ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕ್ರಮ ಕೈಗೊಳ್ಳಿ

Last Updated 20 ಡಿಸೆಂಬರ್ 2019, 1:59 IST
ಅಕ್ಷರ ಗಾತ್ರ

‘ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದ 4ರಿಂದ 5 ಪ್ರಕರಣಗಳು ಪ್ರತೀ ದಿನ ವರದಿಯಾಗುತ್ತಿವೆ. ಮೊಕದ್ದಮೆ ದಾಖಲಾದರೂ ಬಹುಪಾಲು ಪ್ರಕರಣಗಳಲ್ಲಿ ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ’ ಎನ್ನುವುದು ಆಘಾತಕಾರಿ ಸಂಗತಿ. ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅನುಷ್ಠಾನಕ್ಕೆ ಸಂಬಂಧಿಸಿದ 2018ರ ವಾರ್ಷಿಕ ವರದಿಯು ಬಹಿರಂಗಪಡಿಸಿರುವ ಇಂತಹ ಅಂಕಿ ಅಂಶಗಳನ್ನು ಗಮನಿಸಿದರೆ, ಪರಿಸ್ಥಿತಿಯ ಗಾಂಭೀರ್ಯ ಅರಿವಾಗುತ್ತದೆ. ‘2018ನೇ ಸಾಲಿನಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದ 1,751 ಪ್ರಕರಣಗಳು ವರದಿಯಾಗಿವೆ. ಇದೇ ಸಾಲಿನಲ್ಲಿ ಪರಿಶಿಷ್ಟ ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಆರೋಪದಡಿ 164 ‍ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯಗಳಲ್ಲಿ ವಿಲೇವಾರಿಯಾದ ಒಟ್ಟು 1,087 ಪ್ರಕರಣಗಳ ಪೈಕಿ 46 ಪ್ರಕರಣಗಳಲ್ಲಷ್ಟೇ ಶಿಕ್ಷೆಯಾಗಿದೆ’ ಎಂದು ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಮಿತಿ’ ತಯಾರಿಸಿದ ವರದಿಯಲ್ಲಿ ವಿವರಿಸಲಾಗಿದೆ. ಇದು, ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ. ಪರಿಶಿಷ್ಟರ ಮೇಲಿನ ದೌರ್ಜನ್ಯಗಳನ್ನು ತಡೆಯಲು ಶಾಸಕಾಂಗವು ಹಲವಾರು ಕಾನೂನುಗಳನ್ನು ಮಾಡಿದ್ದರೂ ಅವುಗಳ ಅನುಷ್ಠಾನ ವಿಫಲಗೊಂಡಲ್ಲಿ ಕಾನೂನುಗಳಿದ್ದೂ ಏನು ಪ್ರಯೋಜನ?

ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದರೂ ಆರೋಪಿಗಳು ಖುಲಾಸೆಗೊಳ್ಳುವುದಕ್ಕೆ ಮುಖ್ಯ ಕಾರಣ ಪೊಲೀಸರ ಕಾರ್ಯನಿರ್ವಹಣೆಯ ಲೋಪ ಮತ್ತು ಸರ್ಕಾರಿ ವಕೀಲರ ವೈಫಲ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಪರಾಧವನ್ನು ಸಾಬೀತುಪಡಿಸುವಲ್ಲಿ ಪೊಲೀಸರು ಮತ್ತು ಸರ್ಕಾರಿ ವಕೀಲರು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಆರೋಪಿಗಳು ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ರಾಜ್ಯದ 10 ಜಿಲ್ಲೆಗಳಲ್ಲಿ ಆರೋಪಿಗಳಿಗೆ ಶಿಕ್ಷೆಯ ಪ್ರಮಾಣ ಶೂನ್ಯ ಎನ್ನುವುದು ಅಧಿಕಾರಿಗಳ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನ. 2018ರಲ್ಲಿ ದಾಖಲಾಗಿರುವ ಒಟ್ಟು 164 ಅತ್ಯಾಚಾರ ಹಾಗೂ 122 ಕೊಲೆ ಯತ್ನ ದೂರುಗಳಲ್ಲಿ, ಅತೀ ಹೆಚ್ಚು (163) ಪ್ರಕರಣಗಳು ಬೆಂಗಳೂರು ನಗರದಲ್ಲೇ ನಡೆದಿವೆ. ರಾಜ್ಯದ ಆಡಳಿತ ಕೇಂದ್ರದಲ್ಲೇ ಈ ಪರಿಸ್ಥಿತಿ ಇದೆ. ರಾಜಧಾನಿಯಲ್ಲಿ ಸಾಮಾನ್ಯವಾಗಿ ಕಾನೂನಿನ ಅರಿವು ಹೆಚ್ಚಿರುವುದರಿಂದಾಗಿ ದೂರುಗಳು ಹೆಚ್ಚು ದಾಖಲಾಗಿರಬಹುದು. ಹಾಗಿದ್ದೂ ಪ್ರಕರಣಗಳಲ್ಲಿ ಖುಲಾಸೆಯ ಪ್ರಮಾಣ ಹೆಚ್ಚಿರುವುದಕ್ಕೆ ಕಾರಣಗಳೇನು?

ವರದಿ ಬಿಡುಗಡೆ ಮಾಡಿದ ಸಮಾರಂಭದಲ್ಲಿ ಭಾಗವಹಿಸಿದ್ದ ಸ್ವಾಮೀಜಿಯೊಬ್ಬರು, ‘ದಲಿತರ ಮೇಲೆ ದೌರ್ಜನ್ಯ ನಡೆದರೆ ಮರುದೌರ್ಜನ್ಯಕ್ಕೆ ನಾವೂ ಸಿದ್ಧರಿದ್ದೇವೆಂಬ ಭಯವನ್ನು ಹುಟ್ಟುಹಾಕಿದರೆ ಮಾತ್ರ ದೌರ್ಜನ್ಯದ ಪ್ರಕರಣಗಳು ನಿಲ್ಲಲಿವೆ’ ಎಂದು ಹೇಳಿರುವುದು ಒಪ್ಪುವಂತಹ ಮಾತಲ್ಲ. ‘ದೌರ್ಜನ್ಯಕ್ಕೆ ಪ್ರತಿದೌರ್ಜನ್ಯವೇ ಉತ್ತರ’ ಎನ್ನುವ ಪ್ರತೀಕಾರ ಮನೋಭಾವವನ್ನು ಯಾರೂ ಯಾವ ಸಮುದಾಯದಲ್ಲೂ ಬಿತ್ತುವುದು ತರವಲ್ಲ. ಅದರಿಂದ ಸಮಾಜದಲ್ಲಿ ಅಶಾಂತಿ ಹೆಚ್ಚುತ್ತದೆ. ದೌರ್ಜನ್ಯ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಎಚ್ಚರದಿಂದ ಕಾರ್ಯನಿರ್ವಹಿಸದೇ ಇರುವುದು ಈ ರೀತಿಯ ಉಗ್ರಹೇಳಿಕೆಗಳಿಗೆ ಕಾರಣವಾಗಿರಬಹುದು. ಆದರೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿರುವ ಸ್ವಾಮಿಗಳು ತಾವು ಆಡುವ ಮಾತಿನ ಮೇಲೆ ನಿಗಾ ವಹಿಸುವುದು ಅಗತ್ಯ. ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದ ಜಿಲ್ಲಾ ಕಣ್ಗಾವಲು ಮತ್ತು ಮೇಲ್ವಿಚಾರಣಾ ಸಮಿತಿ (ಡಿವಿಎಂಸಿ) ಪ್ರತೀ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಆದರೆ ಬಹುತೇಕ ಜಿಲ್ಲೆಗಳಲ್ಲಿ ಈ ಸಭೆಗಳೇ ನಡೆಯುತ್ತಿಲ್ಲ. ರಾಜ್ಯ ಮಟ್ಟದಲ್ಲಿ ಇದೇ ಉದ್ದೇಶಕ್ಕಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ರಾಜ್ಯ ಕಣ್ಗಾವಲು ಮತ್ತು ಮೇಲ್ವಿಚಾರಣಾ ಸಮಿತಿಯಿದ್ದು (ಎಸ್‌ವಿಎಂಸಿ) ಅದು ಪ್ರತೀ ಜನವರಿ ಮತ್ತು ಜುಲೈ ತಿಂಗಳಲ್ಲಿ ಸಭೆ ನಡೆಸಿ ಪರಿಸ್ಥಿತಿಯ ಪರಾಮರ್ಶೆ ಮಾಡಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಐದು ವರ್ಷಗಳಲ್ಲಿ ಎಸ್‌ವಿಎಂಸಿ ಬರೀ ಎರಡು ಸಭೆಗಳನ್ನು ನಡೆಸಿದೆ. ಆ ಸರ್ಕಾರದ ಅಧಿಕಾರ ಅವಧಿ ಪೂರ್ಣಗೊಂಡ ನಂತರ ಒಂದೂ ಸಭೆ ನಡೆದಿಲ್ಲ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಅಧಿಕಾರಸ್ಥರ ನಿರ್ಲಕ್ಷ್ಯ ಯಾವ ಪ್ರಮಾಣದಲ್ಲಿದೆ ಎನ್ನುವುದನ್ನು ಇದು ಸೂಚಿಸುವಂತಿದೆ. ದೌರ್ಜನ್ಯಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಶಿಕ್ಷೆಗೆ ಒಳಗಾದವರ ಸಂಖ್ಯೆ ಕಡಿಮೆ ಆಗುತ್ತಿದೆ. ಇದು, ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ಸರ್ಕಾರ ತಕ್ಷಣ ಇತ್ತ ಗಮನ ಹರಿಸಬೇಕು. ಎಸ್‌ವಿಎಂಸಿ ಸಭೆ ನಡೆಸಿ ಪರಿಸ್ಥಿತಿಯನ್ನು ಪರಾಮರ್ಶಿಸಬೇಕು. ರಾಜ್ಯದಾದ್ಯಂತ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ನ್ಯಾಯ ಒದಗಿಸಲು ದೃಢವಾದ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT