ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್‌ ಅಳವಡಿಕೆ ಗೊಂದಲ; ಗ್ರಾಹಕಸ್ನೇಹಿ ಕ್ರಮ ಅನುಸರಿಸಿ

Last Updated 29 ನವೆಂಬರ್ 2019, 20:13 IST
ಅಕ್ಷರ ಗಾತ್ರ

ದೇಶದ ಎಲ್ಲ ಹೆದ್ದಾರಿ ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ಅಳವಡಿಕೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ವಾಹನಗಳ ಮುಂಭಾಗದ ಗಾಜಿಗೆ ಅಂಟಿಸುವ ಫಾಸ್ಟ್ಯಾಗ್‌ ಸ್ಟಿಕರ್‌ಗಳ ಮಾರಾಟವೂ ದೇಶದಾದ್ಯಂತ ಭರದಿಂದ ನಡೆದಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಟೋಲ್‌ಗೇಟ್‌ಗಳಲ್ಲಿ ವಾಹನಗಳು ಉದ್ದನೆಯ ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಪ್ರಯಾಣಿಕರಿಗೆ ಸಮಯ ಮತ್ತು ಶ್ರಮದ ಉಳಿತಾಯವಾಗಲಿದೆ. ಫಾಸ್ಟ್ಯಾಗ್‌ ಪಾವತಿಯನ್ನು ಗ್ರಾಹಕರು ತಮ್ಮ ಬ್ಯಾಂಕ್‌ ಖಾತೆಗಳಿಗೆ ಲಿಂಕ್‌ ಮಾಡುವ ಮೂಲಕ ಪಾವತಿಯೂ ಸುಲಭವಾಗಿ ಆಗಲಿದೆ ಎಂದು ಸರ್ಕಾರ ಹೇಳಿದೆ.

ದಿನನಿತ್ಯದ ಪಾವತಿಗಳಲ್ಲಿ ಎಲೆಕ್ಟ್ರಾನಿಕ್‌ ವಿಧಾನಗಳ ಬಳಕೆ ಈಗ ನಮ್ಮ ದೇಶದಲ್ಲಿ ಹೊಸತೇನಲ್ಲ. ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮೂಲಕ ಹಾಗೂ ಅಂತರ್ಜಾಲ ಸಂಪರ್ಕದ ಇತರ ವಿಧಾನಗಳ ಮೂಲಕ ಶುಲ್ಕ ಪಾವತಿ ಈಗ ದಿನನಿತ್ಯದ ಸಹಜ ಸಂಗತಿ ಎನ್ನಿಸಿಕೊಂಡಿದೆ. ನಗರ, ಗ್ರಾಮೀಣ ಎನ್ನದೆ ಬಹುತೇಕ ಗ್ರಾಹಕರುಇ– ಪಾವತಿಗೆ ಹೊಂದಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಗಳ ಟೋಲ್‌ಗಳಲ್ಲಿ ಫಾಸ್ಟ್ಯಾಗ್‌ ಅಳವಡಿಕೆ ಸ್ವಾಗತಾರ್ಹ ಸಂಗತಿ. ಪಾಶ್ಚಾತ್ಯ ದೇಶಗಳು ಅಥವಾ ಕೊಲ್ಲಿ ದೇಶಗಳಲ್ಲಿ ಈ ವಿಧಾನದ ಸುಂಕ ಪಾವತಿ ವ್ಯವಸ್ಥೆ ಗ್ರಾಹಕಸ್ನೇಹಿಯಾಗಿ ಹೆಸರು ಪಡೆದಿದೆ. ನಮ್ಮಲ್ಲೂ ಅದು ಜಾರಿಗೆ ಬರಲಿರುವುದು ಸಂತಸದ ವಿಷಯ.

ಫಾಸ್ಟ್ಯಾಗ್‌ ವ್ಯವಸ್ಥೆ ಡಿಸೆಂಬರ್‌ ಒಂದರಿಂದ ಕಡ್ಡಾಯ ಎಂದು ಈ ಹಿಂದೆ ಪ್ರಕಟಿಸಲಾಗಿತ್ತು. ಈಗ ಈ ಗಡುವನ್ನು 15ರವರೆಗೆ ವಿಸ್ತರಿಸಲಾಗಿದೆ. ಬಹುತೇಕ ವಾಹನಗಳ ಮಾಲೀಕ, ಚಾಲಕರು ಈ ವ್ಯವಸ್ಥೆಯ ಬಗ್ಗೆ ಅಸಮಾಧಾನವನ್ನು ಇಟ್ಟುಕೊಂಡಿರುವುದು ಮೇಲ್ನೋಟಕ್ಕೇ ಎದ್ದು ಕಾಣಿಸುತ್ತಿದೆ. ಸರ್ಕಾರ ಅಂದುಕೊಂಡಷ್ಟು ಪೂರ್ಣವಾಗಿ ಫಾಸ್ಟ್ಯಾಗ್‌ಗಳ ಮಾರಾಟ ನಡೆದಿಲ್ಲ ಎನ್ನುವುದು ಇದನ್ನೇ ಸೂಚಿಸುವಂತಿದೆ. ಹೊಸ ವ್ಯವಸ್ಥೆಯೊಂದು ಜಾರಿಗೆ ಬಂದಾಗ ಗ್ರಾಹಕರಲ್ಲಿ ಅನುಮಾನ, ಅಸಮಾಧಾನ ಸಹಜ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ದೂರು ದುಮ್ಮಾನಗಳು ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಕಾಣಿಸಿಕೊಂಡಿವೆ. ಮುಖ್ಯವಾಗಿ ಫಾಸ್ಟ್ಯಾಗ್‌ ನೀಡಲು ಕೆಲವೇ ಬ್ಯಾಂಕ್‌ಗಳಿಗೆ ಅನುಮತಿ ನೀಡಿರುವುದು, ಹೆದ್ದಾರಿ ಟೋಲ್‌ ಗೇಟ್‌ಗಳಲ್ಲಿ ಕೆಲವೆಡೆ ಫಾಸ್ಟ್ಯಾಗ್‌ ಸುಲಭವಾಗಿ ಸಿಗದಿರುವುದು, ಅಧಿಕ ಮತ್ತು ಅನಗತ್ಯ ಶುಲ್ಕ ಹೇರಿಕೆ ಗ್ರಾಹಕರಲ್ಲಿ ಚಿಂತೆ ಮೂಡಿಸಿದೆ.

ಫಾಸ್ಟ್ಯಾಗ್‌ ಖರೀದಿಸುವವರು ₹ 100 ಶುಲ್ಕವಲ್ಲದೆ, ₹ 200 ಭದ್ರತಾ ಠೇವಣಿ ಇಡಬೇಕು ಎನ್ನುವ ನಿಯಮ ಎಷ್ಟರಮಟ್ಟಿಗೆ ಸರಿ? ಇಂತಹ ಯಾವುದೇ ಕಾರ್ಡ್‌ಗಳಿಗೆ ಉತ್ಪಾದನಾ ವೆಚ್ಚ ಹೆಚ್ಚೆಂದರೆ ₹ 10 ತಗುಲಬಹುದು. ಅದಕ್ಕೆ ₹ 100 ಶುಲ್ಕವೇಕೆ? ಭದ್ರತಾ ಠೇವಣಿ ಮರುಪಾವತಿ ಆಗುತ್ತದೆ ಎಂದು ಸರ್ಕಾರ ಮತ್ತು ಬ್ಯಾಂಕ್‌ಗಳುಹೇಳುತ್ತಿವೆಯಾದರೂ, ₹ 200 ದುಬಾರಿ ಅಲ್ಲವೇ? ಅಷ್ಟಕ್ಕೂ ಫಾಸ್ಟ್ಯಾಗ್‌ ಸ್ಟಿಕರ್‌ಗಳಿಗೆ ಸರ್ಕಾರ ಯಾವ ರೀತಿಯ ಭದ್ರತೆ ನೀಡುತ್ತದೆಂದು ಈ ಶುಲ್ಕ ವಿಧಿಸಲಾಗುತ್ತಿದೆ? ಗ್ರಾಹಕರು ಈಗ ನೀಡುತ್ತಿರುವ ಟೋಲ್‌ ಶುಲ್ಕವೇ ಹೆಚ್ಚು ಎನ್ನುವ ಅಸಮಾಧಾನ ಹಿಂದಿನಿಂದಲೂ ಇದೆ. ಅದರ ಜೊತೆಗೆ ಹೆಚ್ಚುವರಿ ಶುಲ್ಕಗಳನ್ನೆಲ್ಲ ಸೇರಿಸಿ ಸರ್ಕಾರವು ಫಾಸ್ಟ್ಯಾಗ್‌ ನೆಪದಲ್ಲಿ ವಾಹನ ಮಾಲೀಕರ ಮೇಲೆ ಇನ್ನಷ್ಟು ಹೊರೆ ಹೇರಲು ಹೊರಟಿದೆಯೇ? ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಫಾಸ್ಟ್ಯಾಗ್‌ ಅಳವಡಿಸಿಕೊಳ್ಳಲಿ ಎಂಬ ದೃಷ್ಟಿಯಿಂದ ಸರ್ಕಾರವು ಟೋಲ್‌ಗೇಟ್‌ಗಳಲ್ಲಿ ನಿಗದಿತ ದಿನಾಂಕದೊಳಗೆ ಖರೀದಿಸಿದವರಿಗೆ ₹ 100 ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಆದರೆ ಶುಲ್ಕ ಮನ್ನಾ ಪ್ರಕಟಿಸಿದ ಬಳಿಕ, ಹಲವು ಟೋಲ್‌ಗೇಟ್‌ಗಳಲ್ಲಿ ಫಾಸ್ಟ್ಯಾಗ್‌ ಸಿಗುತ್ತಿಲ್ಲ. ಪ್ರತಿಯೊಂದು ಬ್ಯಾಂಕ್‌ ವಿಧಿಸುತ್ತಿರುವ ಭದ್ರತಾ ಶುಲ್ಕದಲ್ಲೂ ವ್ಯತ್ಯಾಸವಿದೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮಲ್ಲಿ ಗ್ರಾಹಕರ ದೂರುಗಳನ್ನು ಆಲಿಸಿ ಶೀಘ್ರ ಪರಿಹರಿಸುವ ವ್ಯವಸ್ಥೆ ಕಿರಿಕಿರಿಯಿಲ್ಲದೆ ಜಾರಿಗೆ ಬರುವುದಿಲ್ಲ.

ಬಹಳಷ್ಟುಕ್ಷೇತ್ರಗಳಲ್ಲಿ ದೂರು ದಾಖಲಿಸುವ ಟೋಲ್‌ಫ್ರೀ ದೂರವಾಣಿ ಕರೆಗಳನ್ನು ಸ್ವೀಕರಿಸು
ವವರೇ ಇರುವುದಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಹೊಸ ವ್ಯವಸ್ಥೆ ಜಾರಿಯ ಆರಂಭದ ದಿನಗಳಲ್ಲಿ ಟೋಲ್‌ಗೇಟ್‌ಗಳಲ್ಲಿ ಪರಸ್ಪರ ವಾಗ್ವಾದದಿಂದ ತ್ವೇಷದ ಪರಿಸ್ಥಿತಿ ಉಂಟಾಗದಂತೆ ಗ್ರಾಹಕಸ್ನೇಹಿ ವರ್ತನೆ ತೋರಲು ಸಿಬ್ಬಂದಿಗೆ ಸೂಕ್ತ ಸೂಚನೆಗಳನ್ನು ನೀಡಬೇಕು. ವಾಹನಗಳು ಟೋಲ್‌ಗೇಟ್‌ ದಾಟುವಾಗ ಸ್ವಯಂಚಾಲಿತವಾಗಿ ಅಧಿಕ ಶುಲ್ಕ ಕಡಿತವಾದರೆ ಅದು ಶೀಘ್ರವೇ ಮರುಪಾವತಿ ಆಗುವಂತಿರಬೇಕು. ಎಲ್ಲಕ್ಕಿಂತಮುಖ್ಯವಾಗಿ ಹೊಸ ವ್ಯವಸ್ಥೆ ಯಾವುದೇ ಕಿರಿಕಿರಿಗೆ ಅವಕಾಶ ನೀಡಬಾರದು ಮತ್ತುಗ್ರಾಹಕಸ್ನೇಹಿಯಾಗಿ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT