ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಪಾದಕೀಯ | ಜಮ್ಮು ಮತ್ತು ಕಾಶ್ಮೀರ ಜನರ ಭಾಗೀದಾರಿಕೆ ಹೆಚ್ಚಿಸಬೇಕು

Published : 5 ಆಗಸ್ಟ್ 2024, 23:31 IST
Last Updated : 5 ಆಗಸ್ಟ್ 2024, 23:31 IST
ಫಾಲೋ ಮಾಡಿ
Comments

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿ ಐದು ವರ್ಷಗಳು ಕಳೆದಿವೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿಯು ಇಂದಿಗೂ ಸಂಕೀರ್ಣವಾಗಿಯೇ ಉಳಿದಿದೆ. ಏಳು ದಶಕಗಳಿಂದ ಜಾರಿಯಲ್ಲಿ ಇದ್ದ ವ್ಯವಸ್ಥೆಯನ್ನು ಬದಲಾಯಿಸುವ ಉದ್ದೇಶದಿಂದ ಕೈಗೊಂಡ ಕ್ರಮ ಅದೆಷ್ಟು ಪರಿಣಾಮಕಾರಿ ಎಂಬುದನ್ನು ತೀರ್ಮಾನಿಸಲು ಐದು ವರ್ಷಗಳು ಸಾಕಾಗುವುದಿಲ್ಲ. ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಮುಖ್ಯವಾಹಿನಿಯ ಜೊತೆ ಸಂಪೂರ್ಣವಾಗಿ ವಿಲೀನಗೊಳಿಸಿ, ಆ ಭೂಪ್ರದೇಶದ ‘ಸಮಸ್ಯೆ’ಯನ್ನು ಪರಿಹರಿಸುವುದು ಕೇಂದ್ರ ಸರ್ಕಾರದ ಘೋಷಿತ ಉದ್ದೇಶವಾಗಿತ್ತು. ಎಲ್ಲ ಸಮಸ್ಯೆಗಳಿಗೂ ಮೂಲ ಇರುವುದು ಆ ರಾಜ್ಯಕ್ಕೆ ನೀಡಿರುವ ವಿಶೇಷ ಸ್ಥಾನಮಾನದಲ್ಲಿ ಎಂಬುದು ಸರ್ಕಾರದ ನಂಬಿಕೆಯಾಗಿತ್ತು. ಇದು ಪೂರ್ತಿಯಾಗಿ ನಿಜವಾಗಿರಲಿಲ್ಲ.

ಹಾಗೆಯೇ, ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರ ಸರ್ಕಾರದ ಕಡೆಯಿಂದ ಅಗತ್ಯ ಪೂರಕ ಕ್ರಮಗಳು ಜಾರಿಗೆ ಬರಲಿಲ್ಲ. ಅಲ್ಲದೆ, ಐದು ವರ್ಷಗಳ ಹಿಂದೆ ನೀಡಲಾದ ಹಲವು ಭರವಸೆಗಳನ್ನು ಇನ್ನೂ ಈಡೇರಿಸಿಲ್ಲ. ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಣಿವೆ ಪ್ರದೇಶದಲ್ಲಿ, ಜಮ್ಮುವಿನಲ್ಲಿ ಹಾಗೂ ಲಡಾಖ್‌ನಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಕೇಂದ್ರಾಡಳಿತ ಪ್ರದೇಶದ ಸ್ಥಾನ ಕಲ್ಪಿಸಿದ್ದನ್ನು ಲಡಾಖ್‌ ಹಿಂದೊಮ್ಮೆ ಸ್ವಾಗತಿಸಿತ್ತು. ಆದರೆ ಈಗ ಅಲ್ಲಿನ ಜನರು ಪ್ರತ್ಯೇಕ ರಾಜ್ಯದ ಸ್ಥಾನಮಾನ ಕಲ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ತಮ್ಮ ಜಮೀನು ಹಾಗೂ ಸಂಪನ್ಮೂಲಗಳ ಮೇಲೆ ತಮಗೆ ಇನ್ನೂ ಹೆಚ್ಚು ಉತ್ತಮ ರೀತಿಯಲ್ಲಿ ನಿಯಂತ್ರಣ ಇರಬೇಕು ಎಂದು ಅವರು ಬಯಸುತ್ತಿದ್ದಾರೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಕಾಶ್ಮೀರದ ಮೂಲಸೌಕರ್ಯವು ಬಹಳಷ್ಟು ಅಭಿವೃದ್ಧಿ ಕಂಡಿದೆ, ಅಲ್ಲಿ ಹೂಡಿಕೆ ಹೆಚ್ಚಳವಾಗಿದೆ, ವಿವಿಧ ಸೇವೆಗಳ ಲಭ್ಯತೆಯು ಸುಧಾರಿಸಿದೆ. ಕೆಲವು ವರದಿಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಒಟ್ಟು ₹ 99 ಸಾವಿರ ಕೋಟಿ ಮೊತ್ತದ ಹೂಡಿಕೆ ಪ್ರಸ್ತಾವಗಳು ಬಂದಿವೆ. ಅದಕ್ಕೂ ಹಿಂದಿನ ಕೆಲವು ದಶಕಗಳ ಅವಧಿಯಲ್ಲಿ ಬಂದಿದ್ದ ಹೂಡಿಕೆ ಪ್ರಸ್ತಾವಗಳ ಮೊತ್ತವು ₹19 ಸಾವಿರ ಕೋಟಿ ಮಾತ್ರ ಆಗಿತ್ತು. ಶ್ರೀನಗರ ಮತ್ತು ಲೇಹ್‌ ಸಂಪರ್ಕಿಸುವ ಜೊಜಿಲಾ ಸುರಂಗ ಮಾರ್ಗದಂತಹ ಪ್ರಮುಖ ಮೂಲಸೌಕರ್ಯ ಯೋಜನೆಗಳ ಅನುಷ್ಠಾನ ನಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಪ್ರವಾಸಿಗರ ಭೇಟಿಯು ಹಲವು ಪಟ್ಟು ಹೆಚ್ಚಾಗಿದೆ. ಆದರೆ ಕೃಷಿ ಹಾಗೂ ತೋಟಗಾರಿಕಾ ವಲಯಗಳು ದುರ್ಬಲಗೊಳ್ಳುತ್ತಿವೆ ಮತ್ತು ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೂಡ ಇವೆ.

ಕಣಿವೆ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿಯು ಬಹಳ ಉತ್ತಮವಾಗಿದೆ. ಇಲ್ಲಿ ಈಚಿನ ಸಂದರ್ಭದಲ್ಲಿ ಶಾಂತಿಗೆ ಭಂಗ ಉಂಟಾಗುವ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಕಣಿವೆಯಲ್ಲಿ ಭದ್ರತಾ ಪಡೆಗಳು ಭಾರಿ ಸಂಖ್ಯೆಯಲ್ಲಿ ಇರುವುದು ಹಾಗೂ ಭಯೋತ್ಪಾದಕರ ಗಮನವು ಜಮ್ಮು ಕಡೆ ಹರಿದಿರುವುದು ಇದಕ್ಕೆ ಮುಖ್ಯ ಕಾರಣ. ಜಮ್ಮು ಪ್ರದೇಶದಲ್ಲಿ ಗಡಿಯಾಚೆಯಿಂದ ಒಳನುಸುಳುವ ಯತ್ನಗಳು ಹೆಚ್ಚಾಗಿವೆ, ಈಚಿನ ಕೆಲವು ವಾರಗಳಲ್ಲಿ ಅಲ್ಲಿ ಭಯೋತ್ಪಾದಕರ ಚಟುವಟಿಕೆಗಳು ಕೂಡ ಜಾಸ್ತಿಯಾಗಿವೆ. 

ರಾಜಕೀಯ ಪ್ರಕ್ರಿಯೆಗಳು ಹಾಗೂ ಆಡಳಿತದ ಸ್ವರೂಪದ ಬಗ್ಗೆ ಒಂದಿಷ್ಟು ಅನಿಶ್ಚಿತತೆಗಳು ಇವೆ. ಸರ್ಕಾರ ನೀಡಿರುವ ಭರವಸೆಗಳ ವಿಚಾರವಾಗಿ ಈಚಿನ ವರ್ಷಗಳಲ್ಲಿ ಅನುಮಾನಗಳು, ಅಪನಂಬಿಕೆಗಳು ಹೆಚ್ಚಾಗಿವೆ. ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ ಜನ ಭಾರಿ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಕೇಂದ್ರಾಡಳಿತ ಪ್ರದೇಶದಲ್ಲಿ ಶೇಕಡ 58ರಷ್ಟು ಮತದಾನ ಆಯಿತು. ವಿಧಾನಸಭೆಗೆ ಚುನಾವಣೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರ ಗಡುವನ್ನು ನೀಡಿದೆ. ಸಿದ್ಧತೆಗಳನ್ನು ಪರಿಶೀಲಿಸಲು ಕೇಂದ್ರ ಚುನಾವಣಾ ಆಯೋಗವು ಈ ವಾರ ಅಲ್ಲಿಗೆ ಭೇಟಿ ನೀಡಲಿದೆ. ಆದರೆ ರಾಜ್ಯದ ಸ್ಥಾನಮಾನವನ್ನು ಕಾಲಮಿತಿಯಲ್ಲಿ ಮರಳಿಸುವ ವಿಚಾರವಾಗಿ ಕೇಂದ್ರ ಸರ್ಕಾರದ ಕಡೆಯಿಂದ ಯಾವುದೇ ಘೋಷಣೆ ಬಂದಿಲ್ಲ.

ಈ ನಡುವೆ ಕೇಂದ್ರವು ಲೆಫ್ಟಿನೆಂಟ್ ಗವರ್ನರ್ ಅವರಿಗೆ ಹೆಚ್ಚಿನ ಅಧಿಕಾರ ನೀಡಿದೆ. ಕಾಶ್ಮೀರದಲ್ಲಿ ಮಾಡಬೇಕಿರುವ ಕೆಲಸಗಳು ಇನ್ನೂ ಬಹಳಷ್ಟಿವೆ. ಅದರಲ್ಲೂ ಮುಖ್ಯವಾಗಿ, ರಾಜಕೀಯವಾಗಿ ಹಲವು ಸವಾಲುಗಳು ಇವೆ. ಈ ದಿಸೆಯಲ್ಲಿ ನಡೆಯುವ ಯತ್ನ ಯಾವುದೇ ಇದ್ದರೂ, ಆಡಳಿತದಲ್ಲಿ ಜನರ ಭಾಗೀದಾರಿಕೆ ಇರುವಂತೆ ನೋಡಿಕೊಳ್ಳುವುದು ಹಾಗೂ ಅವರ ವಿಶ್ವಾಸವನ್ನು ಸಂಪಾದಿಸುವುದು ಯಶಸ್ಸಿಗೆ ಕೀಲಿಕೈ ಇದ್ದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT