ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಬಳಿ ಬಿಪಿಎಲ್‌ ಕಾರ್ಡ್‌ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ

Last Updated 18 ಫೆಬ್ರುವರಿ 2022, 20:52 IST
ಅಕ್ಷರ ಗಾತ್ರ

ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್‌) ಕುಟುಂಬಗಳನ್ನು ಗುರುತಿಸಿ, ಅವುಗಳಿಗೆ ರಿಯಾಯಿತಿ ದರದಲ್ಲಿ ಪಡಿತರ ಸಾಮಗ್ರಿಯನ್ನು ಸರ್ಕಾರ ಪೂರೈಸುತ್ತಿದೆ. ಬಡತನದ ಕಾರಣದಿಂದ ಯಾವುದೇ ಕುಟುಂಬ ಹಸಿವಿನಿಂದ ಬಳಲುವಂತಹ ಸ್ಥಿತಿ ತಲೆದೋರಬಾರದು ಎಂಬಸಾಮಾಜಿಕ ಕಳಕಳಿಯಿಂದ ಆರಂಭಿಸಲಾದ ಕಾರ್ಯಕ್ರಮವಿದು. ಇದರ ಪ್ರಯೋಜನವು ಅರ್ಹರಿಗೆ ಮಾತ್ರ ತಲುಪುವಂತೆ ನೋಡಿಕೊಳ್ಳುವುದು ಕೂಡ ಸರ್ಕಾರದ ಜವಾಬ್ದಾರಿ. ಆದರೆ, ರಾಜ್ಯದಲ್ಲಿ 21,232 ಸರ್ಕಾರಿ ನೌಕರರು ಹಾಗೂ ಅರೆ ಸರ್ಕಾರಿ ನೌಕರರೂ ಬಿಪಿಎಲ್‌ (ಆದ್ಯತಾ) ಪಡಿತರ ಚೀಟಿ ಹೊಂದಿರುವುದು ಅದರಲ್ಲೂ ಕೆಲವರು ಕಡುಬಡವರಿಗಷ್ಟೇ ನೀಡಲಾಗುವ ಅಂತ್ಯೋದಯ ಅನ್ನ ಯೋಜನೆಯ (ಎಎವೈ) ಪಡಿತರ ಚೀಟಿಯನ್ನು ಮಾಡಿಸಿಕೊಂಡಿರುವುದು ನಾಚಿಕೆಗೇಡಿನ ವಿಚಾರ. ಬಡವರಿಗೆ ಸರ್ಕಾರ ಕೊಡಮಾಡುವ ಸವಲತ್ತುಗಳನ್ನು ಕೈತುಂಬ ಸಂಬಳ ಪಡೆಯುವ ಇಂತಹ ನೌಕರರೇ ದುರ್ಬಳಕೆ ಮಾಡಿಕೊಳ್ಳುವುದು ಅಕ್ಷಮ್ಯ. ಸರ್ಕಾರಿ ನೌಕರರ ಕುಟುಂಬಗಳು ಎಎವೈ ಅಥವಾ ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅದನ್ನು ಹಿಂದಿರುಗಿಸುವಂತೆ ಆಹಾರ ಇಲಾಖೆ ಹಲವು ಬಾರಿ ಸೂಚನೆ ನೀಡಿತ್ತು.

‘ಸರ್ಕಾರ ಹಾಗೂ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುವ ಯಾವುದೇ ನೌಕರ ಅಥವಾ ಅವರ ಅವಲಂಬಿತ ಕುಟುಂಬವು ಬಿಪಿಎಲ್‌ ಪಡಿತರ ಚೀಟಿಯನ್ನು ಹೊಂದಿದ್ದರೆ, ಒಂದು ತಿಂಗಳಲ್ಲಿ ಅದನ್ನು ಆಹಾರ ಇಲಾಖೆಗೆ ಹಿಂದಿರುಗಿಸಿ ರದ್ದುಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಮತ್ತು ಕ್ರಿಮಿನಲ್‌ ಮೊಕದ್ದಮೆ ಹೂಡಿ, ನಷ್ಟ ವಸೂಲಿ ಮಾಡಲಾಗುವುದು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು 2020ರ ಜೂನ್‌ 10ರಂದು ಸುತ್ತೋಲೆ ಹೊರಡಿಸಿದ್ದರು. ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡಿದರೂ ಅದನ್ನು ಕೆಲವರು ಉಪೇಕ್ಷಿಸಿರುವುದು ‘ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು’ ಎಂಬ ಭಂಡಧೈರ್ಯಕ್ಕೆ ನಿದರ್ಶನ. ಸರ್ಕಾರವು ಮಾನವ ಸಂಪನ್ಮೂಲ ನಿರ್ವಹಣೆ ವ್ಯವಸ್ಥೆಯ (ಎಚ್‌ಆರ್‌ಎಂಎಸ್‌) ದತ್ತಾಂಶಗಳ ಮೂಲಕ ಎಎವೈ ಮತ್ತು ಬಿಪಿಎಲ್‌ ಕಾರ್ಡ್‌ದಾರರ ಮಾಹಿತಿ ಪಡೆದು, ಅದನ್ನು ನ್ಯಾಷನಲ್‌ ಇನ್ಫರ್ಮೆಟಿಕ್ಸ್‌ ಸೆಂಟರ್‌ (ಎನ್‌ಐಸಿ) ಮೂಲಕ ಪರಿಶೀಲಿಸಿದ ಬಳಿಕವಷ್ಟೇ ಈ ಸವಲತ್ತನ್ನು ಯಾವೆಲ್ಲ ಸರ್ಕಾರಿ ನೌಕರರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಅಗತ್ಯ ವಸ್ತುಗಳ ಕಾಯ್ದೆ ಹಾಗೂ ಸೇವಾ ನಿಯಮಗಳಡಿ ಇಂತಹ ನೌಕರರಿಗೆ ನೋಟಿಸ್‌ ನೀಡಿ, ತಲಾ ₹ 40 ಸಾವಿರದಿಂದ ₹ 1.50 ಲಕ್ಷದವರೆಗೆ ದಂಡ ವಿಧಿಸಿರುವುದು ಸರಿಯಾದ ಕ್ರಮ. ಸರ್ಕಾರದ ಯೋಜನೆಗಳನ್ನು ಅಕ್ರಮವಾಗಿ ಬಳಸಿಕೊಳ್ಳುವುದು ಹಾಗೂ ಸುಳ್ಳು ಮಾಹಿತಿ ನೀಡಿ ಪಡಿತರ ಚೀಟಿ ಪಡೆಯುವುದು ಕಾನೂನುರೀತ್ಯಾ ಅಪರಾಧ. ಇಷ್ಟು ವರ್ಷ ಸರ್ಕಾರದ ಸವಲತ್ತನ್ನು ದುರ್ಬಳಕೆ ಮಾಡಿದ ತಪ್ಪಿಗಾಗಿ ಅವರು ದಂಡ ತೆರಲೇಬೇಕು. ಸೇವಾ ದಾಖಲೆಯಲ್ಲೂ ಇದು ಕಪ್ಪುಚುಕ್ಕೆಯಾಗಿ ದಾಖಲಾಗಬೇಕು.

ಬಡತನದಿಂದ ಬಳಲುತ್ತಿರುವ ಕುಟುಂಬಗಳೇ ಬಿಪಿಎಲ್‌ ಅಥವಾ ಎಎವೈ ಪಡಿತರ ಚೀಟಿ ಮಾಡಿಸಿ
ಕೊಳ್ಳಬೇಕೆಂದರೆ ಹರಸಾಹಸಪಡಬೇಕಾದಂತಹ ಕಠಿಣ ನಿಯಮಗಳು ಜಾರಿಯಲ್ಲಿವೆ. ಬಿಪಿಎಲ್ ಪಡಿತರ ಚೀಟಿ ಪಡೆಯಲು ಕುಟುಂಬದ ಸದಸ್ಯರೆಲ್ಲರೂ ಬಯೊಮೆಟ್ರಿಕ್‌ ದಾಖಲೆಗಳನ್ನು ನೀಡುವುದು ಕಡ್ಡಾಯ. ಇಂತಹ ಕಠಿಣ ನಿಯಮಗಳ ಹೊರತಾಗಿಯೂ ಸರ್ಕಾರಿ ನೌಕರರ ಕುಟುಂಬಗಳು ಬಿಪಿಎಲ್‌ ಹಾಗೂ ಎಎವೈ ಪಡಿತರ ಚೀಟಿ ಪಡೆಯಲು ಸಾಧ್ಯವಾಗಿದ್ದು ಹೇಗೆ ಎಂಬುದು ಯಕ್ಷಪ್ರಶ್ನೆ. ತಂತ್ರಜ್ಞಾನದಲ್ಲಿ
ಇಷ್ಟೆಲ್ಲಾ ಮುಂದುವರಿದಿರುವಾಗಲೂ ರಾಜ್ಯದಲ್ಲಿ ಪಡಿತರ ಚೀಟಿ ವಿತರಿಸುವ ಪ್ರಕ್ರಿಯೆಯನ್ನು
ಪಾರದರ್ಶಕವಾಗಿ ನಡೆಸಲು ಸಾಧ್ಯವಾಗಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.

ಇಲಾಖೆಯ ಅಧಿಕಾರಿಗಳು ಶಾಮೀಲಾಗದೇ ಇಂತಹ ಅಕ್ರಮಗಳು ನಡೆಯಲು ಸಾಧ್ಯವಿಲ್ಲ. ಇಲಾಖೆಯಲ್ಲಿರುವ ಇಂತಹ ಭ್ರಷ್ಟ ಅಧಿಕಾರಿಗಳನ್ನು ಪತ್ತೆಹಚ್ಚುವ ಮೂಲಕ ಅವರ ವಿರುದ್ಧವೂ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಬಿಪಿಎಲ್‌ ಮಾತ್ರವಲ್ಲ, ಎಪಿಎಲ್‌ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ ಲಕ್ಷಾಂತರ ಕುಟುಂಬಗಳಿಗೆ ಮೂರು– ನಾಲ್ಕು ವರ್ಷಗಳ ಬಳಿಕವೂ ಪಡಿತರ ಚೀಟಿ ವಿತರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಡಿತರ ವಿತರಣೆಗೆ ಪಾರದರ್ಶಕ ವ್ಯವಸ್ಥೆಯನ್ನು ರೂಪಿಸುವುದು, ಸರ್ಕಾರದ ಸವಲತ್ತುಗಳು ದುರ್ಬಳಕೆ ಆಗದಂತೆ ತಡೆಯುವುದು ಅಸಾಧ್ಯವಾದ ಕಾರ್ಯವೇನಲ್ಲ.

ಎಎವೈ ಹಾಗೂ ಬಿಪಿಎಲ್‌ ಪಡಿತರ ಚೀಟಿ ಹೊಂದುವುದಕ್ಕೆ ಇರಬೇಕಾದ ಮಾನದಂಡಗಳೇನು, ಪ್ರತೀ ಗ್ರಾಮದಲ್ಲಿ ಅಥವಾ ನಗರದಲ್ಲಿ ವಾರ್ಡ್‌ ಮಟ್ಟದಲ್ಲಿ ಯಾವೆಲ್ಲ ಕುಟುಂಬಗಳು ಎಎವೈ ಹಾಗೂ ಬಿಪಿಎಲ್‌ ಚೀಟಿ ಹೊಂದಿವೆ, ಆಯಾ ತಿಂಗಳು ಯಾವ ಕುಟುಂಬಕ್ಕೆ ಎಷ್ಟು ಪಡಿತರ ವಿತರಿಸಲಾಗಿದೆ ಎಂಬ ವಿವರ ಸಾರ್ವಜನಿಕವಾಗಿ ಲಭ್ಯ ಆಗಬೇಕು. ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳ ವೆಬ್‌ಸೈಟ್‌ಗಳಲ್ಲೂಈ ಮಾಹಿತಿಯನ್ನು ಪ್ರಕಟಿಸಬೇಕು. ಅನರ್ಹ ಕುಟುಂಬಗಳು ಇಂತಹ ಕಾರ್ಡ್‌ ಹೊಂದಿರುವುದು ಕಂಡುಬಂದರೆ ದೂರು ನೀಡುವುದಕ್ಕೆ ವೇದಿಕೆ ಕಲ್ಪಿಸಬೇಕು. ಇದಕ್ಕೆಲ್ಲ ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು ಅಷ್ಟೆ. ಬಿಪಿಎಲ್‌ ಪಡಿತರ ಚೀಟಿಯನ್ನು ನೀಡುವುದರ ಮೂಲ ಉದ್ದೇಶ ಬಡವರಿಗೆ ಪಡಿತರವನ್ನು ರಿಯಾಯಿತಿ ದರದಲ್ಲಿ ವಿತರಿಸುವುದೇ ಆಗಿದ್ದರೂ, ವಿವಿಧ ಸರ್ಕಾರಿ ಸವಲತ್ತುಗಳನ್ನು ಪಡೆಯುವುದಕ್ಕೂ ಇದನ್ನೇ ಮಾನದಂಡವನ್ನಾಗಿ ಬಳಸಲಾಗುತ್ತಿದೆ.

ಹಾಗಾಗಿ ಅರ್ಹರಲ್ಲದ ಕುಟುಂಬಗಳಿಗೆ ಬಿಪಿಎಲ್‌ ಕಾರ್ಡ್‌ ವಿತರಿಸಿದರೆ, ಅದು ಬೇರೆ ಬೇರೆ ಸವಲತ್ತುಗಳನ್ನು ಪಡೆಯುವುದಕ್ಕೂ ದುರ್ಬಳಕೆ ಆಗುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ದುರ್ಬಳಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಅರ್ಹರಿಗೆ ಮಾತ್ರ ಈ ಸವಲತ್ತು ಸಿಗುವಂತೆ ನೋಡಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT