ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪಾದಕೀಯ: ಚೇತರಿಕೆ ಹಾದಿಯಲ್ಲಿ ಅರ್ಥವ್ಯವಸ್ಥೆ ಬಜೆಟ್ ಮೇಲೆ ಹೆಚ್ಚಿನ ನಿರೀಕ್ಷೆ

Last Updated 29 ಜನವರಿ 2021, 7:24 IST
ಅಕ್ಷರ ಗಾತ್ರ

ಈಗ ಕಂಡುಬಂದಿರುವ ಸುಧಾರಣೆಯ ಗತಿಯನ್ನು ಕಾಯ್ದುಕೊಳ್ಳುವ ಹೊಣೆ ಸರ್ಕಾರಗಳ ಮೇಲೆ, ಕೇಂದ್ರ ಮಂಡಿಸುವ ಬಜೆಟ್‌ ಮೇಲೆ ಇದೆ.

ಹೊಸ ವರ್ಷದ ಆರಂಭದಲ್ಲಿ ಅರ್ಥವ್ಯವಸ್ಥೆಯಲ್ಲಿ ಆಶಾದಾಯಕ ಬೆಳವಣಿಗೆಗಳು ಕಾಣಿಸುತ್ತಿವೆ. ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯ ಪಾಲಿಗೆ 2020ನೇ ಇಸವಿಯು ಅತ್ಯಂತ ಕೆಟ್ಟ ವರ್ಷವಾಗಿತ್ತು. ಭಾರತವು ಆರ್ಥಿಕ ಹಿಂಜರಿತದ ಸ್ಥಿತಿಗೆ ಹೊರಳಿಕೊಂಡಿತ್ತು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದರು. ಇಂತಹ ಹತ್ತು ಹಲವು ಕಹಿ ಅನುಭವಗಳನ್ನು ಹೊತ್ತುಕೊಂಡು 2021ನೇ ಇಸವಿಯನ್ನು ಪ್ರವೇಶಿಸಿರುವಾಗ, ಮನಸ್ಸಿಗೆ ಹಿತ ತರುವ ಕೆಲವು ಬೆಳವಣಿಗೆಗಳು ನಿಚ್ಚಳವಾಗಿ ಕಾಣಿಸುತ್ತಿವೆ. ಡಿಸೆಂಬರ್‌ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಆಗಿರುವ ವರಮಾನ ಸಂಗ್ರಹವು, ಈ ವ್ಯವಸ್ಥೆ ಜಾರಿಗೆ ಬಂದ ನಂತರದ ಅತಿಹೆಚ್ಚಿನ ವರಮಾನ ಸಂಗ್ರಹ. ಡಿಸೆಂಬರ್‌ನಲ್ಲಿ ಆಗಿರುವ ₹ 1.15 ಲಕ್ಷ ಕೋಟಿ ವರಮಾನ ಸಂಗ್ರಹವು ಜನ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಿರುವುದನ್ನೂ ಸೇವೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡಿರುವುದನ್ನೂ ಸೂಚಿಸುತ್ತಿದೆ. ನವೆಂಬರ್, ಡಿಸೆಂಬರ್‌ ತಿಂಗಳ ಹಬ್ಬಗಳು ಹೆಚ್ಚಿನ ಜಿಎಸ್‌ಟಿ ಸಂಗ್ರಹಕ್ಕೆ ಕೊಡುಗೆ ನೀಡಿರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಜಿಎಸ್‌ಟಿ ವ್ಯವಸ್ಥೆಯಲ್ಲಿ ವಂಚನೆ ಎಸಗುತ್ತಿದ್ದವರ ಮೇಲೆ ಕೈಗೊಂಡ ಕ್ರಮಗಳ ಕಾರಣದಿಂದಾಗಿಯೂ ತೆರಿಗೆ ಪಾವತಿ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಇದು ಗಮನಿಸಬೇಕಾದ ಸಂಗತಿ. ಡಿಸೆಂಬರ್‌ನಲ್ಲಿ ಸರಕು ಸಾಗಣೆ ಪ್ರಮಾಣ ಕೂಡ ಹೆಚ್ಚಾಗಿದೆ. ಟೋಲ್ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ. ಪೆಟ್ರೋಲ್ ಬಳಕೆ ಹೆಚ್ಚಾಗಿದೆ. ಅಂದರೆ, ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಕಡುಕಷ್ಟದ ವರ್ಷವೊಂದು ಅಂತ್ಯಗೊಂಡ ತಕ್ಷಣದಲ್ಲೇ ಬಂದಿರುವ ಈ ಎಲ್ಲ ಸುದ್ದಿಗಳು ಸಮಾಧಾನ ತರುವಂಥವು ಎಂಬುದರಲ್ಲಿ ಎರಡು ಮಾತು ಇಲ್ಲ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು 2021–22ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. 2020-21ನೇ ಸಾಲಿನ ಬಜೆಟ್‌ ಭಾಷಣದಲ್ಲಿ ಸಚಿವರು ಮಾಡಿದ್ದ ಖರ್ಚು–ವೆಚ್ಚಗಳ ಅಂದಾಜು, ವರಮಾನ ನಿರೀಕ್ಷೆಗಳನ್ನೆಲ್ಲ ಕೊರೊನಾ ವೈರಾಣು ತಲೆಕೆಳಗು ಮಾಡಿದೆ. ಕೇಂದ್ರ ಸರ್ಕಾರದ ಒಟ್ಟಾರೆ ಸಾಲದ ಮೊತ್ತವು ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದ ಅಂತ್ಯದ ವೇಳೆಗೆ ₹ 107.04 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಸಾಲದ ಮೊತ್ತದಲ್ಲಿ ಶೇಕಡ 5.6ರಷ್ಟು ಹೆಚ್ಚಳ ಆಗಿದೆ. ಲಾಕ್‌ಡೌನ್‌ ಪರಿಣಾಮವಾಗಿ ಕೇಂದ್ರದ ವರಮಾನ ಸಂಗ್ರಹದಲ್ಲಿ ಆಗಿದ್ದ ಭಾರಿ ಕುಸಿತವನ್ನು ಗಮನಿಸಿದರೆ, ಸಾಲದಲ್ಲಿ ಹೆಚ್ಚಳ ಆಗಿರುವುದು ಅಸಹಜ ಎನ್ನಲಾಗದು. ನವೆಂಬರ್ ಅಂತ್ಯಕ್ಕೆ ದೇಶದ ವಿತ್ತೀಯ ಕೊರತೆಯ ಮೊತ್ತ ₹ 10.75 ಲಕ್ಷ ಕೋಟಿ ಆಗಿತ್ತು. ಇದು 2020–21ನೇ ಸಾಲಿನ ಬಜೆಟ್ ಅಂದಾಜಿಗಿಂತ ಹೆಚ್ಚು. ಸಾಲದ ಹೆಚ್ಚಳ, ವಿತ್ತೀಯ ಕೊರತೆಯ ಹೆಚ್ಚಳ... ಇವೆಲ್ಲ ಬಜೆಟ್ ಮೇಲೆ ಪರಿಣಾಮ ಬೀರುವುದನ್ನು ಅಲ್ಲಗಳೆಯಲಾಗದು. ಲಾಕ್‌ಡೌನ್‌ ಜಾರಿಗೊಂಡ ಬಳಿಕ ಉದ್ಯಮ ವಲಯಕ್ಕಾಗಿ ಕೇಂದ್ರ ಸರ್ಕಾರವು ಹಲವು ಕೊಡುಗೆಗಳನ್ನು ಘೋಷಿಸಿದೆ. ಇದೇ ರೀತಿಯಲ್ಲಿ ಮಧ್ಯಮ, ಕೆಳಮಧ್ಯಮ ಹಾಗೂ ಬಡ ವರ್ಗಗಳಿಗಾಗಿ ಆರ್ಥಿಕ ಕೊಡುಗೆಗಳನ್ನು ನೀಡಬೇಕು, ಸಾಧ್ಯವಾದರೆ ಅವರಿಗೆ ನೇರ ನಗದು ವರ್ಗಾವಣೆ ಮಾಡಿ ಅವರ ಖರೀದಿ ಸಾಮರ್ಥ್ಯ ಹೆಚ್ಚಿಸಬೇಕು ಎಂಬ ಸಲಹೆಯೂ ಕೆಲವು ವಲಯಗಳಿಂದ ಬಂದಿದೆ. ಮಾರುಕಟ್ಟೆಯಲ್ಲಿ ಈಗ ಕಂಡುಬಂದಿರುವ ಲವಲವಿಕೆಯ ವಾತಾವರಣವು ಎಷ್ಟು ಕಾಲ ಉಳಿದುಕೊಳ್ಳುತ್ತದೆ ಎಂಬುದು ಬಹಳ ಮುಖ್ಯ. ಲವಲವಿಕೆಯ ಸ್ಥಿತಿಯನ್ನು ಉಳಿಸಿಕೊಂಡರೆ ಮಾತ್ರ ಆರ್ಥಿಕ ಹಿಂಜರಿತದ ಸ್ಥಿತಿಯಿಂದ ಹೊರಬಂದು, ಮತ್ತೆ ಬೆಳವಣಿಗೆಯ ಹಾದಿಯನ್ನು ಹಿಡಿಯಲು ಸಾಧ್ಯವಾದೀತು. ಮಾರುಕಟ್ಟೆಯಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ಉಳಿಸಿಕೊಳ್ಳಬೇಕಾದರೆ ಜನರ ಖರೀದಿ ಸಾಮರ್ಥ್ಯ ಉಡುಗದಂತೆ ನೋಡಿಕೊಳ್ಳಬೇಕು. ಆ ಜವಾಬ್ದಾರಿ ದೊಡ್ಡ ಮಟ್ಟದಲ್ಲಿ ಇರುವುದು ಬಜೆಟ್‌ ಮೇಲೆ. ಈಗ ಕಂಡುಬಂದಿರುವ ಸುಧಾರಣೆಯ ಗತಿಯನ್ನು ಕಾಯ್ದುಕೊಳ್ಳುವ ಹೊಣೆ ಸರ್ಕಾರಗಳ ಮೇಲೆ, ಕೇಂದ್ರ ಮಂಡಿಸುವ ಬಜೆಟ್‌ ಮೇಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT