ಶನಿವಾರ, ಡಿಸೆಂಬರ್ 7, 2019
21 °C

ಯಾರಿಗಾಗಿ ಎಲಿವೇಟೆಡ್‌ ಕಾರಿಡಾರ್‌?: ಸಮೂಹ ಸಾರಿಗೆ ವ್ಯವಸ್ಥೆಗೆ ಬಲ ತುಂಬಿ

Published:
Updated:

ಜನಸಮುದಾಯದ ಆಶಯಗಳನ್ನು ಅರಿತುಕೊಂಡು, ಭವಿಷ್ಯದ ಸ್ಪಷ್ಟ ಮುನ್ನೋಟವನ್ನೂ ಇಟ್ಟುಕೊಂಡು, ಬೊಕ್ಕಸದ ಒಂದು ಪೈಸೆ ಕೂಡ ಪೋಲಾಗದಂತೆ ಯೋಜನೆಗಳನ್ನು ರೂಪಿಸಬೇಕಾದುದು ಯಾವುದೇ ಜನಪರ ಸರ್ಕಾರದ ಆದ್ಯ ಕರ್ತವ್ಯ. ಆದರೆ, ರಾಜ್ಯದಲ್ಲಿ ಸದ್ಯ ಆಡಳಿತ ನಡೆಸುತ್ತಿರುವ ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರ ಇದಕ್ಕೆ ವ್ಯತಿರಿಕ್ತವಾದ ದಾರಿಯಲ್ಲಿ ಹೆಜ್ಜೆಯಿಟ್ಟಿದೆ. ನಾಗರಿಕ ಸಂಘಟನೆಗಳ ಆಶಯಕ್ಕೆ ವಿರುದ್ಧವಾಗಿ ಬೆಂಗಳೂರಿನಲ್ಲಿ ₹25,495 ಕೋಟಿ ಯೋಜನಾ ಗಾತ್ರದ ಹಾಗೂ 102 ಕಿ.ಮೀ. ಉದ್ದದ ಎಲಿವೇಟೆಡ್‌ ಕಾರಿಡಾರ್‌ (ಎತ್ತರಿಸಿದ ರಸ್ತೆಜಾಲ) ನಿರ್ಮಾಣ ಮಾಡುವುದಾಗಿ ಅದೀಗ ಹಟ ಹಿಡಿದಿದೆ. ಆರು ಪಥಗಳ ಈ ಕಾರಿಡಾರ್‌ ನಿರ್ಮಾಣದ ಕಾಮಗಾರಿಯನ್ನು ಪೂರ್ಣಗೊಳಿಸಲು ಏಳು ವರ್ಷಗಳ ಕಾಲಮಿತಿಯನ್ನೂ ಹಾಕಿಕೊಳ್ಳಲಾಗಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವಲ್ಲಿ ಈ ಯೋಜನೆಯಿಂದ ಹೆಚ್ಚಿನ ಪ್ರಯೋಜನವೇನೂ ಆಗದು ಎನ್ನುವುದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ತಜ್ಞರ ಸ್ಪಷ್ಟ ಅಭಿಮತವಾಗಿದೆ. ಏಕೆಂದರೆ, ರಾಜಧಾನಿಯಲ್ಲಿ ವಾಹನಗಳ ಸಂಖ್ಯೆ ಪ್ರತಿಕ್ಷಣವೂ ಏರುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿಯೇ ಇಲ್ಲಿನ ವಾಹನಗಳ ಸಂಖ್ಯೆ ದ್ವಿಗುಣಗೊಂಡಿದೆ. ಮುಂದಿನ ಏಳು ವರ್ಷಗಳಲ್ಲಿ ಅವುಗಳ ಸಂಖ್ಯೆ ಕೋಟಿಯ ಗಡಿ ದಾಟಲಿದೆ ಎಂಬ ಅಂದಾಜಿದೆ. ಅಲ್ಲದೆ, ಯೋಜನೆಯ ಅನುಷ್ಠಾನಕ್ಕಾಗಿ 3,716 ಮರಗಳು ಸಹ ನೆಲೆಯನ್ನು ಕಳೆದುಕೊಳ್ಳಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಯಾವ ಪುರುಷಾರ್ಥಕ್ಕಾಗಿ ಈ ಯೋಜನೆ ಎನ್ನುವ ಪ್ರಶ್ನೆ ಏಳುವುದು ಸಹಜ. ಯೋಜನೆಯ ಅನುಷ್ಠಾನಕ್ಕೆ 92 ಎಕರೆಗಳಷ್ಟು ಭೂಮಿಯನ್ನು ಸ್ವಾಧೀನಕ್ಕೆ ಪಡೆಯಬೇಕಿದೆ. ಹೊರಭಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೆರಿಫೆರಲ್‌ ರಸ್ತೆಗೆ ಬೇಕಾಗಿರುವ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವುದೇ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇನ್ನು ನಗರದ ಹೃದಯ ಭಾಗದಲ್ಲಿರುವ ಭೂಮಿಯನ್ನು ಅಷ್ಟೊಂದು ಸುಲಭವಾಗಿ ಹಾಗೂ ಶೀಘ್ರವಾಗಿ ಪಡೆಯುವುದು ಸಾಧ್ಯವೇ?

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಅಧಿಕಾರಕ್ಕೆ ಬಂದ ರಾಜ್ಯದ ಆಡಳಿತಗಾರರು, ತಮ್ಮನ್ನು ಚುನಾಯಿಸಿ ಕಳುಹಿಸಿದ ಪ್ರಜೆಗಳಿಗೇ ಬೇಡವಾದ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಉತ್ಸಾಹ ತೋರುತ್ತಿರುವುದು ಇದೇ ಮೊದಲೇನಲ್ಲ. ಹಿಂದಿನ ಸರ್ಕಾರದ ಅವಧಿಯಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಬಿಗಿಪಟ್ಟು ಹಿಡಿಯಲಾಗಿತ್ತು. ಸಾರ್ವಜನಿಕರು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಗೆ ಬೇರೆ ದಾರಿ ಕಾಣದೆ ಯೋಜನೆಯನ್ನೇ ಕೈಬಿಟ್ಟಿತ್ತು. ಲಾಗಾಯ್ತಿನಿಂದಲೂ ಸಂಚಾರ ದಟ್ಟಣೆ ತಗ್ಗಿಸಲು ರಸ್ತೆ ವಿಸ್ತರಣೆ, ಮೇಲ್ಸೇತುವೆ, ಎತ್ತರಿಸಿದ ಮಾರ್ಗಗಳ ನಿರ್ಮಾಣ, ಏಕಮುಖ ಸಂಚಾರ ವ್ಯವಸ್ಥೆ–ಇವುಗಳನ್ನೇ ಪರಿಹಾರ ಎಂದು ಭ್ರಮಿಸಿ, ಅಂತಹದ್ದೇ ಯೋಜನೆಗಳನ್ನು ರೂಪಿಸುತ್ತಾ ಬರಲಾಗಿದೆ. ಇವುಗಳೆಲ್ಲ ಖಾಸಗಿ ವಾಹನಗಳ ಬಳಕೆಯನ್ನು ಉತ್ತೇಜಿಸುವಂತಹ ಕ್ರಮಗಳು. ವಾಹನಗಳ ಸಂಖ್ಯೆ ಹೆಚ್ಚಾದಂತೆ ನಗರದಲ್ಲಿ ಎಷ್ಟು ಎಲಿವೇಟೆಡ್‌ ಕಾರಿಡಾರ್‌ಗಳು ನಿರ್ಮಾಣವಾದರೂ ದಟ್ಟಣೆ ಸಮಸ್ಯೆಗೆ ಪರಿಹಾರವಿಲ್ಲ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಭಿವೃದ್ಧಿಪಡಿಸುವ ಕಡೆಗೆ ಸರ್ಕಾರ ಇಲ್ಲಿಯತನಕ ಯೋಚನೆಯನ್ನೇ ಮಾಡಿಲ್ಲ. ಸಮೂಹ ಸಾರಿಗೆ ವ್ಯವಸ್ಥೆಯನ್ನು ಬಲಗೊಳಿಸಿದರೆ ಸಾವಿರಾರು ಕಾರುಗಳು ರಸ್ತೆಗಿಳಿಯುವುದು ತಪ್ಪುತ್ತದೆ. ಮೆಟ್ರೊ ರೈಲು ಸೌಲಭ್ಯ ವಿಸ್ತರಣೆ ಕೂಡ ದಟ್ಟಣೆಗೆ ಇರುವ ಪರಿಹಾರ ಮಾರ್ಗಗಳಲ್ಲಿ ಒಂದು. ಎಲಿವೇಟೆಡ್‌ ಕಾರಿಡಾರ್‌ಗೆ ಹೂಡಿಕೆ ಮಾಡಲು ಉದ್ದೇಶಿಸಿರುವ ಹಣವನ್ನು ಮೆಟ್ರೊ ಯೋಜನೆಗೆ ವ್ಯಯಿಸಿದರೆ ಕಡಿಮೆ ಅವಧಿಯಲ್ಲಿ ನಗರದ ಇನ್ನಷ್ಟು ಪ್ರದೇಶಗಳಿಗೆ ಆ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ಸಾಧ್ಯ. ಬಸ್‌ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್‌) ಕೂಡ ದಟ್ಟಣೆ ನಿವಾರಣೆಗೆ ಮತ್ತೊಂದು ಪರಿಹಾರ. ಸಂಚಾರಕ್ಕೆ ಸಮೂಹ ಸಾರಿಗೆಯೇ ಕಡಿಮೆ ವೆಚ್ಚದ ಹಾಗೂ ಹೆಚ್ಚು ಅರಾಮದ ಸಾಧನ ಎನ್ನುವಂತಹ ವಾತಾವರಣ ನಿರ್ಮಿಸಿದರೆ ರಸ್ತೆಗಿಳಿಯುವ ಖಾಸಗಿ ವಾಹನಗಳ ಸಂಖ್ಯೆ ತಂತಾನೆ ಕಡಿಮೆ ಆಗುತ್ತದೆ. ಸರ್ಕಾರ ಒಣಪ್ರತಿಷ್ಠೆಗೆ ಒಳಗಾಗದೆ, ಮೊಂಡುತನ ಪ್ರದರ್ಶಿಸದೆ ಎಲಿವೇಟೆಡ್‌ ಕಾರಿಡಾರ್‌ ಯೋಜನೆ ಕುರಿತು ಮರು ಆಲೋಚನೆ ಮಾಡುವುದು ಒಳಿತು. ದೇಶದಲ್ಲಿ ಎಲ್ಲಿಯೂ ಸಿಗದಷ್ಟು ನಗರಯೋಜನಾ ತಜ್ಞರು ಇಲ್ಲಿ ಸರ್ಕಾರದ ಸಹಾಯಕ್ಕೆ ಲಭ್ಯವಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು