ಭಾನುವಾರ, ಸೆಪ್ಟೆಂಬರ್ 22, 2019
23 °C

ಉದ್ಯೋಗಸೃಷ್ಟಿಗೆ ಒತ್ತು ನೀಡಿ ಯುವಜನರ ಹತಾಶೆ ನೀಗಿಸಿ

Published:
Updated:

ಸ್ನಾತಕೋತ್ತರ ಪದವೀಧರರು, ರ‍್ಯಾಂಕ್‌ ಪಡೆದವರು ಮತ್ತು ಬಿಎಡ್‌ ಪದವೀಧರರು ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಕೆಲಸ ಸಿಗದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆರೆಯ ಹೂಳೆತ್ತುವ ಕೂಲಿಯಲ್ಲಿ ತೊಡಗಿರುವ ಸುದ್ದಿ ಬಳ್ಳಾರಿಯ ಹೂವಿನಹಡಗಲಿಯಿಂದ ಬಂದಿದೆ. ಹಿರೇಮಲ್ಲನಕೆರೆ ಗ್ರಾಮದ ಐವರು ಸ್ನಾತಕೋತ್ತರ ಪದವೀಧರರು, ಏಳೆಂಟು ಜನ ಪದವೀಧರರು ಗ್ರಾಮದಲ್ಲಿ ಕೆರೆಗಳ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಂ.ಎ. ರಾಜ್ಯಶಾಸ್ತ್ರದಲ್ಲಿ ಮೊದಲ ರ‍್ಯಾಂಕ್‌ ಪಡೆದವರೊಬ್ಬರು ಮೂರು ವರ್ಷಗಳಿಂದ ಕೂಲಿ ಮಾಡುತ್ತಿದ್ದರೆ, ಅದೇ ವಿಷಯದಲ್ಲಿ ನಾಲ್ಕನೇ ರ‍್ಯಾಂಕ್‌ ಪಡೆದವರೊಬ್ಬರು ವರ್ಷದಿಂದ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ, ಪದವಿ ಪಡೆದ ಎರಡು ವರ್ಷಗಳ ಬಳಿಕ ಅತಿಥಿ ಉಪನ್ಯಾಸಕರ ಹುದ್ದೆ ಸಿಕ್ಕಿದ್ದರೂ ಅದರಿಂದ ದೊರೆತ ವರಮಾನ ಅಷ್ಟಕ್ಕಷ್ಟೆ. ಜೊತೆಗೆ ಉದ್ಯೋಗ ಭದ್ರತೆಯೂ ಇರಲಿಲ್ಲ. ಅದಕ್ಕಿಂತ ಕೂಲಿ ಕೆಲಸವೇ ವಾಸಿ ಎಂದು ಅವರು ನಿಶ್ಚಯಿಸಿದ್ದಾರೆ. ಇದೊಂದು ಬಿಡಿ ಪ್ರಕರಣದಂತೆ ಕಂಡರೂ, ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆದವರೂ ಉದ್ಯೋಗ ಸಿಗದೆ ಎಷ್ಟು ನಿರಾಶರಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತಿದೆ. ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲೇ ಹೊಸ ಉದ್ಯೋಗ ಸೃಷ್ಟಿಗೆ ಸಂಬಂಧಿಸಿ ಕಳೆದ ಕೆಲವು ವರ್ಷಗಳಿಂದ ಅತ್ಯಂತ ನಿರಾಶಾದಾಯಕ ಸ್ಥಿತಿ ಇದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಮೀಕ್ಷೆ ಪ್ರಕಾರ, 2013–14ರಲ್ಲಿ ನಿರುದ್ಯೋಗ ಪ್ರಮಾಣವು ಶೇ 4.9ರಷ್ಟಿತ್ತು. ಆದರೆ, 2017–18ರಲ್ಲಿ ಇದು ಶೇ 6.1ಕ್ಕೆ ಏರಿಕೆಯಾಗಿ, 45 ವರ್ಷಗಳಲ್ಲಿಯೇ ಗರಿಷ್ಠ ಮಟ್ಟ ತಲುಪಿತ್ತು ಎಂಬ ಅಂಶ ನ್ಯಾಷನಲ್‌ ಸ್ಯಾಂಪಲ್‌ ಸರ್ವೆ ಆಫೀಸ್‌ (ಎನ್‌ಎಸ್‌ಎಸ್‌ಒ) ಸಮೀಕ್ಷೆಯ ಸೋರಿಕೆಯಾದ ವರದಿಯಲ್ಲಿ ಇದೆ. ಆಳುವವರು ಈ ಪರಿಸ್ಥಿತಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಉದ್ಯೋಗಸೃಷ್ಟಿಯತ್ತ ಗಮನ ಹರಿಸಬೇಕಿದೆ. ಆದರೆ ಆಳುವವರಿಗೆ ಇದು ಆದ್ಯತೆಯ ಸಂಗತಿಯಾಗಿ ಕಾಣುತ್ತಿಲ್ಲ ಎನ್ನುವುದು ದುರದೃಷ್ಟಕರ. ಕಷ್ಟಪಟ್ಟು ಓದಿ, ಉನ್ನತ ಪದವಿಗಳನ್ನು ಸಂಪಾದಿಸಿದರೂ ಅದಕ್ಕೆ ತಕ್ಕಂತಹ ಉದ್ಯೋಗಗಳು ಸಿಗದೆ ಕೂಲಿ ಮಾಡಬೇಕಾದ ಸ್ಥಿತಿ ಮತ್ತು ಅದು ಉಂಟು ಮಾಡಬಹುದಾದ ಸಾಮಾಜಿಕ ತಲ್ಲಣಗಳನ್ನು ಗ್ರಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ದುಡಿಯುವ ಕೈಗಳಿಗೆ ಕೆಲಸ ಕೊಡಲು ವಿಫಲವಾದ ಯಾವ ಸಮಾಜವೂ ಅಪರಾಧ ಮತ್ತು ಅರಾಜಕತೆಯ ದುಃಸ್ಥಿತಿಯಿಂದ ಪಾರಾದ ನಿದರ್ಶನವಿಲ್ಲ.

ದೇಶದಲ್ಲಿ ದೊಡ್ಡ ಮಟ್ಟದ ಉದ್ಯೋಗಸೃಷ್ಟಿ ಮಾಡುವ ಎಂಟು ಕ್ಷೇತ್ರಗಳಿವೆ. ಬಟ್ಟೆ ಗಿರಣಿ, ಚರ್ಮೋದ್ಯಮ, ಲೋಹ, ಆಟೊಮೊಬೈಲ್‌, ಹರಳು ಮತ್ತು ಆಭರಣ, ಸಾರಿಗೆ, ಮಾಹಿತಿ–ತಂತ್ರಜ್ಞಾನ ಮತ್ತು ಕೈಮಗ್ಗ ಉದ್ಯಮಗಳು ಉದ್ಯೋಗಸೃಷ್ಟಿಗೆ ಹೆಸರು ಪಡೆದಿವೆ. ಈ ಎಂಟೂ ಕ್ಷೇತ್ರಗಳಲ್ಲಿ 2015ರಲ್ಲಿ ಕೇವಲ 1.35 ಲಕ್ಷದಷ್ಟು ಹೊಸ ಉದ್ಯೋಗಗಳು ಸೃಷ್ಟಿಯಾಗಿದ್ದವು ಎಂದು ವರದಿಯಾಗಿದೆ. ವರ್ಷಕ್ಕೆ ಎರಡು ಕೋಟಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರಕ್ಕೆ ಅದನ್ನು ಈಡೇರಿಸಲಾಗಿಲ್ಲ. ಇದರ ಮಧ್ಯೆ, 2016–18ರ ಅವಧಿಯಲ್ಲಿ ದೇಶದಲ್ಲಿ ಒಟ್ಟು 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡರು ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸುಸ್ಥಿರ ಉದ್ಯೋಗ ಕೇಂದ್ರ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ. ಪ್ರತಿವರ್ಷ ದೇಶದಲ್ಲಿ 1.2 ಕೋಟಿಯಷ್ಟು ಹೆಚ್ಚುವರಿ ಜನ ದುಡಿತಕ್ಕೆ ಸಿದ್ಧರಾಗುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕೆ ಹೋಲಿಸಿದರೆ ಹೊಸ ಉದ್ಯೋಗಗಳ ಸೃಷ್ಟಿಯ ಪ್ರಮಾಣ ತೀರಾ ಕಡಿಮೆ. ಉದ್ಯೋಗಸೃಷ್ಟಿಯಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲೂ ಪರಿಸ್ಥಿತಿ ಅಷ್ಟೇನೂ ಆಶಾದಾಯಕವಾಗಿಲ್ಲ. 2020ರ ವೇಳೆಗೆ ಜಾಗತಿಕ ಐ.ಟಿ. ಕ್ಷೇತ್ರದಲ್ಲಿ ಒಟ್ಟು 20 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜು ಇದೆ. ಇದರಲ್ಲಿ ಭಾರತದ ಪಾಲು ಶೇಕಡ 13. ಭಾರತದಲ್ಲಿ 2019ರಲ್ಲಿ 2.5 ಲಕ್ಷ ಹೊಸ ಐ.ಟಿ. ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಆದರೆ ಇರುವ ಉದ್ಯೋಗಗಳಲ್ಲಿ ಕಡಿತವಾಗುವ ಪರಿಸ್ಥಿತಿ, ನಿರುದ್ಯೋಗದ ತೀವ್ರತೆಯನ್ನು ಹೆಚ್ಚಿಸಿದೆ. ರಾಷ್ಟ್ರೀಯ ನಿರುದ್ಯೋಗ ಪ್ರಮಾಣಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ನಿರುದ್ಯೋಗ ಪ್ರಮಾಣ ಕಡಿಮೆ. ಹಾಗೆಂದು ನಿರ್ಲಕ್ಷಿಸುವಂತಿಲ್ಲ. ಸ್ನಾತಕೋತ್ತರ ಪದವೀಧರರು ಕೂಲಿ ಮಾಡುವಂತಹ ಪರಿಸ್ಥಿತಿ ಬಳ್ಳಾರಿ ಜಿಲ್ಲೆಗಷ್ಟೇ ಸೀಮಿತವಲ್ಲ, ಹುಡುಕಿದರೆ ಇತರ ಜಿಲ್ಲೆಗಳಲ್ಲೂ ಕಾಣಸಿಗುತ್ತದೆ. ರಾಜ್ಯ ಸರ್ಕಾರವು ಉದ್ಯೋಗಸೃಷ್ಟಿಯ ಹೊಸ ಕ್ಷೇತ್ರಗಳತ್ತ ತುರ್ತು ಗಮನ ಹರಿಸಬೇಕಾದ ಅಗತ್ಯವಿದೆ.

Post Comments (+)