ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ: ದೊಡ್ಡ ಆರ್ಥಿಕ ಹೊರೆ ಸೃಷ್ಟಿಸುವ ತೆರಿಗೆ ಪೂರ್ವಾನ್ವಯ ನ್ಯಾಯಯುತವಲ್ಲ

Published : 22 ಆಗಸ್ಟ್ 2024, 0:25 IST
Last Updated : 22 ಆಗಸ್ಟ್ 2024, 0:25 IST
ಫಾಲೋ ಮಾಡಿ
Comments

ಗಣಿ ಗುತ್ತಿಗೆ ಪ್ರದೇಶಗಳು ಮತ್ತು ಖನಿಜಗಳಿರುವ ಜಮೀನುಗಳ ಮೇಲೆ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ನೀಡಿರುವ ತೀರ್ಪು ಹಲವು ವಿಷಯಗಳಲ್ಲಿ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಗಣಿಗಳು ಮತ್ತು ಖನಿಜ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೂ ಇದೆ ಎಂದು ಸುಪ್ರೀಂ ಕೋರ್ಟ್‌ ಜುಲೈ 25ರಂದು ತೀರ್ಪು ನೀಡಿತ್ತು. ಈ ತೀರ್ಪಿನ ಆಧಾರದಲ್ಲಿ 2005ರ ಏಪ್ರಿಲ್‌ 1ರ ನಂತರದ ಗಣಿಗಾರಿಕೆ ಚಟುವಟಿಕೆಗಳಿಗೆ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸಬಹುದು ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ಸ್ಪಷ್ಟಪಡಿಸಿದೆ. ತಮ್ಮ ಆರ್ಥಿಕ ಅಧಿಕಾರವನ್ನು ವ್ಯಾಪಕವಾಗಿ ಮೊಟಕುಗೊಳಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರಗಳು ದೂರುತ್ತಿರುವ ಸಂದರ್ಭದಲ್ಲೇ ಒಕ್ಕೂಟ ವ್ಯವಸ್ಥೆಯ ವಿತ್ತೀಯ ತತ್ವಗಳನ್ನು ಎತ್ತಿ ಹಿಡಿಯುವಂತಹ ಈ ತೀರ್ಪನ್ನು ದೊಡ್ಡ ಪ್ರಮಾಣದಲ್ಲಿ ಸ್ವಾಗತಿಸಲಾಗಿತ್ತು. ಗಣಿಗಾರಿಕೆ ಚಟುವಟಿಕೆಗಳ ಮೇಲಿನ ರಾಯಧನ ಮತ್ತು ತೆರಿಗೆ ಎರಡೂ ಭಿನ್ನವಾದುವು ಎಂದು ಸ್ಪಷ್ಟಪಡಿಸಿದ್ದ ನ್ಯಾಯಾಲಯವು ರಾಜ್ಯ ಸರ್ಕಾರಗಳು ತಮ್ಮ ಸಂಪತ್ತಿನ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಹೊಂದಿವೆ ಎಂದು ಹೇಳಿದೆ. ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ ಎಂದು 1991ರಲ್ಲಿ ತಾನೇ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಅಸಿಂಧುಗೊಳಿಸಿದೆ. ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪೂರ್ವಾನ್ವಯವಾಗುವಂತೆ ತೆರಿಗೆ ವಿಧಿಸಿ, ವಸೂಲಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಪೂರ್ವಾನ್ವಯವಾಗಿ ತೆರಿಗೆ ವಿಧಿಸುವುದು ತಾತ್ವಿಕವಾಗಿ ಕೆಟ್ಟ ಮತ್ತು ನ್ಯಾಯಯುತವಲ್ಲದ ಕ್ರಮ. ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಜಾರಿಯಲ್ಲಿರುವ ಕಾನೂನುಗಳ ಆಧಾರದಲ್ಲಿ ಕಂಪನಿಗಳು ಮತ್ತು ವ್ಯಕ್ತಿಗಳು ತೆರಿಗೆಗೆ ಸಂಬಂಧಿಸಿದಂತೆ ತಮ್ಮ ನಿರ್ಧಾರಗಳನ್ನು ಕೈಗೊಂಡಿರುತ್ತಾರೆ. ಈಗ ಅವರಿಗೆ ಹೊರೆಯಾಗುವ ರೀತಿಯಲ್ಲಿ ಕಾನೂನಿನ ಬದಲಾವಣೆ ಮಾಡುವುದು ತಪ್ಪು. ಅಂತಹ ಕ್ರಮಗಳಿಗೆ ಸುಪ್ರೀಂ ಕೋರ್ಟ್‌ ಈ ಹಿಂದೆ ಅಸಮ್ಮತಿ ವ್ಯಕ್ತಪಡಿಸಿತ್ತು. ಕೇನ್‌ ಮತ್ತು ವೊಡಾಫೋನ್‌ ಪ್ರಕರಣಗಳಲ್ಲಿ ಪೂರ್ವಾನ್ವಯ ಆಗುವಂತೆ ತೆರಿಗೆ ವಿಧಿಸುವ ಕ್ರಮಕ್ಕೆ ವಿರುದ್ಧವಾಗಿ ಅಂತರರಾಷ್ಟ್ರೀಯ ನ್ಯಾಯಮಂಡಳಿಗಳು ಆದೇಶ ನೀಡಿವೆ. ಕೇಂದ್ರ ಸರ್ಕಾರವು 2021ರಲ್ಲಿ ಕಾನೂನು ರೂಪಿಸುವ ಮೂಲಕ ಪೂರ್ವಾನ್ವಯವಾಗಿ ತೆರಿಗೆ ವಿಧಿಸುವ ಕ್ರಮವನ್ನು ರದ್ದುಪಡಿಸಿತ್ತು. ಆದರೆ, ಈಗ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಆ ಕ್ರಮವು ಮತ್ತೆ ಚಾಲ್ತಿಗೆ ಬಂದಿದೆ. ಅಸ್ಥಿರ ಮತ್ತು ಊಹಿಸಲಾಗದಂತಹ ತೆರಿಗೆ ಪದ್ಧತಿಯು ದೇಶದ ಆರ್ಥಿಕ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದು ದೇಶವು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಲು ಕಾರಣವಾಗಬಹುದು.

ಈ ತೀರ್ಪು ಗಣಿ ಕಂಪನಿಗಳ ಮೇಲೆ ದೊಡ್ಡ ಪ್ರಮಾಣದ ಆರ್ಥಿಕ ಹೊರೆಯನ್ನು ಹೊರಿಸಲಿದೆ. ಅಲ್ಲದೇ ಇದು ಖನಿಜ ಉತ್ಪನ್ನಗಳ ದರ ಏರಿಕೆಗೆ ಮತ್ತು ಆ ಮೂಲಕ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ. ಕಲ್ಲಿದ್ದಲಿನ ದರ ಹೆಚ್ಚಳವಾಗಲಿದ್ದು, ಅದರ ಪರಿಣಾಮವಾಗಿ ವಿದ್ಯುತ್‌ ದರವೂ ಏರಿಕೆಯಾಗಲಿದೆ. ಇದರಿಂದ ವಿದ್ಯುತ್‌ ಪೂರೈಕೆಯ ಮೇಲೆ ದುಷ್ಪರಿಣಾಮವಾಗಲಿದೆ. ಕೈಗಾರಿಕೆಗಳಿಗೆ ವಿದ್ಯುತ್‌ ಅತ್ಯವಶ್ಯಕವಾಗಿರುವುದರಿಂದ ಈ ಬೆಳವಣಿಗೆಯು ಹಣದುಬ್ಬರದಲ್ಲಿ ಏರಿಳಿತಕ್ಕೆ ಕಾರಣವಾಗಲಿದೆ. ತೆರಿಗೆ ಹೆಚ್ಚಳದಿಂದ ಕಲ್ಲಿದ್ದಲಿನ ದರ ಏರಿಕೆಯಾಗಿ ಕಂಪನಿಗಳು ಕಲ್ಲಿದ್ದಲು ಆಮದಿಗೆ ಮುಂದಾಗುವ ಸಾಧ್ಯತೆಯೂ ಇದೆ. ಈ ತೀರ್ಪಿನ ಕಾರಣದಿಂದ ಗಣಿ ಕಂಪನಿಗಳು ಪಾವತಿಸಬೇಕಾದ ಹಿಂಬಾಕಿ ಮೊತ್ತ ದೊಡ್ಡ ಪ್ರಮಾಣದಲ್ಲಿ ಇರಲಿದೆ. ಕೆಲವು ಕಂಪನಿಗಳ ನಿವ್ವಳ  ಮೌಲ್ಯಕ್ಕಿಂತ ಅವುಗಳ ತೆರಿಗೆ ಹಿಂಬಾಕಿಯೇ ಹೆಚ್ಚಾಗಬಹುದು ಎಂಬ ಅಂದಾಜೂ ಇದೆ. ತೆರಿಗೆಯನ್ನು ಪೂರ್ವಾನ್ವಯ ಮಾಡುವುದರಿಂದ ಆಗಬಹುದಾದ ಆರ್ಥಿಕ ಪರಿಣಾಮಗಳನ್ನು ಒಪ್ಪಿಕೊಂಡಿರುವ ನ್ಯಾಯಾಲಯವು ಈ ಕಾರಣಕ್ಕಾಗಿಯೇ 1991ರ ಬದಲಿಗೆ 2005ರಿಂದ ಈ ಆದೇಶವನ್ನು ಪೂರ್ವಾನ್ವಯ ಮಾಡುವಂತೆ ನಿರ್ದೇಶನ ನೀಡಿದೆ. ಜುಲೈ 25ರವರೆಗಿನ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಿರುವ ಸುಪ್ರೀಂ ಕೋರ್ಟ್‌, 12 ವರ್ಷಗಳ ಅವಧಿಯಲ್ಲಿ ಕಂತುಗಳಲ್ಲಿ ಮರುಪಾವತಿಗೂ ಅವಕಾಶ ಕಲ್ಪಿಸಿದೆ. ಆದರೂ ಗಣಿ ಚಟುವಟಿಕೆಗಳ ಮೇಲಿನ ತೆರಿಗೆಯನ್ನು ಪೂರ್ವಾನ್ವಯ ಮಾಡುವುದರಿಂದ ಕಂಪನಿಗಳ ಮೇಲೆ ದೊಡ್ಡ ಹೊರೆ ಬೀಳಲಿದ್ದು, ಆರ್ಥಿಕತೆಯೂ ದುಷ್ಪರಿಣಾಮ ಎದುರಿಸಲಿದೆ.

ಹಿಂಬಾಕಿ ವಸೂಲಿ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರಗಳಿಗೆ ವಿವೇಚನಾ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಈಗ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಕ್ಕೆ ತರಬೇಕೆ ಎಂಬುದನ್ನು ರಾಜ್ಯ ಸರ್ಕಾರಗಳೇ ನಿರ್ಧರಿಸಬೇಕಿದೆ. ಒಡಿಶಾ ಸರ್ಕಾರವು ಈ ತೆರಿಗೆ ರೂಪದಲ್ಲಿ ₹ 1 ಲಕ್ಷ ಕೋಟಿಯಷ್ಟು ವರಮಾನ ನಿರೀಕ್ಷಿಸಿದೆ. ಗಣಿಗಾರಿಕೆ ಚಟುವಟಿಕೆ ದೊಡ್ಡ ಪ್ರಮಾಣದಲ್ಲಿ ನಡೆಯುವ ಜಾರ್ಖಂಡ್‌, ಛತ್ತೀಸ್‌ಗಢ, ಕರ್ನಾಟಕ, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೂ ವರಮಾನ ಲಭಿಸಲಿದೆ. ಕರ್ನಾಟಕವು ಹಲವು ಸಾವಿರ ಕೋಟಿ ರೂಪಾಯಿಗಳಷ್ಟು ವರಮಾನ ಗಳಿಸಲಿದೆ. ಬಹುತೇಕ ರಾಜ್ಯಗಳಿಗೆ ವರಮಾನ ಬೇಕಿದೆ. ಯಾವ ರಾಜ್ಯವೂ ಆದಾಯವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT