ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಕಾಲಕ್ಕೆ ಚುನಾವಣೆ: ಮೇಲ್ನೋಟಕ್ಕೆ ಆಕರ್ಷಕ, ಅನುಷ್ಠಾನದಲ್ಲಿ ತೊಡಕು

ಅನುಕೂಲ, ವೆಚ್ಚದ ಹೆಸರಿನಲ್ಲಿ ಪ್ರಜಾತಂತ್ರದ ಆಶಯಕ್ಕೆ ಚ್ಯುತಿ ಬರಬಾರದು
Last Updated 23 ಜೂನ್ 2019, 20:05 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತಾ ಪಟ್ಟಿಯಲ್ಲಿ ‘ಒಂದು ದೇಶ, ಒಂದು ಚುನಾವಣೆ’ ವಿಷಯಕ್ಕೆ ಅತ್ಯಂತ ಪ್ರಮುಖ ಸ್ಥಾನ ಇದೆ. ದೇಶದ ವಿಧಾನಸಭೆಗಳು ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂದು ಅವರು ತಮ್ಮ ಹಿಂದಿನ ಅವಧಿಯಲ್ಲಿಯೂ ಪ್ರತಿಪಾದಿಸಿದ್ದರು. ಎರಡನೇ ಬಾರಿ ಪ್ರಧಾನಿಯಾಗುತ್ತಲೇ ಮೊದಲಿಗೆ ಅವರ ದೃಷ್ಟಿ ಹೊರಳಿದ್ದು ಇದೇ ವಿಷಯದತ್ತ. ಈ ಬಗ್ಗೆ ಚರ್ಚಿಸುವುದಕ್ಕೆ ವಿವಿಧ ರಾಜಕೀಯ ಪಕ್ಷಗಳ ಸಭೆ ನಡೆಸಿದರು. ಏಕಕಾಲಕ್ಕೆ ಚುನಾವಣೆ ನಡೆಸುವ ಕುರಿತು ರೂಪುರೇಷೆ ಸಿದ್ಧಪಡಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಭೆಯ ನಂತರ ತಿಳಿಸಿದ್ದಾರೆ. ಈ ಮಹತ್ವದ ಸಭೆಗೆ ಕಾಂಗ್ರೆಸ್ ಸೇರಿದಂತೆ 11 ಪಕ್ಷಗಳು ಗೈರುಹಾಜರಾಗಿದ್ದವು ಎಂಬುದನ್ನು ಗಮನಿಸಬೇಕು. ಈ ಶಾಸನಸಭೆಗಳಿಗೆ ಒಂದೇ ಬಾರಿ ಚುನಾವಣೆ ನಡೆಸುವ ಆಲೋಚನೆಯು ಬಹಳ ಆಕರ್ಷಕವಾಗಿ ಕಾಣಿಸುತ್ತದೆಯಾದರೂ, ಇದನ್ನು ಅನುಷ್ಠಾನಕ್ಕೆ ತರುವುದಕ್ಕೆ ಇರುವ ಹಾದಿ ತೀರಾ ಸಂಕೀರ್ಣ ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಆಲೋಚನೆಯನ್ನು ಒಪ್ಪಿಕೊಳ್ಳಲು ದೇಶದ ಪ್ರಜಾತಂತ್ರ ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಕೂಡ ಮೂಡುತ್ತದೆ.

ಒಂದೇ ಬಾರಿಗೆ ಚುನಾವಣೆ ನಡೆಸುವುದರಿಂದ ಸರ್ಕಾರದ ಬೊಕ್ಕಸಕ್ಕೆ ಆಗುವ ವೆಚ್ಚ ನಿಯಂತ್ರಿಸಬಹುದು, ಚುನಾವಣೆ ಕೆಲಸಗಳಿಗಾಗಿ ಮಾನವ ಸಂಪನ್ಮೂಲ ಬಳಕೆ ಕಡಿಮೆ ಮಾಡಬಹುದು ಎಂಬುದು ಈ ಆಲೋಚನೆಯ ಪರ ಇರುವವರು ನೀಡುವ ಒಂದು ಸಮರ್ಥನೆ. ಪ್ರತಿ ವರ್ಷವೂ ದೇಶದ ಒಂದಿಲ್ಲೊಂದು ಭಾಗದಲ್ಲಿ ಚುನಾವಣೆಯ ಕಾವು ಇರುತ್ತದೆಯಾದ್ದರಿಂದ, ಮಾದರಿ ನೀತಿ ಸಂಹಿತೆ ಕೂಡ ಜಾರಿಯಲ್ಲಿ ಇರುತ್ತದೆ. ಇದು, ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲು ಅಡ್ಡಿ ಉಂಟುಮಾಡುತ್ತದೆ. ಹಾಗಾಗಿ, ಒಂದೇ ಬಾರಿಗೆ ಚುನಾವಣೆ ನಡೆದರೆ ಉತ್ತಮ ಎಂಬುದು ಇನ್ನೊಂದು ಸಮರ್ಥನೆ. ಆದರೆ, ಪ್ರಜಾತಂತ್ರ ವ್ಯವಸ್ಥೆಗೆ ಇರುವ ಮೌಲ್ಯವನ್ನು ಪರಿಗಣಿಸಿದಾಗ, ಇವೆರಡೂ ಸಮರ್ಥನೆಗಳನ್ನು ಒಪ್ಪಿಕೊಳ್ಳಲು ಆಗದು. ಪ್ರಜಾತಂತ್ರ ಅಥವಾ ಅದರ ಅಂತರ್ಗತ ಭಾಗವಾಗಿರುವ ಚುನಾವಣೆಗಳು ‘ಕಡಿಮೆ ಖರ್ಚಿನಲ್ಲಿ’ ನಡೆಯಬೇಕು ಎಂಬ ಹಟ ಸಲ್ಲದು; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯನ್ನು ಹಣದ ಮೌಲ್ಯದ ಆಧಾರದಲ್ಲಿ ಅಳೆಯುವುದೇ ತಪ್ಪು. ಮಾದರಿ ನೀತಿ ಸಂಹಿತೆಯ ಜಾರಿಯಿಂದ ಹೊಸ ಯೋಜನೆಗಳ ಘೋಷಣೆಗೆ ಸಣ್ಣ ಅವಧಿಯ ಮಟ್ಟಿಗೆ ಅಡ್ಡಿಯಾಗುತ್ತದೆಯೇ ವಿನಾ ಜಾರಿಯಲ್ಲಿರುವ ಯೋಜನೆಗಳಿಗೆ ಅಲ್ಲ. ಹಾಗಾಗಿ, ಎರಡನೆಯ ಸಮರ್ಥನೆ ಕೂಡ ಸ್ವೀಕಾರಾರ್ಹವಲ್ಲ. ಒಂದೇ ಬಾರಿ ಚುನಾವಣೆ ನಡೆಸಬೇಕು ಎನ್ನುವವರು ದೇಶದ ಪ್ರಜಾತಂತ್ರವು ಲೋಕಸಭೆ ಹಾಗೂವಿಧಾನಸಭೆಗಳ ಮಟ್ಟದಲ್ಲಿ ಮಾತ್ರ ಕ್ರಿಯಾಶೀಲವಾಗಿರುತ್ತದೆ ಎಂದು ಭಾವಿಸಿರುವಂತಿದೆ. ಆದರೆ, ಚುನಾವಣೆ ಮತ್ತು ಪ್ರಜಾತಂತ್ರವು ಸ್ಥಳೀಯ ಸಂಸ್ಥೆಗಳ ಮಟ್ಟದಿಂದಲೂ ಸಕ್ರಿಯವಾಗಿ ಇರುತ್ತದೆ. ಒಂದೇ ಬಾರಿಗೆ ಚುನಾವಣೆ ನಡೆಸಬಯಸುವವರು ಈ ಚುನಾವಣೆಗಳನ್ನೂ ಲೋಕಸಭಾ ಚುನಾವಣೆ ಜೊತೆಗೇ ನಡೆಸುವ ಇರಾದೆ ಹೊಂದಿದ್ದಾರೆಯೇ? ಚುನಾವಣೆ ನಂತರ, ಲೋಕಸಭೆಯು ಅವಧಿಗೆ ಮುನ್ನವೇ ವಿಸರ್ಜನೆಯಾದರೆ ಪುನಃ ಚುನಾವಣೆ ನಡೆಸಬೇಕಾಗುತ್ತದೆ. ಆಗ ಲೋಕಸಭೆಯ ಜೊತೆಗೆ ಎಲ್ಲ ವಿಧಾನಸಭೆಗಳಿಗೂ
ಚುನಾವಣೆ ನಡೆಸುವುದು ಜನರ ಆದೇಶಕ್ಕೆ ವಿರುದ್ಧವಾದ ನಡೆ ಆಗುವುದಿಲ್ಲವೇ? ಒಂದೇ ಬಾರಿಗೆ ಚುನಾವಣೆ ನಡೆಸುವುದರ ವಿಚಾರವಾಗಿ ಕೇಂದ್ರ ಕಾನೂನು ಆಯೋಗವು ಕರಡು ಶಿಫಾರಸುಗಳನ್ನು 2018ರಲ್ಲಿ ಸಿದ್ಧಪಡಿಸಿತ್ತು. ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ವ್ಯವಸ್ಥೆಯ ಬದಲು, ‘ರಚನಾತ್ಮಕ ಅವಿಶ್ವಾಸ ಗೊತ್ತುವಳಿ ಮಂಡನೆ’ ವ್ಯವಸ್ಥೆಯ ಪರವಾಗಿ ಆಯೋಗ ಮಾತನಾಡಿತ್ತು. ಈ ವ್ಯವಸ್ಥೆಯಲ್ಲಿ, ಅವಿಶ್ವಾಸ ಗೊತ್ತುವಳಿ ಮಂಡಿಸುವವರು ಪರ್ಯಾಯ ಸರ್ಕಾರ ರಚನೆ ಸಾಧ್ಯತೆಯನ್ನು ಸೂಚಿಸಬೇಕು. ಈಗಿನ ಪರಿಸ್ಥಿತಿಯಲ್ಲಿ ಇದು ಕಾರ್ಯಸಾಧುವಲ್ಲ. ಒಂದು ವೇಳೆ, ಸರ್ಕಾರ ಐದು ವರ್ಷಕ್ಕೆ ಮುನ್ನವೇ ಪತನಗೊಂಡರೆ, ಹೊಸದಾಗಿ ಚುನಾಯಿತವಾಗುವ ಸರ್ಕಾರವು ಐದು ವರ್ಷಗಳಲ್ಲಿನ ಉಳಿಕೆ ಅವಧಿಗೆ ಮಾತ್ರ ಇರಬೇಕು ಎಂಬುದು ಇನ್ನೊಂದು ಶಿಫಾರಸು. ಇದನ್ನು ಒಪ್ಪಿದರೆ, ‘ಐದು ವರ್ಷಗಳ ಆಡಳಿತ’ ಎನ್ನುವ ಕಾನೂನಿಗೆ ತಿದ್ದುಪಡಿ ತರಬೇಕಾಗುತ್ತದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪ್ರಸ್ತಾಪವಾಗುವ ವಿಷಯಗಳು ಮತ್ತು ಮತ ಚಲಾಯಿಸುವಾಗ ಜನ ಯೋಚಿಸುವ ರೀತಿ ಬೇರೆ ಬೇರೆ ಆಗಿರುತ್ತದೆ. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಒಂದು ಚುನಾವಣೆಯು ಮತ್ತೊಂದರ ಮೇಲೆ ಅನಗತ್ಯ ಪ್ರಭಾವ ಬೀರಬಹುದು. ಪ್ರಾದೇಶಿಕ ಪಕ್ಷಗಳಿಗೆ ಇದರಿಂದ ಬಾಧಕವಾಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.‘...ಒಂದು ಚುನಾವಣೆ’ ಪರಿಕಲ್ಪನೆಯು ದೇಶದ ಒಕ್ಕೂಟ ವ್ಯವಸ್ಥೆಗೆ ಕೂಡ ಸೂಕ್ತವಲ್ಲ. ಇಂತಹ ಮಹತ್ವದ ಕ್ರಮಕ್ಕೆ ಸಹಮತ ಬೇಕು. ಆದರೆ, ಅದು ಸದ್ಯಕ್ಕೆ ಇಲ್ಲಿ ಕಾಣಿಸುತ್ತಿಲ್ಲ.ಸದ್ಯದ ಸ್ಥಿತಿಯಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸಲು ಶ್ರಮಪಡುವುದಕ್ಕಿಂತ, ಚುನಾವಣೆಯನ್ನು ಇನ್ನಷ್ಟು ಮುಕ್ತ ಮತ್ತು ನ್ಯಾಯಸಮ್ಮತಗೊಳಿಸುವ ಸುಧಾರಣೆಗಳತ್ತ ಗಮನ ನೀಡುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT