ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ: ಸಂಭ್ರಮದ ಜೊತೆ ಚಿಂತನೆಯೂ ಬೇಕು

Published 2 ಮೇ 2023, 20:36 IST
Last Updated 2 ಮೇ 2023, 20:36 IST
ಅಕ್ಷರ ಗಾತ್ರ

ಪರೋಕ್ಷ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ, ಅದನ್ನು ಉದ್ಯಮ ಹಾಗೂ ವರ್ತಕ ಸಮುದಾಯಕ್ಕೆ ಹೆಚ್ಚು ಸ್ನೇಹಿ ಆಗಿಸುವ ಉದ್ದೇಶದಿಂದ 2017ರ ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು 2023ರ ಏಪ್ರಿಲ್‌ ತಿಂಗಳಲ್ಲಿ ದಾಖಲೆಯೊಂದನ್ನು ಬರೆದಿದೆ. ಹೊಸ ಆರ್ಥಿಕ ವರ್ಷದ (2023–24) ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಜಿಎಸ್‌ಟಿ ವ್ಯವಸ್ಥೆಯ ಮೂಲಕ ಸಂಗ್ರಹವಾದ ವರಮಾನವು ₹ 1.87 ಲಕ್ಷ ಕೋಟಿ. ಇದು ಈ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ ಸಂಗ್ರಹವಾಗಿರುವ ಅತಿಹೆಚ್ಚಿನ ಮೊತ್ತ. ವಿಶ್ವದ ಹಲವು ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಆತಂಕ ಇನ್ನೂ ಮುಂದುವರಿದಿರುವ ಸಂದರ್ಭದಲ್ಲಿ, ಭಾರತದಲ್ಲಿ ಪರೋಕ್ಷ ತೆರಿಗೆ ಸಂಗ್ರಹವು ಹೊಸ ದಾಖಲೆ ನಿರ್ಮಿಸಿರುವುದು ಆಶಾದಾಯಕ ಬೆಳವಣಿಗೆ. ಅಂಕೆ ಮೀರಿರುವ ಹಣದುಬ್ಬರ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು 2022ರ ಮೇ ತಿಂಗಳಿನಿಂದ ಹೆಚ್ಚಿಸುತ್ತ ಬಂತು. ಈ ವರ್ಷದ ಏಪ್ರಿಲ್‌ ಮೊದಲ ವಾರದಲ್ಲಿ ನಡೆದ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆಯು, ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ತೀರ್ಮಾನವನ್ನು ಪ್ರಕಟಿಸಿತು. ರೆಪೊ ದರದ ನಿರಂತರ ಏರಿಕೆಗೆ ವಿರಾಮ ಸಿಕ್ಕ ತಿಂಗಳಿನ ಜಿಎಸ್‌ಟಿ ಸಂಗ್ರಹಕ್ಕೆ ಸಂಬಂದಿಸಿದ ಅಂಕಿ–ಅಂಶ ಇದು. ಏಪ್ರಿಲ್‌ ತಿಂಗಳ ಚಿಲ್ಲರೆ ಹಣದುಬ್ಬರ ಕುರಿತ ವಿವರವು ಇನ್ನಷ್ಟೇ ಸಿಗಬೇಕಿದೆ. ಆರ್ಥಿಕಯಲ್ಲಿ ಎಷ್ಟರಮಟ್ಟಿಗೆ ಲವಲವಿಕೆ ಮರಳಿದೆ ಎಂಬುದನ್ನು ಹಣದುಬ್ಬರಕ್ಕೆ ಸಂಬಂದಿಸಿದ ಅಂಕಿ–ಅಂಶಗಳೂ ಹೇಳಲಿವೆ.

ಏಪ್ರಿಲ್‌ನಲ್ಲಿ ದೇಶದ ತಯಾರಿಕಾ ವಲಯದಲ್ಲಿನ ಚಟುವಟಿಕೆಗಳ ಪ್ರಮಾಣವು ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂಬುದನ್ನು ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) ಹೇಳುತ್ತಿದೆ. ದೇಶದ ಪ್ರಮುಖ ಆಟೊಮೊಬೈಲ್‌ ಕಂಪನಿಗಳು ಏಪ್ರಿಲ್‌ ತಿಂಗಳ ವಾಹನ ಮಾರಾಟ ವಿವರಗಳನ್ನು ಪ್ರಕಟಿಸಿವೆ. ಬಹುತೇಕ ಕಂಪನಿಗಳ ವಾಹನ ಮಾರಾಟ ಸಂಖ್ಯೆಯು, ಹಿಂದಿನ ವರ್ಷದ ಏಪ್ರಿಲ್‌ನ ಮಾರಾಟಕ್ಕೆ ಹೋಲಿಸಿದರೆ ಹೆಚ್ಚಾಗಿದೆ. ಇದು ಕೂಡ ಉತ್ತೇಜನಕಾರಿ. ಜಾಗತಿಕ ಮಟ್ಟದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಈಚಿನ ದಿನಗಳಲ್ಲಿ ಕೆಲವು ಅನಪೇಕ್ಷಿತ ಬೆಳವಣಿಗೆಳು ನಡೆದಿವೆ. ಈ ರೀತಿ ಆಗಿದ್ದಕ್ಕೆ ಕಾರಣ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ತೀವ್ರಗತಿಯಲ್ಲಿ ಹೆಚ್ಚಿಸಿದ್ದು ಕೂಡ ಒಂದು ಎಂಬ ಅಭಿಪ್ರಾಯ ಇದೆ. ಆದರೆ, ಭಾರತದ ಬ್ಯಾಂಕಿಂಗ್ ವ್ಯವಸ್ಥೆಯು ಸುಭದ್ರವಾಗಿದೆ, ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಸಮಸ್ಯೆಗಳು ಭಾರತದಲ್ಲಿ ಆಗುವ ಸಾಧ್ಯತೆಯೇ ಇಲ್ಲ ಎಂಬ ಭರವಸೆಯನ್ನು ಆರ್‌ಬಿಐ ನೀಡಿದೆ. ಹೀಗಿದ್ದರೂ, ಆರ್‌ಬಿಐ ರೆಪೊ ದರ ಹೆಚ್ಚಳಕ್ಕೆ ತಕ್ಷಣಕ್ಕೆ ಮುಂದಾಗಲಿಕ್ಕಿಲ್ಲ, ಸದ್ಯದ ಮಟ್ಟಿಗೆ ರೆಪೊ ದರದಲ್ಲಿ ಯಥಾಸ್ಥಿತಿ ಮುಂದುವರಿಯಬಹುದು ಎಂಬ ನಿರೀಕ್ಷೆ ಇದೆ. ಇದು, ರಿಯಲ್ ಎಸ್ಟೇಟ್, ವಾಹನ ಸೇರಿದಂತೆ ಕೆಲವು ನಿರ್ದಿಷ್ಟ ಉದ್ಯಮ ವಲಯಗಳಲ್ಲಿನ ವಹಿವಾಟು ತಗ್ಗುವ ಸಾಧ್ಯತೆಯನ್ನು ಕಡಿಮೆಮಾಡಿದೆ. ವಿಶ್ವ ಆರ್ಥಿಕ ವೇದಿಕೆಯು (ಡಬ್ಲ್ಯುಇಎಫ್) ಸಮೀಕ್ಷೆಯ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಪೂರೈಕೆ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಗಳ ಪ್ರಯೋಜನ ಪಡೆದುಕೊಳ್ಳುವ ದೇಶಗಳ ಸಾಲಿನಲ್ಲಿ ಭಾರತವೂ ಸೇರಿದೆ ಎಂದು ಹೇಳಿದೆ. ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಅಂದಾಜಿನ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆ ದರವು 2023ರಲ್ಲಿ ಶೇಕಡ 6.1ರಷ್ಟು ಇರಲಿದೆ. ದೇಶದ ಷೇರುಪೇಟೆಗಳಿಗೆ ವಿದೇಶಿ ಬಂಡವಾಳವು ಈಚಿನ ದಿನಗಳಲ್ಲಿ ಮತ್ತೆ ಹರಿದುಬರುತ್ತಿದೆ ಎಂಬ ವರದಿಗಳಿವೆ.

ಜಾಗತಿಕ ಅನಿಶ್ಚಿತತೆಯ ಸಂದರ್ಭದಲ್ಲಿಯೂ ಭಾರತದ ಅರ್ಥ ವ್ಯವಸ್ಥೆಯಲ್ಲಿ ಹಲವು ಆಶಾದಾಯಕ ಚಿತ್ರಣಗಳು ಕಾಣುತ್ತಿವೆ. ಈ ಹೊತ್ತಿನಲ್ಲಿ ಜಿಎಸ್‌ಟಿ ವರಮಾನ ಸಂಗ್ರಹ ಜಾಸ್ತಿ ಆಗಿರುವುದನ್ನು ಸಂಭ್ರಮದಿಂದ ಕಾಣುವ ಕೆಲಸವಷ್ಟೇ ಆಗಬಾರದು. ನೀತಿ ನಿರೂಪಕರು ಇದನ್ನು ಒಂದು ಅವಕಾಶವೆಂದು ಪರಿಗಣಿಸಿ, ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ಕಡೆ ಹೆಜ್ಜೆ ಇರಿಸಬೇಕು. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದು ಆರು ವರ್ಷಗಳು ಪೂರ್ಣಗೊಳ್ಳುತ್ತಿದೆ. ಹೀಗಿದ್ದರೂ, ಈ ವ್ಯವಸ್ಥೆಯ ಅಡಿಯಲ್ಲಿ ತೆರಿಗೆ ಪಾವತಿ, ವಿನಾಯಿತಿಗಳನ್ನು ಪಡೆದುಕೊಳ್ಳುವುದು ಹಲವರ ಪಾಲಿಗೆ ಸಂಕೀರ್ಣವಾದ ಪ್ರಕ್ರಿಯೆಯಾಗಿಯೇ ಉಳಿದಿದೆ. ಇದನ್ನು ನಿವಾರಿಸಬೇಕು. ಪೆಟ್ರೋಲ್, ಡೀಸೆಲ್‌ನಂತಹ ಜೀವನಾವಶ್ಯಕ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಲ್ಲಿನ ಅಡಚಣೆಗಳನ್ನು ನಿವಾರಿಸಲು ಮುಂದಡಿ ಇರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT