ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಮಹಿಳೆ ಮಾಲೀಕತ್ವದ ಉದ್ಯಮ ರಕ್ಷಿಸುವ ಕೆಲಸ ತಕ್ಷಣ ಆಗಲಿ

Last Updated 25 ಆಗಸ್ಟ್ 2020, 20:31 IST
ಅಕ್ಷರ ಗಾತ್ರ

ಬೆಂಗಳೂರನ್ನು ಭಾರತದ ನವೋದ್ಯಮಗಳ ರಾಜಧಾನಿ ಎಂದು ಕರೆಯಲಾಗುತ್ತಿದೆ. ನವೋದ್ಯಮಗಳ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ, ದುಡಿಯುವ ವರ್ಗ ಹಾಗೂ ಅವುಗಳನ್ನು ಮುನ್ನಡೆಸಲು ಬೇಕಿರುವ ನಾಯಕತ್ವ ಇಲ್ಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಬೆಂಗಳೂರಿನಲ್ಲಿ ಆರಂಭವಾಗಿರುವ ನವೋದ್ಯಮಗಳ ಪೈಕಿ ಶೇಕಡ 10ರಷ್ಟನ್ನು ಮಾತ್ರ ಮಹಿಳೆಯರು ಸ್ಥಾಪಿಸಿದ್ದು ಎಂಬ ಅಂಶವನ್ನು ಗ್ಲೋಬಲ್ ಅಲಯನ್ಸ್ ಫಾರ್ ಮಾಸ್‌‌ ಆಂತ್ರಪ್ರೀನರ್ಷಿಪ್‌‌ (ಗೇಮ್) ಮತ್ತು ‘ಸತ್ವ ಕನ್ಸಲ್ಟಿಂಗ್’ ಸಂಸ್ಥೆಗಳು ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಹೇಳಲು ಹೆಚ್ಚು ಶ್ರಮ ಹಾಕುವ ಅಗತ್ಯ ಇಲ್ಲ. ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಹಾಗೂ ಅವರಲ್ಲಿರುವ ಉದ್ಯಮಶೀಲತೆಗೆ ಪ್ರೋತ್ಸಾಹ ನೀಡುವ ವಾತಾವರಣ ನಮ್ಮಲ್ಲಿ ಇಲ್ಲ. ದೇಶದ ಒಟ್ಟು ಆಂತರಿಕ ಉತ್ಪಾದನೆಯಲ್ಲಿ (ಜಿಡಿಪಿ) ಮಹಿಳೆಯರ ಕೊಡುಗೆ ಕಡಿಮೆ, ಪುರುಷರ ಕೊಡುಗೆ ಹೆಚ್ಚು ಎಂಬ ಅಧ್ಯಯನ ವರದಿಗಳು ಹಲವು ಇವೆ. ಭಾರತದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಸ್ಥರಾದರೆ, ದೇಶದ ಜಿಡಿಪಿಯು ಶೇಕಡ 16ರಿಂದ ಶೇ 60ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವರದಿಯೊಂದು ಈ ಹಿಂದೆ ಹೇಳಿತ್ತು. ಈಗ, ಬೆಂಗಳೂರಿನಲ್ಲಿ ಮಹಿಳೆಯರೇ ಮುನ್ನಡೆಸುವ ಉದ್ಯಮಗಳ ಪೈಕಿ ಸರಿಸುಮಾರು ಶೇಕಡ 30ರಷ್ಟು ಉದ್ಯಮಗಳು ಮುಚ್ಚುವ ಭೀತಿ ಎದುರಿಸುತ್ತಿವೆ ಎನ್ನುವ ವರದಿ ಪ್ರಕಟವಾಗಿದೆ. ಈ ಭೀತಿಯನ್ನು ಎದುರಿಸುತ್ತಿರುವ ಉದ್ಯಮಗಳ ಪೈಕಿ ಹೆಚ್ಚಿನವು ಅತಿಸಣ್ಣ ಉದ್ಯಮ ವರ್ಗದ ಅಡಿಯಲ್ಲಿ ಬರುವಂಥವು. ಸ್ಥಗಿತದ ಭೀತಿ ಎದುರಾಗಿರುವುದಕ್ಕೆ ಕಾರಣ ಕೋವಿಡ್–19 ಸಾಂಕ್ರಾಮಿಕದ ಪರಿಣಾಮವಾಗಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು. ಆರೋಗ್ಯ ಬಿಕ್ಕಟ್ಟಿನ ಕಾರಣದಿಂದಾಗಿ ಎದುರಾಗಿರುವ ಈ ಆರ್ಥಿಕ ಬಿಕ್ಕಟ್ಟು ಉದ್ಯಮಗಳ ಪಾಲಿಗೆ ಭಾರಿ ಸವಾಲನ್ನು ತಂದಿರಿಸಿದೆ ಎಂಬುದು ಈಗ ಸರ್ವವಿದಿತ. ಈ ಅಧ್ಯಯನ ವರದಿಯು ಈ ಬಿಕ್ಕಟ್ಟಿನಿಂದಾಗಿ, ಮಹಿಳೆಯರ ಮಾಲೀಕತ್ವದ ಉದ್ಯಮಗಳು ಎದುರಿಸುತ್ತಿರುವ ಅಪಾಯದ ಚಿತ್ರಣವನ್ನು ನೀಡಿದೆ.

ಉದ್ಯಮ ವಲಯದ ತಜ್ಞರ ಮಾತಿನ ಅನ್ವಯ, ಮಹಿಳೆಯರು ನಡೆಸುತ್ತಿರುವ ಉದ್ಯಮಗಳಲ್ಲಿ ಹಲವು, ಸೂಕ್ತ ಪ್ರಾಧಿಕಾರಗಳಲ್ಲಿ ಹೆಸರು ನೋಂದಾಯಿಸಿಕೊಂಡು, ಸಂಘಟಿತ ವಲಯದೊಳಕ್ಕೆ ಇನ್ನೂ ಬಂದಿಲ್ಲ. ಇಂತಹ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸುವುದು ಈ ಕಾರಣಕ್ಕಾಗಿಯೇ ಕಷ್ಟವಾಗುತ್ತದೆ. ಹಾಗೆಯೇ, ಸರ್ಕಾರ ಅಥವಾ ಇನ್ಯಾವುದೇ ಸಂಸ್ಥೆಯಿಂದ ಒದಗುವ ನೆರವನ್ನು ಇಂತಹ ಉದ್ಯಮಗಳು ಪಡೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಕೇಂದ್ರ ಸರ್ಕಾರವು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯಮ ವಲಯಕ್ಕೆ ನೆರವಾಗುವ ಉದ್ದೇಶದಿಂದ, ತಾನೇ ಖಾತರಿಯಾಗಿ ನಿಂತು ಸಾಲ ಒದಗಿಸುವ ವ್ಯವಸ್ಥೆ ರೂಪಿಸಿದೆ. ಆದರೆ, ನೋಂದಣಿ ಆಗದ ಉದ್ಯಮಗಳು ಇಂತಹ ಸೌಲಭ್ಯಗಳನ್ನು ಪಡೆದುಕೊಳ್ಳುವುದು ಆಗದ ಮಾತು. ಈ ಸಂದರ್ಭದಲ್ಲಿ, ಇಂತಹ ಉದ್ಯಮಗಳನ್ನು ಸೂಕ್ತ ಪ್ರಾಧಿಕಾರಗಳ ಮೂಲಕ ನೋಂದಣಿ ಮಾಡಿಸಿ ಅರ್ಹ ಸವಲತ್ತುಗಳನ್ನು ಪಡೆದುಕೊಳ್ಳಲು ಸಶಕ್ತವಾಗಿಸಲು ಸಾಧ್ಯವೇ ಎಂಬ ದಿಸೆಯಲ್ಲಿ ಸರ್ಕಾರ ಆಲೋಚಿಸಬೇಕು. ಅದಕ್ಕಾಗಿ, ಅಗತ್ಯ ಕಂಡುಬಂದರೆ, ವಿಶೇಷ ಕ್ರಿಯಾಯೋಜನೆ ರೂಪಿಸಬಹುದು. ಹಾಗೆಯೇ, ಸಾಲ ಮರುಹೊಂದಾಣಿಕೆ ಮಾಡಿಕೊಳ್ಳಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನೀಡಿರುವ ಅವಕಾಶವನ್ನು, ಈ ವಲಯದ ಉದ್ಯಮಿಗಳು ತಮ್ಮ ಉದ್ಯಮವನ್ನು ನೋಂದಣಿ ಮಾಡಿಸಿಕೊಳ್ಳದೇ ಇದ್ದರೂ ಬಳಸಿಕೊಳ್ಳಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಸಬಹುದೇ ಎಂಬುದನ್ನೂ ಸರ್ಕಾರ ಪರಿಶೀಲಿಸಬೇಕು. ಈ ಅವಕಾಶ ಬಳಸಿಕೊಳ್ಳಲು ಸಾಧ್ಯವಾದರೆ, ಈ ವಲಯದ ಉದ್ಯಮಗಳ ಮೇಲಿನ ಹಣಕಾಸಿನ ಒತ್ತಡ ತುಸು ಮಟ್ಟಿಗಾದರೂ ನಿವಾರಣೆ ಆಗಬಹುದು. ಮಹಿಳೆಯರು ಹೆಚ್ಚೆಚ್ಚು ಪ್ರಮಾಣದಲ್ಲಿ ಉದ್ಯಮಶೀಲತೆಯನ್ನು ಬೆಳೆಸಿಕೊಂಡು, ಉದ್ಯಮಗಳನ್ನು ಆರಂಭಿಸಿದಲ್ಲಿ 2030ರ ಒಳಗೆ ಭಾರತದಲ್ಲಿ 15 ಕೋಟಿ ಜನರಿಗೆ ಉದ್ಯೋಗ ನೀಡಬಹುದು ಎಂಬ ಅಂದಾಜು ಇದೆ. ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಹೆಚ್ಚು ತೊಡಗಿಕೊಳ್ಳಬೇಕಾದ ಅವಶ್ಯಕತೆಯನ್ನೂ ಅವರು ಈ ಕ್ಷೇತ್ರದಲ್ಲಿ ಇರುವಂತಾಗಲು ವ್ಯವಸ್ಥೆಯು ಕಾರ್ಯತತ್ಪರ ಆಗಬೇಕಿರುವುದರ ಅಗತ್ಯವನ್ನೂ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಈ ಸಂಖ್ಯೆಯೇ ಹೇಳುತ್ತಿದೆ. ಮಹಿಳೆಯರ ಮಾಲೀಕತ್ವದಲ್ಲಿ ಈಗಿರುವ ಉದ್ಯಮಗಳನ್ನು ರಕ್ಷಿಸುವ ಕೆಲಸ ಜರೂರಾಗಿ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT