ಗುರುವಾರ , ಡಿಸೆಂಬರ್ 5, 2019
22 °C

ಪಕ್ಷಾಂತರ ನಿಷೇಧ ಕಾಯ್ದೆಯ ಹಲ್ಲುಗಳ ಹರಿತಕ್ಕೆ ಕಾನೂನು ತಿದ್ದುಪಡಿ ಅಗತ್ಯ

Published:
Updated:
Prajavani

ಕರ್ನಾಟಕದ 17 ಅನರ್ಹ ಶಾಸಕರು ಮೂರು ತಿಂಗಳಿನಿಂದ ನಡೆಸುತ್ತಿದ್ದ ಕಾನೂನು ಹೋರಾಟ ಕೊನೆಗೂ ಸುಪ್ರೀಂ ಕೋರ್ಟ್‌ನಲ್ಲಿ ತಾರ್ಕಿಕ ಅಂತ್ಯವನ್ನು ಕಂಡಿದೆ. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ಒಳಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿದ್ದ ಈ ಶಾಸಕರಿಗೆ, ಸುಪ್ರೀಂ ಕೋರ್ಟ್‌ ಬುಧವಾರ ನೀಡಿರುವ ತೀರ್ಪು ರಾಜಕೀಯ ಮರುಜನ್ಮದ ಅವಕಾಶವೊಂದನ್ನು ಕಲ್ಪಿಸಿದೆ.

ಕಳೆದ ಜುಲೈನಲ್ಲಿ ಕಾಂಗ್ರೆಸ್‌ನ 13, ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿದ್ದರಿಂದ ಹಾಗೂ ಒಬ್ಬ ಪಕ್ಷೇತರ ಸದಸ್ಯ ಬೆಂಬಲ ವಾಪಸ್‌ ಪಡೆದಿದ್ದರಿಂದ ಸಮ್ಮಿಶ್ರ ಸರ್ಕಾರವು ಅಲ್ಪಮತಕ್ಕೆ ಕುಸಿದಿತ್ತು. ಬಳಿಕ ವಿಧಾನಸಭೆಯಲ್ಲಿ ಮಂಡಿಸಿದ ವಿಶ್ವಾಸಮತ ನಿರ್ಣಯದಲ್ಲಿ ಸೋಲುಂಡು, ಸರ್ಕಾರ ಪತನಗೊಂಡಿತ್ತು. ಈ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹಗೊಳಿಸಿದ್ದ ಆಗಿನ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌, ವಿಧಾನಸಭೆಯ ಪೂರ್ಣ ಅವಧಿ ಮುಗಿಯುವವರೆಗೂ ಇವರೆಲ್ಲ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಆದೇಶಿಸಿದ್ದರು. ಆದರೆ, ಸ್ಪೀಕರ್‌ ನಿರ್ಣಯಕ್ಕೆ ಸುಪ್ರೀಂ ಕೋರ್ಟ್‌ ಪೀಠವು ಈಗ ಅರೆಸಮ್ಮತಿ ಸೂಚಿಸಿದಂತಾಗಿದೆ.

‘17 ಶಾಸಕರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು ಸರಿ. ಆದರೆ ಉಪಚುನಾವಣೆಯಲ್ಲಿ ಅವರು ಮತ್ತೆ ಸ್ಪರ್ಧಿಸಬಹುದು’ ಎಂದು ಮೂವರು ಸದಸ್ಯರನ್ನು ಒಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

‘ಸಂಸದೀಯ ಪ್ರಜಾಪ್ರಭುತ್ವದಲ್ಲಿ ನೈತಿಕತೆಯು ಸರ್ಕಾರ ಮತ್ತು ವಿರೋಧ ಪಕ್ಷ ಎರಡಕ್ಕೂ ಸಮಾನವಾಗಿ ಅನ್ವಯವಾಗುತ್ತದೆ. ಈ ಶಾಸಕರು ಸ್ಪೀಕರ್‌ ಅವರಿಗೆ ರಾಜೀನಾಮೆ ಸಲ್ಲಿಸಿದ್ದರೂ ಅವರ ಅನರ್ಹತೆಯ ಕಳಂಕ ಮಾಯವಾಗುವುದಿಲ್ಲ’ ಎಂದಿರುವ ನ್ಯಾಯಪೀಠವು, ‘ಸ್ಪೀಕರ್‌ಗಳುನಿರ್ಲಿಪ್ತರಾಗಿ ಇರಬೇಕಾದ ಸಾಂವಿಧಾನಿಕ ಕರ್ತವ್ಯಕ್ಕೆ ವಿರುದ್ಧವಾಗಿ ವರ್ತಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ’ ಎಂದೂ ಬೊಟ್ಟು ಮಾಡಿದೆ. ಈ ತೀರ್ಪಿನಿಂದಾಗಿ, ಅನರ್ಹ ಶಾಸಕರು ಬಿಜೆಪಿಯನ್ನು ಅಧಿಕೃತವಾಗಿ ಸೇರಲು ದಾರಿ ಸುಗಮವಾದಂತಾಗಿದೆ.

ರಮೇಶ್‌ ಕುಮಾರ್‌ ಅವರು ಅನರ್ಹತೆಗೆ ಸಂಬಂಧಿಸಿದಂತೆ ಜುಲೈನಲ್ಲಿ ನೀಡಿದ್ದ ಆದೇಶದಲ್ಲಿ, ಸಂವಿಧಾನದ 10ನೇ ಶೆಡ್ಯೂಲ್‌ನ 2 (1) (ಎ) ಕಲಂ (191(2)ನೇ ವಿಧಿ) ಅನ್ನು ಉಲ್ಲೇಖಿಸಿದ್ದಾಗಲೇ ಕೆಲವು ಸಂವಿಧಾನ ತಜ್ಞರು, ಸುಪ್ರೀಂ ಕೋರ್ಟ್‌ನಲ್ಲಿ ವ್ಯತಿರಿಕ್ತ ತೀರ್ಪು ಬರಬಹುದು ಎಂದು ಊಹಿಸಿದ್ದರು. ಈ ವಿಧಿಯು ಶಾಸಕರ ಆಯ್ಕೆಗೆ ಸಂಬಂಧಿಸಿ ಇದೆಯೇ ಹೊರತು ಅನರ್ಹತೆಯ ಅವಧಿಗೆ ಸಂಬಂಧಿಸಿ ಅಲ್ಲ ಎಂದು ವ್ಯಾಖ್ಯಾನಿಸಿದ್ದರು.

ಸುಪ್ರೀಂ ಕೋರ್ಟ್‌ ಪೀಠವು ಸಂವಿಧಾನದ ಚೌಕಟ್ಟಿನಲ್ಲಿ ನೀಡಿರುವ ತೀರ್ಪು ತಾಂತ್ರಿಕವಾಗಿ ಸರಿಯಾಗಿಯೇ ಇದೆ. ಆದರೆ, ಹಣ ಮತ್ತು ಅಧಿಕಾರದ ಆಸೆಗಾಗಿ ಶಾಸಕರು ನಡೆಸುವ ಪಕ್ಷಾಂತರವನ್ನು ನಿಗ್ರಹಿಸುವ ನಿಟ್ಟಿನಲ್ಲಿ ಈ ತೀರ್ಪಿನಿಂದ ನಿರ್ದಿಷ್ಟ ಪರಿಹಾರ ದೊರೆತಿಲ್ಲ. ಕರ್ನಾಟಕದ ಅನರ್ಹ ಶಾಸಕರು ಇದಕ್ಕೂ ಮುನ್ನ, ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸುವ ಅಥವಾ ಭಾಗವಹಿಸದೇ ಇರುವ ತಮ್ಮ ಹಕ್ಕಿನ ರಕ್ಷಣೆಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾಗ ನ್ಯಾಯಪೀಠವು ‘10ನೇ ಶೆಡ್ಯೂಲ್‌ನ ಪಕ್ಷಾಂತರ ನಿಷೇಧ ನಿಯಮಗಳ ಕುರಿತು ವಿವರವಾದ ವಿಶ್ಲೇಷಣೆಯ ಅಗತ್ಯವಿದೆ’ ಎಂದು ಹೇಳಿತ್ತು. ಈಗ ನೀಡಿರುವ ತೀರ್ಪಿನಲ್ಲೂ ಅದಕ್ಕೆ ಪೂರಕವಾದ ಅಂಶವಿದೆ.

