ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲು ದಿನಗಣನೆ ಶುರುವಾಗಿದೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳ ವಿಧಾನಸಭೆಗೆ, ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ವಿಧಾನಸಭೆಗೆ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಮಾರ್ಚ್ 15ರಂದು ಘೋಷಿಸಿದೆ. ವಿವಿಧ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆಗೆ ಸಿದ್ಧತೆ ಶುರು ಮಾಡಿ ಆಗಿದೆ. ಹೀಗಿದ್ದರೂ, ವೇಳಾಪಟ್ಟಿ ಪ್ರಕಟ ಆಗುವುದರೊಂದಿಗೆ ಅವರು ಸಿದ್ಧತೆಗೆ ಇನ್ನಷ್ಟು ವೇಗ ನೀಡಲಿದ್ದಾರೆ ಎಂಬುದು ಖಚಿತ. ಪಶ್ಚಿಮ ಬಂಗಾಳದಲ್ಲಿ ಮತದಾನವು ಎರಡು ಹಂತಗಳಲ್ಲಿ (ಏಪ್ರಿಲ್ 23, 29) ನಡೆಯಲಿದೆ. ಅಸ್ಸಾಂ, ಕೇರಳ ಮತ್ತು ಪುದುಚೆರಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಏಪ್ರಿಲ್ 9ರಂದು ನಡೆಯಲಿದೆ. ತಮಿಳುನಾಡಿನಲ್ಲಿ ಮತದಾನದ ದಿನಾಂಕ ಏಪ್ರಿಲ್ 23 ಆಗಿರಲಿದೆ. ಎಲ್ಲೆಡೆ ಮತ ಎಣಿಕೆಯು ಮೇ 4ರಂದು ನಡೆಯಲಿದೆ. ಅಸ್ಸಾಂ, ಪುದುಚೆರಿ ಮತ್ತು ಕೇರಳದಲ್ಲಿ ಪ್ರಚಾರ ಕಾರ್ಯಕ್ಕೆ ಹೆಚ್ಚು ಸಮಯ ಸಿಕ್ಕಿಲ್ಲ ಎಂದು ಪಕ್ಷಗಳಿಗೆ ಅನ್ನಿಸಬಹುದು. ಆದರೆ ಇತರ ಕಡೆಗಳಲ್ಲಿ ಸಾಕಷ್ಟು ಸಮಯ ಸಿಗಲಿದೆ.

ಈ ಬಾರಿಯ ಚುನಾವಣೆಯಲ್ಲಿ ಪ್ರತಿ ರಾಜ್ಯದ ರಾಜಕಾರಣ ಕೂಡ ಇನ್ನೊಂದು ರಾಜ್ಯಕ್ಕಿಂತ ಭಿನ್ನವಾಗಿದೆ. ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸುವ ಪಕ್ಷಗಳು ಮೂರು ರಾಜ್ಯಗಳಲ್ಲಿ ಅಧಿಕಾರದಲ್ಲಿವೆ. ಚುನಾವಣೆಯ ಫಲಿತಾಂಶವು ಬಿಜೆಪಿ ಯನ್ನು ವಿರೋಧಿಸುವ ಪಕ್ಷಗಳಿಗೆ ಆಯಾ ರಾಜ್ಯಗಳ ಮಟ್ಟದಲ್ಲಿ ಹಾಗೂ ದೇಶದ ಮಟ್ಟದಲ್ಲಿ ಬಹಳ ಮಹತ್ವದ್ದಾಗುತ್ತದೆ. ಕೇರಳದಲ್ಲಿ ಎಲ್ಡಿಎಫ್ ಹಾಗೂ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಒಂದಕ್ಕಿಂತ ಹೆಚ್ಚಿನ ಅವಧಿಯಿಂದ ಅಧಿಕಾರದಲ್ಲಿವೆ. ತಮಿಳುನಾಡು, ಕೇರಳ ಹಾಗೂ ಪಶ್ಚಿಮ ಬಂಗಾಳದ ಆಡಳಿತಾರೂಢ ಪಕ್ಷಗಳು ತಮ್ಮಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ ಎಂದು ಹೇಳಿಕೊಳ್ಳುತ್ತಿವೆ. ತಮಿಳುನಾಡಿನಲ್ಲಿ ಡಿಎಂಕೆ ಪಕ್ಷವು ಕಾಂಗ್ರೆಸ್ ಹಾಗೂ ಇತರ ಮಿತ್ರಪಕ್ಷಗಳ ಜೊತೆಗೂಡಿ ದ್ರಾವಿಡ ಅಸ್ಮಿತೆಯನ್ನು ಪ್ರಧಾನ ಅಂಶವನ್ನಾಗಿ ಇರಿಸಿಕೊಂಡು, ಸರ್ಕಾರದ ಸಾಧನೆಯನ್ನು ಹೇಳಿಕೊಂಡು ಚುನಾವಣೆ ಎದುರಿಸುವ ನಿರೀಕ್ಷೆ ಇದೆ. ಡಿಎಂಕೆ ಪಕ್ಷದ ಪ್ರಧಾನ ಎದುರಾಳಿ ಯಾದ ಎಐಎಡಿಎಂಕೆ ಪಕ್ಷವು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ತಮಿಳುನಾಡಿನಲ್ಲಿ ನೆಲೆ ವಿಸ್ತರಿಸಿಕೊಳ್ಳುವ ಬಯಕೆಯಲ್ಲಿ ಬಿಜೆಪಿ ಇದೆ. ಆದರೆ, ತಮಿಳು ನಟ ವಿಜಯ್ ಅವರ ಹೊಸ ಪಕ್ಷದ ನಿಲುವಿನ ಬಗ್ಗೆ ಒಂದಿಷ್ಟು ಅಸ್ಪಷ್ಟತೆ ಕೂಡ ಇದೆ.

ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ತಾನು ಬಹಳ ಉತ್ತಮ ಸ್ಥಿತಿಯಲ್ಲಿ ಇರುವುದಾಗಿ ಭಾವಿಸಬಹುದು. ಆದರೆ ಅಲ್ಲಿನ ಆಂತರಿಕ ಜಗಳಗಳು, ಶಿಸ್ತಿನ ಕೊರತೆ, ಪ್ರಚಾರ ಅಭಿಯಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಆ ಮೈತ್ರಿಕೂಟಕ್ಕೆ ಸವಾಲಾಗಿ ಪರಿಣಮಿಸಬಹುದು. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕೂಡ ಬಹಳ ತುರುಸಿನ ಹಣಾಹಣಿ ನಡೆಯಬಹುದು. ಅಲ್ಲಿ ಬಿಜೆಪಿಯು ತನ್ನ ಬಲವನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳುತ್ತಿದೆ. ಅಲ್ಲಿ ಈಗ ಬಿಜೆಪಿಯೇ ಪ್ರಧಾನ ಪ್ರತಿಪಕ್ಷವಾಗಿದ್ದು, ಟಿಎಂಸಿ ಕೈಯಲ್ಲಿರುವ ಅಧಿಕಾರವನ್ನು ಕಿತ್ತುಕೊಳ್ಳಲು ಯತ್ನಿಸುವುದು ಖಚಿತ. ಆದರೆ ಟಿಎಂಸಿ ನಾಯಕಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಬಲ ಪೈಪೋಟಿ ನೀಡಬಲ್ಲರು. ಹೀಗಾಗಿ ಅಲ್ಲಿನ ಚುನಾವಣೆಯ ಮೇಲೆ ರಾಜಕೀಯ ಆಸಕ್ತರ ನೋಟ ಹೆಚ್ಚು ತೀವ್ರವಾಗಿ ಇರಲಿದೆ. ಹಿಂದಿನ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಮತಗಳಿಕೆ ಪ್ರಮಾಣದಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇರಲಿಲ್ಲ. ಆದರೆ ಈಗ ಅಲ್ಲಿನ ರಾಜಕಾರಣವು ಹೆಚ್ಚು ಧ್ರುವೀಕರಣಗೊಂಡಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ನಂತರದಲ್ಲಿ ಈ ಚುನಾವಣೆಗಳು ನಡೆಯುತ್ತಿರುವ ಕಾರಣದಿಂದಾಗಿಯೂ ಇವುಗಳಿಗೆ ಹೆಚ್ಚಿನ ಮಹತ್ವ ಇದೆ. ಎಸ್ಐಆರ್ ಕಾರಣದಿಂದಾಗಿ ಯಾವೆಲ್ಲ ಪರಿಣಾಮಗಳು ಆಗಿವೆ ಎಂಬ ದೃಷ್ಟಿಯಿಂದಲೂ ಚುನಾವಣಾ ಫಲಿತಾಂಶದ ಅವಲೋಕನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.