ಶನಿವಾರ, ಜನವರಿ 29, 2022
17 °C

ಸಂಪಾದಕೀಯ | ಕಾಮಗಾರಿಗಳ ಗುತ್ತಿಗೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿ

ಸಂಪಾದಕೀಯ Updated:

ಅಕ್ಷರ ಗಾತ್ರ : | |

ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಕೈಗೊಳ್ಳುವ ಕಾಮಗಾರಿಗಳ ಗುತ್ತಿಗೆಗೆ ನಡೆಯುವ ಟೆಂಡರ್‌ ಪ್ರಕ್ರಿಯೆ ಮತ್ತು ಬಿಲ್‌ ಪಾವತಿಯಲ್ಲಿ ಭ್ರಷ್ಟಾಚಾರ ಸರ್ವೇಸಾಮಾನ್ಯ ಎಂಬ ಸ್ಥಿತಿ ದೇಶದಲ್ಲಿದೆ. ಸರ್ಕಾರದ ಬೊಕ್ಕಸದ ಹಣ ವೆಚ್ಚ ಮಾಡಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಿಲ್ಲದ ರಾಜ್ಯವನ್ನು ಗುರುತಿಸುವುದು ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆ. ‘ರಾಜ್ಯದಲ್ಲಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಬಿಡುಗಡೆಯಾಗುವ ಮೊತ್ತದಲ್ಲಿ ಶೇಕಡ 40ರಷ್ಟು ಲಂಚದ ರೂಪದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳ ಜೇಬು ಸೇರುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ದೂರು ನೀಡಿದೆ.

ಐದು ತಿಂಗಳ ಹಿಂದೆಯೇ ಪ್ರಧಾನಿಯವರಿಗೆ ದೂರು ರವಾನಿಸಿದ್ದ ಗುತ್ತಿಗೆದಾರರ ಸಂಘ, ಈಗ ರಾಜ್ಯಪಾಲರು, ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರ್ಕಾರದ ಪ್ರಮುಖರಿಗೂ ದೂರು ಸಲ್ಲಿಸಿದೆ. ಈ ಹಿಂದೆ ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ ಗುತ್ತಿಗೆಯ ಒಟ್ಟು ಮೊತ್ತದ ಶೇ 10ರವರೆಗೂ ಲಂಚ ಪಡೆಯ ಲಾಗುತ್ತಿತ್ತು ಎಂಬ ದೂರುಗಳಿದ್ದವು. 2013ರ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ನರೇಂದ್ರ ಮೋದಿಯವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಪಕ್ಷದ ಸರ್ಕಾರವನ್ನು, ‘ಹತ್ತು ಪರ್ಸೆಂಟ್‌ ಸರ್ಕಾರ’ ಎಂದು ಜರೆದಿದ್ದರು. ಲಂಚದ ಪ್ರಮಾಣ ಈಗ ನಾಲ್ಕು ಪಟ್ಟಾಗಿದೆ ಎಂಬುದನ್ನು ಗುತ್ತಿಗೆದಾರರ ಸಂಘವು ಪ್ರಧಾನಿಗೆ ನೀಡಿದ ದೂರಿನಲ್ಲಿ ಬಹಿರಂಗಪಡಿಸಿದೆ. ರಾಜ್ಯದ ಕೆಲವು ಸಚಿವರು ಲಂಚದ ಹಣ ತಲುಪಿಸಿದ ಬಳಿಕವೇ ಟೆಂಡರ್‌ ಅನುಮೋದಿಸುತ್ತಿದ್ದಾರೆ ಎಂಬ ಆರೋಪವೂ ದೂರಿನಲ್ಲಿದೆ.