‘ಅಧಿಕಾರದ ಆಸೆ ಹಾಗೂ ತಪ್ಪು ಕಾರಣಗಳಿಗಾಗಿ ನಿಷ್ಠೆ ಬದಲಿಸುವ ಮತ್ತು ಪಕ್ಷಾಂತರದ ಕುದುರೆ ವ್ಯಾಪಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಪ್ರಜಾಸತ್ತಾತ್ಮಕವಲ್ಲದ ನಡೆಗಳನ್ನು ತಡೆಯಬೇಕಾದ ಅಗತ್ಯವಿದೆ’ ಎಂದು ನ್ಯಾಯಪೀಠ ಉಲ್ಲೇಖಿಸಿರುವುದು, ಕಾನೂನಿನ ಅಸಹಾಯಕತೆಯನ್ನು ಸೂಚಿಸುವಂತಿದೆ. ಹಣ ಮತ್ತು ಅಧಿಕಾರದ ಆಸೆಗಾಗಿ ಶಾಸಕರು ನಿರ್ಲಜ್ಜರಾಗಿ ಪಕ್ಷಾಂತರ ಮಾಡುವುದು ಹಾಗೂ ತಮ್ಮನ್ನು ಆಯ್ಕೆ ಮಾಡಿದ ಮತದಾರರಿಗೆ ಈ ಮೂಲಕ ದ್ರೋಹ ಬಗೆಯುವುದು ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ಈಚಿನ ವರ್ಷಗಳಲ್ಲಿ ಸಹಜ ರಾಜಕೀಯ ವಿದ್ಯಮಾನವಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆಯ ಹಲ್ಲುಗಳನ್ನು ಇನ್ನಷ್ಟು ಹರಿತಗೊಳಿಸಬೇಕಾದ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ತರಲು ಮುಂದಾಗಬೇಕು. ಆದರೆ, ಸದ್ಯಕ್ಕೆ ಈಗಿನ ಎನ್‌ಡಿಎ ಸರ್ಕಾರವೇ ಇಂತಹ ಪಕ್ಷಾಂತರಗಳ ಅತಿದೊಡ್ಡ ಫಲಾನುಭವಿ ಆಗಿರುವುದರಿಂದ, ಇಂತಹ ತಿದ್ದುಪಡಿ ತರಲು ಅದು ಉತ್ಸಾಹ ತೋರುವ ಸಾಧ್ಯತೆ ಕಡಿಮೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣೆಗೆ ಮುನ್ನ ಪಕ್ಷ ಬದಲಿಸಿ ಆಡಳಿತಾರೂಢ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸಿದ್ದ 15ಕ್ಕೂ ಹೆಚ್ಚು ಶಾಸಕರನ್ನು ಮತದಾರರು ಸೋಲಿಸಿ ಪಾಠ ಕಲಿಸಿರುವ ವಿದ್ಯಮಾನ ನಮ್ಮ ಕಣ್ಣಮುಂದಿದೆ. ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್‌ 5ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಇಲ್ಲಿನ ಮತದಾರರೂ ಅಂತಹ ಪಾಠ ಕಲಿಸುವರೇ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು