ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ, ಕರ್ನಾಟಕದ ರಾಜಕೀಯ ಚರಿತ್ರೆಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳ ಬಹು ಮುಖ್ಯವಾದ ಅಧ್ಯಾಯವೊಂದು ಕೊನೆಗೊಂಡಿದೆ. ಸಾಮಾಜಿಕ ನ್ಯಾಯವನ್ನು ರಾಜಕಾರಣದ ಭಾಗವಾಗಿಸಿಕೊಂಡು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ ರಾಜ್ಯದ ವಿರಳ ನಾಯಕರಲ್ಲಿ ಸಿದ್ದರಾಮಯ್ಯ ಅವರೂ ಒಬ್ಬರು. ಪ್ರಸ್ತುತ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದೊಳಗೇ ಇದ್ದ ದೀರ್ಘ ಕಾಲದ ಅನಿಶ್ಚಿತ ಪರಿಸ್ಥಿತಿ ಹಾಗೂ ಊಹಾಪೋಹಗಳಿಗೆ ತಾರ್ಕಿಕ ಅಂತ್ಯ ದೊರೆತಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ನಡೆದಿದೆ ಎನ್ನುವುದು ಕೆಲವು ತಿಂಗಳುಗಳಿಂದ ರಾಜಕೀಯ ಚರ್ಚೆಯ ವಿಷಯವಾಗಿತ್ತು. ಅದರ ಪರಿಣಾಮ ರಾಜ್ಯದ ಆಡಳಿತದ ಮೇಲೆಯೂ ಉಂಟಾಗಿತ್ತು. ಇದೆಲ್ಲ ಏರುಪೇರಿನ ನಡುವೆಯೂ ಗಮನಾರ್ಹ ಆರ್ಥಿಕ ಬೆಳವಣಿಗೆಯೊಂದಿಗೆ, ದೇಶದ ಅತ್ಯುತ್ತಮ ಕಾರ್ಯ ನಿರ್ವಹಣೆಯ ರಾಜ್ಯಗಳಲ್ಲೊಂದಾಗಿ ಕರ್ನಾಟಕ ಗುರ್ತಿಸಿಕೊಂಡಿದೆ. ಜಾತಿ–ಧರ್ಮ, ಪ್ರದೇಶ ಮತ್ತು ಸಮುದಾಯಗಳನ್ನು ಮೀರಿ ಜನಸಮುದಾಯದ ಮೇಲೆ ಪ್ರಭಾವ ಹೊಂದಿರುವ ಸಿದ್ದರಾಮಯ್ಯನವರು ಕರ್ನಾಟಕ ಕಂಡಿರುವ ಅತ್ಯಂತ ವರ್ಚಸ್ವೀ ನಾಯಕರಲ್ಲೊಬ್ಬರು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ರಾಜಕೀಯ ಒಕ್ಕೂಟವಾದ ‘ಅಹಿಂದ’ ಪರಿಕಲ್ಪನೆಯ ರೂವಾರಿ ಎಂದು ಅವರನ್ನು ಗುರ್ತಿಸಲಾಗುತ್ತದೆ.

ರಾಜ್ಯದಲ್ಲಿ ಅತಿ ದೀರ್ಘ ಕಾಲ ಸೇವೆ ಸಲ್ಲಿಸಿರುವ ಮುಖ್ಯಮಂತ್ರಿ ಎನ್ನುವ ದಾಖಲೆ ಯೊಂದಿಗೆ, 1977ರ ನಂತರ ಐದು ವರ್ಷಗಳ ಪೂರ್ಣಾವಧಿ ಮುಗಿಸಿದ ಮೊದಲ ಮುಖ್ಯಮಂತ್ರಿ ಅವರಾಗಿದ್ದಾರೆ. ಮೊದಲ ಅವಧಿಯ ‘ಅನ್ನಭಾಗ್ಯ’ ಯೋಜನೆಯಿಂದ ಈಗಿನ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳವರೆಗೆ ಸಾಮಾಜಿಕ ನ್ಯಾಯವನ್ನು ಚುನಾವಣಾ ತಂತ್ರದೊಂದಿಗೆ ಸಂಯೋಜಿಸುವ ಕಲೆ ಅವರಿಗೆ ಕರಗತವಾಗಿತ್ತು. ಈ ಸಮೀಕರಣದ ಭಾಗವಾಗಿಯೇ, ಅವರ ಮಹತ್ವಾಕಾಂಕ್ಷೆಯ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯನ್ನು ಗುರ್ತಿಸ ಬಹುದು. ಸಂವಿಧಾನ, ಜನಪರ ಆಡಳಿತ ಹಾಗೂ ಒಕ್ಕೂಟ ವ್ಯವಸ್ಥೆಯ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿರುವ ಅವರು ಸಮಾಜವಾದಿ ಚಳವಳಿಯಿಂದ ಮೂಡಿಬಂದ ಪ್ರಮುಖ ನಾಯಕರೂ ಹೌದು. ಬಹು ಮುಖ್ಯವಾಗಿ, ಸುದೀರ್ಘ ಅವಧಿಯ ರಾಜಕಾರಣದಲ್ಲಿ ಸಾರ್ವಜನಿಕವಾಗಿ ಚಾರಿತ್ರ್ಯ ಉಳಿಸಿಕೊಂಡಿದ್ದಾರೆ. ಅವರ ಪತ್ನಿಯನ್ನು ಸುತ್ತುವರಿದಿದ್ದ ‘ಮೂಡಾ’ ಪ್ರಕರಣದಲ್ಲಿಯೂ ಅಂತಿಮವಾಗಿ ಕ್ಲೀನ್ ಚಿಟ್ ದೊರೆತಿತ್ತು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರ ಆಡಳಿತ ಟೀಕೆಗಳಿಂದ ಮುಕ್ತವಾದುದೇನೂ ಅಲ್ಲ. ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಾದ ಆರ್ಥಿಕ ಸ್ಥಿರತೆ ಮತ್ತು ಆ ಯೋಜನೆಗಳು ರಾಜ್ಯದ ಒಟ್ಟಾರೆ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಉಂಟು ಮಾಡಿರುವ ಪರಿಣಾಮದ ಬಗ್ಗೆ ಪ್ರಶ್ನೆಗಳು ಮುಂದುವರಿದಿವೆ. ಬೆಂಗಳೂರಿನ ಹದಗೆಟ್ಟ ಮೂಲ ಸೌಕರ್ಯ ಸರ್ಕಾರಕ್ಕೆ ಮುಜುಗರದ ವಿಷಯವಾಗಿತ್ತು. ವಾಲ್ಮೀಕಿ ನಿಗಮದ ಹಗರಣದೊಂದಿಗೆ, ಅಧಿಕಾರಿಗಳ ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳನ್ನು ಅವರ ಸರ್ಕಾರ ಎದುರಿಸಿದೆ. ಇದೀಗ ನಡೆದಿರುವ ನಾಯಕತ್ವ ಬದಲಾವಣೆಯು ಸರ್ಕಾರಕ್ಕೆ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷಕ್ಕೂ ಮಹತ್ವದ ಪರೀಕ್ಷೆಯಾಗಿದೆ. ಅಧಿಕಾರದಲ್ಲಿ ಇರುವಾಗಲೇ ನಾಯಕತ್ವ ಬದಲಾವಣೆಯ ಪ್ರಯೋಗ ನಡೆಸಿರುವ ಕಾಂಗ್ರೆಸ್ ರಾಜಕೀಯ ಜೂಜಾಟ ಆಡಿರುವುದು ಸ್ಪಷ್ಟವಾಗಿದೆ. ಈ ಬದಲಾವಣೆಯು ಪಕ್ಷದೊಳಗಿನ ಅಧಿಕಾರ ಸಮೀಕರಣಗಳನ್ನು ತೃಪ್ತಿಪಡಿಸುವ ಕ್ರಮ ಮಾತ್ರವೇ ಅಥವಾ ಆಡಳಿತಕ್ಕೆ ಹೊಸ ಚೈತನ್ಯ ತುಂಬಲಿದೆಯೇ ಎನ್ನುವುದು ಈಗ ಉಳಿದಿರುವ ಮುಖ್ಯ ಪ್ರಶ್ನೆ.

ಗ್ಯಾರಂಟಿ ಯೋಜನೆಗಳ ಮುಂದುವರಿಕೆ ಸೇರಿದಂತೆ ಸರ್ಕಾರದ ನೀತಿಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಆಗುವ ಸಾಧ್ಯತೆ ಕಡಿಮೆ. ಆದರೆ, ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವವರು ಆಡಳಿತಕ್ಕೆ ಶಕ್ತಿ ತುಂಬಿ ರಾಜಕೀಯ ಸ್ಥಿರತೆಯನ್ನು ಮರುಸ್ಥಾಪಿಸುವ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ದೇಶದ ಪ್ರಮುಖ ಆರ್ಥಿಕ ಶಕ್ತಿಗಳಲ್ಲೊಂದಾಗಿರುವ ಸಂದರ್ಭದಲ್ಲಿ ಕರ್ನಾಟಕವು ದೀರ್ಘ ಕಾಲದವರೆಗೆ ಅನಿಶ್ಚಿತ ಪರಿಸ್ಥಿತಿಯನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಹೊಸ ನಾಯಕತ್ವವು ಆಡಳಿತನೀತಿಯ ನಿರಂತರತೆಯನ್ನು ಖಚಿತಪಡಿಸಬೇಕು. ಸ್ವಚ್ಛ ಮತ್ತು ಪರಿಣಾಮಕಾರಿ ಆಡಳಿತ ನೀಡುವುದರ ಜೊತೆಗೆ, ಆರ್ಥಿಕ ಅಭಿವೃದ್ಧಿ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ ಮುಂಚೂಣಿ ಸ್ಥಾನವನ್ನು ಉಳಿಸಬೇಕಾಗಿದೆ. ಒಂದಂತೂ ಸ್ಪಷ್ಟ. ಸಿದ್ದರಾಮಯ್ಯನವರ ರಾಜೀನಾಮೆ ಒಂದು ಆಡಳಿತಾವಧಿಯ ಮುಕ್ತಾಯವಷ್ಟೇ. ರಾಜ್ಯ ರಾಜಕಾರಣದ ಮೇಲಿನ ಅವರ ಪ್ರಭಾವವು ಹಲವು ವರ್ಷಗಳವರೆಗೆ ಉಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.