ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ | ಮೂಲಸೌಕರ್ಯ ವಲಯಕ್ಕೆ ಒತ್ತು: ವೇತನ ವರ್ಗದ ನಿರೀಕ್ಷೆ ಹುಸಿ

Last Updated 1 ಫೆಬ್ರುವರಿ 2022, 19:53 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯ ಯೋಜನೆಗಳಲ್ಲಿ ಭಾರಿ ಮೊತ್ತದ ಹೂಡಿಕೆಗೆ ಒತ್ತು ಸಿಕ್ಕಿದೆ. ಆದರೆ ಮಧ್ಯಮ, ಕೆಳಮಧ್ಯಮ ವರ್ಗದವರ ಸಂಕಷ್ಟಗಳ ನಿವಾರಣೆಗೆ ಅಗತ್ಯ ಆದ್ಯತೆ ಸಿಕ್ಕಿಲ್ಲ. ಉತ್ತರಪ್ರದೇಶ, ಪಂಜಾಬ್‌, ಉತ್ತರಾಖಂಡ, ಗೋವಾ, ಮಣಿಪುರ ವಿಧಾನಸಭಾ ಚುನಾವಣೆಗಳು ಹೊಸ್ತಿಲಿನಲ್ಲೇ ನಿಂತಿದ್ದರೂ ಆ ಚುನಾವಣೆಗಳನ್ನು ಪ್ರಭಾವಿಸುವ ಘೋಷಣೆಗಳು ಬಜೆಟ್‌ನಲ್ಲಿ ಇಲ್ಲ. ಮೂಲಸೌಕರ್ಯ, ಸ್ವಚ್ಛ ಇಂಧನ ಹಾಗೂ ಡಿಜಿಟಲ್‌ ಅರ್ಥವ್ಯವಸ್ಥೆ– ಬಜೆಟ್‌ನಲ್ಲಿ ಹೆಚ್ಚಿನ ಮಹತ್ವ ಪಡೆದಿರುವ ಮೂರು ವಲಯಗಳು. ಇವುಗಳ ನಾಗಾಲೋಟದಲ್ಲಿ ಆರೋಗ್ಯ, ಶಿಕ್ಷಣ, ಕೃಷಿಯಂತಹ ಆದ್ಯತಾ ವಲಯಗಳು ಹಿಂದೆ ಬಿದ್ದಿರುವುದು ಮೇಲ್ನೋಟಕ್ಕೇ ಎದ್ದು ಕಾಣುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಸರ್ಕಾರ ಮಾಡಲಿರುವ ಹೂಡಿಕೆ ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಬಜೆಟ್‌ನ ಈ ಸಂದೇಶವು ಕಾರ್ಪೊರೇಟ್‌ ವಲಯದ ಉತ್ಸಾಹವನ್ನಂತೂ ಇಮ್ಮಡಿಗೊಳಿಸಿದೆ. ಕೋವಿಡ್‌ನಿಂದ ತೆವಳುತ್ತಿರುವ ಅರ್ಥವ್ಯವಸ್ಥೆಗೆ ವೇಗ ತುಂಬಲು ಈ ಕ್ರಮ ಅತ್ಯಂತ ಅಗತ್ಯವಾಗಿತ್ತು. ಆ ದಿಸೆಯಲ್ಲಿ ₹ 10.68 ಲಕ್ಷ ಕೋಟಿಯಷ್ಟು ದೊಡ್ಡ ಮೊತ್ತವನ್ನು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಹೊರಟಿರುವುದು ಸ್ವಾಗತಾರ್ಹ ಕ್ರಮ. ಈ ಹೂಡಿಕೆಯಿಂದ ಬೃಹತ್‌ ಪ್ರಮಾಣದಲ್ಲಿ ಉದ್ಯೋಗಗಳೂ ಸೃಷ್ಟಿಯಾಗಲಿವೆ ಎಂಬ ಕನಸನ್ನು ಸರ್ಕಾರ ತೇಲಿಬಿಟ್ಟಿದೆ. ಹಿಂದಿನ ಹುಸಿ ಭರವಸೆಗಳ ಕಹಿನೆನಪಿನ ಹಿನ್ನೆಲೆಯಲ್ಲಿ ಈ ಕನಸು ದೇಶದ ಯುವ ಸಮುದಾಯದ ಪಾಲಿಗೆ ಬರೀ ಕನಸಾಗಿ ಉಳಿಯದಿದ್ದರೆ ಸಾಕು. ಕಾರ್ಪೊರೇಟ್‌ ವಲಯದ ಉತ್ಸಾಹ ಹೆಚ್ಚಿರುವುದಕ್ಕೆ ಇನ್ನೂ ಕೆಲವು ಕಾರಣಗಳಿವೆ. ಅವರ ಸಂಪತ್ತಿನ ಮೇಲೆ ಯಾವುದೇ ಹೊಸ ತೆರಿಗೆಯನ್ನು ಹೇರಲಾಗಿಲ್ಲ. ರಕ್ಷಣಾ ಇಲಾಖೆಯು ಮಾಡಲಿರುವ ಬಂಡವಾಳ ವೆಚ್ಚದಲ್ಲಿ ಶೇ 68ರಷ್ಟು ಮೊತ್ತವನ್ನು ಸ್ವದೇಶಿ ಕಂಪನಿಗಳಿಂದಲೇ ಸಲಕರಣೆ ಖರೀದಿಸಲು ಮೀಸಲಿಡಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಈ ಬಜೆಟ್‌ನಿಂದ ಹೆಚ್ಚಿನ ನಿರಾಸೆ ಅನುಭವಿಸಿದ್ದು ಮಾತ್ರ ಮಧ್ಯಮವರ್ಗ ಹಾಗೂ ಕೃಷಿಕ ಸಮುದಾಯ. ಕೋವಿಡ್‌ನಿಂದ ದೇಶದ ಅರ್ಥವ್ಯವಸ್ಥೆ ಕುಂಟುತ್ತಿರುವ ಈ ಸನ್ನಿವೇಶದಲ್ಲಿ ಅದರ ಹೆಚ್ಚಿನ ಬಿಸಿಯನ್ನು ಅನುಭವಿಸಿದ್ದು ಮಧ್ಯಮವರ್ಗ. ಉದ್ಯೋಗ ನಷ್ಟ, ವೇತನ ಕಡಿತ, ಬೆಲೆ ಏರಿಕೆಯಿಂದ ಬಸವಳಿದಿರುವ ಈ ವರ್ಗವು ಆದಾಯ ತೆರಿಗೆಯಿಂದ ಒಂದಿಷ್ಟು ವಿನಾಯಿತಿಯನ್ನು ನಿರೀಕ್ಷಿಸಿತ್ತು. ಒಂದಿಷ್ಟು ‘ಕೊಡುಗೆ’ಗಳನ್ನೂ ಅಪೇಕ್ಷಿಸಿತ್ತು. ಆದರೆ, ಹಣಕಾಸು ಸಚಿವರು ಆ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ದೇಶದ ಆರ್ಥಿಕ ಚೇತರಿಕೆಗೆ ದೀರ್ಘಾವಧಿ ಯೋಜನೆಗಳತ್ತ ಒತ್ತು ನೀಡುವ ಭರದಲ್ಲಿ ಜನಸಾಮಾನ್ಯರಿಗೆ ತುರ್ತಾಗಿ ಬೇಕಿದ್ದ ‘ಆರ್ಥಿಕ ಶಕ್ತಿ’ ತುಂಬುವಲ್ಲಿ ಬಜೆಟ್‌ ನಿರ್ಲಕ್ಷ್ಯ ತಾಳಿದೆ. ಜನರ ಕೈಯಲ್ಲಿ ಸ್ವಲ್ಪವಾದರೂ ದುಡ್ಡು ಉಳಿಯುವಂತೆ ನೋಡಿಕೊಳ್ಳುವ ಇಚ್ಛಾಶಕ್ತಿಯನ್ನೂ ಪ್ರದರ್ಶಿಸಲಾಗಿಲ್ಲ. ಸಂಕಷ್ಟದಲ್ಲಿರುವ ಬಡವರ ಅದರಲ್ಲೂ ಕಾರ್ಮಿಕರ ಕಣ್ಣೀರು ಒರೆಸುವಂತಹ ಯಾವ ಯೋಜನೆಯೂ ಬಜೆಟ್‌ನಲ್ಲಿ ಕಾಣುತ್ತಿಲ್ಲ. ಉದ್ಯೋಗ ನಷ್ಟದಿಂದ ಹಳ್ಳಿಗಳಿಗೆ ಆಗಿರುವ ಮರುವಲಸೆಯನ್ನು ಸಚಿವರು ಗಣನೆಗೆ ತೆಗೆದು ಕೊಂಡಂತಿಲ್ಲ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಮುಂಬರುವ ಹಣಕಾಸು ವರ್ಷದಲ್ಲಿ ಪ್ರಸಕ್ತ ಸಾಲಿಗಿಂತಲೂ ಶೇ 25.51ರಷ್ಟು ಕಡಿಮೆ ಅನುದಾನವನ್ನು ತೆಗೆದಿರಿಸಿರುವುದು ಇದಕ್ಕೆ ನಿದರ್ಶನ. ಗ್ರಾಮಾಂತರ ಭಾಗದಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಜತೆ ಜತೆಗೆ ಸಾರ್ವಜನಿಕ ಆಸ್ತಿ ಸೃಷ್ಟಿಗೆ ಇದ್ದ ಅವಕಾಶವನ್ನು ಕೈಚೆಲ್ಲಲಾಗಿದೆ. ಕೃಷಿ ಉತ್ಪನ್ನಗಳ ಬೆಂಬಲ ಬೆಲೆಯನ್ನು ನೇರವಾಗಿ ಕೃಷಿಕರ ಖಾತೆಗೆ ವರ್ಗಾಯಿಸುವ ಭರವಸೆಯನ್ನೇನೋ ನೀಡಲಾಗಿದೆ. ಆದರೆ, ಅವರ ಹೆಚ್ಚಿನ ಬೇಡಿಕೆಗಳಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ತಂತ್ರಜ್ಞಾನ ಆಧಾರಿತ ಕೆಲವು ಯೋಜನೆಗಳನ್ನು ಪ್ರಕಟಿಸಲಾಗಿದ್ದು, ಝಗಮಗಿಸುವ ಭವಿಷ್ಯದ ಆಸೆಯನ್ನು ಮಾತ್ರ ಹುಟ್ಟಿಸಲಾಗಿದೆ. ರಾಷ್ಟ್ರೀಯ ಟೆಲಿಮೆಡಿಸಿನ್‌ ಕಾರ್ಯಕ್ರಮವನ್ನು ಹೊರತುಪಡಿಸಿದರೆ ಆರೋಗ್ಯ ವಲಯದಲ್ಲೂ ಯಾವುದೇ ಪ್ರಮುಖ ಹೊಸ ಯೋಜನೆಯ ಘೋಷಣೆ ಇಲ್ಲ. ಶಿಕ್ಷಣ ವಲಯದ ಅನುದಾನವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಮುಂಬರುವ ಹಣಕಾಸು ವರ್ಷದಲ್ಲಿ ಶೇ 18.49ರಷ್ಟು ಹೆಚ್ಚಿಸಲಾಗಿದೆ ಎಂಬುದೇನೋ ನಿಜ. ಆದರೆ, ದೇಶದ ಶೈಕ್ಷಣಿಕ ಸೌಲಭ್ಯಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದಾಗ ಈ ಬಾಬತ್ತೂ ಸಾಲದಾಗಿದೆ.

ಇಂಧನ ಕ್ಷಮತೆಯ 400 ‘ವಂದೇ ಭಾರತ’ ರೈಲುಗಳು ಮುಂದಿನ ಮೂರು ವರ್ಷಗಳಲ್ಲಿ ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ ಎಂದು ಪ್ರಕಟಿಸಲಾಗಿದೆ. ಎಲೆಕ್ಟ್ರಿಕ್‌ ವಾಹನಗಳ ಬಳಕೆ ಇನ್ನೂ ಹೆಚ್ಚಲಿದ್ದು, ಬ್ಯಾಟರಿ ಬದಲಾಯಿಸುವ ಸೇವೆ ನೀಡುವ ಉದ್ಯಮಕ್ಕೆ ಉತ್ತೇಜನ ನೀಡುವ ಭರವಸೆಯನ್ನೂ ನೀಡಲಾಗಿದೆ. ಅಂದಹಾಗೆ, ಡಿಜಿಟಲ್‌ ಅರ್ಥವ್ಯವಸ್ಥೆಯ ಕುರಿತು ಬಜೆಟ್‌ನಲ್ಲಿ ಹೆಚ್ಚಿನ ಪ್ರಸ್ತಾವ ಇದೆ. ‘ಡಿಜಿಟಲ್‌ ಆಸ್ತಿ’ ವಹಿವಾಟಿನ ಮೇಲೆ ಶೇ 30ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. ಈ ‘ಡಿಜಿಟಲ್‌ ಆಸ್ತಿ’ಯ ಅರ್ಥವ್ಯಾಖ್ಯಾನ ಇನ್ನೂ ಆಗಬೇಕಿದೆ. ಕ್ರಿಪ್ಟೊಕರೆನ್ಸಿ ಮಾತ್ರ ಈ ಅರ್ಥವ್ಯಾಪ್ತಿಯಲ್ಲಿ ಬರುತ್ತದೆ ಎಂದು ಜನ ಭಾವಿಸಿರಬಹುದು. ಆದರೆ, ಅದರ ಹರವು ದೊಡ್ಡದಿದೆ. ಆರ್‌ಬಿಐನಿಂದ ‘ಡಿಜಿಟಲ್‌ ರುಪಿ’ ಸೃಷ್ಟಿಸಲಾಗುವುದು ಎಂದು ಪ್ರಕಟಿಸಿರುವುದು ಜಗತ್ತಿನ ‘ಡಿಜಿಟಲ್‌’ ಆರ್ಥಿಕ ದಾರಿಯಲ್ಲಿ ಭಾರತವೂ ಹೆಜ್ಜೆ ಹಾಕಲು ಹೊರಟಿರುವುದರ ಸಂಕೇತವಾಗಿದೆ. ಆರ್ಥಿಕ ಬೆಳವಣಿಗೆಗೆ ಎಲ್ಲ ಸಾಧ್ಯತೆಗಳನ್ನೂ ಬಳಸಿಕೊಳ್ಳುವ ಆಯ್ಕೆ ಬಜೆಟ್‌ಗೆ ಮುಕ್ತವಾಗಿದೆ. ಆದರೆ, ದೇಶದ ಅರ್ಥವ್ಯವಸ್ಥೆಯ ಆಧಾರಸ್ತಂಭಗಳಾದ ಜನಸಾಮಾನ್ಯರ ಬವಣೆಗಳು ಕಡೆಗಣನೆಗೆ ಒಳಗಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT