ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಪಟ್ಟಣ ಸಹಕಾರ ಬ್ಯಾಂಕ್‌ಗಳಿಗೆ ರಿಸರ್ವ್‌ ಬ್ಯಾಂಕ್‌ ಮೂಗುದಾರ

Last Updated 26 ಜೂನ್ 2020, 1:11 IST
ಅಕ್ಷರ ಗಾತ್ರ

ಪಟ್ಟಣ ಸಹಕಾರ ಬ್ಯಾಂಕ್‌ಗಳು (ಯುಸಿಬಿ) ಮತ್ತು ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ವಹಿವಾಟು ನಡೆಸುವ ಸಹಕಾರ ಬ್ಯಾಂಕ್‌ಗಳ ಸಂಪೂರ್ಣ ಮೇಲುಸ್ತುವಾರಿಯು ಇನ್ನು ಮುಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸುಪರ್ದಿಗೆ ಒಳಪಡಲಿದೆ. ಇದನ್ನು ಅನುವಾಗಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟವು ಸಮ್ಮತಿ ನೀಡಿದೆ. ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆ ತಿದ್ದುಪಡಿ ಮಸೂದೆಯು ಸಂಸತ್ತಿನಲ್ಲಿ ಅಂಗೀಕಾರ ಪಡೆಯಬೇಕಾಗಿರುವುದರಿಂದ ಸರ್ಕಾರವು ಸುಗ್ರೀವಾಜ್ಞೆಯ ಮೊರೆ ಹೋಗಿದೆ.

ಸಹಕಾರ ಬ್ಯಾಂಕ್‌ಗಳಲ್ಲಿ ಹಗರಣಗಳು ಹೆಚ್ಚುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ನಿಯಂತ್ರಣ ವ್ಯವಸ್ಥೆಯನ್ನು ತರಲಾಗುತ್ತಿದೆ. ರಾಜ್ಯದಲ್ಲಿನ 264 ಯುಸಿಬಿಗಳು ಸೇರಿದಂತೆ ದೇಶದಲ್ಲಿ ಒಟ್ಟು 1,482 ಪಟ್ಟಣ ಸಹಕಾರ ಬ್ಯಾಂಕುಗಳಿವೆ ಮತ್ತು 58 ಬಹುರಾಜ್ಯ ಸಹಕಾರ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿವೆ. ಈ ಬ್ಯಾಂಕುಗಳ ಮೇಲೆ ಆರ್‌ಬಿಐಗೆ ಈಗಲೂ ಅಧಿಕಾರ ಇದೆಯಾದರೂ ಅದು ಸೀಮಿತವಾದುದಾಗಿತ್ತು. ಈಗ ಆ ಕೊರತೆ ನಿವಾರಣೆಯಾಗಲಿದೆ. ಅವ್ಯವಹಾರ ಎಸಗಿದ ಬ್ಯಾಂಕ್‌ಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆಗೆ ವೇಗ ತುಂಬಲು ಇದರಿಂದ ನೆರವಾಗಲಿದೆ. ಜಾರಿ ಹಂತದಲ್ಲಿನ ಅಡಚಣೆ ಮತ್ತು ವಿಳಂಬ ದೂರವಾಗಲಿವೆ. ರಾಜಕೀಯ ಹಸ್ತಕ್ಷೇಪವೂ ಕೊನೆಗೊಳ್ಳಲಿದೆ. ಇದರಿಂದಾಗಿ 8.6 ಕೋಟಿಗೂ ಹೆಚ್ಚು ಠೇವಣಿದಾರರ ₹ 4.84 ಲಕ್ಷ ಕೋಟಿ ಮೊತ್ತದ ಠೇವಣಿಗೆ ಹೆಚ್ಚಿನ ಸುರಕ್ಷತೆ ದೊರೆಯಲಿದೆ. ಠೇವಣಿದಾರರಲ್ಲಿ ಇರುವ ಅಭದ್ರ ಭಾವ ದೂರವಾಗಲಿದೆ.

ಸಹಕಾರ ಬ್ಯಾಂಕ್‌ಗಳಲ್ಲಿ ಆಗುತ್ತಿರುವ ಹಗರಣಗಳಿಗೆ ಆಡಳಿತ ಮಂಡಳಿಗಳ ವೈಫಲ್ಯವೂ ಒಂದು ಕಾರಣ. ಹಗರಣಗಳು ಬಯಲಾಗುತ್ತಿದ್ದಂತೆಯೇ ಅದರ ಬಿಸಿ ನೇರವಾಗಿ ತಟ್ಟುವುದು ಠೇವಣಿದಾರರಿಗೆ. ಅಂತಹ ಬ್ಯಾಂಕ್‌ಗಳ ವಹಿವಾಟಿಗೆ ಆರ್‌ಬಿಐ ನಿರ್ಬಂಧ ವಿಧಿಸುತ್ತಲೇ ಠೇವಣಿದಾರರು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ತಮಗೆ ಅಗತ್ಯ ಇರುವಷ್ಟು ಹಣ ಹಿಂದೆ ಪಡೆಯಲು ಸಹ ಆಗದ ಸ್ಥಿತಿ ಎದುರಾಗುತ್ತದೆ. ಕೆಲವೊಮ್ಮೆ ತುರ್ತು ಅಗತ್ಯಗಳನ್ನು ಈಡೇರಿಸಿಕೊಳ್ಳಲೂ ಆಗದೆ ಪರಿತಪಿಸುವಂತಾಗುತ್ತದೆ.

ಪಾರದರ್ಶಕವಲ್ಲದ ವ್ಯವಹಾರ, ಬೇನಾಮಿ ಸಾಲ, ಸ್ವಜನ ಪಕ್ಷಪಾತ, ರಾಜಕೀಯ ಹಸ್ತಕ್ಷೇಪ, ನಿಯಂತ್ರಣ ಕ್ರಮಗಳ ವೈಫಲ್ಯಗಳ ಕಾರಣಕ್ಕೆ ಸಹಕಾರ ಬ್ಯಾಂಕ್‌ಗಳಲ್ಲಿ ಹಗರಣ ಸಾಮಾನ್ಯ ಎಂಬಂತಾಗಿದೆ. ಇದರಿಂದ ಹೆಚ್ಚು ಬಾಧಿತರಾಗುವವರು ಜನಸಾಮಾನ್ಯರು. ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಮಹಾರಾಷ್ಟ್ರದ ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರ ಬ್ಯಾಂಕ್‌ (ಪಿಎಂಸಿ) ಸೇರಿದಂತೆ ಐದು ಬ್ಯಾಂಕ್‌ಗಳು ಇತ್ತೀಚೆಗೆ ಆರ್‌ಬಿಐನಿಂದ ನಿರ್ಬಂಧಕ್ಕೆ ಒಳಪಟ್ಟಿವೆ. ಈ ಬ್ಯಾಂಕ್‌ಗಳ‌ ವ್ಯವಹಾರದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ.ಸಹಕಾರ ಕ್ಷೇತ್ರವನ್ನು ಹಗರಣಗಳಿಂದ ಮುಕ್ತಗೊಳಿಸಲು ಇನ್ನಷ್ಟು ಕಠಿಣ ಕ್ರಮಗಳು ಅಗತ್ಯ ಎನ್ನುವುದು ಬಹು ದಿನಗಳ ಬೇಡಿಕೆಯಾಗಿತ್ತು.ಆರ್‌ಬಿಐನ ತೀವ್ರ ನಿಗಾ ವ್ಯವಸ್ಥೆಗೆ ಒಳಪಡುವುದು ಎಂದರೆ ನಿಯಂತ್ರಣ ಕ್ರಮಗಳು ಇನ್ನಷ್ಟು ಬಿಗಿಯಾಗಲಿವೆ ಎಂದೇ ಅರ್ಥ. ಈ ಆಶಯ ಈಡೇರಬೇಕಾದರೆ ನಿಯಂತ್ರಣ ಕ್ರಮಗಳು ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಬೇಕು.

ಸಹಕಾರ ಬ್ಯಾಂಕುಗಳಲ್ಲಿನ ಹಗರಣ ಮತ್ತು ಇತರ ಲೋಪಗಳಿಗೆ ನಿಯಂತ್ರಣ ಮತ್ತು ಲೆಕ್ಕಪರಿಶೋಧನೆ ವ್ಯವಸ್ಥೆಯಲ್ಲಿನ ದೋಷ ಕಾರಣ. ಆರ್‌ಬಿಐನ ಕಟ್ಟುನಿಟ್ಟಿನ ನಿಯಮಗಳಡಿ ಲೆಕ್ಕಪತ್ರ ಪರಿಶೀಲನೆಯೂ ನಡೆದರೆ ವಂಚನೆ ಕೃತ್ಯಗಳಿಗೆ ಕಡಿವಾಣ ಬೀಳಬಹುದು ಎಂಬ ನಿರೀಕ್ಷೆ ಇದೆ. ಸಹಕಾರ ಬ್ಯಾಂಕ್‌ಗಳಲ್ಲಿನ ಅವ್ಯವಹಾರಕ್ಕೆ ಅವಕಾಶ ತಪ್ಪಿಸಿ, ಗ್ರಾಹಕರ ಠೇವಣಿಗೆ ಹೆಚ್ಚಿನ ಭದ್ರತೆ ಒದಗಿಸುವ ಈ ಪ್ರಯತ್ನಕ್ಕೆ ಠೇವಣಿದಾರರು ಹಾಗೂ ಆಡಳಿತ ಮಂಡಳಿಯ ಸಹಕಾರವೂ ಅಗತ್ಯ. ಆರ್‌ಬಿಐನ ನೇರ ನಿಗಾ ವ್ಯವಸ್ಥೆಗೆ ಒಳಪಟ್ಟಿದ್ದರೂ ವಾಣಿಜ್ಯ ಬ್ಯಾಂಕಿಂಗ್ ವಲಯದಲ್ಲಿ‌ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಬ್ಯಾಂಕು‌ಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಕೆಲವು ಉದ್ಯಮಿಗಳು ದೇಶದಿಂದಲೇ ಪರಾರಿಯಾಗಿರುವ ನಿದರ್ಶನಗಳಿವೆ. ವಾಣಿಜ್ಯ ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ ಏರುತ್ತಲೇ ಇದೆ. ಹೀಗಿರುವಾಗ, ಸಹಕಾರ ಬ್ಯಾಂಕುಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು, ಈ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುವ ದಕ್ಷತೆ ಆರ್‌ಬಿಐಗೆ ಇದೆಯೇ ಎಂಬ ಪ್ರಶ್ನೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT