒತ್ತುವರಿ ಅರಣ್ಯ ಭೂಮಿಯನ್ನು ಇಲಾಖೆಯ ವಶಕ್ಕೆ ಮರಳಿ ಪಡೆಯಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ನಗರ ಮತ್ತು ಪಟ್ಟಣಗಳಿಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶ ಒತ್ತುವರಿ ಆಗದಂತೆ ತಡೆಯಲು ಬೇಲಿ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ. ಅರಣ್ಯದ ಸ್ವರೂಪ ಇದ್ದರೂ ಕೆಲವು ಕಡೆಗಳಲ್ಲಿ ‘ಅರಣ್ಯ’ ಎಂದು ಮ್ಯುಟೇಶನ್ (ಇಂಡೀಕರಣ) ಆಗಿಲ್ಲ. ಆರ್ಟಿಸಿಯಲ್ಲಿ ಅರಣ್ಯ ಎಂದು ದಾಖಲಾಗದ ಕಾರಣ ಅಕ್ರಮ ಮಂಜೂರಾತಿ, ಒತ್ತುವರಿ ನಡೆಯುತ್ತಿದ್ದು, ಇದನ್ನು ತಡೆಯಲು ಮ್ಯುಟೇಶನ್ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವರು ಹೇಳಿದ್ದಾರೆ. ಆದರೆ, ಸಮಸ್ಯೆ ಇರುವುದು ಕಾನೂನುಗಳಿಗೆ ಸಂಬಂಧಿಸಿದ್ದಲ್ಲ; ಅವುಗಳ ಅನುಷ್ಠಾನದ್ದು.

ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವುದಕ್ಕೆ ಕಾಡಿನ ಒತ್ತುವರಿಯೂ ಒಂದು ಕಾರಣವಾಗಿದೆ. ಮನುಷ್ಯರ ಹಸ್ತಕ್ಷೇಪದಿಂದ ಕಾಡುಪ್ರಾಣಿಗಳ ನೆಲೆಗಳು ಹಾನಿಗೊಳಗಾಗುತ್ತವೆ ಹಾಗೂ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ. ಜೀವಜಗತ್ತನ್ನು ಪೊರೆಯುವ ತಾಯಿಯ ರೂಪದಲ್ಲಿ ಕಾಡನ್ನು ಕಾಣುವ ಬದಲು, ನೋಟಿನ ಕಂತೆಗಳ ರೂಪದಲ್ಲಿ ನೋಡಲಾಗುತ್ತಿದೆ. ಮಳೆಚಕ್ರ ಅಸ್ತವ್ಯಸ್ತಗೊಳ್ಳುವುದು, ನದಿಗಳ ನೀರಿನ ಪ್ರಮಾಣ ಕ್ಷೀಣಿಸುವುದು, ತಾಪಮಾನ ಏರಿಕೆ ಹಾಗೂ ಮಣ್ಣಿನ ಸವಕಳಿಯಂತಹ ದುಷ್ಪರಿಣಾಮಗಳಿಗೆ ಅರಣ್ಯವನ್ನು ಶಿಥಿಲಗೊಳಿಸುವ ಪ್ರಯತ್ನಗಳು ಕಾರಣವಾಗುತ್ತವೆ. ಭವಿಷ್ಯದ ತಲೆಮಾರುಗಳ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಇಂಥ ನಡವಳಿಕೆ ಅಕ್ಷಮ್ಯ. ಪರಿಸರ ಕಾಳಜಿ ಎನ್ನುವುದು ಕೆಲವರ ‘ಅರಣ್ಯ ರೋದನ’ವಾಗಿಯಷ್ಟೇ ಉಳಿದಿರುವ ಸಂದರ್ಭದಲ್ಲಿ ಕಾಡನ್ನು ಕಬಳಿಸುತ್ತಿರುವ ಬೆಳವಣಿಗೆ ತೀವ್ರತೆ ಪಡೆದುಕೊಳ್ಳುತ್ತಿರುವಂತಿದೆ. ಒತ್ತುವರಿಯನ್ನು ತೆರವುಗೊಳಿಸುವಲ್ಲಿ ಸರ್ಕಾರದ ಇಚ್ಛಾಶಕ್ತಿಯೊಂದಿಗೆ ಸ್ಥಳೀಯರ ಸಹಭಾಗಿತ್ವ ಅಗತ್ಯವಾಗಿದೆ. ರಾಜ್ಯದ ಅರಣ್ಯ ಪ್ರದೇಶಗಳನ್ನು ಉಪಗ್ರಹ ಸಮೀಕ್ಷೆಗೆ ಒಳಪಡಿಸುವ ಮೂಲಕ ಅವುಗಳ ಗಡಿಗಳನ್ನು ಗೊತ್ತುಪಡಿಸಬೇಕಾಗಿದೆ. ಅರಣ್ಯ ಒತ್ತುವರಿಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.