ಕಾಮಗಾರಿಗಳ ಅನುಷ್ಠಾನದಲ್ಲಿ ನೇರ ಹೊಣೆ ಗಾರಿಕೆ ಹೊಂದಿರುವ ಕಿರಿಯ ಎಂಜಿನಿಯರ್‌ಗಳಿಂದ ಆಯಾ ಇಲಾಖೆಯ ಉಸ್ತುವಾರಿ ಹೊತ್ತಿರುವ ಮಂತ್ರಿಗಳವರೆಗೆ ಎಲ್ಲರೂ ಲಂಚಕ್ಕಾಗಿ ಗುತ್ತಿಗೆದಾರ ರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಜೋರಾಗಿ ಸದ್ದು ಮಾಡುತ್ತಿದೆ. ಅತಿಯಾದ ಲಂಚದ ಹಾವಳಿಯಿಂದ ಗುಣಮಟ್ಟದ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಗುತ್ತಿಗೆದಾರರು ಬಹಿರಂಗವಾಗಿ ಹೇಳುತ್ತಿದ್ದಾರೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರನ್ನು ಭೇಟಿ ಮಾಡಿರುವ ಕಾಂಗ್ರೆಸ್‌ ಪಕ್ಷದ ಮುಖಂಡರ ನಿಯೋಗವು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ಆಗ್ರಹವನ್ನು ಮಂಡಿಸಿದೆ.

ಸರ್ಕಾರಿ ಕಾಮಗಾರಿಗಳ ಗುತ್ತಿಗೆದಾರರಿಂದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳಿಗೆ ಲಂಚ ಪಾವತಿಯಾಗುವುದು ದಿಢೀರನೆ ಹುಟ್ಟಿಕೊಂಡ ಪರಿಪಾಟವಲ್ಲ. ದಶಕಗಳ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ವರ್ಷದಿಂದ ವರ್ಷಕ್ಕೆ ಲಂಚದ ಪ್ರಮಾಣ ಮಾತ್ರ ಹೆಚ್ಚುತಲ್ಲೇ ಬಂದಿದೆ. ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ, ಮುಖ್ಯಮಂತ್ರಿಯವರ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಎಂಟಿಸಿ ಚಾಲಕ ಮತ್ತು ಹಲವು ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ತಿಂಗಳು ದಾಳಿ ಮಾಡಿ, ಶೋಧ ನಡೆಸಿದ್ದರು. ಬೃಹತ್‌ ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿರುವುದು ಮತ್ತು ದೊಡ್ಡ ಮಟ್ಟದ ಲಂಚ ಸಂದಾಯ ಆಗುತ್ತಿರುವುದನ್ನು ಖಚಿತಪಡಿಸುವ ದಾಖಲೆಗಳು ಪತ್ತೆಯಾಗಿದ್ದವು.

ಕಾಮಗಾರಿಗಳ ಗುತ್ತಿಗೆಯಲ್ಲಿ ಅಕ್ರಮಗಳನ್ನು ತಡೆಯುವುದಕ್ಕಾಗಿಯೇ ರೂಪಿಸಿದ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ’ (ಕೆಟಿಪಿಪಿ) ಕಾಯ್ದೆ ಜಾರಿಯಲ್ಲಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಪ್ರಭಾವ ಮತ್ತು ಹಸ್ತಕ್ಷೇಪ ತಡೆಯುವುದಕ್ಕಾಗಿ ‘ಇ–ಸಂಗ್ರಹಣಾ ವ್ಯವಸ್ಥೆ’ ರೂಪಿಸಲಾಗಿದೆ. ಆದರೆ, ಕಾಮಗಾರಿಗಳ ಗುತ್ತಿಗೆ ಪ್ರಕ್ರಿಯೆ ಇಂದಿಗೂ ದೋಷಮುಕ್ತವಾಗಿಲ್ಲ ಎಂಬುದು ವಾಸ್ತವ. ಹ್ಯಾಕರ್‌ ಶ್ರೀಕೃಷ್ಣ ಎಂಬಾತ ಹಲವು ಬಾರಿ ರಾಜ್ಯದ ‘ಇ–ಸಂಗ್ರಹಣಾ’ ಪೋರ್ಟಲ್‌ ಅನ್ನೇ ಹ್ಯಾಕ್‌ ಮಾಡಿರುವುದು ಈ ವ್ಯವಸ್ಥೆಯ ಕುರಿತ ಸಂಶಯವನ್ನು ಹೆಚ್ಚಿಸಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗುವ ಅನುದಾನದಲ್ಲಿ ಅರ್ಧದಷ್ಟು ಮೊತ್ತ ಲಂಚಕ್ಕೇ ವ್ಯಯವಾಗುತ್ತಿದೆ ಎಂಬ ದೂರು ಪ್ರಧಾನಿ ಕಚೇರಿಯನ್ನು ತಲುಪಿದೆ. ‘ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ’ ಎಂಬ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಮೋದಿಯವರು ಗುತ್ತಿಗೆದಾರರು ದೂರು ನೀಡಿ ಆರು ತಿಂಗಳಾದರೂ ಸುಮ್ಮನಿರುವುದು ಏಕೆ? ಈ ವಿಚಾರದಲ್ಲಿ ಕಠಿಣ ನಿಲುವು ತಾಳಬೇಕಿದೆ. ವಿಶೇಷವಾಗಿ ಅವರೇ ಪ್ರತಿನಿಧಿಸುವ ಬಿಜೆಪಿ ನೇತೃತ್ವದ ಸರ್ಕಾರವಿರುವ ಕರ್ನಾಟಕದಿಂದ ಬಂದಿರುವ ಈ ದೂರಿನ ಕುರಿತು ತನಿಖೆ ನಡೆಸಿ, ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಾದ ಹೊಣೆಗಾರಿಕೆ ಪ್ರಧಾನಿಯವರ ಮೇಲಿದೆ. ಪ್ರಧಾನಿ ಮತ್ತು ಬಿಜೆಪಿಯ ಇತರ ನಾಯಕರು, ಭ್ರಷ್ಟಾಚಾರದ ವಿಷಯವನ್ನು ಮತ ಗಳಿಕೆಯ ಅಸ್ತ್ರವಾಗಿ ಮಾತ್ರ ನೋಡಬಾರದು.

ಗುತ್ತಿಗೆದಾರರ ಸಂಘ ಮಾಡಿರುವ ಆರೋಪವನ್ನು ಕೇವಲ ರಾಜಕೀಯ ಹೇಳಿಕೆಗಳ ಮೂಲಕವೇ ನಿರಾಕರಿಸುವ ನಡೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದುದು. ಚುನಾವಣೆಗಳಲ್ಲಿ ಕರ್ನಾಟಕದ ಜನರಿಗೆ ನೀಡಿದ್ದ ವಾಗ್ದಾನದಂತೆ, ‘ಭ್ರಷ್ಟಾಚಾರಮುಕ್ತ ಆಡಳಿತ’ ನೀಡುವ ಬದ್ಧತೆಯನ್ನು ಈ ಪ್ರಕರಣದ ಮೂಲಕವೇ ಪ್ರದರ್ಶಿಸಬೇಕು. ಸರ್ಕಾರದ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಯಲ್ಲಿನ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕು. ಗುತ್ತಿಗೆದಾರರ ಸಂಘ ಮಾಡಿರುವ ಎಲ್ಲ ಆರೋಪಗಳ ಕುರಿತು ವಿಸ್ತೃತವಾದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು.

ಅದರ ಜತೆಯಲ್ಲೇ, ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಪಾರದರ್ಶಕವಾದ ಟೆಂಡರ್‌ ಪ್ರಕ್ರಿಯೆ ಮತ್ತು ಬಿಲ್‌ ಪಾವತಿಗೆ ಹೊಸ ವ್ಯವಸ್ಥೆಯೊಂದನ್ನು ರೂಪಿಸುವ ಮೂಲಕ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರ್ಕಾರದ ಬೊಕ್ಕಸದಿಂದ ಬಿಡುಗಡೆಯಾಗುವ ಜನರ ತೆರಿಗೆಯ ಹಣದಲ್ಲಿ ಕಿಂಚಿತ್ತೂ ಸೋರಿಕೆಯಾಗದಂತೆ ತಡೆಯುವ ವ್ಯವಸ್ಥೆಯನ್ನು ರೂಪಿಸುವ ಹೊಣೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು