ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ| ದ್ವೇಷ ಭಾಷಣ:ಕೋರ್ಟ್‌ ನಿರ್ದೇಶನ ಸ್ವಾಗತಾರ್ಹ,ಜನರಿಗೂ ಇದೆ ಹೊಣೆಗಾರಿಕೆ

Last Updated 28 ಅಕ್ಟೋಬರ್ 2022, 21:30 IST
ಅಕ್ಷರ ಗಾತ್ರ

ದ್ವೇಷದ ಕ್ರಿಯೆಗಳ ವಿರುದ್ಧ ರಾಜಕೀಯ, ಸಾಮಾಜಿಕ ಮತ್ತು ಕಾನೂನು ಹೋರಾಟವನ್ನು ವ್ಯಕ್ತಿಗತವಾಗಿ ಮತ್ತು ಸಾಮೂಹಿಕವಾಗಿ ನಡೆಸಬೇಕಾಗಿದೆ.

ದ್ವೇಷ ಭಾಷಣ ಮಾಡುವ ಚಾಳಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇದ್ದು, ಈ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳು ಈ ಹಿಂದೆ ವ್ಯಕ್ತಪಡಿಸಿದ್ದ ಕಳವಳದ ಮುಂದುವರಿದ ಭಾಗವೇ ಆಗಿವೆ. ದೇಶದಲ್ಲಿ ಈಗ ವ್ಯಾಪ‍ಕವಾಗಿರುವ ದ್ವೇಷ ರಾಜಕಾರಣದ ಪರಿಣಾಮವಾಗಿಯೇ ದ್ವೇಷ ಭಾಷಣವು ಇಷ್ಟೊಂದು ಹೆಚ್ಚಿದೆ.

ನ್ಯಾಯಾಲಯವು ನೀಡಿರುವ ನಿರ್ದೇಶನಗಳು ನಿರ್ದಿಷ್ಟವಾಗಿ ಮೂರು ರಾಜ್ಯಗಳಿಗೆ– ಉತ್ತರಪ್ರದೇಶ, ಉತ್ತರಾಖಂಡ ಮತ್ತು ದೆಹಲಿ– ಸಂಬಂಧಿಸಿದ್ದಾಗಿವೆ. ಈ ಮೂರು ರಾಜ್ಯಗಳಲ್ಲಿ ದ್ವೇಷ ಭಾಷಣದ ಅತ್ಯಂತ ಕೆಟ್ಟದಾದ ಪ್ರಕರಣಗಳು ದಾಖಲಾಗಿವೆ. ನರಮೇಧಕ್ಕೆ ಕರೆ, ಮುಸ್ಲಿಮರ ಸಾಮಾಜಿಕ ಬಹಿಷ್ಕಾರಕ್ಕೆ ಕರೆಯಂತಹ ಪ್ರಕರಣಗಳು ಇಲ್ಲಿ ಕಂಡುಬಂದಿವೆ. ಮುಸ್ಲಿಮರು ರಾಕ್ಷಸರು ಎಂಬಂತೆ ಚಿತ್ರಿಸುವುದು, ಅವರ ಘನತೆಗೆ ಮಸಿ ಬಳಿಯುವ ಪ್ರಯತ್ನಗಳು ನಡೆದಿವೆ. ಅವರ ಕೈ ಕತ್ತರಿಸಿ, ತಲೆ ಕತ್ತರಿಸಿ ಎಂಬಂತಹ ಹೇಳಿಕೆಗಳನ್ನೂ ನೀಡಲಾಗಿದೆ. ಈ ಮೂರು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆ ಇದೆ ಮತ್ತು ಒಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಯ ಹೊಣೆಯು ಕೇಂದ್ರ ಸರ್ಕಾರದ ಕೈಯಲ್ಲಿದೆ.

ದೇಶದಾದ್ಯಂತ ನಡೆಯುತ್ತಿರುವ ದ್ವೇಷಾಪರಾಧಗಳು ಮತ್ತು ದ್ವೇಷ ಭಾಷಣಗಳ ಕುರಿತು ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ದೇಶನಗಳನ್ನು ನೀಡಿದೆ.

ದೇಶದ ಜಾತ್ಯತೀತ ಸ್ವರೂಪವನ್ನು ಉಳಿಸಿ ಕೊಳ್ಳಬೇಕಿದ್ದರೆ ದ್ವೇಷ ಭಾಷಣ ಮಾಡುವವರ ಮೇಲೆ ಅವರು ಯಾವ ಧರ್ಮಕ್ಕೆ ಸೇರಿದವರು ಎಂಬುದರ ಪರಿಗಣನೆ ಇಲ್ಲದೆಯೇ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು. ದೂರು ದಾಖಲಾಗುವ
ವರೆಗೆ ಕಾಯದೆಯೇ ಸ್ವಯಂಪ್ರೇರಣೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಕೋರ್ಟ್‌ ಸೂಚಿಸಿದೆ.

ಹೀಗೆ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ವಿಫಲರಾದರೆ ಅವರು ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂನೀಡಲಾಗಿದೆ. ಈ ವಿಚಾರದಲ್ಲಿ ನ್ಯಾಯಾಲಯಕ್ಕೆ ಅಗಾಧವಾದ ಶ್ರದ್ಧೆ ಇದೆ ಎಂಬುದನ್ನು ಈ ಕ್ರಮಗಳು ಸೂಚಿಸುತ್ತವೆ. ದ್ವೇಷ ಭಾಷಣದ ವಿಚಾರವನ್ನು ನ್ಯಾಯಾಲಯವು ಅತ್ಯಂತ ಗಂಭೀರವಾಗಿಯೇ ಪರಿಗಣಿಸಿದೆ. ದೇಶವು ಜಾತ್ಯತೀತವಾಗಿರಬೇಕು
ಮತ್ತು ಪೌರರ ನಡುವೆ ಸಹೋದರ ಭಾವ ಇರಬೇಕು ಎಂಬುದು ಸಂವಿಧಾನದ ಆಶಯವಾಗಿದೆ ಎಂದು ಕೋರ್ಟ್‌ ಹೇಳಿದೆ. ‘ಮೂಲಭೂತ ಹಕ್ಕುಗಳನ್ನು ರಕ್ಷಿಸುವುದು, ಸಂವಿಧಾನದ ಆಶಯಗಳನ್ನು ಕಾಯುವುದು, ಕಾನೂನಿಗೆ ಅನುಗುಣವಾದ ಆಳ್ವಿಕೆ ಇರುವಂತೆ ನೋಡಿಕೊಂಡು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುವುದು’ ನ್ಯಾಯಾಲಯದ ಕರ್ತವ್ಯವಾಗಿದೆ ಎಂದು ಕೋರ್ಟ್‌ ಹೇಳಿದೆ. ದ್ವೇಷ ಭಾಷಣ ಪ್ರಕರಣಗಳ ಕುರಿತಂತೆ ಯಾವ ಕ್ರಮ ಕೈಗೊಳ್ಳಲಾಗಿದೆ, ಬಾಕಿ ಇರುವ ಪ್ರಕರಣಗಳ ಸ್ಥಿತಿಗತಿ ಏನು ಎಂಬುದರ ಕುರಿತು ಪ್ರತಿಕ್ರಿಯೆ ಸಲ್ಲಿಸುವಂತೆಯೂ ಈ ಮೂರು ರಾಜ್ಯಗಳಿಗೆ ಕೋರ್ಟ್‌ ಸೂಚಿಸಿದೆ.

ನ್ಯಾಯಾಲಯವು ನೀಡಿದ ನಿರ್ದೇಶನಗಳು ಸ್ವಾಗತಾರ್ಹವಾದುದಾಗಿವೆ. ಆದರೆ ಸಮಸ್ಯೆ ಎಂದರೆ, ದ್ವೇಷ ಭಾಷಣವು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರ ಮಾತ್ರ ಅಲ್ಲ, ಅದು ರಾಜಕೀಯ ವಿಚಾರ ಕೂಡ ಹೌದು. ಕಾನೂನಿನ ಮೂಲಕ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಕಾನೂನು ಮತ್ತು ಅದರ ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳುವ ಅಥವಾ ಕಾನೂನು ಪ್ರಕ್ರಿಯೆಯನ್ನೇ ತಲೆಕೆಳಗು ಮಾಡುವ ದಾರಿಗಳು ಸದಾ ಇದ್ದೇ ಇರುತ್ತವೆ. ದ್ವೇಷವನ್ನು ಹರಡುವವರೇ ಈ ಕಾನೂನಿನ ಅನುಕೂಲ ಪಡೆದುಕೊಂಡು ತಾವೇ ಸಂತ್ರಸ್ತರೆಂದು ಹೇಳಿಕೊಳ್ಳುವ ವಿರೋಧಾಭಾಸಕರ ಸ್ಥಿತಿಯೂ ಇದೆ.

ದೇಶದಲ್ಲಿ ಈಗ ಕಾಣಿಸುತ್ತಿರುವ ದ್ವೇಷದ ಸ್ಥಿತಿಗೆ ದ್ವೇಷ ಭಾಷಣಗಳು ಮಾತ್ರವಲ್ಲ, ದ್ವೇಷದ ಕ್ರಿಯೆಗಳು ಕೂಡ ಕಾರಣವಾಗಿವೆ. ಇದರ ವಿರುದ್ಧ ರಾಜಕೀಯ, ಸಾಮಾಜಿಕ ಮತ್ತು ಕಾನೂನು ಹೋರಾಟವನ್ನು ವ್ಯಕ್ತಿಗತ ವಾಗಿ ಮತ್ತು ಸಾಮೂಹಿಕವಾಗಿ ನಡೆಸಬೇಕಾಗಿದೆ. ಜನರ ಧೋರಣೆಗಳನ್ನು ಬದಲು ಮಾಡಬೇಕಾಗಿದೆ. ನ್ಯಾಯಾಲಯವು ತಾನು ಕೈಗೊಂಡಿರುವ ಕ್ರಮವನ್ನು ಮುಂದುವರಿಸಿಕೊಂಡು ಹೋಗುವ ಭರವಸೆ ಇದೆ. ಆದರೆ, ದ್ವೇಷ ಭಾಷಣ ಚಾಳಿಯನ್ನು ತಡೆಯುವ ಹೊಣೆಗಾರಿಕೆಯು ಪೌರರು ಮತ್ತು ಸಮಾಜದ ಮೇಲೆಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT