ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ಟಿಕೆಟ್: ಪ್ರಾದೇಶಿಕ ಪಕ್ಷಗಳ ನಡೆ ಅನುಕರಣೀಯ

Last Updated 29 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಭಾರತದ ರಾಜಕೀಯ ವ್ಯವಸ್ಥೆಯನ್ನು, ಪ್ರಾದೇಶಿಕ ರಾಜಕೀಯ ಪಕ್ಷಗಳನ್ನು ಹೊರತುಪಡಿಸಿ ಕಲ್ಪಿಸಿ
ಕೊಳ್ಳುವುದೂ ಸಾಧ್ಯವಿಲ್ಲ. ಲೋಕಸಭೆಯಲ್ಲಿ ಹಿಂದೆ ಕಾಂಗ್ರೆಸ್ ಪಾರಮ್ಯ ಇದ್ದ ಕಾಲಘಟ್ಟದಲ್ಲೂ, ಈಗ ಬಿಜೆಪಿಯ ಪಾರಮ್ಯ ಇರುವ ಹೊತ್ತಿನಲ್ಲೂ ಹಲವು ಪ್ರಾದೇಶಿಕ ರಾಜಕೀಯ ಪಕ್ಷಗಳು ಸೀಮಿತ ಭೌಗೋಳಿಕ ವ್ಯಾಪ್ತಿಯಲ್ಲಿ ತಮ್ಮ ಪ್ರಾಬಲ್ಯ ಮುಂದುವರಿಸಿಕೊಂಡು ಬಂದಿವೆ. ಪ್ರಾದೇಶಿಕ ಆಶೋತ್ತರಗಳನ್ನು, ವಿವಿಧ ಭಾಷೆ, ಜಾತಿ, ವರ್ಗಗಳ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷಗಳು, ದೇಶದಲ್ಲಿ ಪ್ರಾತಿನಿಧ್ಯದ ರಾಜಕಾರಣಕ್ಕೆ ತಮ್ಮದೇ ಕೊಡುಗೆ ನೀಡಿವೆ. ಹೀಗಿದ್ದರೂ, ಪ್ರಾದೇಶಿಕ ಪಕ್ಷಗಳು ಕೆಲವು ಆರೋಪಗಳಿಗೆ ಗುರಿಯಾಗಿವೆ. ಅವು ಕುಟುಂಬ ರಾಜಕಾರಣವನ್ನು ಪೋಷಿಸುವ ಪಕ್ಷಗಳು, ಅವುಗಳಲ್ಲಿ ಆಂತರಿಕ ಪ್ರಜಾಪ್ರಭುತ್ವಕ್ಕೆ ಅವಕಾಶ ಇಲ್ಲ, ಅವು ಜಾತಿವಾದಿ ಎಂಬ ಆರೋಪಗಳನ್ನು ಎದುರಿಸುತ್ತಿವೆ. ಈ ಆರೋಪಗಳಲ್ಲಿ ಹುರುಳಿಲ್ಲದಿಲ್ಲ. ಆದರೆ, ಈಗಿನ ಸಂದರ್ಭದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳು, ಟಿಕೆಟ್ ಹಂಚಿಕೆ ವೇಳೆ ಮಹಿಳೆಯರಿಗೆ ಸ್ವಪ್ರೇರಣೆಯಿಂದ ಹೆಚ್ಚು ಅವಕಾಶ ಕಲ್ಪಿಸುವ ಮೂಲಕ ರಾಷ್ಟ್ರೀಯ ಪಕ್ಷಗಳಿಗೂ ಮಾದರಿ ಆಗುವಂತೆ ನಡೆದುಕೊಂಡಿವೆ. ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕದಳವು (ಐಎನ್‌ಎಲ್‌ಡಿ) ಈಗ ವಿಧಾನಸಭಾ ಚುನಾವಣೆಯಲ್ಲಿ ಶೇಕಡ 33ರಷ್ಟು ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದೆ. ಇದಕ್ಕೂ ಮೊದಲು, ಅಂದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಡಿಶಾದಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ಶೇಕಡ 33ರಷ್ಟು ಸ್ಥಾನಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿತ್ತು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಶೇಕಡ 40ರಷ್ಟು ಸ್ಥಾನಗಳಲ್ಲಿ ಮಹಿಳೆಯರನ್ನು ಕಣಕ್ಕೆ ಇಳಿಸಿತ್ತು. ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳೇ ಮೇಲ್ಪಂಕ್ತಿ ಹಾಕಿಕೊಟ್ಟಿರುವುದಕ್ಕೆ ಇವು ನಿದರ್ಶನ. ಪ್ರಾದೇಶಿಕ ಪಕ್ಷಗಳ ಈ ನಡೆಯನ್ನು ಅನುಸರಿಸುವ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳು ಗಂಭೀರ ಚಿಂತನೆ ನಡೆಸಬೇಕು.

ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಯು ಈವರೆಗೂ ಸಂಸತ್ತಿನ ಅನುಮೋದನೆ ಪಡೆದಿಲ್ಲ. ಆ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತು, ಅದು ಈ ನೆಲದ ಕಾನೂನಾಗುವವರೆಗೆ ಕಾಯದೆ, ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸ್ವಪ್ರೇರಣೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಟಿಕೆಟ್ ನೀಡುವ ಮೂಲಕ ಶಾಸನಸಭೆಗಳಲ್ಲಿ ಅವರಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಆಶಯಕ್ಕೆ ಒತ್ತಾಸೆಯಾಗಿ ನಿಲ್ಲಬೇಕು. 78 ಮಹಿಳಾ ಸದಸ್ಯರನ್ನು ಹೊಂದಿರುವ ಈ ಬಾರಿಯ ಲೋಕಸಭೆಯು ಅತಿಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಸದಸ್ಯರನ್ನು ಹೊಂದಿರುವ ಲೋಕಸಭೆ ಕೂಡ ಹೌದು. ಕಳೆದ ಲೋಕಸಭೆಯಲ್ಲಿ ಒಟ್ಟು 65 ಮಹಿಳಾ ಸದಸ್ಯರು ಇದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಟ್ಟು 716 ಮಹಿಳೆಯರು ಸ್ಪರ್ಧಿಸಿದ್ದರು. ಅಂದರೆ, ಸ್ಪರ್ಧಾ ಕಣದಲ್ಲಿ ಇದ್ದ ಒಟ್ಟು ಮಹಿಳೆಯರ ಪೈಕಿ ಶೇಕಡ 10.89ರಷ್ಟು ಮಹಿಳೆಯರು ಗೆದ್ದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಪುರುಷ ಅಭ್ಯರ್ಥಿಗಳ ಒಟ್ಟು ಸಂಖ್ಯೆ 7,207. ಅವರಲ್ಲಿ ಗೆದ್ದವರ ಪ್ರಮಾಣ ಶೇಕಡ 6.41ರಷ್ಟು ಮಾತ್ರ. ಹಿಂದಿನ ಲೋಕಸಭೆಯ ಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ ಪ್ರಮಾಣ ಶೇಕಡ 9.13ರಷ್ಟು ಎಂದು ಹೇಳುತ್ತವೆ ದಾಖಲೆಗಳು. ಅಂದರೆ, ಮಹಿಳಾ ಅಭ್ಯರ್ಥಿಗಳು ಜಯ ಸಾಧಿಸುವ ಪ್ರಮಾಣದಲ್ಲಿ ಐದು ವರ್ಷಗಳ ಅವಧಿಯಲ್ಲಿ ಶೇಕಡ 1ರಷ್ಟಕ್ಕಿಂತ ಹೆಚ್ಚಿನ ಬೆಳವಣಿಗೆ ದಾಖಲಾಗಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಸರಿಸುಮಾರು ಅರ್ಧದಷ್ಟು ಇರುವ ಮಹಿಳೆಯರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ತಮಗೆ ಹೆಚ್ಚಿನ ಪ್ರಾತಿನಿಧ್ಯ ಬೇಕು ಎಂಬುದನ್ನು ಖಚಿತವಾಗಿ ಹೇಳುತ್ತಿರುವುದರ ಲಕ್ಷಣಗಳು ಈ ಅಂಕಿ-ಅಂಶಗಳು. ‘ಜಯ ಸಾಧಿಸುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್’ ಎನ್ನುವುದು ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಅನುಸರಿಸುವ ಸೂತ್ರ. ಬಿಜೆಡಿ ಹಾಗೂ ಟಿಎಂಸಿ ಪಕ್ಷಗಳ ವತಿಯಿಂದ ಕಣಕ್ಕೆ ಇಳಿದಿದ್ದ ಮಹಿಳಾ ಅಭ್ಯರ್ಥಿಗಳು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಮಾಣ ಗಮನಿಸಿದರೆ, ಈ ಸೂತ್ರ ಪಾಲಿಸುತ್ತಲೇ ಮಹಿಳೆಯರಿಗೆ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ನೀಡಲು ಅಡ್ಡಿಯಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT